/newsfirstlive-kannada/media/post_attachments/wp-content/uploads/2025/02/Mysore-Family-Tragedy-1.jpg)
ಮೈಸೂರಿನ ವಿಶ್ವೇಶ್ವರಯ್ಯ ನಗರದ ಸಂಕಲ್ಪ್ ಅಪಾರ್ಟ್‌ಮೆಂಟ್‌ನಲ್ಲಿ ಬೆಚ್ಚಿ ಬೀಳಿಸುವ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದು, ತಾಯಿ, ಪತ್ನಿ ಹಾಗೂ ಮಗನನ್ನು ಮನೆ ಮಾಲೀಕನೇ ಕೊಲೆ ಮಾಡಿ ತಾನು ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಈ ಪ್ರಕರಣದ ಸ್ಫೋಟಕ ಮಾಹಿತಿ ನ್ಯೂಸ್ ಫಸ್ಟ್‌ಗೆ ಲಭ್ಯವಾಗಿದೆ. ಮೃತರನ್ನು ಚೇತನ್, ಪತ್ನಿ ರೂಪಾಲಿ, ಮಗ ಕುಶಾಲ್ ಮತ್ತು ತಾಯಿ ಪ್ರಿಯಂವದಾ ಎಂದು ಗುರುತಿಸಲಾಗಿದೆ.
ಸಂಕಲ್ಪ್ ಅಪಾರ್ಟ್‌ಮೆಂಟ್‌ನ 2 ಫ್ಲಾಟ್‌ನಲ್ಲಿ ಚೇತನ್ ಕುಟುಂಬ ನೆಲೆಸಿತ್ತು. ಒಂದು ಫ್ಲಾಟ್‌ನಲ್ಲಿ ತಾಯಿ ಪ್ರಿಯಂವದಾ ಹಾಗೂ ಮತ್ತೊಂದು ಫ್ಲಾಟ್‌ನಲ್ಲಿ ಗಂಡ, ಹೆಂಡತಿ, ಮಗ ವಾಸಿಸುತ್ತಿದ್ದರು. ನಿನ್ನೆ ಸಾಯೋ ಮುನ್ನ ಚೇತನ್ ತನ್ನ ಇಡೀ ಕುಟುಂಬವನ್ನು ಹಾಸನದ ಗೊರೂರಿನಲ್ಲಿರುವ ಮನೆದೇವರ ದರ್ಶನಕ್ಕೆ ಕರೆದುಕೊಂಡು ಹೋಗಿದ್ದ.
ಇದನ್ನೂ ಓದಿ: ‘LIC ಪಾಲಿಸಿ ಹಣ, ಸೈಟ್ ನನ್ನ ಹೆಂಡತಿಗೆ ಕೊಡಬೇಡಿ’- ದಾವಣಗೆರೆಯಲ್ಲಿ ನೊಂದ ಪತಿ ದುರಂತ ಅಂತ್ಯ!
ಹೇಗೆ ಸಾಯಿಸಿದ ಚೇತನ್?
ಸಾವಿಗೆ ಶರಣಾಗಲು ನಿರ್ಧಾರ ಮಾಡಿದ್ದ ಚೇತನ್ ರಾತ್ರಿಯಿಡೀ ಸ್ಕೆಚ್ ಹಾಕಿ ಮನೆಯಲ್ಲಿದ್ದ ಮೂವರನ್ನು ಹತ್ಯೆ ಮಾಡಿದ್ದಾನೆ. ಮೊದಲು ತಾಯಿ, ಪತ್ನಿ, ಮಗನನ್ನ ಕೊಲ್ಲೋಕೆ ಚೇತನ್ ಪ್ಲಾನ್ ಮಾಡಿದ್ದಾನೆ.
ಚೇತನ್ ತಾಯಿ, ಪತ್ನಿ, ಮಗ ಮೂವರಿಗೂ ವಿಷವುಣಿಸಿ ಸಾಯಿಸೋದಕ್ಕೆ ಯತ್ನಿಸಿದ್ದಾನೆ. ಆದರೆ ಅವರು ಸಾಯುತ್ತಿಲ್ಲ ಅಂತ ಕೈ, ಕಾಲು ಕಟ್ಟಿ ಹಾಕಿದ್ದಾನೆ. ಮಗನ ಕಾಲನ್ನ ಹಗ್ಗದಿಂದ ಕಟ್ಟಿ, ನಂತರ ಪ್ಲಾಸ್ಟರ್ ಸುತ್ತಿ ಹತ್ಯೆ ಮಾಡಿದ್ದಾನೆ. ಹೆಂಡತಿ ರೂಪಾಲಿಯ ಮುಖಕ್ಕೆ ಪ್ಲಾಸ್ಟರ್ ಸುತ್ತಿ ಕೊಲೆಗೈದಿರುವ ಚೇತನ್, ತಾಯಿಯ ಮುಖಕ್ಕೆ ದಿಂಬು ಅದುಮಿ ಕೊಂದಿದ್ದಾನೆ ಎನ್ನಲಾಗಿದೆ.
ಈ ಮೂವರ ಹತ್ಯೆ ಬಳಿಕ ಚೇತನ್ ತಾನೂ ಕೂಡ ಸಾವಿಗೆ ಶರಣಾಗಿದ್ದಾನೆ. ತಾನು ಸಾಯುವ ಮುನ್ನ ಮುಖಕ್ಕೆ ಕವರ್ ಸುತ್ತಿಕೊಂಡು ಪ್ರಾಣ ಬಿಟ್ಟಿದ್ದಾನೆ. ಸಾವಿಗೂ ಮುನ್ನ ತೀವ್ರ ಆತಂಕಕ್ಕೆ ಒಳಗಾಗಿರುವ ಚೇತನ್, ಬೆಳಗ್ಗೆ ಸಹೋದರನಿಗೆ ಕರೆ ಮಾಡಿ ಎಲ್ಲಾ ಮಾಹಿತಿ ನೀಡಿದ್ದಾನೆ.
ಮನೆಯಲ್ಲಿ ನಾನು ಎಲ್ಲರನ್ನೂ ಹತ್ಯೆ ಮಾಡಿದ್ದೀನಿ, ನಾನೂ ಸಾಯುತ್ತಿದ್ದೇನೆ ಎಂದು ಸಾಯೋ ಮುನ್ನ ಸೋದರನಿಗೆ ವಾಯ್ಸ್ ಮೆಸೇಜ್ ಕಳಿಸಿದ್ದಾನೆ. ಪೊಲೀಸರ ತನಿಖೆಯಲ್ಲಿ ಚೇತನ್ನೇ ಮೂವರನ್ನು ಕೊಂದಿರೋ ಭಯಾನಕ ಸತ್ಯ ಬಯಲಿಗೆ ಬಂದಿದೆ.
ಚೇತನ್ ಅನಾಹುತಕ್ಕೆ ಕಾರಣವೇನು?
ಮೆಕಾನಿಕಲ್ ಎಂಜಿನಿಯರ್ ಓದಿದ್ದ ಚೇತನ್, ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಖಾಸಗಿ ಕಂಪನಿ ನಡೆಸುತ್ತಿದ್ದ ಚೇತನ್, ಐಷಾರಾಮಿ ಬದುಕಿನ ಆಸೆಗೆ ನಾಲ್ವರು ಬಲಿಯಾಗಿದ್ದಾರೆ.
ದುಬೈನಲ್ಲಿದ್ದಾಗ ಚೇತನ್ ಉತ್ತಮ ವ್ಯವಹಾರ ನಡೆಸುತ್ತಿದ್ದ. ಕೋವಿಡ್ ಬಳಿಕ ಸಾಲದ ಸುಳಿಗೆ ಸಿಲುಕಿ ನರಳಾಡಿದ್ದಾನೆ. ಸಾಲದಿಂದ ಚೇತರಿಸಿಕೊಳ್ಳದೆ ಪರದಾಡುತ್ತಿದ್ದ ಚೇತನ್, ರಾತ್ರಿಯಿಡೀ ಸ್ಕೆಚ್ ಹಾಕಿ ತಾಯಿ, ಪತ್ನಿ, ಮಗನನ್ನು ಸಾಯಿಸಿ ತಾನು ಸಾವಿಗೆ ಶರಣಾಗಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ