/newsfirstlive-kannada/media/post_attachments/wp-content/uploads/2025/07/N_TIPPANNA_New_3.jpg)
ಹಿರಿಯ ರಾಜಕೀಯ ನಾಯಕ ಹಾಗೂ ಕರ್ನಾಟಕ ವಿಧಾನಪರಿಷತ್ ಮಾಜಿ ಸಭಾಪತಿ ಎನ್.ತಿಪ್ಪಣ್ಣ ಅವರು ಶುಕ್ರವಾರ ಬೆಳಗ್ಗೆ 97ನೇ ವಯಸ್ಸಿನಲ್ಲಿ ನಿಧನರಾದರು. ಎನ್.ತಿಪ್ಪಣ್ಣ ಅವರು ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ವಿಶೇಷವಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದರು. ಜೊತೆಗೆ ಜೆಡಿಎಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಮತ್ತು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರೊಂದಿಗೆ ಜೆಡಿಎಸ್ ಪಕ್ಷದಲ್ಲಿ ಕೆಲಸ ಮಾಡಿದ್ದಾರೆ. ಜೆಡಿಎಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ್ದರು.
ನವೆಂಬರ್ 23, 1928 ರಂದು ಚಿತ್ರದುರ್ಗ ಜಿಲ್ಲೆಯ ತುರುವನೂರಿನಲ್ಲಿ ಜನಿಸಿದ ತಿಪ್ಪಣ್ಣ ಅವರು ವೃತ್ತಿ ಜೀವನವು ಆರು ದಶಕಗಳಿಗೂ ಹೆಚ್ಚು ಕಾಲ ವಿಸ್ತರಿಸಿದೆ. ಈ ಅವಧಿಯಲ್ಲಿ ಎನ್.ತಿಪ್ಪಣ್ಣ ಅವರು ಕರ್ನಾಟಕದ ಕಾನೂನು, ರಾಜಕೀಯ ಮತ್ತು ಸಾಮಾಜಿಕ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸಿ ತಮ್ಮದೇ ಆದ ಕೊಡುಗೆ ವಿವಿಧ ಕ್ಷೇತ್ರಗಳಿಗೆ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2025/07/N_TIPPANNA_New_2.jpg)
ತಿಪ್ಪಣ್ಣ ಅವರು ಅವರ ಮಗ ಪಂಪ ವಿರೂಪಾಕ್ಷ ಹಾಗೂ ಬಂಧು ಬಾಂಧವರನ್ನ ಅಗಲಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಶಿವಮೂರ್ತಿ ಅವರು ತಿಪ್ಪಣ್ಣ ಅವರ ಸೋದರನ ಪುತ್ರ. ಬಳ್ಳಾರಿಯಲ್ಲಿ ಇವರದ್ದು ದೊಡ್ಡ ಅವಿಭಕ್ತ ಕುಟುಂಬ. ಸೋದರರ ಮಕ್ಕಳಿಗೂ ಉನ್ನತ ವಿದ್ಯಾಭ್ಯಾಸವನ್ನು ತಿಪ್ಪಣ್ಣ ಅವರು ಕೊಡಿಸಿದ್ದರು. ಅವರ ಅಂತ್ಯಕ್ರಿಯೆಯನ್ನು ಶನಿವಾರ (ಜುಲೈ 12) ಅವರ ಹುಟ್ಟೂರು ಚಿತ್ರದುರ್ಗ ಜಿಲ್ಲೆಯ ತುರವಿನೂರು ಗ್ರಾಮದಲ್ಲಿ ನಡೆಸಲಾಯಿತು. ಪಾರ್ಥಿವ ಶರೀರವನ್ನು ಬಳ್ಳಾರಿಯಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ಗೌರವಕ್ಕಾಗಿ ಇಡಲಾಗಿತ್ತು. ವೃತ್ತಿಯಲ್ಲಿ ವಕೀಲರಾಗಿದ್ದ ತಿಪ್ಪಣ್ಣ ರಾಜಕೀಯ ರಂಗ ಪ್ರವೇಶಿಸಿ 4 ಬಾರಿ ವಿಧಾನ ಪರಿಷತ್ತಿಗೆ ಆಯ್ಕೆಯಾದರು. ವಿಧಾನ ಪರಿಷತ್​​ನಲ್ಲಿ ವಿರೋಧ ಪಕ್ಷದ ಉಪನಾಯಕರಾಗಿ ಸೇವೆ ಸಲ್ಲಿಸಿದರು. ಅಲ್ಪ ಅವಧಿಗೆ ವಿಧಾನ ಪರಿಷತ್ ಸಭಾಪತಿ ಹುದ್ದೆಯನ್ನು ಅಲಂಕರಿಸಿದರು.
2012ರಲ್ಲಿ ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಆಯ್ಕೆ
ರಾಮಕೃಷ್ಣ ಹೆಗಡೆ ಅವರ ನಿಕಟವರ್ತಿಯಾಗಿದ್ದ ತಿಪ್ಪಣ್ಣ ಅವರು ಜನತಾದಳ ಟಿಕೆಟ್‌ನಲ್ಲಿ ಬಳ್ಳಾರಿ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿದರು. ಆದರೇ, ಆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ನಂತರ ಜೆಡಿಯುನಲ್ಲಿ ಸೇವೆ ಸಲ್ಲಿಸಿದರು. ಮುಂದೆ ಜೆಡಿಎಸ್​ನಲ್ಲಿ ತಿಪ್ಪಣ್ಣ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದರು. 2012ರಲ್ಲಿ ತಿಪ್ಪಣ್ಣ ಅವರು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದರು. ದಶಕಗಳ ಕಾಲ ವೀರಶೈವ ಲಿಂಗಾಯತ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಂಡ ನಂತರ ಅವರು ಈ ಸ್ಥಾನವನ್ನು ವಿಶಿಷ್ಟವಾಗಿ ನಿರ್ವಹಿಸಿದರು.
/newsfirstlive-kannada/media/post_attachments/wp-content/uploads/2025/07/N_TIPPANNA.jpg)
ವೀರಶೈವ ಲಿಂಗಾಯತ ಮಹಾಸಭಾದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. ದೀರ್ಘಕಾಲ ಸಾರ್ವಜನಿಕ ಸೇವೆ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದರು. ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದೊಂದಿಗೆ 20 ವರ್ಷಗಳಿಗೂ ಹೆಚ್ಚು ಕಾಲ ಸಂಬಂಧ ಹೊಂದಿದ್ದರು. ವೀರಶೈವ ಲಿಂಗಾಯತ ಸಮುದಾಯದ ಶೈಕ್ಷಣಿಕ ಏಳಿಗೆಗೆ ಗಣನೀಯ ಕೊಡುಗೆ ನೀಡಿದ್ದಾರೆ.
ಇಂದಿರಾ ಗಾಂಧಿ ಉಪಸ್ಥಿತಿಯಲ್ಲಿದ್ದ ಕಾರ್ಯಕ್ರಮದ ಅಧ್ಯಕ್ಷರು
ತಿಪ್ಪಣ್ಣ 1954 ರಲ್ಲಿ ಬಳ್ಳಾರಿಯಲ್ಲಿ ವಕೀಲರಾಗಿ ಸಾರ್ವಜನಿಕ ಬದುಕಿನ ಜೀವನ ಆರಂಭಿಸಿದ್ದರು. ಬಳ್ಳಾರಿಯಲ್ಲಿ ಜಿಲ್ಲಾ ಸರ್ಕಾರಿ ವಕೀಲ ಮತ್ತು ಸಾರ್ವಜನಿಕ ಅಭಿಯೋಜಕರಾಗಿ ಸೇವೆ ಸಲ್ಲಿಸಿದರು. ಮುಂದೆ ಅವರು ಬಳ್ಳಾರಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ನಂತರ ಅಧ್ಯಕ್ಷರಾದರು. ತಿಪ್ಪಣ್ಣ ಅವರ ನಾಯಕತ್ವವು ಕರ್ನಾಟಕ ವಕೀಲರ ಪರಿಷತ್ತಿಗೂ ವಿಸ್ತರಿಸಿತು, ಕರ್ನಾಟಕದ ವಕೀಲರ ಪರಿಷತ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಇಂದಿರಾ ಗಾಂಧಿಯವರ ಉಪಸ್ಥಿತಿಯಲ್ಲಿ ನಡೆದ ಕರ್ನಾಟಕ ವಕೀಲರ ಪರಿಷತ್ ಬೆಳ್ಳಿ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಎನ್.ತಿಪ್ಪಣ್ಣ ಅವರು ಉತ್ಸಾಹಿ ಶಿಕ್ಷಣತಜ್ಞ ಮತ್ತು ಸಮುದಾಯ ನಾಯಕರಾಗಿದ್ದರು. ಬಳ್ಳಾರಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, 30 ವರ್ಷಗಳಿಗೂ ಹೆಚ್ಚು ಕಾಲ ಈ ಹುದ್ದೆಯನ್ನು ಅಲಂಕರಿಸಿದ್ದರು. ತಿಪ್ಪಣ್ಣ ಅವರು ಕಾಲೇಜುಗಳು ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಸೇರಿದಂತೆ 40 ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ನೇತೃತ್ವ ವಹಿಸಿದ್ದರು. ಶೈಕ್ಷಣಿಕ ಕ್ಷೇತ್ರಕ್ಕೆ ಅವರ ನೀಡಿದ ಕೊಡುಗೆಗಳ ಕಾರಣದಿಂದ ವಿಜಯನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಅದರ 8ನೇ ಘಟಿಕೋತ್ಸವದ ಸಮಯದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿತ್ತು.
ಇದನ್ನೂ ಓದಿ: ಅಖಿಲ ಭಾರತ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಎನ್. ತಿಪ್ಪಣ್ಣ ಲಿಂಗೈಕ್ಯ.. ಗಣ್ಯರಿಂದ ಅಂತಿಮ ನಮನ
/newsfirstlive-kannada/media/post_attachments/wp-content/uploads/2025/07/N_TIPPANNA_New_1.jpg)
ಅಂತ್ಯಕ್ರಿಯೆಯಲ್ಲಿ ಅನೇಕ ಗಣ್ಯರು ಭಾಗಿ
ಎನ್.ತಿಪ್ಪಣ್ಣ ಅವರ ನಿಧನಕ್ಕೆ ವೀರಶೈವ ಲಿಂಗಾಯತ ಮಹಾಸಭಾ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಶನಿವಾರ ನಡೆದ ಅಂತ್ಯಕ್ರಿಯೆಯಲ್ಲಿ ಸಚಿವ ಈಶ್ವರ್ ಖಂಡ್ರೆ, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು. ಕೇಂದ್ರದ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸೇರಿದಂತೆ ಅನೇಕ ಗಣ್ಯರು ಎನ್.ತಿಪ್ಪಣ್ಣ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಹಲವಾರು ಗಣ್ಯರು ಮತ್ತು ಸಾರ್ವಜನಿಕ ವ್ಯಕ್ತಿಗಳು ತಿಪ್ಪಣ್ಣ ಅವರಿಗೆ ಸಂತಾಪ ಸೂಚಿಸಿದ್ದಾರೆ. ತಿಪ್ಪಣ್ಣ ಅವರನ್ನು ಬದ್ಧ ಸಾರ್ವಜನಿಕ ಸೇವಕ ಮತ್ತು ಸಮಾಜದ ಮತ್ತು ಕಾನೂನು ವೃತ್ತಿಯ ಉನ್ನತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ದೂರದೃಷ್ಟಿಯ ನಾಯಕ ಎಂದು ಶ್ಲಾಘಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us