ಯೋಧರಿಗೆ ಗುಡ್​ನ್ಯೂಸ್​.. ಕೋರ್ಟ್​ಗೆ ಅಲೆಯಬೇಕಾಗಿಲ್ಲ, ವೀರ ಪರಿವಾರ ಸಹಾಯತ ಯೋಜನೆ ಆರಂಭ!

author-image
Bheemappa
Updated On
ಯೋಧರಿಗೆ ಗುಡ್​ನ್ಯೂಸ್​.. ಕೋರ್ಟ್​ಗೆ ಅಲೆಯಬೇಕಾಗಿಲ್ಲ, ವೀರ ಪರಿವಾರ ಸಹಾಯತ ಯೋಜನೆ ಆರಂಭ!
Advertisment
  • ನೀವು ಗಡಿಯಲ್ಲಿ ದೇಶ ಸೇವೆ ಮಾಡಿ, ಕೇಸ್​ಗಳನ್ನ ಪರಿಹರಿಸ್ತೇವೆ
  • ವೀರ ಪರಿವಾರ ಸಹಾಯತ ಯೋಜನೆ 2025 ಆರಂಭ, ಏನಿದು..?
  • ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದಿಂದ ಮಹತ್ವದ ನಿರ್ಧಾರ

ದೇಶದ ಗಡಿ ರಕ್ಷಣೆ ಮಾಡುವ ಭಾರತೀಯ ಸೇನೆಯ ಸೈನಿಕರಿಗೆ ಉಚಿತ ಕಾನೂನು ನೆರವು ನೀಡಲು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ನಿರ್ಧರಿಸಿದೆ. ದೇಶದ ಉದ್ದಗಲಕ್ಕೂ ಇರುವ ಕೋರ್ಟ್​​ಗಳಲ್ಲಿ ಸೈನಿಕರ ಪರ ಕಾನೂನು ನೆರವು ನೀಡಲು ಕಾನೂನು ಸೇವಾ ಪ್ರಾಧಿಕಾರ ನಿರ್ಧರಿಸಿದೆ. ಇದಕ್ಕಾಗಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವು ವೀರ ಪರಿವಾರ ಸಹಾಯತ ಯೋಜನೆ 2025 ಅನ್ನು ಪ್ರಾರಂಭಿಸಿದೆ.

ಈ ಯೋಜನೆಯಡಿ ಭಾರತದ ಗಡಿಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಸೇನೆಯ ಯೋಧರಿಗೆ ಕಾನೂನು ನೆರವು ಅನ್ನು ಉಚಿತವಾಗಿ ನೀಡಲಾಗುತ್ತೆ. ಭಾರತೀಯ ಸೈನಿಕರಿಗೂ ತಮ್ಮ ಊರಿನ ಮನೆಗಳಲ್ಲಿ ಬೇರೆ ಬೇರೆ ಕೋರ್ಟ್ ಕೇಸ್​ಗಳಿರುತ್ತಾವೆ. ಮನೆಗಳಲ್ಲಿ ಭೂ ವಿವಾದಗಳು ಕೋರ್ಟ್ ಮೆಟ್ಟಿಲೇರಿರುತ್ತಾವೆ. ಮನೆಯಲ್ಲೇ ಇನ್ಯಾವುದೋ ಕೇಸ್​ಗೆ ಕೋರ್ಟ್​ಗೆ ಅಲೆಯಬೇಕಾಗಿರುತ್ತೆ. ಇದರಿಂದಾಗಿ ಸೈನಿಕರಿಗೆ ಗಡಿಯಲ್ಲಿ ನೆಮ್ಮದಿಯಿಂದ ದೇಶ ರಕ್ಷಣೆ ಮಾಡಲು, ದೇಶ ಸೇವೆ ಮಾಡಲು ಸಾಧ್ಯವಾಗಲ್ಲ. ಹೀಗಾಗಿ ಅಂಥ ಸೈನಿಕರಿಗೆ ಈಗ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದಿಂದ ಅವರವರ ಊರುಗಳಲ್ಲಿನ ಕೋರ್ಟ್ ಕೇಸ್​ಗಳನ್ನು ಕಾನೂನು ಸೇವಾ ಪ್ರಾಧಿಕಾರವೇ ನೋಡಿಕೊಳ್ಳಲಿದೆ.

publive-image

ಸೈನಿಕರ ಪರವಾಗಿ ಕಾನೂನು ಸೇವಾ ಪ್ರಾಧಿಕಾರದ ಪರ ವಕೀಲರು ಕೋರ್ಟ್​ಗೆ ಹಾಜರಾಗಿ ಸೈನಿಕರ ಪರ ವಾದ ಮಂಡಿಸುವರು. ಸೈನಿಕರ ಕೋರ್ಟ್ ಕೇಸ್​ಗಳನ್ನು ಬೇಗ ಬಗೆಹರಿಸಿಕೊಡುವರು. ಈ ಮೂಲಕ ರಾಷ್ಟ್ರೀಯ ಕಾನೂನು ಸೇವಾ ಸೇವಾ ಪ್ರಾಧಿಕಾರ ಸೈನಿಕರ ನೆರವಿಗೆ ನಿಲ್ಲಲಿದೆ. ಸೈನಿಕರ ವೈಯಕ್ತಿಕ ಕಾನೂನು ಸಮರ, ಸಮಸ್ಯೆ, ಸಂಕಷ್ಟಗಳನ್ನು ಪರಿಹರಿಸಿಕೊಡಲು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ನಿರ್ಧರಿಸಿದೆ. ಈ ಮೂಲಕ ನೀವು ಗಡಿಯಲ್ಲಿ ದೇಶಕ್ಕೆ ಸೇವೆ ಸಲ್ಲಿಸಿ, ನಾವು ನಿಮ್ಮ ಕುಟುಂಬವನ್ನು ನೋಡಿಕೊಂಡು, ನಿಮ್ಮ ಕಾನೂನು ಸಮಸ್ಯೆಗಳನ್ನು ಪರಿಹರಿಸಿಕೊಡುತ್ತೇವೆ ಎಂಬ ಸಂದೇಶವನ್ನು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ನೀಡಿದೆ.

ಶ್ರೀನಗರದಲ್ಲಿ ನಡೆದ ಸಮ್ಮೇಳನ

ಈ ಹೊಸ ಯೋಜನೆಯನ್ನು ಇಂದು ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ನಡೆದ ಸಮ್ಮೇಳನದಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ, ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿ ಸೂರ್ಯಕಾಂತ್ ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹಾಗೂ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಭಾಗವಹಿಸಿದ್ದಾರೆ.

ಆಪರೇಷನ್ ಸಿಂಧೂರ್ ನಂತರ ಈ ಕಾರ್ಯಕ್ರಮವು ರೂಪುಗೊಂಡಿದೆ. ಕಾರ್ಯಾಚರಣೆ ಸಮಯದಲ್ಲಿ ಸಶಸ್ತ್ರ ಪಡೆಗಳು ಮಾಡಿದ ತ್ಯಾಗಗಳಿಂದ ನ್ಯಾಯಮೂರ್ತಿ ಸೂರ್ಯಕಾಂತ್ ತೀವ್ರವಾಗಿ ಪ್ರಭಾವಿತರಾದರು. ನ್ಯಾಯಾಂಗವು ಅವರ ಯೋಗಕ್ಷೇಮಕ್ಕೆ ಹೆಚ್ಚು ನೇರವಾಗಿ ಕೊಡುಗೆ ನೀಡುವ ಮಾರ್ಗಗಳನ್ನು ಹುಡುಕಲು ಪ್ರಾರಂಭಿಸಿದರು ಎಂದು ಈ ವಿಷಯದ ಬಗ್ಗೆ ತಿಳಿದಿರುವವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಮುಂದಿನ ಸಿಜೆಐ ಜಸ್ಟೀಸ್ ಸೂರ್ಯಕಾಂತ್

ದೇಶವನ್ನು ರಕ್ಷಿಸುವ ಸೈನಿಕರು, ವೈಯಕ್ತಿಕ ಕಾನೂನು ಸಮಸ್ಯೆ, ಬಿಕ್ಕಟ್ಟು, ಸಂಕಷ್ಟ ನಿಭಾಯಿಸಲು ಏಕಾಂಗಿಯಾಗಿ ಬಿಡದಂತೆ ಕಾನೂನು ಸಮುದಾಯವು ತನ್ನ ಪಾತ್ರವನ್ನು ನಿರ್ವಹಿಸಬೇಕು ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ. ಈ ವರ್ಷದ ನವೆಂಬರ್ 24 ರಂದು ಭಾರತದ ಸುಪ್ರೀಂಕೋರ್ಟ್‌ನ ಸಿಜೆಐ ಆಗಿ ಅಧಿಕಾರ ವಹಿಸಿಕೊಳ್ಳುವ ಜಸ್ಟೀಸ್ ಸೂರ್ಯಕಾಂತ್ ಅವರು, ಅದಕ್ಕೂ ಮೊದಲು ವೀರ ಪರಿವಾರ ಸಹಾಯತ ಯೋಜನೆ ಪ್ರಾರಂಭಿಸಿದ್ದಾರೆ. ಹೊಸ ಯೋಜನೆಯನ್ನು ದೀರ್ಘಕಾಲದ ಸಮಸ್ಯೆಯನ್ನು ಪರಿಹರಿಸಲು ರೂಪಿಸಲಾಗಿದೆ.

ಇದನ್ನೂ ಓದಿ: ದರ್ಶನ್ ಜಾಮೀನು ರದ್ದು ಆದ್ರೆ ಮುಂದಿನ ಆಯ್ಕೆ ಏನು.. ಮತ್ತೆ ಜೈಲು ಸೇರೋ ಸ್ಥಿತಿ ಬಂದ್ರೆ ಸಿನಿಮಾಗಳ ಕಥೆ?

publive-image

ತಮ್ಮ ಮನೆ, ತಮ್ಮ ರಾಜ್ಯಗಳಿಂದ ದೂರದ ಪ್ರದೇಶಗಳಲ್ಲಿ ನಿಯೋಜಿಸಲಾದ ಸೈನಿಕರು ಸಾಮಾನ್ಯವಾಗಿ ಕುಟುಂಬದ ಆಸ್ತಿ, ಗೃಹಕೃತ್ಯ ವಿವಾದಗಳು ಅಥವಾ ಭೂ ವಿವಾದಗಳಿಗೆ ಸಂಬಂಧಿಸಿದ ಕಾನೂನು ಪ್ರಕರಣಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಉದಾಹರಣೆಗೆ, ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿರುವ ಸೈನಿಕನಿಗೆ ಕೇರಳ ಅಥವಾ ತಮಿಳುನಾಡಿನಲ್ಲಿ ನ್ಯಾಯಾಲಯದ ವಿಚಾರಣೆಗಳಲ್ಲಿ ಹಾಜರಾಗಲು ರಜೆ ಸಿಗಲ್ಲ, ಕೋರ್ಟ್ ವಿಚಾರಣೆಗೆ ಗೈರಾಗಬೇಕಾಗುತ್ತೆ. ಈ ಯೋಜನೆಯಡಿಯಲ್ಲಿ, ದೇಶಾದ್ಯಂತದ ನ್ಯಾಯಾಲಯಗಳಲ್ಲಿ ಅಂತಹ ಪ್ರಕರಣಗಳು ಸರಿಯಾಗಿ ಪ್ರಾತಿನಿಧ್ಯ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಮಧ್ಯಪ್ರವೇಶಿಸುತ್ತೆ. ಸೈನಿಕರ ಪರವಾಗಿ ಕಾನೂನು ಸೇವಾ ಪ್ರಾಧಿಕಾರ ಕಾನೂನು ಹೋರಾಟವನ್ನು ನಡೆಸುತ್ತೆ. ಸೈನಿಕರಿಗೆ ಉಚಿತವಾಗಿ ವಾದ ಮಂಡಿಸುವ ವಕೀಲರ ನೆರವು ಅನ್ನು ನೀಡಲಾಗುತ್ತೆ.

ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಮತ್ತು ಇದೇ ರೀತಿಯ ಪ್ರತ್ಯೇಕ ಮತ್ತು ಹೆಚ್ಚಿನ ಅಪಾಯದ ಪರಿಸ್ಥಿತಿಗಳಲ್ಲಿ ಸೇವೆ ಸಲ್ಲಿಸುವ ಇತರರು ಸೇರಿದಂತೆ ಅರೆಸೈನಿಕ ಸಿಬ್ಬಂದಿಗೂ ಈ ಬೆಂಬಲ ಸಿಗಲಿದೆ.

ವಿಶೇಷ ವರದಿ:ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment