/newsfirstlive-kannada/media/media_files/2025/09/17/modi-and-trump-2025-09-17-08-56-39.jpg)
ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿದ್ದ ಕಾರಣಕ್ಕಾಗಿ ಭಾರತದ ಮೇಲೆ ಹೇರಲಾಗಿದ್ದ ಶೇ. 25ರಷ್ಟು ಹೆಚ್ಚುವರಿ ಸುಂಕವನ್ನು (Tariff) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ರದ್ದುಗೊಳಿಸಿದ್ದಾರೆ. ರಷ್ಯಾದಿಂದ ನೇರ ಅಥವಾ ಪರೋಕ್ಷವಾಗಿ ತೈಲ ಆಮದು ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸಲು ಭಾರತ ಬದ್ಧತೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹೊಸ ಆದೇಶ ಹೊರಡಿಸಿರುವ ಅಧ್ಯಕ್ಷ ಟ್ರಂಪ್, ‘ಭಾರತವು ಈ ನಿಟ್ಟಿನಲ್ಲಿ ಗಮನಾರ್ಹ ಕ್ರಮಗಳನ್ನ ಕೈಗೊಂಡಿದೆ. ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಮತ್ತು ಅಮೆರಿಕದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಹಾಗೂ ಆರ್ಥಿಕ ವ್ಯವಹಾರಗಳೊಂದಿಗೆ ಉತ್ತಮವಾಗಿ ಸಮನ್ವಯ ಸಾಧಿಸಲು ಭಾರತವು ಮಹತ್ವದ ಹೆಜ್ಜೆಗಳನ್ನಿಟ್ಟಿದೆ. ಹೀಗಾಗಿ ಭಾರತೀಯ ವಸ್ತುಗಳ ಮೇಲೆ ಹೇರಲಾಗಿದ್ದ ಹೆಚ್ಚುವರಿ ಸುಂಕವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ. ಹೊಸ ಆದೇಶವು ಇವತ್ತಿನಿಂದಲೇ ಜಾರಿಗೆ ಬರುತ್ತಿದೆ.
ಅಮೆರಿಕದಿಂದ ಇಂಧನ ಖರೀದಿ ಮತ್ತು ರಕ್ಷಣಾ ಸಹಕಾರ
ಭಾರತವು ಇನ್ನು ಮುಂದೆ ಅಮೆರಿಕದಿಂದ ಹೆಚ್ಚಿನ ಇಂಧನ ಉತ್ಪನ್ನಗಳನ್ನು ಖರೀದಿಸಲಿದೆ ಎಂದು ಟ್ರಂಪ್ ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಮುಂದಿನ 10 ವರ್ಷಗಳ ಕಾಲ ರಕ್ಷಣಾ ಸಹಕಾರವನ್ನು ಬಲಪಡಿಸಲು ಉಭಯ ದೇಶಗಳು ಹೊಸ ಚೌಕಟ್ಟಿಗೆ (Framework) ಸಮ್ಮತಿಸಿರುವುದು ಈ ಸುಂಕ ಕಡಿತಕ್ಕೆ ಪ್ರಮುಖ ಕಾರಣವಾಗಿದೆ.
ಶೇ. 50ರಿಂದ ಶೇ. 18ಕ್ಕೆ ಇಳಿಕೆ:
ಕಳೆದ ವರ್ಷ ಅಮೆರಿಕವು ಭಾರತದ ಮೇಲೆ ಒಟ್ಟು ಶೇ. 50ರಷ್ಟು ಭಾರಿ ಸುಂಕವನ್ನು ಹೇರಿತ್ತು. ಇದರ ಲೆಕ್ಕಾಚಾರ ಹೀಗಿತ್ತು.
- ಪ್ರತೀಕಾರದ ಸುಂಕ (Retaliatory Tariff): ಶೇ. 25
- ರಷ್ಯಾ ತೈಲ ಖರೀದಿಯ ಹೆಚ್ಚುವರಿ ಸುಂಕ: ಶೇ. 25
- ಒಟ್ಟು: ಶೇ. 50
ಇತ್ತೀಚಿನ ವ್ಯಾಪಾರ ಒಪ್ಪಂದದ ಭಾಗವಾಗಿ ಅಮೆರಿಕ ಮೊದಲು ಶೇ. 25ರಷ್ಟಿದ್ದ ಪ್ರತೀಕಾರದ ಸುಂಕವನ್ನು ಶೇ. 18ಕ್ಕೆ ಇಳಿಸಿತ್ತು. ಈಗ ರಷ್ಯಾ ತೈಲ ಖರೀದಿಗೆ ಸಂಬಂಧಿಸಿದ ಶೇ. 25ರಷ್ಟು ಹೆಚ್ಚುವರಿ ಸುಂಕವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಇದರ ಪರಿಣಾಮ ಭಾರತದ ರಫ್ತುದಾರರ ಮೇಲೆ ಇದ್ದ ಒಟ್ಟು ಅಮೆರಿಕನ್ ಸುಂಕವು ಶೇ. 50ರಿಂದ ಶೇ.18ಕ್ಕೆ ಇಳಿಕೆಯಾದಂತಾಗಿದೆ.
ಈ ನಿರ್ಧಾರವು ಭಾರತೀಯ ರಫ್ತುದಾರರಿಗೆ ದೊಡ್ಡ ಸಮಾಧಾನ ತಂದಿದ್ದು, ಅಮೆರಿಕದ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳು ಹೆಚ್ಚು ಸ್ಪರ್ಧಾತ್ಮಕವಾಗಲು ಸಹಕಾರಿಯಾಗಲಿದೆ.
ಇದನ್ನೂ ಓದಿ: ಭಾರತ-US ಮಧ್ಯೆ ಬಿಗ್ ಡೀಲ್! ‘ಮೇಕ್ ಇನ್ ಇಂಡಿಯಾ’ಗೆ ಆನೆಬಲ, 500 ಬಿಲಿಯನ್ ಡಾಲರ್ ವ್ಯವಹಾರಕ್ಕೆ ಮುದ್ರೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us