/newsfirstlive-kannada/media/media_files/2025/10/22/mehul-chioksi-2025-10-22-12-07-07.jpg)
ಮೆಹುಲ್ ಚೋಕ್ಸಿ ಗಡೀಪಾರಿಗೆ ಬೆಲ್ಜಿಯಂ ಕೋರ್ಟ್ ಆದೇಶ
ಭಾರತದ ಮೋಸ್ಟ್ ವಾಂಟೆಂಡ್ ಆರ್ಥಿಕ ಅಪರಾಧಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನಿಂದ ಭಾರತಕ್ಕೆ ಗಡೀಪಾರು ಮಾಡಲು ಯಾವುದೇ ಅಡ್ಡಿ ಇಲ್ಲ ಎಂದು ಬೆಲ್ಜಿಯಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ಕಾನೂನಿನಲ್ಲಿ ಯಾವುದೇ ಅಡ್ಡಿ ಇಲ್ಲ ಎಂದು ಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ಬೆಲ್ಜಿಯಂನ ಅಂಟೆವರಪ್ ಕೋರ್ಟ್ ಅಕ್ಟೋಬರ್ 17 ರಂದು ಮೆಹುಲ್ ಚೋಕ್ಸಿಯ ಗಡೀಪಾರು ಮಾಡಲು ಆದೇಶಿಸಿದೆ. ಭಾರತದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,500 ಕೋಟಿ ರೂಪಾಯಿ ಸಾಲದ ಹಣವನ್ನು ಮರುಪಾವತಿ ಮಾಡದೇ ವಂಚಿಸಿದ ಆರೋಪ ಮೆಹುಲ್ ಚೋಕ್ಸಿ ಹಾಗೂ ನೀರವ್ ಮೋದಿ ಮೇಲಿದೆ. ಬೆಲ್ಜಿಯಂನಲ್ಲಿ ಭಾರತದ ಮನವಿಯ ಮೇರೆಗೆ ಈ ವರ್ಷದ ಏಪ್ರಿಲ್ ನಲ್ಲಿ ಮೆಹುಲ್ ಚೋಕ್ಸಿಯನ್ನು ಬಂಧಿಸಲಾಗಿತ್ತು. ಏಪ್ರಿಲ್ ನಿಂದಲೂ ಮೆಹುಲ್ ಚೋಕ್ಸಿ ಬೆಲ್ಜಿಯಂ ಜೈಲಿನಲ್ಲಿದ್ದಾನೆ.
ಮೆಹುಲ್ ಚೋಕ್ಸಿ ಬೆಲ್ಜಿಯಂ ನಾಗರಿಕನಲ್ಲ. ವಿದೇಶಿ ನಾಗರಿಕ. ಮೆಹುಲ್ ಚೋಕ್ಸಿ ವಿರುದ್ಧ ಇರೋ ಆರೋಪಗಳು ಅವರ ಗಡೀಪಾರು ಅನ್ನು ಸಮರ್ಥನೆ ಮಾಡಿಕೊಳ್ಳಲು ಸಾಕಾಗುವಷ್ಟು ಇವೆ.
ಮೆಹುಲ್ ಚೋಕ್ಸಿಯಿಂದ ಭಾರತದಲ್ಲಿ 2016ರ ಡಿಸೆಂಬರ್ 31 ರಿಂದ 2019ರ ಜನವರಿ 1ರ ನಡುವೆ ಅಪರಾಧಗಳು ನಡೆದಿವೆ. ಹೀಗಾಗಿ ಭಾರತ ಮತ್ತು ಬೆಲ್ಜಿಯಂನಲ್ಲಿ ಲಿಮಿಟೇಷನ್ ಅವಧಿ ಮುಗಿದಿಲ್ಲ. ಮೆಹುಲ್ ಚೋಕ್ಸಿ ವಿರುದ್ಧ ವಂಚನೆ, ಪೋರ್ಜರಿ, ನಕಲಿ ದಾಖಲೆಗಳ ಸೃಷ್ಟಿ, ಭ್ರಷ್ಟಾಚಾರದ ಆರೋಪಗಳಿವೆ. ಜೊತೆಗೆ ಭ್ರಷ್ಟಾಚಾರ ತಡೆ ಕಾಯಿದೆಯಡಿಯೂ ಆರೋಪ ಇದೆ. ಇವೆಲ್ಲವೂ ಒಂದು ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಪಡಿಸುವಂಥವು.
ತಮ್ಮನ್ನು ಅಂಟಿಗುವಾದಿಂದ ಕಿಡ್ನ್ಯಾಪ್ ಮಾಡಿ ಬೆಲ್ಜಿಯಂಗೆ ಕರೆ ತರಲಾಗಿದೆ ಎಂದು ಮೆಹುಲ್ ಚೋಕ್ಸಿ ಕೋರ್ಟ್ ನಲ್ಲಿ ವಾದಿಸಿದ್ದ. ಭಾರತದಲ್ಲಿ ರಾಜಕೀಯ ವಿಚಾರಣೆ ನಡೆಯುತ್ತೆ. ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತೆ ಎಂದು ಮೆಹುಲ್ ಚೋಕ್ಸಿ ಕೋರ್ಟ್ ನಲ್ಲಿ ವಾದಿಸಿದ್ದ. ಆದರೇ, ಇದರಲ್ಲಿ ಯಾವುದೇ ಹುರುಳು ಇಲ್ಲ ಎಂದು ಕೋರ್ಟ್ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.