/newsfirstlive-kannada/media/media_files/2025/11/19/kerala-sabarimala-over-crowd02-2025-11-19-18-46-53.jpg)
ಶಬರಿಮಲೆಯಲ್ಲಿ ಈ ವರ್ಷದ ಮಂಡಲ ಪೂಜೆ, ಮಕರವಿಳಕ್ಕು ಉತ್ಸವ ಶುರುವಾಗಿದೆ. ಜ್ಯೋತಿ ಮಾಸಾಚರಣೆಗಾಗಿ ಗರ್ಭಗುಡಿ ಬಾಗಿಲು ತೆರೆದ ಎರಡೇ ದಿನಗಳಲ್ಲಿ ಸಾಗರೋಪಾದಿಯಲ್ಲಿ ಭಕ್ತರು ಹರಿದು ಬಂದಿದ್ದು, ಅವ್ಯವಸ್ಥೆಯ ಆಗರವೇ ಸೃಷ್ಟಿಯಾಗಿದೆ. ಓರ್ವ ಭಕ್ತೆ ಪ್ರಾಣವನ್ನೂ ಕಳಕೊಂಡಿದ್ದಾಳೆ. ಇದರ ಬೆನಲ್ಲೇ ಕೇರಳ ಹೈಕೋರ್ಟ್​​, ಕೇರಳ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದೆ. ಮತ್ತೊಂದೆಡೆ ಕೇರಳದಲ್ಲಿ ಅಮಿಬಾ ಕಾಯಿಲೆ ಉಲ್ಬಣಗೊಂಡಿದ್ದು, ರಾಜ್ಯದ ಭಕ್ತರಿಗೆ, ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಶಬರಿಮಲೆಯಲ್ಲಿ ಕಂಡು ಕೇಳರಿಯದ ಭಕ್ತ ಸಾಗರ
ಮಹಿಳಾ ಮಾಲಾಧಾರಿ ಸಾವು, ಹೈಕೋರ್ಟ್ ತರಾಟೆ
ಹಿಂದೂಗಳ ಪ್ರಸಿದ್ದ ಯಾತ್ರಾಸ್ಥಳ ಶಬರಿಮಲೆಯಲ್ಲಿ ಹಾಲೀ ವರ್ಷದ ಮಂಡಲ ಪೂಜೆ ಮತ್ತು ಮಕರವಿಳಕ್ಕು ಉತ್ಸವ ಸೋಮವಾರದಿಂದ ಆರಂಭವಾಗಿದೆ. ದೇವಾಲಯದ ಬಾಗಿಲು ತೆರೆದ ಬೆನ್ನಲ್ಲೇ.. ಕಂಡು ಕೇಳರಿಯದ ರೀತಿ ಭಕ್ತಸಾಗರ ಹರಿದು ಬರ್ತಿದೆ. ಅತಿಯಾದ ಜನಸಂದಣಿಯಿಂದಾಗಿ ಮಹಿಳಾ ಮಾಲಾಧಾರಿಯೊಬ್ಬಳು ಮೃತಪಟ್ಟಿದ್ದಾಳೆ. ಕ್ಷೇತ್ರದಲ್ಲಿ ಭಾರೀ ಅವ್ಯವಸ್ಥೆ ಉಂಟಾಗಿರುವ ಆರೋಪ ಕೇಳಿ ಬಂದಿದ್ದು, ಕೇರಳ ಸರ್ಕಾರ ಮತ್ತು ಶಬರಿಮಲೆ ದೇವಸ್ಥಾನ ಆಡಳಿತ ಮಂಡಳಿಯನ್ನು ಕೇರಳ ಕೋರ್ಟ್​ ತರಾಟೆ ತೆಗೆದುಕೊಂಡಿದೆ.
ಜ್ಯೋತಿ ಮಾಸಾಚರಣೆಗಾಗಿ ಗರ್ಭಗುಡಿ ಬಾಗಿಲು ತೆರೆದ ಎರಡೇ ದಿನಗಳಲ್ಲಿ 2ಲಕ್ಷಕ್ಕೂ ಅಧಿಕ ಅಯ್ಯಪ್ಪ ಅಯ್ಯಪ್ಪ ವ್ರತಧಾರಿಗಳು ಆಗಮಿಸಿದ್ದಾರೆ. ಇದರಿಂದ ಭಾರೀ ನೂಕುನುಗ್ಗಲು ಉಂಟಾಗಿದೆ. ಮಾಲಾಧಾರಿಗಳು, ಸರತಿ ಸಾಲನ್ನು ಬಿಟ್ಟು ಮುನ್ನುಗ್ಗುತ್ತಿರುವುದರಿಂದ.. ಹದಿನೆಂಟು ಮೆಟ್ಟಿಲಿನಲ್ಲಿ ಭಕ್ತರನ್ನು ನಿಯಂತ್ರಿಸಲು ದೇವಾಲಯದ ಆಡಳಿತ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಅಯ್ಯಪ್ಪನ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ 5ರಿಂದ 8 ಗಂಟೆಗಳ ಕಾಲ ನಿಲ್ಲಬೇಕಾಗಿದ್ದು, ಸರಿಯಾದ ಮೂಲಸೌಕರ್ಯ ಇಲ್ಲದೇ.. ಕುಡಿಯುವ ನೀರಿಗೂ ಬವಣೆ ಪಡುವಂತಾಗಿದೆ. ಕೆಲವರಿಗೆ ಜನದಟ್ಟಣೆಯಲ್ಲಿ ಉಸಿರಾಟ ಸಮಸ್ಯೆ ಉಂಟಾಗಿ, ಅಸ್ವಸ್ಥಗೊಂಡಿದ್ದಾರೆ. ಈ ಪೈಕಿ ಓರ್ವ ಮಹಿಳಾ ಮಾಲಾಧಾರಿ ಜೀವ ಕಳಕೊಂಡಿದ್ದಾಳೆ.
ಇನ್ನು ವರ್ಚುಯಲ್ ಕ್ಯೂ ಮೂಲಕ ದಿನವೊಂದಕ್ಕೆ 70 ಸಾವಿರ ಮತ್ತು ಸ್ಪಾಟ್​​ನಲ್ಲಿ 20 ಸಾವಿರ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ಶಬರಿಮಲೆ ದೇವಾಲಯ ಮಾಡಿದೆ. ಆದ್ರೆ ಅದರಿನ್ನೂ ಸರಿಯಾಗಿ ಕಾರ್ಯರೂಪಕ್ಕೆ ಬರದೇ ಇರುವುದೇ ದೊಡ್ಡ ಸಮಸ್ಯೆ ಎನ್ನುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಸರಿಯಾದ ವ್ಯವಸ್ಥೆ ಮಾಡದಿದ್ರೆ ಅನಾಹುತ ನಿಶ್ಚಿತ
ಕೇರಳ ಸರ್ಕಾರಕ್ಕೆ ಹೈಕೋರ್ಟ್ ಖಡಕ್​​​ ವಾರ್ನಿಂಗ್​​
ಸಾಲು ಸಾಲು ಕಾಲ್ತುಳಿತ ದುರಂತಗಳ ಬಳಿಕವೂ ಕೇರಳ ಸರ್ಕಾರ ಎಚ್ಚೆತ್ತುಕೊಂಡಿಲ್ಲ.. ಹೈಕೋರ್ಟ್​ ಸೂಚನೆ ಕೊಟ್ರು, ಶಬರಿಮಲೆಯಲ್ಲಿ ಭಕ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲುವಲ್ಲಿ ವಿಫಲವಾಗಿದೆ. ಹೀಗಾಗಿ ಕೇರಳ ಸರ್ಕಾರ ಮತ್ತು ದೇವಾಲಯ ಆಡಳಿತ ಮಂಡಳಿಯನ್ನು ತರಾಟೆ ತೆಗೆದುಕೊಂಡಿದೆ. ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಪರಿಸ್ಥಿತಿ ನಿಯಂತ್ರಣ ತಪ್ಪಿದೆ. ಸೂಕ್ತ ವ್ಯವಸ್ಥೆ ಕೈಗೊಳ್ಳದಿದ್ದರೆ, ಅನಾಹುತ ನಿಶ್ಚಿತ ಎಂದು ಕೇರಳ ಹೈಕೋರ್ಟ್​​ ಖಡಕ್​ ವಾರ್ನಿಂಗ್​ ಕೊಟ್ಟಿದೆ.
ಶಬರಿಮಲೆ ಭಕ್ತರಿಗೆ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ
ಮಿದುಳು ತಿನ್ನುವ ಅಮೀಬಾ ಬಗ್ಗೆ ಎಚ್ಚರ ವಹಿಸಲು ಸೂಚನೆ
ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ರೋಗದ ಹಾವಳಿ ಇದೆ. ಹೀಗಾಗಿ ಕೇರಳದ ಶಬರಿಮಲೆಗೆ ಅಯ್ಯಪ್ಪಸ್ವಾಮಿ ದರ್ಶನಕ್ಕಾಗಿ ಹೋಗುವ ರಾಜ್ಯದ ಭಕ್ತರಿಗೆ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದ್ದು, ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ಎಚ್ಚರ ವಹಿಸುವಂತೆ ಸೂಚಿಸಿದೆ.
ನೇಗೇರಿಯಾ ಫೌಲೇರಿ ಒಂದು ಸ್ವತಂತ್ರ ಅಮೀಬಾ
ಬೆಚ್ಚಗಿನ ಸಿಹಿ ನೀರು ಹಾಗೂ ಮಣ್ಣಿನಲ್ಲಿ ಕಂಡುಬರುತ್ತೆ
ನಿಂತ ನೀರು, ಕೊಳ/ಈಜು ಕೊಳಗಳು, ಕೆರೆಗಳಲ್ಲಿ ವಾಸ
ನೀರು ಮೂಗಿಗೆ ಪ್ರವೇಶಿಸಿದಾಗ ಮೆದುಳನ್ನ ತಲುಪುತ್ತೆ
ಹೀಗಾಗಿ ನಿಂತ ನೀರಲ್ಲಿ ಸ್ನಾನ ಮಾಡುವಾಗ ಎಚ್ಚರದಿಂದಿರಿ
ನೀರು ಮೂಗಿನ ಒಳಗೆ ಪ್ರವೇಶಿಸದಂತೆ ಎಚ್ಚರ ವಹಿಸಿ
ಮೂಗಿನ ಒಳಗೆ ನೀರು ಹೋಗದಂತೆ ಕ್ಲಿಪ್​ಗಳನ್ನು ಬಳಸಿ
ಒಂದ್ವೇಳೆ ರೋಗ ಲಕ್ಷಣ ಕಂಡು ಬಂದಲ್ಲಿ ವೈದ್ಯರ ಸಂಪರ್ಕಿಸಿ
ನೇಗೇರಿಯಾ ಫೌಲೇರಿ ಒಂದು ಸ್ವತಂತ್ರ ಅಮೀಬಾ.. ಇದು ಬೆಚ್ಚಗಿನ ಸಿಹಿ ನೀರು ಹಾಗೂ ಮಣ್ಣಿನಲ್ಲಿ ಕಂಡುಬರುತ್ತೆ. ಜೊತೆಗೆ ನಿಂತ ನೀರು, ಕೊಳ/ಈಜು ಕೊಳಗಳು, ಕೆರೆಗಳಲ್ಲಿ ವಾಸ ಮಾಡುತ್ತೆ. ನೀರು ಮೂಗಿಗೆ ಪ್ರವೇಶಿಸಿದಾಗ ಮೆದುಳನ್ನ ತಲುಪುತ್ತೆ. ಹೀಗಾಗಿ ನಿಂತ ನೀರಲ್ಲಿ ಸ್ನಾನ ಮಾಡುವಾಗ ಎಚ್ಚರದಿಂದಿರಿ. ನೀರು ಮೂಗಿನ ಒಳಗೆ ಪ್ರವೇಶಿಸದಂತೆ ಎಚ್ಚರ ವಹಿಸಿ.. ಮೂಗಿನ ಒಳಗೆ ನೀರು ಹೋಗದಂತೆ ಕ್ಲಿಪ್​ಗಳನ್ನು ಬಳಸಿ.. ಒಂದ್ವೇಳೆ ರೋಗ ಲಕ್ಷಣ ಕಂಡು ಬಂದಲ್ಲಿ ವೈದ್ಯರ ಸಂಪರ್ಕಿಸಿ ಎಂದು ಮಾರ್ಗಸೂಚಿಯಲ್ಲಿ ಸೂಚನೆ ನೀಡಿದೆ.
ಒಟ್ಟಾರೆ.. ಕೇರಳ ಸರ್ಕಾರಕ್ಕೆ ಒಂದೆಡೆ ಅಯ್ಯಪ್ಪ ಸ್ವಾಮಿ ಭಕ್ತರು ಸಾಗರೋಪದಿಯಲ್ಲಿ ಬರ್ತಿರೋದು.. ಮತ್ತೊಂದೆಡೆ ಅಮಿಬಾ ಕಾಯಿಲೆ ತಲೆನೋವು ಉಂಟು ಮಾಡಿದೆ. ಹೀಗಾಗಿ ಕೇರಳ ಸರ್ಕಾರ ಮತ್ತು ಟಿಡಿಬಿ ಆಡಳಿತ ಮಂಡಳಿ ಇನ್ನಾದ್ರೂ ಎಚ್ಚೆತ್ತು ಅಯ್ಯಪ್ಪ ಸ್ವಾಮಿ ವ್ರತಾಧಾರಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಕೆಲ್ಸ ಮಾಡ್ಬೇಕಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us