/newsfirstlive-kannada/media/media_files/2026/01/22/gold-price-rise-due-to-trump-decisions-2026-01-22-14-01-24.jpg)
ಚಿನ್ನ ಅಂದ್ರೆ ಸಾಕು ಯಾರದ್ದೇ ಕಿವಿಯಾದ್ರೂ ಒಂದು ಕ್ಷಣ ನೆಟ್ಟಗಾಗುತ್ತೆ. ಕಾರಣ, ಗುಡಿಸಲಿನಲ್ಲಿ ವಾಸ ಮಾಡೋ ವ್ಯಕ್ತಿಯಿಂದ ಹಿಡಿದು ಅರಮನೆಯಲ್ಲಿ ವಾಸ ಮಾಡೋ ವ್ಯಕ್ತಿಯವರೆಗೂ ಚಿನ್ನದ ಮೇಲೆ ಅಂತ ಒಂದು ವ್ಯಾಮೋಹ ಇದ್ದೇ ಇರುತ್ತೆ. ಆದ್ರೆ, ಈಗ ಚಿನ್ನದ ಬೆಲೆ ರಾಕೆಟ್ ವೇಗದಲ್ಲಿ ನುಗ್ಗುತ್ತಿದ. 10 ಗ್ರಾಮ್ ಚಿನ್ನ ಒಂದೂವರೆ ಲಕ್ಷದ ಗಡಿದಾಟಿದ್ದು, ಇದೇ ವರ್ಷದಲ್ಲಿ 2 ಲಕ್ಷದ ಗಡಿ ದಾಟುತ್ತೆ ಅಂತ ಹೇಳ್ತಿದ್ದಾರೆ. ಹಾಗಾದ್ರೆ ಚಿನ್ನದ ಏರಿಕೆಗೆ ಕಾರಣ ಏನು? ಈ ಸಂದರ್ಭದಲ್ಲಿ ಚಿನ್ನ ಖರೀದಿ ಸೂಕ್ತ ಹೌದೋ ಅಲ್ವೋ? ಅನ್ನೋದನ್ನ ತಿಳಿಸ್ತೀವಿ ಈ ರಿಪೋರ್ಟ್‌ನಲ್ಲಿ.
ಚಿನ್ನದ ಮೇಲೆ ನಮ್ಮ ಜನರಿಗೆ ಏನೋ ಒಂದು ರೀತಿಯ ವ್ಯಾಮೋಹ..ಗುಡಿಸಿಲಿನಲ್ಲಿ ವಾಸ ಮಾಡೋ ಬಡವರಿಂದ ಹಿಡಿದು ಅರಮನೆಯಲ್ಲಿ ವಾಸ ಮಾಡೋ ರಾಣಿಯರವರೆಗೂ ಎಲ್ಲರಿಗೂ ಚಿನ್ನದ ಮೇಲೆ ಕಣ್ಣು ನೆಟ್ಟಿರುತ್ತೆ. ಅವರವರ ಶಕ್ತಿಗೆ ಅನುಸಾರವಾಗಿ ಚಿನ್ನವನ್ನು ಖರೀದಿ ಮಾಡ್ತಾರೆ. ಅದನ್ನ ತೊಟ್ಟು ಸಂತೋಷ ಪಡ್ತಾರೆ. ಅದೆಷ್ಟೇ ಬಡವರ ಮನೆಯ ಹೆಣ್ಣು ಮಗಳು ಆಗಿದ್ರೂ ಒಂದು ಸಣ್ಣ ತುಂಡನ್ನಾದ್ರೂ ಚಿನ್ನವನ್ನು ಧರಿಸಿರುತ್ತಾರೆ. ಇನ್ನು ಕೆಲವರಿಗೆ ಚಿನ್ನ ಅನ್ನೋದು ಹೂಡಿಕೆಯೂ ಹೌದು. ಆದ್ರೆ, ಅವರೆಲ್ಲರಿಗೂ ಚಿನ್ನ ಶಾಕ್ ಕೊಡ್ತಿದೆ. ರಾಕೆಟ್ ವೇಗದಲ್ಲಿ ಸಾಗ್ತಿರೋ ಚಿನ್ನವನ್ನು ನೋಡಿ ಜನ ತಮ್ಮ ಮಕ್ಕಳನ್ನ ಮದುವೆ ಮಾಡೋದು ಹೇಗೆ? ತಮ್ಮ ಹತ್ತಿರ ಚಿನ್ನ ಖರೀದಿ ಮಾಡೋದಕ್ಕೆ ಸಾಧ್ಯವಾಗುತ್ತಾ? ಅಂತ ಆಘಾತಗೊಂಡಿದ್ದಾರೆ.
10 ಗ್ರಾಮ್‌ಗೆ ₹1.50 ಲಕ್ಷದ ಗಡಿದಾಟಿದ ಚಿನ್ನ.. ಬಿಗ್ ಶಾಕ್!
ಬೆಳ್ಳಿಯೂ ₹3 ಲಕ್ಷದ ಗಡಿ ದಾಟಿದೆ... ಇಬ್ಬರದ್ದೂ ರಾಕೆಟ್ ವೇಗ!
ಚಿನ್ನ ಬೆಳ್ಳಿ ಯಾವಾಗಲೂ ಏರಿಕೆ ಆಗ್ತಾನೆ ಸಾಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ನಾವು ಇತಿಹಾಸದ ಪುಟಗಳನ್ನ ತೆರೆದು ನೋಡ್ತಾ ಬಂದ್ರೆ ಎರಡೂ ಲೋಹಗಳು ವರ್ಷದಿಂದ ವರ್ಷಕ್ಕೆ ಏರಿಕೆ ಆಗ್ತಾನೇ ಬಂದಿರೋದು ಕಾಣಿಸುತ್ತೆ. ಕೆಲವೊಮ್ಮೆ ಚಿನ್ನ, ಬೆಳ್ಳಿ ಎರಡೂ ಇಳಿಕೆಯಾಗಿದ್ದು ಇದೆ. ಅದು ತಾತ್ಕಾಲಿಕ ಮಾತ್ರ. ಇನ್ನೇನು ಇಳಿಕೆ ಆಯ್ತು ಅಂತ ಜನ ಖುಷಿ ಪಡೋ ಮುನ್ನವೇ ದಿಢೀರ್ ಅಂತ ಏರಿಕೆಯಾಗಿರುತ್ತೆ. ಆದ್ರೆ, ಇಷ್ಟು ವರ್ಷಗಳ ಕಾಲ ಚಿನ್ನ ಏರಿಕೆಯಾಗ್ತಾ ಇರೋದಕ್ಕೂ ಕಳೆದ ಒಂದೆರಡು ವರ್ಷದಲ್ಲಿ ಚಿನ್ನ ಏರಿಕೆಯಾಗ್ತಾ ಇರೋದಕ್ಕೂ ಭಾರೀ ವ್ಯತ್ಯಾಸವಿದೆ. ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ ರಾಕೆಟ್ ವೇಗದಲ್ಲಿ ಸಾಗ್ತಾ ಇದೆ. ಜನರಿಗೆ ಯಾಕಿಷ್ಟು ಏರಿಕೆಯಾಗ್ತಾ ಇದೆ ಅನ್ನೋದನ್ನ ಊಹಿಸೋದಕ್ಕೂ ಸಾಧ್ಯವಾಗುತ್ತಿಲ್ಲ.
ಕಳೆದ ವರ್ಷ ಜನವರಿ ವೇಳೆಗೆ ಚಿನ್ನದ ಬೆಲೆ 10 ಗ್ರಾಮ್‌ಗೆ 75 ಸಾವಿರದ ಆಸು ಪಾಸಿನಲ್ಲಿತ್ತು. ಅವಾಗಲೇ ಜನ ಚಿನ್ನ ಖರೀದಿ ಮಾಡೋದಾ? ಬೇಡವಾ? ಅನ್ನೋ ಗಲಿಬಿಲಿಯಲ್ಲಿ ಇದ್ರು. ಆದ್ರೆ, ಇದೀಗ ಚಿನ್ನದ ಬೆಲೆ 10 ಗ್ರಾಮ್‌ಗೆ ಒಂದೂವರೆ ಲಕ್ಷದ ಗಡಿ ದಾಟಿದೆ. ಒಂದೇ ಒಂದೇ ವರ್ಷದಲ್ಲಿ ಸರಿಸುಮಾರು 70 ಸಾವಿರಕ್ಕೂ ಹೆಚ್ಚಿನ ಬೆಲೆ ಏರಿಕೆಯಾಗಿದೆ. ಇನ್ನು ಬೆಳ್ಳಿಯೂ ಅಷ್ಟೇ 2025 ರಲ್ಲಿ ಜನವರಿ ವೇಳೆಗೆ ಕೆಜಿಗೆ 1 ಲಕ್ಷ ಇತ್ತು. ಆದ್ರೆ, ಇದೀಗ 3 ಲಕ್ಷದ ಗಡಿದಾಟಿ ಹೋಗಿದೆ. ಪರಿಣಾಮ ಜನ ಚಿನ್ನ ಖರೀದಿ ಮಾಡೋದಾ ಬಿಡೋದಾ? ಅನ್ನೋ ಕನ್ಫೂಸ್‌ನಲ್ಲಿದ್ದಾರೆ. ಮದುವೆ ಮಾಡೋರು ತಮ್ಮ ಮಕ್ಕಳಿಗೆ ಚಿನ್ನ ಹಾಕೋದು ಹೇಗೆ ಅನ್ನೋ ಟೆನ್ಷನ್‌ನಲ್ಲಿದ್ದಾರೆ.
ಹಾಗಾದ್ರೆ, ಚಿನ್ನ, ಬೆಳ್ಳಿ ಯಾಕೆ ಈ ಪರಿ ಈ ಪ್ರಮಾಣದಲ್ಲಿ ಏರಿಕೆಯಾಗ್ತಾ ಇದೆ? ಅದಕ್ಕೆ ಎರಡು ಕಾರಣವಿದೆ. ಅದರಲ್ಲಿ ಒಂದು ಬಹುಮುಖ್ಯ ಕಾರಣ ಅಮೆರಿಕಾ ಅಧ್ಯಕ್ಷ ಟ್ರಂಪ್.
ಚಿನ್ನದ ಏರಿಕೆಗೂ ಟ್ರಂಪ್‌ಗೂ ಲಿಂಕ್-01
ಗ್ರೀನ್‌ಲ್ಯಾಂಡ್ ವಶಕ್ಕೆ ಸ್ಕೆಚ್, ಹೊಸ ಸುಂಕ ಬಾಂಬ್!
ಈ ಭಾರಿ ಅಮೆರಿಕಾದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಏರಿದ ಮೇಲೆ ಡೊನಾಲ್ಡ್ ಟ್ರಂಪ್ ವಿಚಿತ್ರ ನಡೆನುಡಿ ಕಾಣಿಸುತ್ತಿದೆ. ತಾನೇ ದೊಡ್ಡಣ್ಣ, ತಾನು ಹೇಳಿದಂತೆ ಎಲ್ಲರೂ ಕೇಳ್ಬೇಕು ಅನ್ನೋ ಹಮ್ಮು ಬಿಮ್ಮು ಪ್ರದರ್ಶನ ಮಾಡ್ತಿರೋದು ನೇರಾನೇರವಾಗಿ ಕಾಣಿಸ್ತಿದೆ. ಅದ್ಯಾವಾಗ ವೆನುಜುವೆಲ್ಲಾ ಅಧ್ಯಕ್ಷನ ಸೆರೆ ಹಿಡೀದು ಅಮೆರಿಕಾದಲ್ಲಿ ಬಂದಿಖಾನೆಗೆ ಹಾಕಲಾಯ್ತೋ? ಆವಾಗ್ಲೇ ಟ್ರಂಪ್ ಕಣ್ಣು ಬಿದ್ದಿದ್ದು ಗ್ರೀನ್‌ಲ್ಯಾಂಡ್ ಮೇಲೆ. ಇಷ್ಟು ವರ್ಷಗಳ ಕಾಲ ಗ್ರೀನ್‌ಲ್ಯಾಂಡ್ ಡೆನ್ಮಾರ್ಕ್ ವಶದಲ್ಲಿತ್ತು. ಆದ್ರೆ, ಗ್ರೀನ್‌ಲ್ಯಾಂಡ್ ವಶಕ್ಕೆ ಪಡ್ಕೊಂಡ್ರೆ ಭವಿಷ್ಯದಲ್ಲಿ ಚೀನಾ, ರಷ್ಯಾದಿಂದ ಆಗೋ ದಾಳಿಯಿಂದ ಅಮೆರಿಕಾವನ್ನ ರಕ್ಷಣೆ ಮಾಡ್ಬಹುದು. ಹಾಗೇ ತಾವು ಮರುದಾಳಿ ಮಾಡೋದಕ್ಕೆ ಅನುಕೂಲವಾಗುತ್ತೆ ಅನ್ನೋ ಕಾರಣಕ್ಕೆ ಗ್ರೀನ್‌ಲ್ಯಾಂಡ್ ಮೇಲೆ ಟ್ರಂಪ್ ಕಣ್ಣು ಬೀಳುತ್ತೆ. ಅಷ್ಟೇ, ಈಗಾಗಲೇ ಸೇನೆಯನ್ನೂ ನಿಯೋಜನೆ ಮಾಡಿದ್ದು, ಇನ್ನೇನೂ ಗ್ರೀನ್‌ಲ್ಯಾಂಡ್ ವಶಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಆದ್ರೆ, ಟ್ರಂಪ್ ಗ್ರೀನ್‌ಲ್ಯಾಂಡ್ ಖರೀದಿಸುವ ಪ್ರಯತ್ನಕ್ಕೆ ಯುರೋಪಿಯನ್ ದೇಶಗಳು ವಿರೋಧ ವ್ಯಕ್ತಪಡಿಸಿವೆ. ಹೀಗಾಗಿ ಅಮೆರಿಕವನ್ನು ಪ್ರವೇಶಿಸುವ ಐರೋಪ್ಯ ರಾಷ್ಟ್ರಗಳ ಸಾಮಗ್ರಿಗಳ ಮೇಲೆ ಬೇಕಾಬಿಟ್ಟಿ ತೆರಿಗೆ ಹಾಕುವುದಾಗಿ ಟ್ರಂಪ್ ಬಾಂಬ್ ಹಾಕಿದ್ದಾರೆ. ಈಗಾಗಲೇ ಗ್ರೀನ್ ಲ್ಯಾಂಡ್ ವಿಚಾರದಲ್ಲಿ ಸಹಕಾರ ನೀಡದ ಯೂರೋಪ್‌ನ 8 ರಾಷ್ಟ್ರಗಳ ಮೇಲೆ ಶೇ.10ರಷ್ಟು ತೆರಿಗೆ ವಿಧಿಸಿ ಘೋಷಣೆ ಮಾಡಿದ್ದಾರೆ. ಗ್ರೀನ್ ಲ್ಯಾಂಡ್ ಅನ್ನು ಅಮೆರಿಕಕ್ಕೆ ಬಿಟ್ಟುಕೊಡುವ ಬಗ್ಗೆ ಒಪ್ಪಂದ ಮಾಡಿಕೊಳ್ಳದೇ ಇದ್ದರೆ, ಈ ಸುಂಕ ಪ್ರಮಾಣವನ್ನು ಶೇ.25ಕ್ಕೆ ಹೆಚ್ಚಿಸುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಇದ್ರಿಂದ ಅಶಾಂತಿಯ ವಾತಾವರಣ ನಿರ್ಮಾಣವಾಗಿದ್ದು ಜನ ಚಿನ್ನದ ಮೇಲಿನ ಹೂಡಿಕೆಯತ್ತ ದೃಷ್ಟಿನೆಟ್ಟಿದ್ದಾರೆ. ಪರಿಣಾಮ ಚಿನ್ನಗ ಬೆಲೆ ರಾಕೆಟ್ ವೇಗದಲ್ಲಿ ಸಾಗ್ತಿದೆ.
ಚಿನ್ನದ ಏರಿಕೆಗೂ ಟ್ರಂಪ್‌ಗೂ ಲಿಂಕ್-02
ಭಾರತ, ಚೀನಾ ಸೇರಿ ವಿವಿಧ ರಾಷ್ಟ್ರದ ಮೇಲೆ ಟ್ರಂಪ್ ಸುಂಕ!
ಟ್ರಂಪ್ ಈ ಬಾರಿ ಅಧಿಕಾರಿಕ್ಕೇರೋದಕ್ಕೂ ಮುನ್ನ ಭಾರತ ಮತ್ತು ಅಮೆರಿಕಾ ನಡುವಿನ ಬಾಂಧವ್ಯ ಅನ್ಯೋನ್ಯವಾಗಿತ್ತು. ಅಮೆರಿಕಾ-ಚೀನಾ ನಡುವಿನ ಸಂಬಂಧವೂ ಪರವಾಗಿರಲಿಲ್ಲ. ಆದ್ರೆ, ಅದ್ಯಾವಾಗ ಟ್ರಂಪ್ ಗದ್ದುಗೆ ಏರಿದ್ರೋ ಅವಾಲೇ ಎಲ್ಲಾ ಬಾಂಧವ್ಯಕ್ಕೂ ಕೊಳ್ಳಿ ಬಿತ್ತು. ತನ್ನ ದೇಶದಲ್ಲಿ ಉತ್ಪಾದನೆ ಆಗೋ ವಸ್ತುಗಳಿಗೆ ಭಾರತ, ಚೀನಾ ಮತ್ತು ಯುರೋಪ್ ರಾಷ್ಟ್ರಗಳು ತೆರಿಗೆ ಹಾಕ್ತಾ ಇವೆ ಅಂತ, ಭಾರತ, ಚೀನಾ ಸೇರಿದಂತೆ ಯುರೋಪ್ ರಾಷ್ಟ್ರದಿಂದ ಅಮೆರಿಕಾಗೆ ಆಮದು ಆಗ್ತಿರೋ ವಸ್ತುಗಳ ಮೇಲೆ ಪ್ರತೀಕಾರದ ತೆರಿಗೆ ಹೇರಲಾಯ್ತು. ಭಾರತದಲ್ಲಿ ಉತ್ಪಾದನೆ ಆಗಿ ಅಮೆರಿಕಾಗೆ ಹೋಗ್ತಾ ಇರೋ ಉಸ್ತುಗಳ ಮೇಲೆ ಶೇಕಡಾ 25 ರಷ್ಟು ಪ್ರತೀಕಾರದ ತೆರೆಗೆ ಹಾಕಿದ್ರೆ...ರಷ್ಯಾದಿಂದ ಭಾರತ ತೈಲ ಖರೀದಿ ಮಾಡ್ತಿದೆ ಅಂತ ಶೇಕಡಾ 25 ರಷ್ಟು ಹೆಚ್ಚುವರಿ ತೆರಿಗೆ ಹಾಕಲಾಯ್ತು. ಹೀಗಾಗಿ ಭಾರತದ ಮೇಲೆ ಅಮೆರಿಕಾದಿಂದ ಶೇಕಡಾ 50ಕ್ಕೂ ಹೆಚ್ಚು ಪ್ರತೀಕಾರದ ತೆರಿಗೆ ಇದೆ. ಅದೇ ರೀತಿ ಚೀನಾ, ಯುರೋಪಿಯನ್ ರಾಷ್ಟ್ರಗಳ ಮೇಲೂ ಟ್ರಂಪ್ ಟ್ಯಾಕ್ಸ್ ಬಾಂಬ್ ಹಾಕಿದ್ದಾರೆ. ಅದರ ಪರಿಣಾಮ ಚಿನ್ನದ ಬೆಲೆ ಏರಿಕೆಯಾಗಿದೆ. ನಿರಂತರವಾಗಿ ಚಿನ್ನ ಏರಿಕೆಯಾಗ್ತಾನೆ ಹೋಗ್ತಿದೆ.
/filters:format(webp)/newsfirstlive-kannada/media/media_files/2026/01/22/gold-price-rise-due-to-trump-decisions-1-2026-01-22-14-04-58.jpg)
ಚಿನ್ನದ ಏರಿಕೆಗೂ ಟ್ರಂಪ್‌ಗೂ ಲಿಂಕ್-03
ವೆನುಜುವೆಲಾ ಮೇಲೆ ದಾಳಿ, ಇರಾನ್‌ಗೆ ಸರ್ವನಾಶದ ಬೆದರಿಕೆ!
ವೆನುಜುವೆಲಾದಿಂದ ಅಮೆರಿಕಾಗೆ ಭಾರೀ ಪ್ರಮಾಣದಲ್ಲಿ ಡ್ರಗ್ಸ್ ಕಳ್ಳ ಮಾರ್ಗದಲ್ಲಿ ಬರುತ್ತೆ. ಅದ್ರಿಂದ ಅಮೆರಿಕಾದ ಯುವ ಜನ ದಾರಿ ತಪ್ಪುತ್ತಿದ್ದಾರೆ. ತಾವು ಎಷ್ಟೇ ವಾರ್ನಿಂಗ್ ಮಾಡಿದ್ರೂ ವೆನುಜುವೆಲಾ ಕಂಟ್ರೋಲ್ ಮಾಡಿಲ್ಲ. ವೆನುಜುವೆಲ್ಲಾ ಅಧ್ಯಕ್ಷನೇ ಡ್ರಗ್ಸ್ ಸಪ್ಲೈನ ಕಿಂಗ್ ಪಿನ್ ಅಂತ ಹೇಳಿ ಟ್ರಂಪ್ ಆ ದೇಶದ ಮೇಲೆ ದಾಳಿ ಮಾಡಿಸಿ ಅಧ್ಯಕ್ಷನ ಸೆರೆ ಹಿಡಿಯಲಾಗಿತ್ತು. ಅದಾದ್ಮೇಲೆ ಇರಾನ್‌ನಲ್ಲಿ ಆಂತರಿಕವಾಗಿ ಬೆಂಕಿ ಒತ್ತಿಕೊಂಡಿದೆ. ಅಲ್ಲಿಯ ಜನ ಆರ್ಥಿಕ ಕುಸಿತವನ್ನ ಖಂಡಿಸಿ ಸುಪ್ರೀಂ ಲೀಡರ್ ಖಮೇನಿ ವಿರುದ್ಧ ದಂಗೆ ಎದ್ದಿದ್ದಾರೆ. ಹಾಗೇ ದಂಗೆ ಎದ್ದವರಿಗೆ ಟ್ರಂಪ್ ಪ್ರೋತ್ಸಾಹ ನೀಡೋ ಮಾತಾಡಿದ್ದಾರೆ. ಹಾಗೇ ತಮ್ಮ ಮೇಲೆ ಏನಾದ್ರೂ ದಾಳಿಗೆ ಯತ್ನಿಸಿದ್ರೆ ಇರಾನ್ ಅನ್ನು ವಿಶ್ವದ ಭೂಪಟದಿಂದ ಅಳಿಸಿ ಹಾಕೋದಾಗಿ ಬೆದರಿಕೆ ಹಾಕಿದ್ದಾರೆ. ಇದ್ರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಯಾವಾಗ ಅಮೆರಿಕಾ, ಇರಾನ್ ನಡುವೆ ಯುದ್ಧ ಶುರುವಾಗುತ್ತೋ ಅನ್ನೋ ಭೀತಿಯಲ್ಲಿದ್ದಾರೆ. ಇದು ಸಹ ಚಿನ್ನದ ಬೆಲೆ ರಾಕೆಟ್ ವೇಗದಲ್ಲಿ ಏರಿಕೆಯಾಗೋದಕ್ಕೆ ಕಾರಣವಾಗಿದೆ. ಒಂದು ವೇಳೆ ಇರಾನ್ ವಿಚಾರದಲ್ಲಿ ಟ್ರಂಪ್ ತಮ್ಮ ಪಾಡಿಗೆ ತಾವು ಇದ್ರೆ ಚಿನ್ನದ ಬೆಲೆ ಈ ಪರಿ ಈ ಪ್ರಮಾಣದಲ್ಲಿ ಏರಿಕೆಯಾಗ್ತಾ ಇರಲಿಲ್ಲ ಅನ್ನೋದು ಸತ್ಯ.
ಚಿನ್ನದ ಏರಿಕೆಗೂ ಟ್ರಂಪ್‌ಗೂ ಲಿಂಕ್-04
ಟ್ರಂಪ್ ನಡೆಯಿಂದ ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ!
ಯಾವುದೇ ದೇಶದ ಷೇರು ಮಾರುಕಟ್ಟೆಗೂ ಅಮೆರಿಕಾದಲ್ಲಿ ಆಗೋ ಬೆಳವಣಿಗೆಗೂ ಲಿಂಕ್ ಇರುತ್ತೆ. ಅಂಥದ್ದರಲ್ಲಿ ಟ್ರಂಪ್ ಬೇಕಾಬಿಟ್ಟಿ ಪ್ರತೀಕಾರದ ತೆರಿಗೆ ನೀತಿ ಕೈಗೊಳ್ತಾ ಇದ್ದಾರೆ. ವೆನುಜುವೆಲಾ ಅಧ್ಯಕ್ಷನ ಸೆರೆ ಹಿಡಿದು ಆ ಪುಟ್ಟ ರಾಷ್ಟ್ರದಲ್ಲಿ ರಾಜಕೀಯ ಅಲ್ಲೋಲ ಕಲ್ಲೋಲ ಆಗುವಂತೆ ಮಾಡಿದ್ದಾರೆ. ಗ್ರೀನ್‌ಲ್ಯಾಂಡ್ ವಶಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇರಾನ್ ಮೇಲಿನ ದಾಳಿಗೂ ಸ್ಕೆಚ್ ಹಾಕಲಾಗಿದೆ. ಯಾವಾಗ ಬೇಕಾದ್ರೂ ಯುದ್ಧ ಶುರುವಾಗ್ಬಹುದು. ಇದೆಲ್ಲದರ ಪರಿಣಾಮ ಭಾರತ, ಚೀನಾ ಸೇರಿದಂತೆ ದೊಡ್ಡ ದೊಡ್ಡ ರಾಷ್ಟ್ರಗಳ ಷೇರು ಮಾರುಕಟ್ಟೆಯೂ ಅಲ್ಲೋಲ ಕಲ್ಲೋಲ ಆಗ್ತಾನೇ ಇದೆ. ಹೀಗಾಗಿ ಜನ ಷೇರು ಮಾರುಕಟ್ಟೆಯನ್ನ ಬಿಟ್ಟು, ಚಿನ್ನದ ಮೇಲೆ ಹೂಡಿಕೆಗೆ ಯತ್ನಿಸ್ತಿದ್ದಾರೆ. ಪರಿಣಾಮ ಚಿನ್ನ ದುಬಾರಿಯಾಗ್ತಿದೆ.
ಚಿನ್ನದ ಏರಿಕೆಗೂ ಟ್ರಂಪ್‌ಗೂ ಲಿಂಕ್-05
ಫೆಡರಲ್ ಬ್ಯಾಂಕ್ ಬಡ್ಡಿ ದರ ಇಳಿಸುವಂತೆ ಮಾಡಿದ ಟ್ರಂಪ್!
ಭಾರತದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಗೆ ಕೇಂದ್ರ ಬ್ಯಾಂಕ್ ಆಗಿದೆಯೋ ಹಾಗೇ ಫೆಡರಲ್ ರಿಸರ್ವ್ ಬ್ಯಾಂಕ್ ಅಮೆರಿಕಾದ ಕೇಂದ್ರ ಬ್ಯಾಂಕ್. ನಮ್ಮಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬಡ್ಡಿ ದರವನ್ನ ಏರಿಸಿದ್ರೆ, ಇಲ್ಲವೇ ಇಳಿಸಿದ್ರೆ ಇಡೀ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ಏನಾದ್ರೂ ಒಂದು ಪರಿಣಾಮ ಬೀರಿಯೇ ಬೀರುತ್ತೆ. ಹೀಗಾಗಿ ಕೇಂದ್ರ ಬ್ಯಾಂಕ್ ಏನಾದ್ರೂ ನಿರ್ಧಾರ ಕೈಗೊಳ್ಳುವ ಮುನ್ನ ಹತ್ತಾರು ಬಾರಿ ಯೋಚನೆ ಮಾಡಿ ಹೆಜ್ಜೆ ಇಡುತ್ತೆ. ಹಾಗೇ ಅಮೆರಿಕಾದ ಫೆಡರಲ್ ಬ್ಯಾಂಕ್ ಏನಾದ್ರೂ ನಿರ್ಧಾರ ಕೈಗೊಂಡ್ರೆ ಅದು ಇಡೀ ವಿಶ್ವದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತೆ. ಅಂಥದ್ದರಲ್ಲಿ ಫೆಡರಲ್ ಬ್ಯಾಂಕ್ ಬಡ್ಡಿದರವನ್ನ ಇಳಿಸುವಂತೆ ಮಾಡಿದ್ದು ಟ್ರಂಪ್. ಅದರಿಂದ ಡಾಲರ್ ಮೌಲ್ಯದಲ್ಲಿಯೂ ಏರಿಳಿತವಾಯ್ತು. ಚಿನ್ನದ ಮೇಲೆ ಬರೆ ಬಿತ್ತು.
/filters:format(webp)/newsfirstlive-kannada/media/media_files/2026/01/22/gold-price-rise-due-to-trump-decisions-2-2026-01-22-14-06-36.jpg)
ಅಮೆರಿಕಾ ಅಧ್ಯಕ್ಷ ಟ್ರಂಪ್ ನಡೆಯೇ ಚಿನ್ನ, ಬೆಳ್ಳಿ ಏರಿಕೆಗೆ ಮುಖ್ಯ ಕಾರಣ ಅನ್ನೋದ್ ಕನ್ಫರ್ಮ್. ಆದ್ರೆ, ಇದಷ್ಟೇ ಕಾರಣ ಅಲ್ಲ. ಬೆಲೆ ಏರಿಕೆಗೆ ಇನ್ನೂ ಕಾರಣ ಇದೆ.
ಚಿನ್ನ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನ ಅವಲಂಬಿಸಿರುತ್ತೆ. ಹೀಗಾಗಿ ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ಆದ್ರೂ ಅದು ಚಿನ್ನದ ಮೇಲೆ ಎಫೆಕ್ಟ್ ಬೀರೋ ಸಾಧ್ಯತೆ ಇದ್ದೇ ಇರುತ್ತೆ. ಈಗಾಗಲೇ ಟ್ರಂಪ್ ನಿಲುವು ಹೇಗೆ ಚಿನ್ನದ ಏರಿಕೆಗೆ ಕಾರಣ ಆಗ್ತಿದೆ ಅನ್ನೋದನ್ನ ಹೇಳಿದ್ದೇವೆ. ಹಾಗೇ ಇನ್ನು ಏನೇನ್ ಕಾರಣ ಎನ್ನುವುದನ್ನು ವಿವರಿಸುತ್ತೇವೆ.
ದೊಡ್ಡಣ್ಣನ ಗದ್ದುಗೆ ಮೇಲಿರೋ ಟ್ರಂಪ್ ಹುಚ್ಚಾಟ ಖಂಡಿತವಾಗಿಯೂ ಚಿನ್ನ ಬೆಳ್ಳಿ ಬೆಲೆ ಏರಿಕೆ ಮೇಲೆ ಪರಿಣಾಮ ಬೀರುತ್ತಿದೆ. ಇದೆಲ್ಲವನ್ನು ನೋಡ್ತಾ ಇರೋ ತಜ್ಞರಿಗೆ ಏನ್ ಅನಿಸಿ ಬಿಟ್ಟಿದೆ ಅಂದ್ರೆ, ಎಲ್ಲಿಯವರೆಗೆ ಟ್ರಂಪ್ ಅಧಿಕಾರದಲ್ಲಿ ಇರ್ತಾರೋ? ಅಲ್ಲಿಯವರೆಗೂ ಚಿನ್ನ ಬೆಳ್ಳಿಯ ಬೆಲೆ ಏರಿಕೆಯಾಗ್ತಾನೇ ಇರುತ್ತೆ ಅಂತ ನಿರೀಕ್ಷೆ ಮಾಡ್ತಿದ್ದಾರೆ. ಕಾರಣ, ಟ್ರಂಪ್ ಸುಮ್ಮನಿರೋ ವ್ಯಕ್ತಿ ಅಲ್ಲವೇ ಅಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆ ಅಲ್ಲೋಲ ಕಲ್ಲೋಲ ಅಗೋದಕ್ಕೆ ಏನೇನ್ ಬೇಕೋ ಅದೆಲ್ಲವನ್ನು ಮಾಡ್ತಾನೇ ಇರುತ್ತಾರೆ ಡೋನಾಲ್ಡ್ ಟ್ರಂಪ್ .
ಹೀಗಾಗಿ ಈ ವರ್ಷ ಮುಗಿಯೋ ಮುನ್ನವೇ ಚಿನ್ನ ಬೆಲೆ 10 ಗ್ರಾಮ್‌ಗೆ 2 ಲಕ್ಷ ರೂಪಾಯಿ ಗಡಿ ದಾಟುತ್ತಾ ಅನ್ನೋ ಪ್ರಶ್ನೆ ಉದ್ಭವವಾಗಿದೆ. ನಿಜಕ್ಕೂ 2 ಲಕ್ಷ ಗಡಿ ದಾಟುತ್ತಾ?
ಚಿನ್ನದ ದರ ಶರವೇಗದಲ್ಲಿ ಮುನ್ನುಗ್ಗುತ್ತಿರೋದಕ್ಕೆ ಟ್ರಂಪ್ ಬಿಟ್ಟರೇ, ಇನ್ನೇನೂ ಕಾರಣ ಅನ್ನೋದನ್ನ ವಿವರಿಸುತ್ತೇವೆ.
ಚಿನ್ನ ಗುನ್ನ ಕಾರಣ-01
ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಸ್ಥಿರತೆ ಸೃಷ್ಟಿ!
ಯಾವುದೇ ಎರಡು ದೇಶಗಳ ನಡುವೆ ಯುದ್ಧ ನಡೀತಾ ಇಲ್ಲ... ಎಲ್ಲರೂ ಶಾಂತವಾಗಿದ್ದಾರೆ ಅಂತಾದ್ರೆ ಸಾಮಾನ್ಯವಾಗಿ ಚಿನ್ನದ ಬೆಲೆ ಏರಿಕೆಯಾಗೋದಿಲ್ಲ. ಹಾಗೊಂದು ವೇಳೆ ಆದ್ರೂ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಆಗ್ತಾ ಇರುತ್ತೆ. ಆದ್ರೆ, ಯುದ್ಧಗಳು ಶುರುವಾದ್ವು ಅಂದ್ರೆ ಚಿನ್ನಕ್ಕೆ ಗುನ್ನ ಬಿತ್ತು ಅಂತಾನೇ ಅರ್ಥ. ಕೆಲವು ವರ್ಷಗಳಿಂದ ರಷ್ಯಾ, ಉಕ್ರೇನ್ ನಡುವೆ ಶುರುವಾಗಿರೋ ಯುದ್ಧ ಇನ್ನೂ ನಿಂತಿಲ್ಲ. ಇಸ್ರೇಲ್-ಇರಾನ್ ನಡುವಿನ ವಾರ್ ಸದ್ಯಕ್ಕೆ ನಿಂತಿದೆ. ಆದ್ರೆ, ಯಾವಾಗ ಮತ್ತೆ ಶುರುವಾಗುತ್ತೋ ಗೊತ್ತಿಲ್ಲ. ಹಾಗೇ ಭಾರತ-ಪಾಕಿಸ್ತಾನ ನಡುವೆ ಯಾವಾಗ ಬೆಂಕಿ ಹತ್ತಿಕೊಳ್ಳುತ್ತೋ ಗೊತ್ತಿಲ್ಲ. ಈ ನಡುವೆ ಇರಾನ್ ಮೇಲೆ ಅಮೆರಿಕಾ ಕೆಂಡ ಕಾರುತ್ತಿದೆ. ಇನ್ನು ಗ್ರೀನ್‌ಲ್ಯಾಂಡ್ ವಶಕ್ಕೆ ಕೌಂಟ್‌ಡೌನ್ ಶುರು ಮಾಡಿದೆ. ಇದೆಲ್ಲದರ ಪರಿಣಾಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಹೀಗಾಗಿ ಜನ ಹಣವನ್ನ ಚಿನ್ನದ ಮೇಲೆ ವಿನಿಯೋಗ ಮಾಡ್ತಿದ್ದಾರೆ. ಯಾವಾಗೆಲ್ಲ ಜನ ಚಿನ್ನದ ಮೇಲೆ ವಿನಿಯೋಗ ಮಾಡೋದಕ್ಕೆ ಶುರು ಮಾಡ್ತಾರೋ ಆ ಎಲ್ಲಾ ಸಂದರ್ಭದಲ್ಲಿಯೂ ಬೆಲೆ ಗಗನಕೇರುತ್ತೆ.
ಚಿನ್ನ ಗುನ್ನ ಕಾರಣ-02
ಕೇಂದ್ರ ಬ್ಯಾಂಕ್‌ಗಳಿಂದ ಚಿನ್ನದ ಖರೀದಿ!
ಕೇಂದ್ರ ಬ್ಯಾಂಕುಗಳು ಆರ್ಥಿಕ ಅನಿಶ್ಚಿತತೆ, ಭೌಗೋಳಿಕ ರಾಜಕೀಯ ಒತ್ತಡ ಮತ್ತು ಡಾಲರ್‌ನಿಂದ ವೈವಿಧ್ಯೀಕರಣದ ಕಾರಣದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ದಾಖಲೆ ಪ್ರಮಾಣದಲ್ಲಿ ಚಿನ್ನವನ್ನು ಖರೀದಿಸುತ್ತಿವೆ. ಇಂದು ವಿದೇಶಿ ವಿನಿಮಯ ಮೀಸಲುಗಳಲ್ಲಿ ಚಿನ್ನವನ್ನು ಎರಡನೇ ಅತಿ ಮುಖ್ಯ ಆಸ್ತಿಯನ್ನಾಗಿ ಮಾಡಿ ಕೊಂಡಿವೆ. ಭಾರತ, ಪೋಲೆಂಡ್, ಬ್ರೆಜಿಲ್, ಚೀನಾ ಸೇರಿದಂತೆ ವಿವಿಧ ದೇಶಗಳು ಭಾರೀ ಪ್ರಮಾಣದಲ್ಲಿ ಚಿನ್ನವನ್ನ ಖರೀದಿ ಮಾಡಿವೆ. ಭಾರತದ ಕೇಂದ್ರ ಬ್ಯಾಂಕ್ ಸುಮಾರು 880 ಟನ್‌ಗಿಂತ ಹೆಚ್ಚಿನ ಚಿನ್ನ ಖರೀದಿ ಮಾಡಿದೆ ಅಂತ ಹೇಳಲಾಗ್ತಿದೆ. ಆ ಚಿನ್ನವನ್ನ ಬ್ಯಾಂಕ್ ಆಫ್ ಇಂಗ್ಲೆಂಡ್ ಸೇರಿದಂತೆ ವಿವಿಧೆಡೆ ಭದ್ರತೆಗಾಗಿ ಇಡಲಾಗಿದೆ. ಹಾಗೇ ಸಣ್ಣ ಪುಟ್ಟ ರಾಷ್ಟ್ರಗಳು ಚಿನ್ನದ ಖರೀದಿಯನ್ನ ಜಾಸ್ತಿ ಮಾಡಿಕೊಂಡಿವೆ. ಹೀಗಾಗಿ ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗ್ತಿದೆ ಅಂತ ತಜ್ಞರು ಹೇಳ್ತಿದ್ದಾರೆ.
ಚಿನ್ನ ಗುನ್ನ ಕಾರಣ-03
ಷೇರು ಮಾರುಕಟ್ಟೆ ಬಿಟ್ಟು ಚಿನ್ನದ ಮಾರುಕಟ್ಟೆ ಅತ್ತ ದೃಷ್ಟಿ!
ಇದೇ 10 ವರ್ಷದ ಹಿಂದೆಯೋ ಇಲ್ಲವೋ, 20 ವರ್ಷದ ಹಿಂದೆಯೋ ಜನರ ದೃಷ್ಟಿ ಇದ್ದಿದ್ದೇ ಷೇರು ಮಾರುಕಟ್ಟೆಯತ್ತ. ಕಾರಣ, ಸ್ವಲ್ಪ ಹಣವನ್ನ ಹೂಡಿಕೆ ಮಾಡಿ ಕೆಲವೇ ವರ್ಷದಲ್ಲಿ ಭಾರೀ ಲಾಭ ಪಡೀಬಹುದು ಅನ್ನೋ ನಿರೀಕ್ಷೆಯಲ್ಲಿ ಹೂಡಿಕೆ ಮಾಡ್ತಾ ಇದ್ರು. ಆದ್ರೆ, ಇತ್ತೀಚಿನ ವರ್ಷದಲ್ಲಿ ಷೇರು ಮಾರುಕಟ್ಟೆ ಹೂಡಿಕೆದಾರರ ವಿಶ್ವಾಸವನ್ನ ಕಳ್ಕೊಂಡಿದೆ. ಯಾಕಂದ್ರೆ ಯಾವ್ ಸಂದರ್ಭದಲ್ಲಿ ಯುದ್ಧಗಳು ಶುರುವಾಗ್ತಾವೋ? ವಿಶ್ವ ಮಟ್ಟದಲ್ಲಿ ಏನ್ ಬೆಳವಣಿಗೆ ಆಗುತ್ತೋ? ಅನ್ನೋದು ಗೊತ್ತಿಲ್ಲ. ಅಂಥ ಎಲ್ಲಾ ಸಂದರ್ಭದಲ್ಲಿಯೂ ಷೇರ್ ಮಾರುಕಟ್ಟೆ ಮೇಲೆ ಏಟು ಬೀಳುತ್ತೆ. ಹೀಗಾಗಿ ಷೇರು ಮಾರುಕಟ್ಟೆಯ ಸಹವಾಸವೇ ಬೇಡ, ಲಾಭ ನಿಧಾನಕ್ಕೆ ಬಂದ್ರೂ ಪರವಾಗಿಲ್ಲ. ತಮ್ಮ ಹಣಕ್ಕೆ ಯಾವತ್ತೂ ಮೋಸ ಇಲ್ಲ ಅಂತ ಹೇಳಿ ಜನ ಚಿನ್ನದ ಮೇಲೆ ಹೂಡಿಕೆಯನ್ನ ಮಾಡ್ತಿದ್ದಾರೆ. ಇದು ಸಹ ಚಿನ್ನದ ಬೆಲೆ ಏರಿಕೆಗೆ ಬಹುಮುಖ್ಯ ಕಾರಣ.
ಚಿನ್ನ ಗುನ್ನ ಕಾರಣ-04
ಜಾಗತಿಕ ಆರ್ಥಿಕ ಕುಸಿತದ ಭೀತಿ!
ಈಗಾಗಾಲೇ ಶ್ರೀಲಂಕಾ, ಬಾಂಗ್ಲಾ, ನೇಪಾಳದಲ್ಲಿ ಆರ್ಥಿಕ ಕುಸಿತ ಆಗಿದ್ದನ್ನ, ಅದರ ಎಫೆಕ್ಟ್ ಏನು ಅನ್ನೋದನ್ನ ನೋಡಿದ್ದೇವೆ. ಸದ್ಯಕ್ಕೆ ಇರಾನ್‌ನಲ್ಲಿ ಆರ್ಥಿಕ ಕುಸಿತದಿಂದಲೇ ದಂಗೆ ಶುರುವಾಗಿದೆ ಅನ್ನೋದು ಜಗತ್ತಿಗೆ ಗೊತ್ತಿರೋ ಸತ್ಯ. ಹಾಗೇ ಕಾಲಜ್ಞಾನಿಗಳು ನುಡಿದ ಭವಿಷ್ಯವಾಣಿಯಲ್ಲಿಯೂ 2026 ರಲ್ಲಿ ಭಾರೀ ಪ್ರಮಾಣದಲ್ಲಿ ಆರ್ಥಿಕ ಕುಸಿತವಾಗುತ್ತೆ. ಹಣದುಬ್ಬರ ಕಾಣಿಸಿಕೊಳ್ಳುತ್ತೆ ಅಂತ ಹೇಳಲಾಗ್ತಿದೆ. ಹೀಗಾಗಿ ಜನ ಭಯ ಭೀತರಾಗಿದ್ದಾರೆ. ಆದ್ರೆ, ಮುಂಚಿತವಾಗಿ ಹಣವನ್ನ ಚಿನ್ನದ ಮೇಲೆ ಹೂಡಿಕೆ ಮಾಡಿದ್ರೆ ತಾವು ಸೇಫ್ ಆಗ್ತೀವಿ ಅನ್ನೋ ಭಾವನೆ ಜನರಲ್ಲಿ ಮನೆ ಮಾಡಿದೆ. ಹೀಗಾಗಿ ಸಾಮಾನ್ಯ ಜನ ಸಹ ಚಿನ್ನದ ಖರೀದಿಯತ್ತ ಹೆಜ್ಜೆ ಇಟ್ಟಿದ್ದಾರೆ. ಇದರಿಂದಲೂ ಚಿನ್ನದ ಬೆಲೆ ಏರಿಕೆ ಆಗ್ತಿದೆ ಅನ್ನೋದ್ ಕನ್ಫರ್ಮ್.
ಚಿನ್ನ ಗುನ್ನ ಕಾರಣ-05
ಬೇಡಿಕೆಗೆ ತಕ್ಕಷ್ಟು ಚಿನ್ನದ ಉತ್ಪಾದನೆ ಆಗ್ತಿಲ್ಲ!
ಯಾವುದೇ ವಸ್ತುವಿನ ಉತ್ಪಾದನೆ ಜಾಸ್ತಿ ಆಯ್ತು... ಬೇಡಿಕೆ ಕಡಿಮೆ ಆಯ್ತು ಅಂದ್ರೆ ಆ ವಸ್ತುವಿನ ಬೆಲೆ ಖಂಡಿತ ಇಳಿಯುತ್ತೆ. ಕಾರಣ, ಖರೀದಿ ಮಾಡೋರು ಇರೋದೇ ಇಲ್ಲ. ಆದ್ರೆ, ಉತ್ಪಾದನೆ ಕಡಿಮೆ ಆಯ್ತು ಬೇಡಿಕೆ ಜಾಸ್ತಿ ಆಯ್ತು ಅಂದ್ರೆ ಡೌಟೇ ಬೇಡ ಆ ವಸ್ತುವಿನ ಬೆಲೆ ಗಗನಕೇರುತ್ತೆ. ಎಕ್ಸಾಂಪಲ್ ಆಗಿ ಹೇಳ್ಬೇಕು ಅಂದ್ರೆ, ಟೊಮೆಟೋ ಉತ್ಪಾದನೆ ಕಡಿಮೆ ಆದಾಗ, ಪೂರೈಕೆ ಆಗದೇ ಇದ್ದಾರೆ ಅದರ ಬೆಲೆ 100 ರೂಪಾಯಿ ಗಡಿ ದಾಟಿದನ್ನು ನೋಡಿದ್ದೇವೆ. ಸೇಮ್ ಅದೇ ರೀತಿಯಲ್ಲಿ ಚಿನ್ನದ ಉತ್ಪಾದನೆ ಜಾಗತಿಕ ಮಟ್ಟದಲ್ಲಿ ಕಡಿಮೆ ಇದೆ. ಜನ ಎದ್ನೋ ಬಿದ್ನೋ ಅಂತ ಖರೀದಿ ಮಾಡ್ತಿದ್ದಾರೆ. ಹೀಗಾಗಿ ಚಿನ್ನ ಬಾರೀ ದುಬಾರಿ ಆಗ್ತಿದೆ ಅಂತ ತಜ್ಞರು ಹೇಳ್ತಿದ್ದಾರೆ.
ಈ ವರ್ಷವೇ 10 ಗ್ರಾಮ್ ಚಿನ್ನದ ಬೆಲೆ ₹2 ಲಕ್ಷದ ಗಡಿದಾಟುತ್ತಾ?
ಹೂಡಿಕೆಗೆ ಇದು ಸೂಕ್ತ ಸಂದರ್ಭನಾ? ಏರಿದ ಚಿನ್ನ ಇಳಿಯುತ್ತಾ?
ಕಳೆದ ಒಂದು ವರ್ಷದಿಂದ ಚಿನ್ನ ಭಾರೀ ಪ್ರಮಾಣದಲ್ಲಿ ಏರಿಕೆಯಾಗ್ತಾನೇ ಇದೆ. ಕಳೆದ ವರ್ಷದ ಜನವರಿಯಲ್ಲಿ 10 ಗ್ರಾಮ್ ಚಿನ್ನಕ್ಕೆ 75 ಸಾವಿರದ ಆಸುಪಾಸಿನಲ್ಲಿ ಇದ್ದಿದ್ದು ಇದೀಗ ಒಂದೂವರೆ ಲಕ್ಷದ ಗಡಿ ದಾಡಿದೆ. ಮುಂದೆ ಎರಡು ಲಕ್ಷದ ಗಡಿ ದಾಟೋ ಸಾಧ್ಯತೆಯೂ ಇದೆ.
ಚಿನ್ನದ ಏರಿಕೆ ಆಭರಣ ಪ್ರಿಯರಿಗೆ ಶಾಕ್... ಹೀಗಾಗಿ ಈಗಾಗಲೇ ಹೂಡಿಕೆ ಮಾಡಿದವ್ರಿಗೆ ಲಾಟರಿ. ಆದ್ರೆ, ಈಗ ಹೂಡಿಕೆ ಮಾಡೋದಕ್ಕೆ ಸೂಕ್ತನಾ ಅನ್ನೋ ಪ್ರಶ್ನೆ ಖಂಡಿತವಾಗಿಯೂ ಇರುತ್ತೆ. ಯಾಕಂದ್ರೆ, ಹೂಡಿಕೆ ಮಾಡಿದ್ಮೇಲೆ ಚಿನ್ನ ಏರಿಕೆಯಾದ್ರೆ ಪರ್ವಾಗಿಲ್ಲ. ಒಂದ್ ವೇಳೆ ಇಳಿಕೆ ಆಯ್ತಾ ಹೋಯ್ತು ಅಂದ್ರೆ ಭೀತಿ ಶುರುವಾಗುತ್ತೆ.
ಚಿನ್ನ ಖರೀದಿ ಮಾಡ್ಬೇಕೋ? ಬೇಡವೋ? ಅನ್ನೋ ಗೊಂದಲದಲ್ಲಿ ಇರೋದ್ರಿಂದ ತಜ್ಞರು ಚಿನ್ನದ ಮೇಲೆ ಹೂಡಿಕೆ ಮಾಡಿ ಆದ್ರೆ ಎಚ್ಚರಿಕೆಯಿಂದ ಮಾಡಿ ಎಂದು ಸಲಹೆ ನೀಡಿದ್ದಾರೆ. ಸಾಲ ಮಾಡಿ ಹೂಡಿಕೆ ಮಾಡೋದಕ್ಕೆ ಹೋಗಬೇಡಿ ಅನ್ನೋದೇ ತಜ್ಞರ ಸಲಹೆ. ಚಿನ್ನದ ಬೆಲೆ ಏರಿಕೆ ಖಂಡಿತವಾಗಿಯೂ ಆಘಾತ ಮೂಡಿಸುತ್ತಿದೆ. ಬಡವರ ಪಾಲಿಗೆ ಗಗನ ಕುಸುಮವಾಗುತ್ತಿದೆ.
/filters:format(webp)/newsfirstlive-kannada/media/media_files/2026/01/13/canada-gold-heist-case-accused-arrested-4-2026-01-13-13-03-18.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us