/newsfirstlive-kannada/media/media_files/2025/08/11/up-fatepura-tomb-2025-08-11-12-29-18.jpg)
ಉತ್ತರ ಪ್ರದೇಶದ ಫತೇಪುರ ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳು ಗೋರಿಯೊಂದಕ್ಕೆ ಮುತ್ತಿಗೆ ಹಾಕಿ ಧ್ವಂಸ ಮಾಡುವ ಯತ್ನ ಮಾಡಿದ್ದಾರೆ. ಗೋರಿಯ ಕೆಳಭಾಗದಲ್ಲಿ ಹಿಂದೂ ದೇವಾಲಯ ಇದೆ. ದೇವಾಲಯದ ಮೇಲೆ ಗೋರಿ ಕಟ್ಟಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಜಿಲ್ಲಾಡಳಿತವು ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದೆ. ವಿವಾದಿತ ಜಾಗದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿದ್ದಾರೆ.
ಇತ್ತೀಚೆಗೆ ಫೇತಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೊಟ್ಟ ಹೇಳಿಕೆಯಿಂದ ವಿವಾದ ಸೃಷ್ಟಿಯಾಗಿದೆ. ಫತೇಪುರದ ಸದಾರ್ ತಾಲ್ಲೂಕಿನಲ್ಲಿರುವ ನವಾಬ್ ಅಬಾಸ್ ಸಮಾದ್ ಗೋರಿಯು ಮುಸ್ಲಿಂ ಗೋರಿಯಲ್ಲ. ಅದು ದೇವಾಲಯದ ಜಾಗ. ಈ ಹಿಂದೆ ದೇವಾಲಯದ ಜಾಗದಲ್ಲಿ ಗೋರಿ ಕಟ್ಟಲಾಗಿದೆ ಎಂದು ಹೇಳಿದ್ದರು. ಸಾವಿರ ವರ್ಷಗಳ ಹಿಂದೆ ಆ ಸ್ಥಳದಲ್ಲಿ ಠಾಕೂರ್ ಜೀ ಮತ್ತು ಶಿವ ದೇವಾಲಯ ಇತ್ತು. ಅದರ ಪ್ರತೀಕವಾಗಿ ಇಂದಿಗೂ ಅಲ್ಲಿ ಕಮಲದ ಹೂವಿನ ಚಿತ್ರ ಇದೆ. ಜೊತೆಗೆ ತ್ರಿಶೂಲದ ಕೆತ್ತನೆ ಇದೆ ಎಂದು ಹಿಂದೂ ಧರ್ಮದ ಚಿಹ್ನೆಗಳು ಇರುವ ಸಾಕ್ಷ್ಯ ನೀಡಿದ್ದರು. ಈ ಹೇಳಿಕೆ ನೀಡಿದ ಮೇಲೆ ಹಿಂದೂ ಸಂಘಟನೆಗಳು ಇಂದು ಬೆಳಂ ಬೆಳಿಗ್ಗೆ ನವಾಬ್ ಅಬಾಸ್ ಸಮಾದ್ ಗೋರಿ ಸ್ಥಳಕ್ಕೆ ಮುತ್ತಿಗೆ ಹಾಕಿವೆ.
ಬಿಜೆಪಿ ಜಿಲ್ಲಾಧ್ಯಕ್ಷರ ಹೇಳಿಕೆಯ ಬಳಿಕ ಹಿಂದೂ ಸಂಘಟನೆಗಳು ಆ ಜಾಗಕ್ಕೆ ನುಗ್ಗಿ ಗೋರಿಯನ್ನು ಧ್ವಂಸ ಮಾಡಲು ಯತ್ನಿಸಿವೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಬಂದು ಹಿಂದೂ ಸಂಘಟನೆಗಳ ಕಾರ್ಯಕರ್ತಕರನ್ನು ತಡೆದಿದ್ದಾರೆ. ಹಿಂದೂ ಸಂಘಟನೆಗಳು ಸ್ಥಳದಲ್ಲಿ ಹಿಂದೂ ಧಾರ್ಮಿಕ ವಿಧಿವಿಧಾನಗಳ ಮೂಲಕ ಪೂಜೆ ನಡೆಸಲು ಪ್ಲ್ಯಾನ್ ಮಾಡಿದ್ದವು. ಜೊತೆಗೆ ಸ್ಥಳವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದ್ದವು. ಇದರಿಂದ ಪರಿಸ್ಥಿತಿ ಉದ್ವಿಗ್ನವಾಯಿತು.
ಸರ್ಕಾರಿ ದಾಖಲೆಗಳ ಪ್ರಕಾರ, ಕಾರಾಸ ನಂಬರ್ 753, ಗೋರಿ ಇರುವ ಸ್ಥಳವು ನ್ಯಾಷನಲ್ ಪ್ರಾಪರ್ಟಿ ಮುಕಾಬಾರಾ ಮಂಗಿ ಎಂದಿದೆ. ಇದೊಂದು ಸಂರಕ್ಷಿತ ಸ್ಮಾರಕ. ಆದರೇ, ಬಿಜೆಪಿ ಜಿಲ್ಲಾಧ್ಯಕ್ಷರ ಹೇಳಿಕೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.