/newsfirstlive-kannada/media/media_files/2025/11/10/delhi-redfort-car-blast03-2025-11-10-19-41-30.jpg)
ರಾತ್ರಿ 9:00 ಗಂಟೆ
ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಸ್ಪೋಟದ ಬಗ್ಗೆ ದೆಹಲಿ ಪೊಲೀಸರು ಕೇಂದ್ರ ಸಚಿವ ಅಮಿತ್ ಶಾಗೆ ಮಾಹಿತಿ ನೀಡಿದ್ದಾರೆ. ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ. ದೇಶಾದ್ಯಂತ ಹೈ ಆಲರ್ಟ್ ಘೋಷಿಸಲಾಗಿದೆ.
ಹರಿಯಾಣದ ಫರಿದಾಬಾದ್ ನಲ್ಲಿ 350 ಕೆಜಿ ಯಷ್ಟು ಆರ್‌ಡಿಎಕ್ಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದಾದ ಬಳಿಕ 2,900 ಕೆಜಿ ಅಮೋನಿಯಂ ನೈಟ್ರೇಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಅಮೋನಿಯಂ ನೈಟ್ರೇಟ್ ಅನ್ನು ಬಾಂಬ್ ತಯಾರಿಕೆಗೆ ಬಳಸಲಾಗುತ್ತೆ.
ಉಗ್ರಗಾಮಿ ಸಂಘಟನೆಗಳು ದೇಶಾದ್ಯಂತ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದಾರೆ ಎನ್ನುವ ಮಾಹಿತಿ ನಿನ್ನೆಯೇ ಜಮ್ಮು ಕಾಶ್ಮೀರ ಪೊಲೀಸರು, ದೆಹಲಿ ಪೊಲೀಸರಿಗೆ ಸಿಕ್ಕಿತ್ತು.
ಇಂದು ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆಯ ಎದುರೇ ಸ್ಪೋಟ ಸಂಭವಿಸಿದೆ .
ಇಂದು ಸಂಜೆ 6.52ರ ಸಮಯದಲ್ಲಿ ಟ್ರಾಫಿಕ್ ಸಿಗ್ನಲ್ ಬಳಿ ಕಾರ್ ಒಂದು ನಿಧಾನಕ್ಕೆ ಚಲಿಸುತ್ತಿತ್ತು. ಸಿಗ್ನಲ್ ಬಳಿ ಕಾರ್ ನಿಲ್ಲಿಸಿದಾಗ, ಆ ಕಾರ್ ನಲ್ಲೇ ಸ್ಪೋಟ ಸಂಭವಿಸಿದೆ. ಸ್ಪೋಟದ ಪರಿಣಾಮವಾಗಿ ಸಮೀಪದಲ್ಲಿದ್ದ ವಾಹನಗಳಿಗೂ ಹಾನಿಯಾಗಿದೆ. ಎಫ್‌ಎಸ್‌ಎಲ್ , ಎನ್‌ಐಎ ಸೇರಿದಂತೆ ಎಲ್ಲ ತನಿಖಾ ಏಜೆನ್ಸಿಗಳು ಈಗ ಸ್ಥಳಕ್ಕೆ ಬಂದಿವೆ ಎಂದು ದೆಹಲಿ ಪೊಲೀಸ್ ಕಮೀಷನರ್ ಸತೀಶ್ ಗೋಲಚಾ ಹೇಳಿದ್ದಾರೆ.
ಕೆಲವರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ಮಾನಿಟರ್ ಮಾಡಲಾಗುತ್ತಿದೆ. ಕೇಂದ್ರ ಗೃಹ ಸಚಿವರು ನಮಗೆ ಪೋನ್ ಕಾಲ್ ಮಾಡಿದ್ದರು. ಕಾಲ ಕಾಲಕ್ಕೆ ಕೇಂದ್ರ ಗೃಹ ಸಚಿವರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ದೆಹಲಿ ಪೊಲೀಸ್ ಕಮೀಷನರ್ ಸತೀಶ್ ಗೋಲಚಾ ಹೇಳಿದ್ದಾರೆ.
ರಾತ್ರಿ 9.05 :
ದೆಹಲಿ ರೆಡ್ ಪೋರ್ಟ್ ಬಳಿ ಸ್ಪೋಟ ಸಂಭವಿಸಿದ ಬಳಿಕ ದೆಹಲಿಯ ಶಾಪಿಂಗ್ ಮಾಲ್, ಮಾರ್ಕೆಟ್ ಗಳು ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಉಗ್ರರು ಜನದಟ್ಟಣೆ ಸ್ಥಳಗಳನ್ನೇ ಗುರಿಯಾಗಿಸಿಕೊಂಡು ಸ್ಪೋಟ ನಡೆಸಿರುವುದರಿಂದ ಜನದಟ್ಟಣೆ ಸ್ಥಳಗಳಲ್ಲೇ ಹೈ ಆಲರ್ಟ್ ಘೋಷಿಸಲಾಗಿದೆ.
ರಾತ್ರಿ 9.10 : ಹರಿಯಾಣ , ಗಡಿಯಲ್ಲಿ ಆಲರ್ಟ್, ಹೋಟೇಲ್ ಗಳಲ್ಲೂ ತೀವ್ರ ತಪಾಸಣೆ
ದೆಹಲಿಯ ರೆಡ್ ಪೋರ್ಟ್ ಬಳಿ ಸ್ಪೋಟದ ಹಿನ್ನಲೆಯಲ್ಲಿ ಪಕ್ಕದ ಹರಿಯಾಣ ರಾಜ್ಯದಲ್ಲಿ ಹೈ ಆಲರ್ಟ್ ಘೋಷಿಸಲಾಗಿದೆ. ದೆಹಲಿ- ಹರಿಯಾಣ ಗಡಿಯ ಚೆಕ್ ಪೋಸ್ಟ್ ಗಳಲ್ಲಿ ಚೆಕಿಂಗ್ ಅನ್ನು ತೀವ್ರಗೊಳಿಸಲಾಗಿದೆ. ಜನರು ಶಾಂತವಾಗಿರುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ಯಾವುದೇ ಅನುಮಾನಾಸ್ಪದ ವಸ್ತು, ವ್ಯಕ್ತಿಗಳು ಕಂಡು ಬಂದರೇ, 112 ಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಹರಿಯಾಣ ಪೊಲೀಸರು ಹೇಳಿದ್ದಾರೆ.
ಎಲ್ಲ ಪೊಲೀಸ್ ಅಧಿಕಾರಿಗಳು ತಮ್ಮ ಏರಿಯಾಗಳಲ್ಲಿ ಇರಬೇಕೆಂದು ಸೂಚಿಸಲಾಗಿದೆ. ಅಂತರ್ ರಾಜ್ಯ ಗಡಿಗಳಲ್ಲಿ ವಾಹನ ತಪಾಸಣೆ ನಡೆಸಲು ಸೂಚಿಸಲಾಗಿದೆ. ವಾಹನಗಳಲ್ಲೇ ಸ್ಪೋಟಕ ಸಾಗಿಸುವ ಸಾಧ್ಯತೆ ಇರುವುದರಿಂದ ವಾಹನ ತಪಾಸಣೆಗೆ ಸೂಚಿಸಲಾಗಿದೆ. ಸಾರ್ವಜನಿಕ ಸಾರಿಗೆ, ಪಾರ್ಕಿಂಗ್ ಪ್ರದೇಶ, ಹೋಟೇಲ್, ಧರ್ಮಶಾಲಾಗಳಲ್ಲೂ ತಪಾಸಣೆ ನಡೆಸಲಾಗತ್ತಿದೆ. ಎನ್‌ಸಿಆರ್ ( ರಾಷ್ಟ್ರ ರಾಜಧಾನಿ ವಲಯ)ದ ಜಿಲ್ಲೆಗಳಲ್ಲಿ ವಿಶೇಷ ತಪಾಸಣೆ ನಡೆಸಲಾಗುತ್ತಿದೆ.
9.15 PM:
ದೆಹಲಿಯ ರೆಡ್ ಪೋರ್ಟ್ ಬಳಿ ಸ್ಪೋಟ ಸಂಭವಿಸಿರುವುದರಿಂದ ಚಾಂದಿನಿ ಚೌಕ್ ಮಾರ್ಕೆಟ್ ನಾಳೆ ಬಂದ್ ಆಗಿರುತ್ತೆ ಎಂದು ವ್ಯಾಪಾರಿಗಳ ಅಸೋಸಿಯೇಷನ್ ಅಧ್ಯಕ್ಷ ಸಂಜಯ ಭಾರ್ಗವ ಹೇಳಿದ್ದಾರೆ.
9.17 PM:
ಸ್ಪೋಟದ ಸ್ಥಳಕ್ಕೆ ಪೋರೆನ್ಸಿಕ್ ಟೀಮ್ ಆಗಮಿಸಿದ್ದು, ಸ್ಪೋಟದ ಸ್ಥಳದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ಸ್ಪೋಟದ ಸ್ಥಳದಲ್ಲಿ ಸಿಕ್ಕ ವಸ್ತುಗಳನ್ನು ಸಂಗ್ರಹಿಸುತ್ತಿದೆ. ಸ್ಪೋಟಕ್ಕೆ ಏನು ಕಾರಣ ಅನ್ನುವುದಕ್ಕೆ ಪೋರೆನ್ಸಿಕ್ ಟೀಮ್ ಸಂಗ್ರಹಿಸುವ ಸಾಕ್ಷ್ಯಗಳು ಬಹಳ ಪ್ರಮುಖ ಪಾತ್ರ ವಹಿಸುತ್ತಾವೆ. ಸ್ಪೋಟಕ್ಕೆ ಯಾವೆಲ್ಲಾ ಸಾಮಗ್ರಿಗಳನ್ನು ಬಳಸಲಾಗಿದೆ ಎಂಬುದು ಪೋರೆನ್ಸಿಕ್ ಟೀಮ್ ಸಂಗ್ರಹಿಸುವ ಸಾಕ್ಷ್ಯಗಳಿಂದ ತಿಳಿದು ಬರುತ್ತೆ .
9.20 PM:
ನಾನು ಓಡಿ ಹೋದೆ ಮತ್ತು ಸ್ಪೋಟದ ಬಳಿಕ ಬಹಳಷ್ಟು ಜನರು ಓಡಿದ್ದೇವು. ಓಡಿ ಹೋಗುವಾಗ ನಾನು ಮೂರು ಭಾರಿ ಬಿದ್ದೆ. ಸ್ಪೋಟ ಭಾರಿ ತೀವ್ರವಾಗಿತ್ತು. ಭೂಮಿಯೇ ನಡುಗಿದಂತೆ ಆಯಿತು. ಜನರು ಸುರಕ್ಷಿತವಾಗಿರಲು ಓಡುವಾಗ ಒಬ್ಬರ ಮೇಲೆ ಒಬ್ಬರು ಬಿದ್ದರು. ನನಗೆ ಏನು ಅನ್ನಿಸಿತು ಅಂದರೇ, ಎರಡನೇ ಸ್ಪೋಟವಾದರೇ, ನಾವೆಲ್ಲಾ ಸಾಯುತ್ತೇವೆ ಎಂದು ಅನ್ನಿಸಿತು ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ ವ್ಯಕ್ತಿಯೊಬ್ಬರು ಮಾಧ್ಯಮಗಳ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
9.40 PM
ದೆಹಲಿ ರೆಡ್ ಪೋರ್ಟ್ ಬಳಿ ಸಂಭವಿಸಿದ ಸ್ಪೋಟದಲ್ಲಿ ಮೃತರಿಗೆ ಸಿಎಂ ಸಿದ್ದರಾಮಯ್ಯ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಮೈಸೂರಿನಲ್ಲಿರುವ ಸಿಎಂ ಸಿದ್ದರಾಮಯ್ಯ ಮೃತರಿಗೆ ಸಂತಾಪ ಸೂಚಿಸಿದ್ದಾರೆ.
9.48 PM
ದೆಹಲಿ ರೆಡ್ ಪೋರ್ಟ್ ಬಳಿ ಸಂಭವಿಸಿದ ಸ್ಪೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 13 ಕ್ಕೇರಿಕೆಯಾಗಿದೆ.
9.49 PM
ದೆಹಲಿ ರೆಡ್ ಪೋರ್ಟ್ ಬಳಿ ಸಂಭವಿಸಿದ ಸ್ಪೋಟದಲ್ಲಿ ಗಾಯಗೊಂಡವರನ್ನು ದೆಹಲಿಯ ಲೋಕನಾಯಕ ಜಯಪ್ರಕಾಶ ನಾರಾಯಣ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್‌ಎನ್‌ಜೆಪಿ ಆಸ್ಪತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ವೈದ್ಯರಿಂದ ಗಾಯಾಳುಗಳ ಸ್ಥಿತಿ ಬಗ್ಗೆ ಅಮಿತ್ ಶಾ ಮಾಹಿತಿ ಪಡೆದಿದ್ದಾರೆ.
9.50 PM
ದೆಹಲಿ ಸ್ಪೋಟದ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಪರಿಸ್ಥಿತಿ ಬಗ್ಗೆ ಅಮಿತ್ ಶಾ ಮತ್ತು ಅಧಿಕಾರಿಗಳಿಂದ ಅವಲೋಕನ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಮೃತರಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
9.53 PM
ದೆೆಹಲಿ ಸ್ಪೋಟದಲ್ಲಿ ಇದುವರೆಗೂ 13 ಮಂದಿ ಸಾವನ್ನಪ್ಪಿದ್ದಾರೆ. 30 ಮಂದಿ ಗಾಯಗೊಂಡಿದ್ದಾರೆ.
9.54 PM
ರೆಡ್ ಪೋರ್ಟ್ ಎದುರು ಐ20 ಕಾರಿನಲ್ಲಿ ಮೊದಲಿಗೆ ಸ್ಪೋಟವಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಕಾರಿನಲ್ಲಿದ್ದವರು ಕೂಡ ಸ್ಪೋಟದಿಂದ ಸಾವನ್ನಪ್ಪಿದ್ದಾರೆ. ಕಾರಿನಲ್ಲಿ ಮೂವರು ಇದ್ದರು ಎಂಬ ಪ್ರಾಥಮಿಕ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
9.55 PM
ರೆಡ್ ಪೋರ್ಟ್ ಬಳಿ ಸಂಭವಿಸಿದ ಸ್ಪೋಟವು ಉದ್ದೇಶಪೂರ್ವಕವಾಗಿಲ್ಲದೇ ಇರಬಹುದು ಎಂಬ ಶಂಕೆಯೂ ವ್ಯಕ್ತವಾಗುತ್ತಿದೆ. ಬೇರೆ ಸ್ಥಳದಲ್ಲಿ ದೊಡ್ಡ ಸ್ಪೋಟ ನಡೆಸಲು ಕಾರಿನಲ್ಲಿ ಸ್ಪೋಟಕ ಸಾಗಿಸುತ್ತಿದ್ದಿರಬಹುದು. ಇಲ್ಲವೇ ಬೇರೆಡೆ ಸ್ಪೋಟಕ ಸಂಗ್ರಹಿಸಿಡಲು ಸಾಗಿಸುತ್ತಿದ್ದಿರಬಹುದು, ಆಕಸ್ಮಿಕವಾಗಿ ರೆಡ್ ಪೋರ್ಟ್ ಎದುರು ಟ್ರಾಫಿಕ್ ಸಿಗ್ನಲ್ ನಲ್ಲಿ ಆಕಸ್ಮಿಕ ಸ್ಪೋಟವಾಗಿರಬಹುದು ಎಂಬ ಶಂಕೆಯೂ ಕೂಡ ಪೊಲೀಸರಿಂದ ವ್ಯಕ್ತವಾಗುತ್ತಿದೆ. ಕಾರಿನಲ್ಲಿದ್ದ ಮೂವರು ಕೂಡ ಸ್ಪೋಟದಲ್ಲಿ ಸಾವನ್ನಪ್ಪಿದ್ದಾರೆ.
9.59
ದೆಹಲಿ ಪೊಲೀಸರು ಓರ್ವ ಶಂಕಿತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಿವಿಧ ತನಿಖಾ ಸಂಸ್ಥೆಗಳು ಏಕಕಾಲಕ್ಕೆ ಸ್ಪೋಟದ ಬಗ್ಗೆ ತನಿಖೆ ನಡೆಸುತ್ತಿವೆ. ರೆಡ್ ಪೋರ್ಟ್ ಬಳಿಯ ಮೆಟ್ರೋ ಸ್ಟೇಷನ್ ಬಳಿಯ ಸಿಸಿಟಿವಿಯ ದೃಶ್ಯಗಳನ್ನು ವಿಶ್ಲೇಷಣೆ ನಡೆಸಲಾಗುತ್ತಿದೆ.
10 PM
ದೆಹಲಿ ಸ್ಪೋಟದ ಹಿನ್ನಲೆಯಲ್ಲಿ ದೇಶದ ಅನೇಕ ನಗರಗಳಲ್ಲಿ ಹೈ ಆಲರ್ಟ್ ಘೋಷಿಸಲಾಗಿದೆ. ಕೋಲ್ಕತ್ತಾ, ಬಿಹಾರ, ಮಧ್ಯಪ್ರದೇಶ, ಹೈದರಾಬಾದ್, ಡೆಹ್ರಾಡೂನ್, ಹರಿಯಾಣ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಹೈ ಆಲರ್ಟ್ ಘೋಷಿಸಲಾಗಿದೆ. ಭದ್ರತಾ ತಪಾಸಣೆಯನ್ನು ಕೂಡ ಹೆಚ್ಚಿಸಲಾಗಿದೆ.
10.02 PM
ಸ್ಪೋಟ ಸಂಭವಿಸಿದ ಐ20 ಕಾರ್ ಹರಿಯಾಣ ರಾಜ್ಯದ ರಿಜಿಸ್ಟ್ರೇಷನ್ ನಂಬರ್ ಹೊಂದಿತ್ತು ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us