ಭಾರತವಿನ್ನು ಹೈಡ್ರೋಜನ್‌ ಚಾಲಿತ ರಾಷ್ಟ್ರ; ಹಸಿರು ಶಕ್ತಿಯ ಕಾರ್‌ ಚಲಾಯಿಸಿದ ಸಚಿವ ಪ್ರಲ್ಹಾದ ಜೋಶಿ

ಭಾರತ ಇನ್ನೂ ಕಾರ್ ಗಳನ್ನು ಚಲಾಯಿಸಲು ಪೆಟ್ರೋಲ್, ಡೀಸೆಲ್ ಮೇಲೆಯೇ ಅವಲಂಬಿತವಾಗಬೇಕಾಗಿಲ್ಲ. ಹೈಡ್ರೋಜನ್ ಮೂಲಕವೂ ಕಾರ್ ಚಲಾಯಿಸುವ ಕ್ರಾಂತಿಗೆ ಸಜ್ಜಾಗುತ್ತಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಇಂದು ಹೈಡ್ರೋಜನ್ ಚಾಲಿತ ಕಾರ್ ಅನ್ನು ಡ್ರೈವ್ ಮಾಡಿಕೊಂಡು ಪಾರ್ಲಿಮೆಂಟ್‌ಗೆ ಬಂದಿದ್ದರು.

author-image
Chandramohan
PRAHLAD JOSHI DRIVES HYDROGEN CAR

ಹೈಡ್ರೋಜನ್ ಕಾರ್ ಡ್ರೈವ್ ಮಾಡಿಕೊಂಡು ಬಂದ ಸಚಿವ ಪ್ರಹ್ಲಾದ್ ಜೋಶಿ

Advertisment

ʼಆತ್ಮನಿರ್ಭರ್‌ ಭಾರತʼ ಇನ್ನು ʼಹೈಡ್ರೋಜನ್‌ ಚಾಲಿತ ವಾಹನಗಳ ರಾಷ್ಟ್ರʼವಾಗಿ ಕಂಗೊಳಿಸಲಿದ್ದು, ಈ ನಿಟ್ಟಿನಲ್ಲಿ ಇದೀಗ ಮಹತ್ವದ ಹೆಜ್ಜೆಯಿರಿಸಿದೆ. ಇದಕ್ಕೆ ನಿದರ್ಶನವಾಗಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರು ಗುರುವಾರ ದೆಹಲಿಯಲ್ಲಿ ಹೈಡ್ರೋಜನ್‌ ಕಾರನ್ನೇ ಚಲಾಯಿಸಿಕೊಂಡು ಅಧಿವೇಶನಕ್ಕೆ ಬಂದಿದ್ದು, ದೇಶದ ಗಮನ ಸೆಳೆದಿದೆ.

ಹೌದು, ಗುರುವಾರ ಬೆಳಗ್ಗೆ ಸಚಿವ ಪ್ರಲ್ಹಾದ ಜೋಶಿ ಅವರು ಸಂಸತ್‌ ಚಳಿಗಾಲದ ಅಧಿವೇಶನಕ್ಕೆ ಹೈಡ್ರೋಜನ್ ಕಾರಿನಲ್ಲೇ ಆಗಮಿಸಿ ಎಲ್ಲರ ಹುಬ್ಬೇರಿಸಿದ ಪ್ರಸಂಗಕ್ಕೆ ಸಾಕ್ಷಿಯಾದರು. ಸ್ವತಃ ತಾವೇ ವಿನೂತನ ತಂತ್ರಜ್ಞಾನದ ಹೈಡ್ರೋಜನ್‌ ಕಾರ್ ಚಾಲಾಯಿಸಿಕೊಂಡು ಬಂದು ಭಾರತದ ಹೈಡ್ರೋಜನ್‌ ವಾಹನಗಳ ಯುಗಾರಂಭಕ್ಕೆ ನಾಂದಿ ಹಾಡಿದರು.

ದೆಹಲಿಯ ಅಟಲ್ ಅಕ್ಷಯ ಉರ್ಜ ಭವನದಿಂದ ಸಂಸತ್ ಭವನಕ್ಕೆ ಹಸಿರು ಬಣ್ಣದ ಹೈಡ್ರೋಜನ್‌ ಕಾರಿನಲ್ಲೇ ಧಾವಿಸಿದ ಜೋಶಿ, ದೇಶದಲ್ಲಿ ಹೈಡ್ರೋಜನ್, ಹಸಿರು ಶಕ್ತಿ ಮತ್ತು ಹಸಿರು ಇಂಧನ ಬಳಕೆಗೆ ಉತ್ತೇಜನ ನೀಡಿದರು.

ನವೀಕರಿಸಬಹುದಾದ ಇಂಧನ ಇಲಾಖೆ, ಟೊಯೋಟಾ ಕಿರ್ಲೋಸ್ಕರ್ ಕಂಪನಿ ಮತ್ತು ರಾಷ್ಟ್ರೀಯ ಸೌರಶಕ್ತಿ ಸಂಸ್ಥೆ (NISE) ಅಡಿಯಲ್ಲಿ ತಯಾರಿಸಿದ ಈ ಕಾರ್ ಸಂಚಾರಕ್ಕೆ ಪೆಟ್ರೋಲ್, ಡಿಸೇಲ್ ಅಲ್ಲ, ಕೇವಲ ಹೈಡ್ರೋಜನ್ನೇ ಸಾಕು. ಪರಿಸರ ಹಿತಕರವಾಗಿರುವ ಇದು ನಿಶ್ಯಬ್ದವಾಗಿ ಓಡುವ ಕಾರ್ ಆಗಿದೆ.

ಟೊಯೋಟಾ ಮಿರೈ ಮಾಹಿತಿ: ಎರಡನೇ ತಲೆಮಾರಿನ ಹೈಡ್ರೋಜನ್ ಪೂರಿತ ಈ ವಿದ್ಯುತ್ ವಾಹನ 9FCEV ಆಗಿರುವ ಟೊಯೋಟಾ 'ಮಿರೈ'. ಇದು ಹೈಡ್ರೋಜನ್ ಮತ್ತು ಆಮ್ಲಜನಕದ ನಡುವಿನ ರಾಸಾಯನಿಕ ಕ್ರಿಯೆಯ ಮೂಲಕ ವಿದ್ಯುತ್ ಉತ್ಪಾದಿಸುತ್ತದೆ. ಉಪ-ಉತ್ಪನ್ನವಾಗಿ ನೀರಿನ ಆವಿಯನ್ನು ಮಾತ್ರ ಹೊರಸೂಸುತ್ತದೆ. ಸರಿಸುಮಾರು 650 ಕಿ.ಮೀ. ಚಾಲನಾ ವ್ಯಾಪ್ತಿ ಮತ್ತು 5 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಇಂಧನ ತುಂಬುವ ಸಮಯದೊಂದಿಗೆ ಇದು ವಿಶ್ವದ ಅತ್ಯಂತ ಮುಂದುವರಿದ ಮತ್ತು ಪರಿಣಾಮಕಾರಿ ಶೂನ್ಯ-ಹೊರಸೂಸುವಿಕೆಯ ಅತ್ಯದ್ಭುತ ವಾಹನವಾಗಿದೆ.

ಹಸಿರು ಹೈಡ್ರೋಜನ್ ಚಲನಶೀಲತೆ: ಭಾರತ NISE-ಟೊಯೋಟಾ ಸಹಯೋಗದಲ್ಲಿ ಹಸಿರು ಹೈಡ್ರೋಜನ್ ಚಲನಶೀಲತೆಯನ್ನು ಮುನ್ನಡೆಸುವ ಸಂಕೇತವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಸಾರಿಗೆ ದೃಷ್ಟಿಕೋನದ ಪ್ರೇರಣೆಯಾಗಿದೆ ಮತ್ತು ಭಾರತದ ಶುದ್ಧ ಇಂಧನ ಪ್ರಗತಿಯಲ್ಲಿ ಪ್ರಮುಖ ಮೈಲಿಗಲ್ಲು ಎಂದು ಸಚಿವ ಪ್ರಲ್ಹಾದ ಜೋಶಿ ಇದೇ ವೇಳೆ ಸಂತಸ ಹಂಚಿಕೊಂಡರು.

ಭಾರತದಲ್ಲಿ ಹಸಿರು ಹೈಡ್ರೋಜನ್ ಭವಿಷ್ಯದ ಇಂಧನವಾಗಿ ಸ್ಥಾನ ಪಡೆದಿದೆ. ಜಾಗತಿಕವಾಗಿಯೇ ಭವಿಷ್ಯದ ಇಂಧನ ವ್ಯವಸ್ಥೆಗಳ ಬೆನ್ನೆಲುಬಾಗಿ ಹಸಿರು ಹೈಡ್ರೋಜನ್ ಹೊರಹೊಮ್ಮುತ್ತಿದೆ. ಭಾರತದ ಶುದ್ಧ ಇಂಧನ ಪರಿವರ್ತನೆ ಹಾಗೂ ʼಆತ್ಮ ನಿರ್ಭರʼತೆಯನ್ನು ಇದು ಬಲಪಡಿಸುತ್ತದೆ ಎಂದು ಹೇಳಿದರು.

ಕಡಿಮೆ ಇಂಗಾಲ ಹೊರಸೂಸುವಿಕೆಯ ಈ ಹೈಡ್ರೋಜನ್‌ ಸಾರಿಗೆ ಭಾರತದ ಪಂಚಾಮೃತ ಹವಾಮಾನ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಮುಂಬರುವ ದಶಕಗಳಲ್ಲಿ ಹಸಿರು ಹೈಡ್ರೋಜನ್ ಭಾರತದ ಇಂಧನ ಆರ್ಥಿಕತೆಯನ್ನು ಮುನ್ನಡೆಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ 2 ವರ್ಷಗಳಲ್ಲಿ ಹೈಡ್ರೋಜನ್‌ ವಾಹನ ಪ್ರಯೋಗವು ದೇಶಾದ್ಯಂತ ಹೈಡ್ರೋಜನ್ ಚಲನಶೀಲತೆಯನ್ನು ಹೆಚ್ಚಿಸುತ್ತದೆ. ಹೈಡ್ರೋಜನ್ ಇಂಧನ ಕೋಶ ವಾಹನಗಳು ನೀರನ್ನು ಮಾತ್ರ ಹೊರಸೂಸುತ್ತವೆ ಎಂದು ಹೇಳಿದರು.

ಭಾರತದಲ್ಲಿ ಹೈಡ್ರೋಜನ್ ಚಲನಶೀಲತೆ ಸಿದ್ಧ: ಹೈಡ್ರೋಜನ್ ವಾಹನವನ್ನು ಖುದ್ದು ತಾವೇ ಚಾಲನೆ ಮಾಡಿದ ಸಚಿವರು, ಭಾರತ ಹೈಡ್ರೋಜನ್ ಚಲನಶೀಲತೆಗೆ ಸಿದ್ಧವಾಗಿದೆ ಮತ್ತು ಈ ವಾಹನಗಳು ಭಾರತೀಯ ಪರಿಸ್ಥಿತಿಗಳಿಗೆ ಸೂಕ್ತವಾಗಿದೆ ಎಂಬ ಸ್ಪಷ್ಟ ಸಂದೇಶ ಸಹ ನೀಡಿದರು. ಈ ನಿಟ್ಟಿನಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತಾಂತ್ರಿಕತೆಯನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ ಯೆಸ್ಸೋ ನಾಯಕ್, ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಕ್ರಮ್ ಗುಲಾಟಿ, MNRE ಕಾರ್ಯದರ್ಶಿ ಸಂತೋಷ್ ಕುಮಾರ್ ಸಾರಂಗಿ, ರಾಷ್ಟ್ರೀಯ ಸೌರಶಕ್ತಿ ಸಂಸ್ಥೆ ಮಹಾನಿರ್ದೇಶಕ ಡಾ.ಮೊಹಮ್ಮದ್ ರಿಹಾನ್ ಮತ್ತು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್‌ನ ಮಿಷನ್ ನಿರ್ದೇಶಕ ಅಭಯ್ ಬಕ್ರೆ ಉಪಸ್ಥಿತರಿದ್ದರು.

ಕೊನೆಗೂ ವಿಜಯೇಂದ್ರ ಬೆಂಬಲಕ್ಕೆ ನಿಂತ ಹೈಕಮಾಂಡ್.. ಬಿಜೆಪಿ ಪಾದಯಾತ್ರೆಗೆ HDK ಒಪ್ಪಿಕೊಂಡ್ರಾ?





ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Hydrogen car drive by Minister PRAHLAD JOSHI
Advertisment