/newsfirstlive-kannada/media/media_files/2025/08/01/usa-prez-donald-trump-and-modi-2025-08-01-14-12-31.jpg)
ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತದ ವಸ್ತುಗಳನ್ನು ಅಮೆರಿಕಾಕ್ಕೆ ರಫ್ತು ಮಾಡಿದ್ರೆ, ಶೇ.25 ರಷ್ಟು ಅಮದು ಸುಂಕ ಪಾವತಿಸಬೇಕೆಂದು ಭಾರತದ ಉತ್ಪನ್ನಗಳ ಮೇಲೆ ಸುಂಕ ವಿಧಿಸಿದ್ದಾರೆ. ಇದರಿಂದಾಗಿ ಭಾರತದ ವಸ್ತುಗಳನ್ನು ಅಮೆರಿಕಾಕ್ಕೆ ರಫ್ತು ಮಾಡಿದವರು ಶೇ.25 ರಷ್ಟು ಸುಂಕ ಪಾವತಿಸಬೇಕಾಗುತ್ತೆ. ಇದರಿಂದ ಅಮೆರಿಕಾದಲ್ಲಿ ಭಾರತದ ಉತ್ಪನ್ನಗಳ ಬೆಲೆ ಸಹಜವಾಗಿಯೇ ಹೆಚ್ಚಾಗುತ್ತೆ. ಭಾರತವು ಅಮೆರಿಕಾಕ್ಕೆ ಸ್ಮಾರ್ಟ್ ಪೋನ್, ಐಪೋನ್, ಆಟೋಮೊಬೈಲ್ ಪಾರ್ಟ್ಸ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಈ ಎಲ್ಲ ಉತ್ಪನ್ನಗಳ ರಫ್ತಿಗೆ ಶೇ.25 ರಷ್ಟು ತೆರಿಗೆಯನ್ನು ಪಾವತಿಸಬೇಕಾಗಿದೆ.
ಆದರೇ, ಅಮೆರಿಕಾದ ಈ ದುಬಾರಿ ಅಮದು ಸುಂಕ ವಿಧಿಸಿದ ಮೇಲೆ ಭಾರತವು ಏನ್ ಮಾಡಬಹುದು? ಭಾರತದ ಮುಂದಿರುವ ಆಯ್ಕೆಗಳೇನು ಎಂಬ ಚರ್ಚೆ ನಡೆಯುತ್ತಿದೆ. ಭಾರತವು ಕೂಡ ಅಮೆರಿಕಾದ ಮೇಲೆ ಪ್ರತಿಯಾಗಿ ಹೆಚ್ಚಿನ ಸುಂಕ ವಿಧಿಸುತ್ತಾ ಎಂಬ ಚರ್ಚೆ ನಡೆಯುತ್ತಿದೆ. ಇದಕ್ಕೆ ಉತ್ತರ ಇಲ್ಲಿದೆ ಓದಿ.
ಭಾರತವು ಈಗ ತಕ್ಷಣವೇ ಅಮೆರಿಕಾದ ಮೇಲೆ ಯಾವುದೇ ಪ್ರತೀಕಾರ, ಪ್ರತಿ ಸುಂಕ, ತೆರಿಗೆಯನ್ನು ವಿಧಿಸಲ್ಲ. ಬದಲಿಗೆ ಅಮೆರಿಕಾವನ್ನು ಹಾಗೂ ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ಸಮಾಧಾನಗೊಳಿಸುವ ಕೆಲಸ ಮಾಡಲಿದೆ. ಜೊತೆಗೆ ಅಮೆರಿಕಾದಿಂದ ಹೆಚ್ಚಿನ ಉತ್ಪನ್ನಗಳನ್ನು ಭಾರತಕ್ಕೆ ಅಮದು ಮಾಡಿಕೊಳ್ಳುವ ಕೆಲಸ ಕೂಡ ಮಾಡಲಿದೆ. ಇದರಿಂದ ಟ್ರಂಪ್ ಗೆ ಸ್ವಲ್ಪ ಮಟ್ಟಿಗೆ ಸಮಾಧಾನ ಸಿಗಲಿದೆ.
ಇನ್ನೂ ಭಾರತಕ್ಕೂ ಡೋನಾಲ್ಡ್ ಟ್ರಂಪ್ ಧೀಡೀರನೇ ಶೇ.25 ರಷ್ಟು ಅಮದು ಸುಂಕ ವಿಧಿಸಿದ್ದು ಅಚ್ಚರಿ ಮತ್ತು ನಿರಾಶೆಗೂ ಕಾರಣವಾಗಿದೆ. ಭಾರತ- ಅಮೆರಿಕಾದ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಬಗ್ಗೆ ಎರಡು ದೇಶಗಳ ವಾಣಿಜ್ಯ ಇಲಾಖೆಯ ಅಧಿಕಾರಿಗಳ ನಡುವೆ ಮಾತುಕತೆ ನಡೆಯುತ್ತಿರುವಾಗಲೇ, ಅಮದು ಸುಂಕ ವಿಧಿಸಿದ್ದು ಶಾಕಿಂಗ್. ಹೀಗಾಗಿ ಈಗ ಭಾರತವು ಅಮೆರಿಕಾದಿಂದ ಹೆಚ್ಚಿನ ಖರೀದಿ ಮಾಡಲು ಮುಂದಾಗಿದೆ.
ಜೊತೆಗೆ ಅಮೆರಿಕಾದಿಂದ ಹೆಚ್ಚಿನ ನೈಸರ್ಗಿಕ ಗ್ಯಾಸ್ ಖರೀದಿ ಮಾಡುವ ಬಗ್ಗೆಯೂ ಭಾರತ ಗಂಭೀರವಾಗಿ ಪರಿಗಣಿಸುತ್ತಿದೆ. ಅಮೆರಿಕಾದಿಂದ ಕಮ್ಯೂನಿಕೇಷನ್ ಸಾಮಗ್ರಿಗಳು, ಗೋಲ್ಡ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಲು ಭಾರತ ಮುಂದಾಗುತ್ತಿದೆ. ಈ ಖರೀದಿಗಳನ್ನು ಹೆಚ್ಚಿಸಿದರೇ, ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ಭಾರತ - ಅಮೆರಿಕಾದ ನಡುವಿನ ವ್ಯಾಪಾರ ಕೊರತೆಯೂ ಕಡಿಮೆಯಾಗುತ್ತೆ. ಸದ್ಯಕ್ಕೆ ಭಾರತವು ಅಮೆರಿಕಾದಿಂದ ಯಾವುದೇ ರಕ್ಷಣಾ ಉತ್ಪನ್ನಗಳನ್ನು ಖರೀದಿಸುವ ಪ್ಲ್ಯಾನ್ ಇಲ್ಲ ಎಂದು ಭಾರತದ ಅಧಿಕಾರಿಗಳು ಹೇಳಿದ್ದಾರೆ.
ಭಾರತಕ್ಕೆ ಅಮೆರಿಕಾದ ಎಫ್-16, ಎಫ್-35 ಫೈಟರ್ ಜೆಟ್ ಖರೀದಿಯ ಪ್ರಸ್ತಾವ ಇತ್ತು. ಈ ಫೈಟರ್ ಜೆಟ್ ಗಳನ್ನು ಸದ್ಯಕ್ಕೆ ಅಮೆರಿಕಾದಿಂದ ಖರೀದಿ ಮಾಡದೇ ಇರಲು ಭಾರತ ನಿರ್ಧರಿಸಿದೆ.
ಇನ್ನೂ ಭಾರತ ಸರ್ಕಾರವು ಅಮೆರಿಕಾವು ಸ್ಟೀಲ್ ಮತ್ತು ಆಟೋಮೊಬೈಲ್ ಮೇಲೆ ಹೆಚ್ಚಿನ ಸುಂಕ ವಿಧಿಸಿರುವ ಬಗ್ಗೆ ವರ್ಲ್ಡ್ ಟ್ರೇಡ್ ಆರ್ಗನೈಜೇಷನ್ ನಲ್ಲಿ ಮಾತನಾಡುವ ತನ್ನ ಹಕ್ಕು ಅನ್ನು ಕಾಯ್ದಿರಿಸಿದೆ.
ಭಾರತ- ಅಮೆರಿಕಾ ನಡುವೆ ವ್ಯಾಪಾರ ಒಪ್ಪಂದಕ್ಕೆ ಅಡ್ಡಿ ಏನು?
ಭಾರತ ಮತ್ತು ಅಮೆರಿಕಾ ನಡುವೆ ವ್ಯಾಪಾರ ಒಪ್ಪಂದಕ್ಕೆ ಈಗಾಗಲೇ ಅನೇಕ ಸುತ್ತಿನ ಮಾತುಕತೆಗಳು ಎರಡು ದೇಶಗಳ ಅಧಿಕಾರಿಗಳ ಮಟ್ಟದಲ್ಲಿ ನಡೆದಿದೆ. ಆದರೇ, ಡೈರಿ ಮತ್ತು ಕೃಷಿ ಉತ್ಪನ್ನಗಳ ರಫ್ತು ವಿಷಯದಲ್ಲಿ 2 ದೇಶಗಳ ನಡುವೆ ಒಮ್ಮತಾಭಿಪ್ರಾಯ ಮೂಢಿಲ್ಲ. ಅಮೆರಿಕಾವು ತನ್ನ ದೇಶದ ಹಾಲು ಅನ್ನು ಭಾರತಕ್ಕೆ ರಫ್ತು ಮಾಡಲು ಬಯಸಿದೆ. ಆದರೇ, ಅಮೆರಿಕಾದಲ್ಲಿ ನಾನ್ ವೆಜ್ ಹಸುಗಳಿವೆ. ಅಂದರೇ, ಮಾಂಸಾಹಾರ, ರಕ್ತ ಸೇವಿಸುವ ಹಸುಗಳು ಇವೆ. ಇವುಗಳ ಹಾಲು ಅನ್ನು ಭಾರತಕ್ಕೆ ರಫ್ತು ಮಾಡುವುದಕ್ಕೆ ಭಾರತ ಅವಕಾಶ ಕೊಡಲ್ಲ ಎಂದು ಹೇಳಿದೆ. ನಾನ್ ವೆಜ್ ಹಸುಗಳ ಹಾಲಿನಿಂದ ಭಾರತದ ಜನರ ಧಾರ್ಮಿಕ ನಂಬಿಕೆ, ಭಾವನೆಗೆ ಧಕ್ಕೆಯಾಗುತ್ತೆ. ಜೊತೆಗೆ ಭಾರತದಲ್ಲಿ ಹೈನುಗಾರಿಕೆ ನಂಬಿರುವ 8 ಕೋಟಿ ಜನರ ಆದಾಯಕ್ಕೆ ಹೊಡೆತ ಬೀಳುತ್ತೆ. ಹೀಗಾಗಿ ಅಮೆರಿಕಾದ ಹಾಲು ಅನ್ನು ಭಾರತಕ್ಕೆ ರಫ್ತು ಮಾಡುವ ಮೊದಲು ಶುದ್ಧ ಸಸ್ಯಹಾರಿ ಹಸುಗಳ ಹಾಲು ಎಂಬ ಸರ್ಟಿಫಿಕೇಟ್ ಬೇಕೆಂದು ಭಾರತ ಪಟ್ಟು ಹಿಡಿದಿದೆ.
ಇನ್ನೂ ಅಮೆರಿಕಾದಲ್ಲಿ ಉತ್ಪಾದನೆಯಾಗುವ ಕೃಷಿ ಉತ್ಪನ್ನಗಳ ಮೇಲೆ ಭಾರತ ಸದ್ಯ ಶೇ.40 ರಷ್ಟು ಅಮದುಸುಂಕ ವಿಧಿಸುತ್ತಿದೆ. ಇದನ್ನು ಶೇ.5 ಕ್ಕೆ ಇಳಿಸಬೇಕೆಂದು ಅಮೆರಿಕಾವು ಭಾರತಕ್ಕೆ ಒತ್ತಾಯಿಸಿದೆ. ಇದಕ್ಕೆ ಭಾರತವು ಒಪ್ಪಿಲ್ಲ. ಕೃಷಿ ಉತ್ಪನ್ನಗಳ ಅಮದು ಸುಂಕವನ್ನು ಶೇ.5 ಕ್ಕೆ ಇಳಿಕೆ ಮಾಡಿದರೇ, ಭಾರತದ ಜನಸಂಖ್ಯೆಯ ಶೇ.50 -60 ರಷ್ಟಿರುವ ರೈತರಿಗೆ ಹೊಡೆತ ಬೀಳುತ್ತೆ. ಹೀಗಾಗಿ ಕೃಷಿ ಉತ್ಪನ್ನಗಳ ಅಮದು ಸುಂಕ ಇಳಿಕೆಗೆ ಭಾರತ ಒಪ್ಪಿಲ್ಲ. ಹೀಗಾಗಿ ಭಾರತ- ಅಮೆರಿಕಾದ ನಡುವಿನ ವ್ಯಾಪಾರ ಒಪ್ಪಂದ ಮಾತುಕತೆ ಅಂತಿಮವಾಗುತ್ತಿಲ್ಲ.
ಭಾರತ ಸರ್ಕಾರವು ಭಾರತದ ರೈತರು, ಜನರು, ಎಂಎಸ್‌ಎಂಇ, ಉದ್ಯಮಗಳ ಹಿತಾಸಕ್ತಿ ಕಾಪಾಡಲು ಬದ್ದವಾಗಿದೆ. ಭಾರತದಲ್ಲಿ ರಫ್ತುದಾರರು ಸೇರಿದಂತೆ ವಿವಿಧ ವರ್ಗದ ಜನರ ಜೊತೆ ಮಾತುಕತೆ ನಡೆಸುತ್ತೇವೆ ಎಂದು ಕೇಂದ್ರದ ವಾಣಿಜ್ಯ ಖಾತೆ ಸಚಿವ ಪಿಯೂಶ್ ಗೋಯಲ್ ಕೂಡ ಹೇಳಿದ್ದಾರೆ.
ಭಾರತದ ಉತ್ಪನ್ನಗಳ ಮೇಲೆ ಶೇ.25 ರಷ್ಟು ಅಮದು ಸುಂಕ ವಿಧಿಸಿರುವುದರ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ. ಭಾರತದ ರಫ್ತುದಾರರ ಜೊತೆಗೂ ಮಾತುಕತೆ ನಡೆಸುತ್ತಿದ್ದೇವೆ ಎಂದು ಪಿಯೂಶ್ ಗೋಯಲ್ ಹೇಳಿದ್ದಾರೆ. ಭಾರತದ ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಪಿಯೂಶ್ ಗೋಯಲ್ ಹೇಳಿದ್ದಾರೆ. ಇನ್ನೂ ಕೂಡ ಭಾರತ- ಅಮೆರಿಕಾದ ಅಧಿಕಾರಿಗಳ ಮಧ್ಯೆ ವ್ಯಾಪಾರ ಒಪ್ಪಂದಕ್ಕೆ ಮಾತುಕತೆ ಮುಂದುವರಿಯುತ್ತಿದೆ. ಈ ವಾರಾಂತ್ಯದಲ್ಲಿ ವ್ಯಾಪಾರ ಒಪ್ಪಂದ ಅಂತಿಮವಾಗುವ ನಿರೀಕ್ಷೆಯನ್ನು ಭಾರತ ಸರ್ಕಾರ ಇಟ್ಟುಕೊಂಡಿದೆ.
ಅಮೆರಿಕಾವು ಭಾರತದೊಂದಿಗೆ 43 ಬಿಲಿಯನ್ ಡಾಲರ್ ವ್ಯಾಪಾರ ಕೊರತೆಯನ್ನು ಎದುರಿಸುತ್ತಿದೆ. ಆದರೇ, ಅಮೆರಿಕಾವು ವಿಯೆಟ್ನಾಂ ದೇಶದ ಜೊತೆ 121 ಬಿಲಿಯನ್ ಡಾಲರ್ ವ್ಯಾಪಾರ ಕೊರತೆಯನ್ನು ಎದುರಿಸುತ್ತಿದೆ ಎಂದು ಐಎಂಎಫ್ ಹೇಳಿದೆ. ವಿಯೆಟ್ನಾಂ ಮೇಲೆ ಅಮೆರಿಕಾವು ಈಗ ಶೇ.20 ರಷ್ಟು ಅಮದು ಸುಂಕ ವಿಧಿಸಿದೆ.
ಚಂದ್ರಮೋಹನ್, ನ್ಯೂಸ್ ಫಸ್ಟ್.