/newsfirstlive-kannada/media/media_files/2025/10/09/tata-trust-in-fighting-2025-10-09-14-30-13.jpg)
ನೋಯಲ್ ಟಾಟಾ ವರ್ಸಸ್ ಮೆಹಿಲ್ ಮಿಸ್ತ್ರೀ ಬಣಗಳ ನಡುವೆ ಫೈಟಿಂಗ್
ನಮ್ಮ ದೇಶದ ಸ್ವಾತಂತ್ರ್ಯ ಭಾರತದ ಇತಿಹಾಸದೊಂದಿಗೆ ಟಾಟಾ ಗ್ರೂಪ್ ಕೂಡ ನಂಟು ಹೊಂದಿದೆ. ದೇಶದ ಬೆಳವಣಿಗೆಯೊಂದಿಗೆ ಬೆಳೆದ ಕಂಪನಿ ಹಾಗೂ ದೇಶದ ಅಭಿವೃದ್ದಿಗೆ ಕೊಡುಗೆ ನೀಡಿದ ಕಂಪನಿ ಟಾಟಾ ಕಂಪನಿ. ಈಗ ರತನ್ ಟಾಟಾ ನಿಧನರಾದ ಬಳಿಕ ಟಾಟಾ ಗ್ರೂಪ್ ನ ಬೋರ್ಡ್ ನಿರ್ದೇಶಕರಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಸದ್ಯ ರತನ್ ಟಾಟಾ ಸಂಬಂಧಿ ನೋಯಲ್ ಟಾಟಾ ಅವರು ಒಂದು ವರ್ಷದಿಂದ ಟಾಟಾ ಟ್ರಸ್ಟ್ ಅಧ್ಯಕ್ಷರಾಗಿದ್ದಾರೆ. ಟಾಟಾ ಟ್ರಸ್ಟ್ ನಲ್ಲಿ ಟಿಸಿಎಸ್ ಮುಖ್ಯಸ್ಥ, ಎನ್.ಚಂದ್ರಶೇಖರನ್ ಟ್ರಸ್ಟಿಯಾಗಿದ್ದಾರೆ. ಎನ್.ಚಂದ್ರಶೇಖರನ್ ಅವರು ಟಾಟಾ ಸನ್ಸ್ ಚೇರ್ ಮೆನ್ ಕೂಡ ಆಗಿದ್ದಾರೆ. ಟಾಟಾ ಟ್ರಸ್ಟ್ , ಟಾಟಾ ಸನ್ಸ್ ನಲ್ಲಿ ಶೇ.66 ರಷ್ಟು ಷೇರು ಹೊಂದಿದೆ. ಟಾಟಾ ಸನ್ಸ್ ನಲ್ಲಿ ಶೇ.50 ಕ್ಕಿಂತ ಹೆಚ್ಚಿನ ಷೇರುಗಳನ್ನು ಟಾಟಾ ಟ್ರಸ್ಟ್ ಹೊಂದಿದೆ. ಟಾಟಾ ಟ್ರಸ್ಟ್ ನಡಿಯಲ್ಲಿ ಟಾಟಾ ಸನ್ಸ್ ಇದೆ. ಟಾಟಾ ಸನ್ಸ್ ನಡಿಯಲ್ಲೇ 400 ಕಂಪನಿಗಳಿವೆ. ಆಟೋಮೊಬೈಲ್, ಸ್ಟೀಲ್, ಕಬ್ಬಿಣ, ಸಾಫ್ಟ್ ವೇರ್, ಉಪ್ಪು, ಗ್ರಾಹಕ ಗೂಡ್ಸ್ ಕಂಪನಿಗಳೂ ಇವೆ.
ಆದರೇ, ಶಾರ್ಪೋಂಜಿ ಪಲ್ಲೋಂಜಿ ಫ್ಯಾಮಿಲಿಯ ಮೆಹಿಲಿ ಮಿಸ್ತ್ರೀ, ಪ್ರಮೀತ್ ಜವೇರಿ, ಜಹಂಗೀರ್ ಎಚ್‌ಸಿ ಜೆಹಂಗೀರ್, ಡಾರಿಯಸ್ ಕಂಭಾಟಾ ಕೂಡ ಟಾಟಾ ಟ್ರಸ್ಟ್ ನಲ್ಲಿ ಟ್ರಸ್ಟಿಗಳಾಗಿದ್ದಾರೆ. ಟಾಟಾ ಸನ್ಸ್ ನಲ್ಲಿ ಶಾರ್ಪೋಂಜಿ ಪಲ್ಲೋಂಜಿ ಫ್ಯಾಮಿಲಿಯು ಶೇ.18 ರಷ್ಟು ಪಾಲು ಹೊಂದಿದೆ. ಹೀಗಾಗಿ ಶಾರ್ಪೋಂಜಿ ಪಲ್ಲೋಂಜಿ ಫ್ಯಾಮಿಲಿಯು ಟಾಟಾ ಸನ್ಸ್ ನಲ್ಲಿ ನಿಯಂತ್ರಣ ಸಾಧಿಸಲು ಯತ್ನಿಸುತ್ತಿದೆ. ಇದರಿಂದಾಗಿ ಈಗ ನೋಯಲ್ ಟಾಟಾ ಹಾಗೂ ಮೆಹಿಲ್ ಮಿಸ್ತ್ರೀ ನಡುವೆ ತಿಕ್ಕಾಟ ಶುರುವಾಗಿದೆ. ನೋಯಲ್ ಟಾಟಾ ಅವರ ತೀರ್ಮಾನಗಳಿಗೆ ಮೆಹಿಲ್ ಮಿಸ್ತ್ರಿ ಸೇರಿದಂತೆ ನಾಲ್ವರು ಅಡ್ಡಗಾಲು ಹಾಕುತ್ತಿದ್ದಾರೆ. ಟಾಟಾ ಟ್ರಸ್ಟ್ ನಲ್ಲಿ ವೇಣು ಶ್ರೀನಿವಾಸನ್ ಕೂಡ ಟ್ರಸ್ಟಿಯಾಗಿದ್ದಾರೆ. ವೇಣು ಶ್ರೀನಿವಾಸನ್ ಅವರು ನೋಯಲ್ ಟಾಟಾ ಅವರನ್ನು ಬೆಂಬಲಿಸುತ್ತಿದ್ದಾರೆ. ಆದರೇ, ಮೆಹಿಲಿ ಮಿಸ್ತ್ರೀ, ಪ್ರಮೀತ್ ಜವೇರಿ, ಜಹಂಗೀರ್ ಎಚ್‌ಸಿ ಜೆಹಂಗೀರ್, ಡಾರಿಯಸ್ ಕಂಭಾಟಾ ಮಾತ್ರ ನೋಯಲ್ ಟಾಟಾ ನಿರ್ಧಾರಗಳನ್ನು ಪ್ರಶ್ನಿಸುತ್ತಿದ್ದಾರೆ. ಈ ನಾಲ್ವರು ಸೂಪರ್ ಬೋರ್ಡ್ ಆಗಿ ವರ್ತಿಸುತ್ತಿದ್ದಾರೆ ಎಂಬುದು ನೋಯಲ್ ಟಾಟಾ ದೂರು. ಜೊತೆಗೆ ಈ ನಾಲ್ವರು ಟ್ರಸ್ಟಿಗಳು ತಮ್ಮನ್ನೇ ಟಾಟಾ ಟ್ರಸ್ಚ್ ಚೇರ್ ಮೆನ್ ಸ್ಥಾನದಿಂದ ಪದಚ್ಯುತಿಗೊಳಿಸಲು ಕ್ಷಿಪ್ರಕ್ರಾಂತಿಗೂ ಕೈ ಹಾಕಿದ್ದರು ಎಂದು ನೋಯಲ್ ಟಾಟಾ ಬಣ ದೂರುತ್ತಿದೆ.
ಆದರೇ, ಮಿಹಿಲಿ ಮಿಸ್ತ್ರೀ ಸೇರಿದಂತೆ ನಾಲ್ವರು ಟ್ರಸ್ಟಿಗಳು ಈ ಆರೋಪ, ದೂರುಗಳನ್ನು ತಳ್ಳಿಹಾಕಿದ್ದಾರೆ. ತಮ್ಮನ್ನು ವಿಲನ್ ಗಳಾಗಿ ಬಿಂಬಿಸಲಾಗುತ್ತಿದೆ. ಈ ಆರೋಪಗಳಲ್ಲಿ ಯಾವುದೇ ಸತ್ಯಾಂಶ ಇಲ್ಲ. ವಾಸ್ತವವಾಗಿ ರತನ್ ಟಾಟಾ ನಿಧನರಾದ ಬಳಿಕ ಕಳೆದ ವರ್ಷ ನೋಯಲ್ ಟಾಟಾ ಅವರು ಟಾಟಾ ಟ್ರಸ್ಟ್ ಅಧ್ಯಕ್ಷರಾಗಲು ನಾವು ನಾಲ್ವರು ಕೂಡ ಬೆಂಬಲಿಸಿದ್ದೇವೆ ಎಂದಿದ್ದಾರೆ.
ಟಾಟಾ ಟ್ರಸ್ಟ್ ಅಧ್ಯಕ್ಷ ನೋಯಲ್ ಟಾಟಾ
ಇದರ ಮಧ್ಯೆಯೇ ಇಂದು( ಅಕ್ಟೋಬರ್ 9) ರತನ್ ಟಾಟಾ ಅವರು ನಿಧನರಾಗಿ ಒಂದು ವರ್ಷ ಪೂರ್ಣಗೊಂಡಿದೆ. ರತನ್ ಟಾಟಾ ಸಾವನ್ನಪ್ಪಿ ಒಂದು ವರ್ಷ ಪೂರ್ಣವಾದ ಹಿನ್ನಲೆಯಲ್ಲಿ ಇಂದು ದಿನಪತ್ರಿಕೆಗಳಲ್ಲಿ ಟಾಟಾ ಗ್ರೂಪ್ ರತನ್ ಟಾಟಾ ಅವರಿಗೆ ಶ್ರದ್ದಾಂಜಲಿ ಸಲ್ಲಿಸುವ ಜಾಹೀರಾತುಗಳನ್ನು ನೀಡಿದೆ. ರತನ್ ಟಾಟಾ ಅವರು ಟಾಟಾ ಗ್ರೂಪ್ ಮಾರ್ಗದರ್ಶಕ ಬೆಳಕು ಎಂದು ಕರೆದು ಜಾಹೀರಾತು ನೀಡಿದೆ.
ಮತ್ತೊಂದೆಡೆ ಟಾಟಾ ಸನ್ಸ್ ನಲ್ಲಿ ಟ್ರಸ್ಟಿಗಳ ನಡುವೆ ಬೋರ್ಡ್ ನಿರ್ದೇಶಕರು ಮತ್ತು ಆಡಳಿತಾತ್ಮಕ ನಿರ್ಧಾರಗಳಿಗೆ ಸಂಬಂಧಿಸಿದಂತೆ, ಟ್ರಸ್ಟಿಗಳ ನಡುವೆ ಅಂತರಿಕ ಫೈಟಿಂಗ್ ಕೂಡ ನಡೆಯುತ್ತಿದೆ. ಇದರಿಂದಾಗಿ ಉಪ್ಪುನಿಂದ ಹಿಡಿದು ಉಕ್ಕು, ಸಾಫ್ಟವೇರ್ ವರೆಗೂ ಭಾರತದ ಜನರ ಜೀವನದಲ್ಲಿ ಹಾಸುಹೊಕ್ಕು ಆಗಿರುವ ಟಾಟಾ ಗ್ರೂಪ್ ಗೆ ಎಲ್ಲಿ ಹೊಡೆತ ಬೀಳುತ್ತೋ ಎಂಬ ಆತಂಕ ದೇಶದ ಜನರು ಹಾಗೂ ಕೇಂದ್ರ ಸರ್ಕಾರಕ್ಕೆ ಇದೆ.
ಕೇಂದ್ರ ಸರ್ಕಾರದ ಮಧ್ಯಪ್ರವೇಶ : ನೋಯಲ್ ಟಾಟಾಗೆ ಕೇಂದ್ರದ ಅಭಯ
ಹೀಗಾಗಿ ಕೇಂದ್ರದ ಗೃಹ ಸಚಿವ ಅಮಿತ್ ಶಾ, ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟಾಟಾ ಟ್ರಸ್ಟ್ ಚೇರ್ ಮೆನ್ ನೋಯಲ್ ಟಾಟಾ ಹಾಗೂ ಟಿಸಿಎಸ್ ಮುಖ್ಯಸ್ಥ ಎನ್.ಚಂದ್ರಶೇಖರನ್, ವೇಣು ಶ್ರೀನಿವಾಸನ್ ಅವರನ್ನು ದೆಹಲಿಗೆ ಕರೆದು ಅಕ್ಟೋಬರ್ 7 ರಂದು ಮಾತನಾಡಿದ್ದಾರೆ. ಕಂಪನಿಯ ಬೆಳವಣಿಗೆಗೆ ಅಡ್ಡಿಯಾಗುವ ಟ್ರಸ್ಟಿಗಳನ್ನು ಟಾಟಾ ಟ್ರಸ್ಟ್ ನಿಂದಲೇ ಕಿತ್ತು ಹಾಕಿ. ನೀವು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಿ. ಕಂಪನಿಯ ಸ್ಥಿರತೆಗೆ ಯಾವುದೇ ಧಕ್ಕೆಯಾಗಬಾರದು ಎಂದು ನೋಯಲ್ ಟಾಟಾ ಮತ್ತು ಚಂದ್ರಶೇಖರನ್ ಗೆ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಮಾತುಕತೆಯ ಬಳಿಕ ಷೇರುಪೇಟೆಯಲ್ಲಿ ಟಾಟಾ ಗ್ರೂಪ್ ಕಂಪನಿಗಳ ಷೇರುಗಳ ಬೆಲೆ ಏರಿಕೆಯಾಗಿದೆ.
ಭಾರತದಲ್ಲಿ ಕೇಂದ್ರ ಸರ್ಕಾರವು ಯಾವುದೇ ಕಂಪನಿಯ ಅಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶ ಮಾಡಲ್ಲ. ಕಾರ್ಪೋರೇಟ್ ಆಡಳಿತವನ್ನು ಆಯಾ ಕಂಪನಿಗಳಿಗೆ ಕೇಂದ್ರ ಸರ್ಕಾರ ಬಿಟ್ಟಿದೆ. ಕಾರ್ಪೋರೇಟ್ ನಿಯಮ ಉಲಂಘನೆ, ಭ್ರಷ್ಟಾಚಾರ ನಡೆದಾಗ ಮಾತ್ರವೇ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುತ್ತೆ. ಆದರೇ, ಟಾಟಾ ಸನ್ಸ್ ವಿಷಯದಲ್ಲಿ ಅಪರೂಪಕ್ಕೆ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿದೆ. ಕಂಪನಿಯ ಅಂತರಿಕ ಬಿಕ್ಕಟ್ಟು ಅನ್ನು ಬಗೆಹರಿಸುವ ಸಲುವಾಗ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಮಧ್ಯಪ್ರವೇಶ ಮಾಡಿದ್ದಾರೆ.
ಟಾಟಾ ಗ್ರೂಪ್ ನಮ್ಮ ದೇಶದಲ್ಲಿ 156 ವರ್ಷಗಳ ಇತಿಹಾಸ ಹೊಂದಿದೆ. ಟಾಟಾ ಗ್ರೂಪ್ ನಲ್ಲಿ 400 ಕ್ಕೂ ಹೆಚ್ಚು ಕಂಪನಿಗಳಿವೆ. 38 ರಿಂದ 40 ಲಕ್ಷ ಕೋಟಿ ರೂಪಾಯಿ ಬಂಡವಾಳವನ್ನು ಟಾಟಾ ಗ್ರೂಪ್ ಹೊಂದಿದೆ. ಭಾರತದ ಆರ್ಥಿಕತೆಗೂ ಬೆನ್ನೆಲುಬು ಆಗಿ ಕಂಪನಿ ನಿಂತಿದೆ. ಹೀಗಾಗಿ ಕಂಪನಿಯಲ್ಲಿ ಅಸ್ಥಿರತೆಯೂ ದೇಶದ ಆರ್ಥಿಕತೆಗೂ ಹೊಡೆತ ನೀಡುತ್ತೆ. ಹೀಗಾಗಿ ಅಮಿತ್ ಶಾ , ನಿರ್ಮಲಾ ಸೀತಾರಾಮನ್ ಮಧ್ಯಪ್ರವೇಶಿಸಿದ್ದು ನೋಯಲ್ ಟಾಟಾ ಮತ್ತು ಎನ್.ಚಂದ್ರಶೇಖರನ್ ಗೆ ಪ್ರಮುಖ ತೀರ್ಮಾನ ಕೈಗೊಳ್ಳುವ ಜವಾಬ್ದಾರಿ ನೀಡಿದ್ದಾರೆ.
ಹೀಗಾಗಿ ಇನ್ನೂ ಮುಂದೆ ನೋಯಲ್ ಟಾಟಾ, ಎನ್.ಚಂದ್ರಶೇಖರನ್ ಹೇಗೆ ತೀರ್ಮಾನ ಕೈಗೊಳ್ಳುತ್ತಾರೆ, ಟಾಟಾ ಗ್ರೂಪ್ ಅನ್ನು ಹೇಗೆ ಮುನ್ನೆಡೆಸುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.
ಇದರ ಮಧ್ಯೆಯೇ ನಾಳೆ ಅಂದರೇ, ಅಕ್ಟೋಬರ್ 10 ರಂದು ಟಾಟಾ ಟ್ರಸ್ಟ್ ಬೋರ್ಡ್ ಸಭೆ ಇದೆ. ಈ ಸಭೆಯಲ್ಲಿ 1 ಸಾವಿರ ಕೋಟಿ ರೂಪಾಯಿ ದಾನ ಧರ್ಮದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.