/newsfirstlive-kannada/media/media_files/2025/08/28/jammu-kashmir7-2025-08-28-08-41-17.jpg)
ದಕ್ಷಿಣ ರಾಜ್ಯಗಳ ಮೇಲೆ ಕರುಣೆ ತೋರಿರೋ ಮಳೆರಾಯ. ಉತ್ತರ ರಾಜ್ಯಗಳ ಮೇಲೆ ಪ್ರತಾಪ ತೋರಿರೋದು ಸ್ಪಷ್ಟವಾಗಿ ಗೊತ್ತಾಗ್ತಿದೆ. ನಿರಂತರ ಮಳೆಗೆ ಜಮ್ಮು ಮತ್ತು ಕಾಶ್ಮೀರ ತಡವರಿಸಿದ್ರೆ, ಇತ್ತ ಪಂಜಾಬ್ ಮತ್ತು ಹಿಮಾಚಲ ಪ್ರದೇಶ ಚಡಪಡಿಸ್ತಿದೆ.
ಇದನ್ನೂ ಓದಿ: ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಸ್ಟಾರ್ ನಿರೂಪಕಿ ಅನುಶ್ರಿ-ರೋಷನ್; PHOTOS
ಜಮ್ಮುವಿನಲ್ಲಿ ದಾಖಲೆಯ ಮಳೆಯಾಗಿದೆ. ಸತತ 24 ಗಂಟೆಗಳ ಕಾಲ ಮಳೆ ನಾನಾ ಹಿಂಸೆ ಕೊಡೋದಕ್ಕೆ ಶುರು ಮಾಡಿದೆ. 380 ಮಿಲಿ ಮೀಟರ್ ಮಳೆ ಸುರಿದು ದಾಖಲೆ ಬರೆದಿದೆ. ಕಳೆದೆರಡು ದಿನಗಳಿಂದ ನಿರಂತರ ಮಳೆಯಿಂದಾಗಿ ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ 36ಕ್ಕೆ ಏರಿದೆ. ಇದೆ ಜೊತೆಗೆ ಮಳೆಯ ಎಫೆಕ್ಟ್ಗೆ ಕಳೆದೆರಡು ದಿನದಲ್ಲೇ 41 ಮಂದಿ ಸಾವನ್ನಪ್ಪಿದ್ದಾರೆ.
ಸಾಂಬಾ ಮಾರ್ಗದಲ್ಲಿ ಪ್ರಯಾಣಿಕರ ವಾಹನಗಳು ಸ್ಥಗಿತಗೊಂಡಿವೆ. ಭದೇರ್ವಾ ನಗರದಲ್ಲಿರೋ ಗುಪ್ತ ಗಂಗಾ ದೇವಾಲಯ ಜಲಾವೃತವಾಗಿದೆ. ಲಖಿಂಪುರ ಟೋಲ್ ಪ್ಲಾಜಾ ಕಥುವಾ ಪ್ರವಾಹದಲ್ಲಿ ಧ್ವಂಸಗೊಂಡಿದೆ. ಅನಂತ್‌ನಾಗ್ ನಗರದ ವಿವಿಧ ಭಾಗದ ರಸ್ತೆಗಳ ಮೇಲೆ ರಕ್ಷಣಾ ಪಡೆಗಳ ಬೋಟ್ಗಳು ಓಡಾಡೋದಕ್ಕೆ ಶುರುವಾಗಿದೆ. ಮನೆಗಳಲ್ಲಿ ಸಿಲುಕಿರುವ ಜನರನ್ನ ರಕ್ಷಿಸಲು NDRF ಮತ್ತು SDRF ತಂಡಗಳ ರಕ್ಷಣೆ ಕಾರ್ಯ ಮುಂದುವರೆದಿದೆ.
ಕುಲು ಭಾಗದಲ್ಲಿ ಜಲಾಶಯಗಳು ತುಂಬಿ ತುಳುಕುತ್ತಿದ್ದು, ಹಾಗೆ ತುಂಬಿ ಹರಿಯುತ್ತಿರೋ ನದಿಯಲ್ಲಿ ದಡದಲ್ಲಿದ್ದ ಮನೆಯೊಂದು ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋಗಿದೆ. ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಬಿಯಾಸ್ ನದಿ ಬೀಸ್ಟ್ನಂತೆ ಉಕ್ಕಿ ಹರಿಯಲಾರಂಭಿಸಿದೆ. ಪರಿಣಾಮ ರೈಸನ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್ ಪ್ಲಾಜಾ ಹಾನಿಗೊಳಗಾಗಿದೆ. ಆಂಧ್ರ ಪ್ರದೇಶದಲ್ಲೂ ವರ್ಷಧಾರೆ ಭಾರಿ ಅವಾಂತರ ಸೃಷ್ಟಿಸಿದೆ. ಕಾಮಾರೆಡ್ಡಿ ರೆಡ್ಡಿ ಜಿಲ್ಲೆ ಥೇಟ್ ಕೆರೆಯಂತಾಗಿದೆ. ಜಲಾವೃತದಲ್ಲಿ ಸಿಲುಕಿರೋ ಮಂದಿ ರಕ್ಷಣೆಗೆ ಅಂಗಲಾಚುವಂತಾಗಿದೆ.
ಪಂಜಾಬ್‌ನಲ್ಲೂ ಭಾರಿ ಮಳೆಯಿಂದಾಗಿ ರಾವಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಮಾಧೋಪುರ್ ಅಣೆಕಟ್ಟಿನ ಗೇಟ್‌ಗಳು ಒಡೆದು ಹೋಗಿದೆ. ಪಂಜಾಬ್-ಪಾಕಿಸ್ತಾನದ ಗಡಿ ಭಾಗ ಅಟ್ಟಾರಿ-ವಾಘಾದಲ್ಲೂ ಜಲ ಸಂಕಷ್ಟ ಮುಂದುವರೆದೆ. ಪಂಜಾಬ್‌ನ ಮಾಧೋಪುರ್ ಹೆಡ್‌ವರ್ಕ್ಸ್‌ನಲ್ಲಿ ಹೆಲಿಕಾಪ್ಟರ್ ಬಳಸಿ ರಕ್ಷಣಾ ಕಾರ್ಯಾಚರಣೆ ಮಾಡಲಾಗಿದೆ. ಹೆಲಿಕಾಪ್ಟರ್ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಬಹು ಮಹಡಿ ಕಟ್ಟಡ ಕೊಚ್ಚಿ ಹೋಗಿದೆ. ಕಟ್ಟಡ ಕುಸಿತದ ಬಳಿಕವೂ ರಕ್ಷಣಾ ಕಾರ್ಯ ನಿಲ್ಲದಂತೆ ಸಾಗಿದೆ.
ಭಾರತೀಯ ಹವಾಮಾನ ಇಲಾಖೆ ಇವತ್ತೂ ಕೂಡ ಭಾರೀ ಮಳೆಯ ಮುನ್ಸೂಚನೆಯನ್ನ ಅನೇಕ ರಾಜ್ಯಗಳಿಗೆ ಘೋಷಿಸಿದೆ. ಒಟ್ಟಾರೆ, ಮಳೆಯಿಂದ ತಮ್ಮನ್ನ ತಾವು ರಕ್ಷಣೆ ಮಾಡಿಕೊಳ್ಳಿ ಅನ್ನೋ ಹವಾಮಾನ ಇಲಾಖೆಯ ಮಾಹಿತಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ