/newsfirstlive-kannada/media/media_files/2025/08/11/opposition-protest-022-2025-08-11-12-54-29.jpg)
ಕಳೆದ ಲೋಕಸಭಾ ಚುನಾವಣೆ ವೇಳೆ ದೇಶದಲ್ಲಿ ಮತ ಕಳವು ನಡೆದಿದೆ. ಐದು ರೀತಿಯಲ್ಲಿ ಲೋಕಸಭಾ ಚುನಾವಣೆ ವೇಳೆ ವಂಚನೆ ನಡೆದಿದೆ. ಇದಕ್ಕೆ ಕೇಂದ್ರ ಚುನಾವಣಾ ಆಯೋಗವೇ ಹೊಣೆ. ಮತ ಕಳವು ಮಾಡಿ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟ ಆರೋಪಿಸುತ್ತಿದೆ. ಇಂದು ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟದ ಸಂಸದರು ಪಾರ್ಲಿಮೆಂಟ್ ನಿಂದ ದೆಹಲಿಯ ಅಶೋಕ್ ರಸ್ತೆಯಲ್ಲಿರುವ ಕೇಂದ್ರ ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಆದರೇ, ದೆಹಲಿ ಪೊಲೀಸರು ಕೇಂದ್ರ ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕಲು ಅನುಮತಿ ನೀಡಿರಲಿಲ್ಲ. ಹೀಗಾಗಿ ಮಾರ್ಗ ಮಧ್ಯೆಯೇ ಬ್ಯಾರಿಕೇಡ್ ಹಾಕಿ ಕಾಂಗ್ರೆಸ್ ನೇತೃತ್ವದ ಸಂಸದರನ್ನು ತಡೆದಿದ್ದಾರೆ. ಬಳಿಕ ವಿಪಕ್ಷಗಳ ಸಂಸದರನ್ನು ದೆಹಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೂ 300 ಮಂದಿ ವಿಪಕ್ಷಗಳ ಸಂಸದರು ವಿರೋಧ ವ್ಯಕ್ತಪಡಿಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ಮತದಾರರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಬಿಜೆಪಿಗೆ ಚುನಾವಣೆಯಲ್ಲಿ ಸಹಾಯ ಮಾಡಲು ಕೇಂದ್ರ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಿಸಿದೆ ಎಂದು ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಆರೋಪಿಸಿವೆ. ಆದರೇ, ಈ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಬಳಿಕ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ.
ನಮಗೆ ಕೇಂದ್ರ ಚುನಾವಣಾ ಆಯೋಗದ ಕಚೇರಿಗೆ ಹೋಗಿ ಮನವಿ ಪತ್ರ ಕೊಡಲು ಪೊಲೀಸರು ಬಿಡುತ್ತಿಲ್ಲ ಎಂದು ಕಾಂಗ್ರೆಸ್ ನ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಹೇಳಿದ್ದಾರೆ. ಮತ ಕಳವು ನಡೆಯಲ್ಲ ಎಂದು ಕಾಂಗ್ರೆಸ್ ನಾಯಕರು ಘೋಷಣೆ ಕೂಗಿದ್ದಾರೆ. ಲೋಕಸಭೆ ಸದಸ್ಯ ಪ್ರಿಯಾಂಕಾ ಗಾಂಧಿ ಸೇರಿದಂತೆ ಮಹಿಳಾ ಸಂಸದರನ್ನು ದೆಹಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
वोट चोरी नहीं चलेगी
— Congress (@INCIndia) August 11, 2025
मोदी-शाह कायर हैं pic.twitter.com/YArJUc32NP
ಆದರೇ, ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಚುನಾವಣಾ ಆಯೋಗವು ಎಲ್ಲೆಲ್ಲಿ ಮತದಾರರ ಪಟ್ಟಿಯಲ್ಲಿ ಆಕ್ರಮವಾಗಿದೆ ಎಂಬ ಬಗ್ಗೆ ಘೋಷಣಾ ಪತ್ರಕ್ಕೆ ಸಹಿ ಹಾಕಿ ನಿರ್ದಿಷ್ಟ ದೂರು ನೀಡಿದರೇ, ನಾವು ಆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. ನಿಮ್ಮ ಆರೋಪವನ್ನು ಘೋಷಣಾ ಪತ್ರಕ್ಕೆ ಸಹಿ ಹಾಕಿ ಸಾಬೀತು ಮಾಡಿ ಇಲ್ಲವೇ ದೇಶದ ಕ್ಷಮೆ ಕೇಳಿ ಎಂದು ಕೇಂದ್ರ ಚುನಾವಣಾ ಆಯೋಗ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ನೇರವಾಗಿ ಸವಾಲು ಹಾಕಿದೆ.
ಇನ್ನೂ ಕಾಂಗ್ರೆಸ್ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಹಾಗೂ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್, ದೇಶದಲ್ಲಿ ಯಾರಾದರೂ ಸಂವಿಧಾನದ ವಿರುದ್ದ ವರ್ತಿಸುತ್ತಿದ್ದರೇ, ಅದು ಕಾಂಗ್ರೆಸ್ ನ ರಾಹುಲ್ ಗಾಂಧಿ. ದೇಶದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಮೊದಲ ಭಾರಿಗೆ ಏನೂ ನಡೆಯುತ್ತಿಲ್ಲ. ಕಾಂಗ್ರೆಸ್ ಇವಿಎಂ ಬಗ್ಗೆ ಸುಳ್ಳು ಹೇಳಿದೆ. ಮಹಾರಾಷ್ಟ್ರ, ಹರಿಯಾಣ ಅಸೆಂಬ್ಲಿ ಚುನಾವಣೆಗಳಲ್ಲಿ ಈ ವಿಷಯ ಎತ್ತಿತ್ತು. ಸುಳ್ಳಿನ ಪರ್ವತವನ್ನೇ ಸೃಷ್ಟಿಸಿತ್ತು. ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯೋಚಿಸಿಯೇ ಕಾರ್ಯತಂತ್ರ ಮಾಡಿದ್ದಾರೆ. ಎಲ್ಲ ವಿಷಯಗಳನ್ನು ಪಾರ್ಲಿಮೆಂಟ್ ನಲ್ಲಿ ಪ್ರಸ್ತಾಪಿಸಿ ಎಂದು ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳಿಗೆ ಮನವಿ ಮಾಡುತ್ತೇನೆ. ಅಪರೇಷನ್ ಸಿಂಧೂರ್ ಚರ್ಚೆ ವೇಳೆ ಕಾಂಗ್ರೆಸ್ ಹಾಗೂ ವಿಪಕ್ಷಗಳಿಗೆ ಯಾವುದೇ ಅಜೆಂಡಾ ಇರಲಿಲ್ಲ ಎಂದು ಧರ್ಮೇಂದ್ರ ಪ್ರದಾನ್ ಹೇಳಿದ್ದಾರೆ.
वोट चोरी की सच्चाई देश के सामने आ चुकी है।
— Congress (@INCIndia) August 11, 2025
ये लड़ाई राजनीतिक नहीं है, ये संविधान को बचाने की लड़ाई है।
ये एक व्यक्ति-एक वोट की लड़ाई है, इसलिए हमें साफ वोटर लिस्ट चाहिए।
: नेता विपक्ष श्री @RahulGandhipic.twitter.com/ZWoYdA3Mlt
ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷ ನಾಯಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದು ಸಂವಿಧಾನಕ್ಕಾಗಿ ನಡೆಯುತ್ತಿರುವ ಹೋರಾಟ. ಸಂವಿಧಾನ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟ. ಈಗ ಮಾತನಾಡಲು ಆಗುತ್ತಿಲ್ಲ. ಇದು ರಿಯಾಲಿಟಿ. ಒಬ್ಬ ವ್ಯಕ್ತಿ, ಒಂದು ವೋಟಿಗಾಗಿ ನಡೆಯುತ್ತಿರುವ ಹೋರಾಟ. ನಮಗೆ ಅಸಲಿ ವೋಟರ್ ಲಿಸ್ಟ್ ಬೇಕು. ಸತ್ಯ ದೇಶದ ಮುಂದಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us