/newsfirstlive-kannada/media/media_files/2025/08/25/gsb-ganehs-2025-08-25-13-01-31.jpg)
ಗೌರಿ-ಗಣೇಶ ಹಬ್ಬಕ್ಕೆ ಇನ್ನೊಂದು ದಿನವಷ್ಟೇ ಬಾಕಿ ಇದೆ. ಹೀಗಾಗಿ ಭಕ್ತರು ತಮ್ಮ ತಮ್ಮ ಏರಿಯಾದಲ್ಲಿ ಗಣೇಶನನ್ನು ಕೂರಿಸಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಗೌರಿ, ಗಣಪತಿಯ ವಿಗ್ರಹಗಳನ್ನ ಪ್ರತಿಷ್ಠಾಪಿಸಿ ಯಾವುದೇ ಅಡೆತಡೆ ಬಾರದಂತೆ ಸಮೃದ್ಧಿಯನ್ನು ದಯಪಾಲಿಸು ಎಂದು ವಿಘ್ನ ನಿವಾರಕನ ಬಳಿ ಭಕ್ತರು ಕೋರಿಕೊಳ್ಳುತ್ತಾರೆ.
ಗಣೇಶನಿಗೆ ನೈವೇದ್ಯಕ್ಕಾಗಿ ವಿವಿಧ ರೀತಿಯ ಭಕ್ಷ್ಯ, ಕರಿಗಡುಬು ಮತ್ತು ಸಿಹಿ ತಿಂಡಿ ಸೇರಿದಂತೆ ಹಣ್ಣುಗಳನ್ನು ಪೂಜೆಯಲ್ಲಿಟ್ಟು ಇಷ್ಟಾರ್ಥ ಸಿದ್ಧಿ ನೆರವೇರಿಸು ಎಂದು ಗಣಪನನ್ನ ಕೇಳಿಕೊಳ್ಳುವುದಕ್ಕೆ ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಇನ್ನೂ, ಪ್ರತಿ ವರ್ಷದಂತೆ ಈ ಬಾರಿಯೂ ದೇಶದ ಅತಿ ದೊಡ್ಡ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.
ಮುಂಬೈನ ಪ್ರಸಿದ್ಧ ಸಮುದಾಯ ಗಣೇಶ ಸಂಘವಾದ ಜಿಎಸ್‌ಬಿ ಸೇವಾ ಮಂಡಲ ಈ ವರ್ಷ ತನ್ನ ಐದು ದಿನಗಳ ಗಣಪತಿ ಆಚರಣೆಗಾಗಿ 474.46 ಕೋಟಿ ರೂ.ಗಳ ವಿಮಾ ರಕ್ಷಣೆಯನ್ನು ಪಡೆದುಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ವರ್ಷ, ಮಂಡಲವು ₹400.58 ಕೋಟಿ ವಿಮಾ ರಕ್ಷಣೆಯನ್ನು ಹೊಂದಿತ್ತು. ಈ ಬಾರಿ ಬರೋಬ್ಬರಿ 474.46 ಕೋಟಿ ರೂಪಾಯಿ ವಿಮಾ ಮಾಡಿಸಿ ತನ್ನ ಹಳೆಯ ದಾಖಲೆಯನ್ನೇ ಬ್ರೇಕ್ ಮಾಡಿದೆ.
ಗೌಡ ಸಾರಸ್ವತ ಬ್ರಾಹ್ಮಣ ಮಂಡಲ ಮುಂಬೈನ ಕಿಂಗ್ಸ್ ಸರ್ಕಲ್ನಲ್ಲಿಯೇ ಅತ್ಯಂತ ಶ್ರೀಮಂತ ಗಣೇಶ ಮಂಡಳಿ. ಈ ಬಾರಿ ಈ ಗಣೇಶ ಮಂಡಳಿ ಇನ್ಸೂರೆನ್ಸ್ ವಿಚಾರದಲ್ಲಿ ತನ್ನ ಹಳೆಯ ದಾಖಲೆಯನ್ನು ಮುರಿದು ಹಾಕಿದೆ. ಐದು ದಿನದ ಅಂದ್ರೆ ಆಗಸ್ಟ್ 27ರಿಂದ 31ರವರೆಗೆ ನಡೆಯಲಿರುವ ಗಣೇಶೋತ್ಸವದ ಮೇಲೆ ಬರೋಬ್ಬರಿ 474.46 ಕೋಟಿ ರೂಪಾಯಿ ಇನ್ಸೂರೆನ್ಸ್ ಮಾಡುವ ಮೂಲಕ ದೇಶಾದ್ಯಂತ ಸುದ್ದಿ ಮಾಡಿದೆ.
ಈ ಬಾರಿ ಗಣೇಶ ಮೂರ್ತಿಗೆ 69 ಕೆಜಿಗೂ ಹೆಚ್ಚು ಚಿನ್ನಾಭರಣಗಳು, 336 ಕೆಜಿಗೂ ಹೆಚ್ಚು ಬೆಳ್ಳಿ ಮತ್ತು ಭಕ್ತರು ದಾನ ಮಾಡಿದ ಇತರ ಅಮೂಲ್ಯ ವಸ್ತುಗಳಿಂದ ಅಲಂಕರಿಸಲಾಗಿದೆ. ಅಲ್ಲದೇ ಒಟ್ಟು ವಿಮೆಯಲ್ಲಿ 67.03 ಕೋಟಿ ರೂಪಾಯಿಗಳನ್ನು ಚಿನ್ನ, ಬೆಳ್ಳಿ ಮತ್ತು ಇತರ ಆಭರಣಗಳಿಗೆ ಮೀಸಲಿಡಲಾಗಿದೆ ಎಂದು ಜಿಎಸ್‌ಬಿ ಸೇವಾ ಮಂಡಲದ ಅಧ್ಯಕ್ಷ ಅಮಿತ್ ಪೈ ತಿಳಿಸಿದ್ದಾರೆ. ದೇಶದ ಅತ್ಯಂತ ಶ್ರೀಮಂತ ಗಣೇಶ ಮಂಡಲ ಎಂದು ಹೇಳಿಕೊಳ್ಳುವ ಮಂಡಲವು ಈ ಬಾರಿ ತನ್ನ 71 ನೇ ವರ್ಷದ ಗಣೇಶೋತ್ಸವವನ್ನು ಆಚರಿಸಲಿದೆ.
ಮಂಡಳದ ಅಧ್ಯಕ್ಷ ಅಮಿತ್ ಪೈ ಹೇಳುವ ಪ್ರಕಾರ ಒಟ್ಟು 474.46 ಕೋಟಿ ರೂಪಾಯಿ ಇನ್ಸೂರೆನ್ಸ್ ಪಾಲಿಸಿಯಲ್ಲಿ 375 ಕೋಟಿ ರೂಪಾಯಿ ವೈಯಕ್ತಿಕ ಅಪಘಾತ ಅವಘಡಗಳಿಗೆ ಕವರ್ ಆಗಲಿದೆ. ಅಂದ್ರೆ ಅಡುಗೆಯವರು, ಸೇವೆಯಲ್ಲಿ ನಿರತರಾದವರು, ಪಾರ್ಕಿಂಗ್ ಜಾಗವನ್ನು ನೋಡಿಕೊಳ್ಳುವವರು, ಭದ್ರತಾ ಸಿಬ್ಬಂದಿ ಮತ್ತು ಗಣಪತಿ ಸ್ಟಾಲ್ ವರ್ಕರ್ಸ್ ಇವರಿಗೆ ಏನಾದರೂ ಅಪಾಯವಾದ್ರೆ ಈ 375 ಕೋಟಿ ರೂಪಾಯಿಯಲ್ಲಿ ಕ್ಲೇಮ್ ಆಗುತ್ತದೆ. ಇನ್ನುಳಿದಂತೆ 30 ಕೋಟಿ ರೂಪಾಯಿ ಬೆಂಕಿ ಅವಘಡ, ಭೂಕಂಪದಲ್ಲಿ ಮಂಡಲದ ಪೀಠೋಪಕರಣಗಳು ಕಂಪ್ಯೂಟರ್ಸ್, ಸಿಸಿಟಿವಿ ಕ್ಯಾಮೆರಾಗಳು, ಪೆಂಡಾಲ್, ಸ್ಟೇಡಿಯಂ ಹಾಗೂ ಭಕ್ತರಿಗೆ ಸೇರಿದಂತೆ ಅನೇಕ ಸ್ಥಿರಾಸ್ತಿ ಹಾನಿಯಾದಲ್ಲಿ ಅದಕ್ಕೆ ಕವರ್ ಆಗಲಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ