/newsfirstlive-kannada/media/media_files/2025/08/19/justice-sudarshan-reddy-2025-08-19-14-47-17.jpg)
ಜಸ್ಟೀಸ್ ಸುದರ್ಶನ್ ರೆಡ್ಡಿ ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷದ ಅಭ್ಯರ್ಥಿ
ಸೆಪ್ಟೆಂಬರ್ 9 ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಭಾರತದ ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಮತ್ತು ಗೋವಾದ ಮೊದಲ ಲೋಕಾಯುಕ್ತ ನ್ಯಾಯಮೂರ್ತಿ (ನಿವೃತ್ತ) ಬಿ ಸುದರ್ಶನ್ ರೆಡ್ಡಿ ಅವರನ್ನು ತಮ್ಮ ಅಭ್ಯರ್ಥಿಯಾಗಿ ಆಯ್ಕೆ ಮಾಡಿವೆ. ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ನಡೆಯುವ ಚುನಾವಣೆಯಲ್ಲಿ ಸುದರ್ಶನ್ ರೆಡ್ಡಿ ಅವರು ಎನ್‌ಡಿಎ ಅಭ್ಯರ್ಥಿ ಮಹಾರಾಷ್ಟ್ರ ರಾಜ್ಯಪಾಲ ಮತ್ತು ಬಿಜೆಪಿಯ ಹಿರಿಯ ನಾಯಕ ಸಿ.ಪಿ ರಾಧಾಕೃಷ್ಣನ್ ವಿರುದ್ಧ ಸ್ಪರ್ಧಿಸುವರು.
ಜಸ್ಟೀಸ್ ಸುದರ್ಶನ್ ರೆಡ್ಡಿ, ಅವಿಭಜಿತ ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆಯಲ್ಲಿ ಜನಿಸಿದರು. ರಂಗಾರೆಡ್ಡಿ ಜಿಲ್ಲೆಯೂ ಈಗ ತೆಲಂಗಾಣ ರಾಜ್ಯದಲ್ಲಿದೆ. ಸುದರ್ಶನ್ ರೆಡ್ಡಿ 1971 ರಲ್ಲಿ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ವಕೀಲರಾಗಿ ಪ್ರಾಕ್ಟೀಸ್ ಮಾಡಿದರು. ನಂತರ 1995 ರಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡರು . ನಂತರ 2005 ರಲ್ಲಿ ಗುವಾಹಟಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದರು. ಪ್ರಖ್ಯಾತ ನ್ಯಾಯಶಾಸ್ತ್ರಜ್ಞ ಸುದರ್ಶನ್ ರೆಡ್ಡಿ ಅವರನ್ನು ಜನವರಿ 2007 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು . ಜುಲೈ 2011 ರಲ್ಲಿ ಸುದರ್ಶನ್ ರೆಡ್ಡಿ ನಿವೃತ್ತರಾದರು. ನಂತರ, ಸುದರ್ಶನ್ ರೆಡ್ಡಿ ಗೋವಾದ ಮೊದಲ ಲೋಕಾಯುಕ್ತರಾಗಿಯೂ ಸೇವೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಸ್ಟೀಸ್ ಸುದರ್ಶನ್ ರೆಡ್ಡಿ, ದೇಶದ ಜನಸಂಖ್ಯೆಯ ಶೇಕಡಾ 60 ಕ್ಕಿಂತ ಹೆಚ್ಚು ಪ್ರತಿನಿಧಿಸುವ ಪಕ್ಷಗಳಿಂದ ನಾಮನಿರ್ದೇಶನಗೊಂಡಿದ್ದಕ್ಕೆ ಸಂತೋಷವಾಗಿದೆ ಎಂದು ಹೇಳಿದರು. "ನನ್ನ ಕೆಲಸವೆಂದರೆ ನನ್ನ ಅಭ್ಯರ್ಥಿತನವನ್ನು ನೀಡುವುದು, ಎಲ್ಲಾ ಸಂಸತ್ ಸದಸ್ಯರು ನನ್ನ ಅಭ್ಯರ್ಥಿತನವನ್ನು ಪರಿಗಣಿಸುವಂತೆ ಮನವಿ ಮಾಡಿಕೊಳ್ಳುತ್ತೇನೆ. ಯಾವುದೇ ಚುನಾವಣೆಯ ಫಲಿತಾಂಶವನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ನಾನು ಭವಿಷ್ಯ ಹೇಳುವುದು ಅಥವಾ ಜ್ಯೋತಿಷ್ಯದಲ್ಲಿ ತೊಡಗುವುದಿಲ್ಲ." ಈ ಚುನಾವಣೆಯನ್ನು ದಕ್ಷಿಣ vs ದಕ್ಷಿಣ ಸ್ಪರ್ಧೆ ಎಂದು ಅವರು ನೋಡುತ್ತಾರೆಯೇ ಎಂದು ಕೇಳಿದಾಗ, "ಪ್ರಾಸಂಗಿಕವಾಗಿ, ನಾವಿಬ್ಬರೂ ದಕ್ಷಿಣದವರು. ಭಾರತ ಒಂದು. ನಾವು ಮೊದಲು ಭಾರತೀಯರು ಮತ್ತು ಭಾರತೀಯರು ಕೊನೆಯವರು" ಎಂದು ಸುದರ್ಶನ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಜಸ್ಟೀಸ್ ಸುದರ್ಶನ್ ರೆಡ್ಡಿ ವರ್ಸಸ್ ಸಿ.ಪಿ.ರಾಧಾಕೃಷ್ಣನ್
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉಪರಾಷ್ಟ್ರಪತಿ ಸ್ಥಾನಕ್ಕೆ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಸುದರ್ಶನ್ ರೆಡ್ಡಿ ಅವರನ್ನು ಹೆಸರು ಅನ್ನು ಘೋಷಿಸಿದರು. ಇಂಡಿಯಾ ಮೈತ್ರಿಕೂಟವು ಹಲವಾರು ಸುತ್ತಿನ ಚರ್ಚೆಯ ನಂತರ ಸುದರ್ಶನ್ ರೆಡ್ಡಿ ಅವರನ್ನು ಉಪ ರಾಷ್ಟ್ರಪತಿ ಚುನಾವಣೆಯ ಅಖಾಡಕ್ಕೆ ತಮ್ಮ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ನಿರ್ಧಾರಕ್ಕೆ ಬಂದಿವೆ. ವಿರೋಧ ಪಕ್ಷಗಳು ಎಲ್ಲ ಪಕ್ಷಗಳಿಗೂ ಸ್ವೀಕಾರಾರ್ಹವಾಗುವ ಹೆಸರಿನ ಬಗ್ಗೆ ಚರ್ಚೆ ನಡೆಸಿದ್ದರು. ಇಸ್ರೋ ನಿವೃತ್ತ ವಿಜ್ಞಾನಿ ಮೈಲಸ್ವಾಮಿ ಅಣ್ಣಾದೊರೈ ಹಾಗೂ ಮಹಾತ್ಮಗಾಂಧಿ ಮೊಮ್ಮಗ ತುಷಾರ್ ಗಾಂಧಿ, ಡಿಎಂಕೆ ಪಕ್ಷದ ತಿರುಚ್ಚಿ ಶಿವಾ ಅವರ ಹೆಸರುಗಳನ್ನು ಕೂಡ ವಿರೋಧ ಪಕ್ಷಗಳು ಪರಿಗಣಿಸಿ ಚರ್ಚಿಸಿದ್ದವು. ಅಂತಿಮವಾಗಿ ಜಸ್ಟೀಸ್ ಸುದರ್ಶನ್ ರೆಡ್ಡಿ ಹೆಸರು ಅನ್ನು ಉಪರಾಷ್ಟ್ರಪತಿ ಚುನಾವಣಾ ಅಭ್ಯರ್ಥಿಯನ್ನಾಗಿಸಲು ನಿರ್ಧರಿಸಿವೆ.
ಇನ್ನೂ ಈ ಭಾರಿಯ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ಅವರ ಸ್ಪರ್ಧೆ ಸಾಂಕೇತಿಕ. ಏಕೆಂದರೇ, ಲೋಕಸಭೆ, ರಾಜ್ಯಸಭೆಯಲ್ಲಿ ಎನ್‌ಡಿಎಗೆ ಬಹುಮತ ಇದೆ. ಹೀಗಾಗಿ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಗೆಲ್ಲುವುದು ನಿಶ್ಚಿತವಾಗಿದೆ.
ಈ ಭಾರಿಯ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಹಾಗೂ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಜಸ್ಟೀಸ್ ಸುದರ್ಶನ್ ರೆಡ್ಡಿ ಇಬ್ಬರೂ ದಕ್ಷಿಣ ಭಾರತದವರು ಎಂಬುದು ವಿಶೇಷ. ಸಿ.ಪಿ.ರಾಧಾಕೃಷ್ಣನ್ ಅವರು ತಮಿಳುನಾಡು ರಾಜ್ಯದವರು. ಜಸ್ಟೀಸ್ ಸುದರ್ಶನ್ ರೆಡ್ಡಿ ತೆಲಂಗಾಣ ರಾಜ್ಯದವರು. ಯಾರೇ ಗೆದ್ದರೂ, ದಕ್ಷಿಣ ಭಾರತೀಯರಿಗೆ ಉಪರಾಷ್ಟ್ರಪತಿ ಸ್ಥಾನ ಒಲಿಯಲಿದೆ. ಈ ಹಿಂದೆ ಆಂಧ್ರದ ನೆಲ್ಲೂರು ಜಿಲ್ಲೆಯ ವೆಂಕಯ್ಯನಾಯ್ಡು ಉಪರಾಷ್ಟ್ರಪತಿ ಆಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ