/newsfirstlive-kannada/media/media_files/2025/10/22/president-helicopter-2025-10-22-12-31-03.jpg)
ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದಿನಿಂದ ನಾಲ್ಕು ದಿನಗಳ ಕಾಲ ಕೇರಳಕ್ಕೆ ಭೇಟಿ ನೀಡಿದ್ದಾರೆ. ಇಂದು ಪಟ್ಟಣಂತಿಟ್ಟ ಜಿಲ್ಲೆಗೆ ಭೇಟಿ ನೀಡಿದ್ದು, ಶಬರಿಮಲೆಗೆ ಭೇಟಿ ನೀಡಿದ್ದಾರೆ. ಇಂದು ಕೇರಳಕ್ಕೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಲಿಕಾಪ್ಟರ್ ಅನ್ನು ರಾಜೀವ್ ಗಾಂಧಿ ಒಳಾಂಗಣ ಸ್ಟೇಡಿಯಂನಲ್ಲಿ ಲ್ಯಾಂಡಿಂಗ್ ಮಾಡಲಾಗಿತ್ತು. ಆದರೇ, ಹೆಲಿಪ್ಯಾಡ್ ಅನ್ನು ನಿನ್ನೆಯಷ್ಟೇ ನಿರ್ಮಿಸಲಾಗಿತ್ತು. ಹೀಗಾಗಿ ಹೆಲಿಪ್ಯಾಡ್ ಕಾಂಕ್ರೀಟ್ ಸಂಪೂರ್ಣವಾಗಿ ಒಣಗಿರಲಿಲ್ಲ. ಸಿಮೆಂಟ್ ಕಾಂಕ್ರೀಟ್ ಸಂಪೂರ್ಣವಾಗಿ ಸೆಟ್ ಆಗಿರಲಿಲ್ಲ. ಇದರಿಂದಾಗಿ ಹೊಸದಾಗಿ ಹಾಕಿದ್ದ ಕಾಂಕ್ರೀಟ್ , ಹೆಲಿಕಾಪ್ಟರ್ ಭಾರವನ್ನು ತಡೆಯಲಾಗದೇ, ಗುಂಡಿ ಬಿದ್ದಿತ್ತು.
ಇದರಿಂದಾಗಿ ಇಂಡಿಯನ್ ಏರ್ ಪೋರ್ಸ್‌ನ ನ MI-17 ಹೆಲಿಕಾಪ್ಟರ್ ನ ಚಕ್ರಗಳು ಹೆಲಿಪ್ಯಾಡ್‌ನ ಕಾಂಕ್ರೀಟ್ ನ ಗುಂಡಿಯಲ್ಲಿ ಸಿಲುಕಿಕೊಂಡಿದ್ದವು. ಬಳಿಕ ಸ್ಥಳೀಯ ಪೊಲೀಸರು , ಏರ್ ಪೋರ್ಸ್ ಸಿಬ್ಬಂದಿ ಹೆಲಿಕಾಪ್ಟರ್ ಅನ್ನು ಕೈಯಲ್ಲಿ ತಳ್ಳಬೇಕಾದ ಪರಿಸ್ಥಿತಿ ಬಂತು.
#WATCH | Kerala: A portion of the helipad tarmac sank in after a chopper carrying President Droupdi Murmu landed at Pramadam Stadium. Police and fire department personnel deployed at the spot physically pushed the helicopter out of the sunken spot. pic.twitter.com/QDmf28PqIb
— ANI (@ANI) October 22, 2025
ಪ್ರಮದಾಮ್‌ನ ಈ ಸ್ಥಳವನ್ನು ಕೊನೆಯ ಕ್ಷಣದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್‌ಗೆ ಗುರುತಿಸಿ ಹೊಸದಾಗಿ ನಿನ್ನೆಯಷ್ಟೇ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು.
ಈ ಮೊದಲು ಪಟ್ಟಣಂತಿಟ್ಟ ಜಿಲ್ಲೆಯ ನೀಲಕಲ್ ಬಳಿಯ ಹೆಲಿಪ್ಯಾಡ್ ನಲ್ಲಿ ರಾಷ್ಟ್ರಪತಿಗಳ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಬೇಕಾಗಿತ್ತು. ಆದರೇ, ಪ್ರತಿಕೂಲ ಹವಾಮಾನದ ಪರಿಸ್ಥಿತಿ ಕಾರಣದಿಂದಾಗಿ ಪ್ರಮದಾಮ್‌ನ ರಾಜೀವ್ ಗಾಂಧಿ ಒಳಾಂಗಣ ಸ್ಟೇಡಿಯಂನಲ್ಲಿ ಹೊಸದಾಗಿ ಹೆಲಿಪ್ಯಾಡ್ ನಿರ್ಮಿಸಿ ಲ್ಯಾಂಡಿಂಗ್ ಮಾಡಲಾಗಿತ್ತು. ಹೆಲಿಕಾಪ್ಟರ್ ಅನ್ನು ತಳ್ಳಿದಾಗ, ಅದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇರಲಿಲ್ಲ.
ನಿನ್ನೆ( ಮಂಗಳವಾರ, ಅಕ್ಟೋಬರ್ 21) ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕೇರಳದ ತಿರುವನಂತಪುರಕ್ಕೆ ಆಗಮಿಸಿದ್ದಾರೆ. ಇಂದು ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡುತ್ತಿರುವ ಮೊದಲ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಿದ್ದಾರೆ. ಇನ್ನೂ ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡುತ್ತಿರುವ ಎರಡನೇ ರಾಷ್ಟ್ರಪತಿ ಆಗಿದ್ದಾರೆ. ಈ ಮೊದಲು ರಾಷ್ಟ್ರಪತಿ ಆಗಿದ್ದ ವಿ.ವಿ.ಗಿರಿ 70ರ ದಶಕದಲ್ಲಿ ಭೇಟಿ ನೀಡಿದ್ದರು.
ಇಂದು ಸಂಜೆಯೇ ರಾಷ್ಟ್ರಪತಿ ದ್ರೌಪದಿ ಮುರ್ಮು ತಿರುವನಂತಪುರಕ್ಕೆ ವಾಪಸ್ ಆಗುವರು. ನಾಳೆ ರಾಜಭವನದಲ್ಲಿ ಮಾಜಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಪುತ್ಥಳಿ ಅನಾವರಣ ಮಾಡುವರು.
ಬಳಿಕ ಶಿವಗಿರಿ ಮಠದಲ್ಲಿ ಶ್ರೀ ನಾರಾಯಣ ಗುರು ಅವರ ಮಹಾಸಮಾಧಿ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸುವರು. ನಂತರ ಕೊಟ್ಟಾಯಂ ಜಿಲ್ಲೆಯಲ್ಲಿರುವ ಸೇಂಟ್ ಥಾಮಸ್ ಕಾಲೇಜಿನ ಪ್ಲಾಟಿನಂ ಜ್ಯುಬಿಲಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗುವರು. ಅಕ್ಟೋಬರ್ 24 ರಂದು ಎರ್ನಾಕುಲಂ ಜಿಲ್ಲೆಯ ಸೇಂಟ್ ತೇರೇಸಾ ಕಾಲೇಜಿನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.