/newsfirstlive-kannada/media/media_files/2025/11/24/pollution-protest-turned-as-naxal-protest-2025-11-24-12-33-39.jpg)
ಮಾಲಿನ್ಯದ ವಿರುದ್ಧದ ಪ್ರತಿಭಟನೆ ನಕ್ಸಲ್ ಪರ ಪ್ರತಿಭಟನೆಯಾಗಿ ಪರಿವರ್ತನೆ!
ರಾಷ್ಟ್ರ ರಾಜಧಾನಿಯಲ್ಲಿನ ವಿಷಕಾರಿ ಗಾಳಿಯ ವಿರುದ್ಧ ಭಾನುವಾರ ಸಂಜೆ ದೆಹಲಿಯ ಇಂಡಿಯಾ ಗೇಟ್‌ನಲ್ಲಿ ನಡೆದ ಪ್ರತಿಭಟನೆಯು ಹಿಂಸಾತ್ಮಕ ರೂಪ ಪಡೆದಿದೆ.
ಕೆಲವು ಪ್ರತಿಭಟನಾಕಾರರು ಪೊಲೀಸ್ ಸಿಬ್ಬಂದಿಯ ಮೇಲೆ ಚಿಲ್ಲಿ ಸ್ಪ್ರೇನಿಂದ ದಾಳಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆಂಧ್ರಪ್ರದೇಶದಲ್ಲಿ ಈ ತಿಂಗಳ ಆರಂಭದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ಉನ್ನತ ಮಾವೋವಾದಿ ನಾಯಕ ಮಾದ್ವಿ ಹಿಡ್ಮಾ ಅವರನ್ನು ಬೆಂಬಲಿಸುವ ಘೋಷಣೆಗಳನ್ನು ಜನರ ಗುಂಪೊಂದು ಕೂಗಿದ್ದು, ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.
ಪೊಲೀಸರ ಪ್ರಕಾರ, ಪ್ರತಿಭಟನಾಕಾರರು ಇಂಡಿಯಾ ಗೇಟ್‌ನಲ್ಲಿ ಸುಮಾರು ಒಂದು ಗಂಟೆ ಅನುಮತಿಯಿಲ್ಲದೆ ರಸ್ತೆಯ ಮಧ್ಯದಲ್ಲಿ ಕುಳಿತು ಘೋಷಣೆಗಳನ್ನು ಕೂಗಿದರು . ಪೋಸ್ಟರ್‌ಗಳನ್ನು ಹಿಡಿದಿದ್ದರು. ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರಿಗೆ ಪ್ರತಿಭಟನೆಯನ್ನು ನಿಲ್ಲಿಸುವಂತೆ ಸೂಚಿಸಿದಾಗ, ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ಬ್ಯಾರಿಕೇಡ್‌ಗಳನ್ನು ಮುರಿದು ಪ್ರತಿಭಟನಾಕಾರರು ಪೊಲೀಸರ ಮೇಲೆ ಚಿಲ್ಲಿ ಸ್ಪ್ರೇ ಸಿಂಪಡಿಸಿದರು. ಇದರಿಂದ ಮೂರರಿಂದ ನಾಲ್ಕು ಮಂದಿ ಪೊಲೀಸರು ಗಾಯಗೊಂಡಿದ್ದಾರೆ .
ಪೊಲೀಸ್ ಸಿಬ್ಬಂದಿಯನ್ನು ರಾಮ್ ಮನೋಹರ್ ಲೋಹಿಯಾ (ಆರ್‌ಎಂಎಲ್) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಮುಂದಾದಾಗ, ಜನರ ಗುಂಪೊಂದು "ಮಾದ್ವಿ ಹಿಡ್ಮಾ ಅಮರ್ ರಹೇ" (ಲಾಂಗ್ ಲಿವ್ ಮಾದ್ವಿ ಹಿಡ್ಮಾ) ನಂತಹ ಘೋಷಣೆಗಳನ್ನು ಕೂಗಿದರು. "ಬಿರ್ಸಾ ಮುಂಡಾದಿಂದ ಮದ್ವಿ ಹಿಡ್ಮಾವರೆಗೆ, ನಮ್ಮ ಕಾಡುಗಳು ಮತ್ತು ಪರಿಸರದ ಹೋರಾಟ ಮುಂದುವರಿಯುತ್ತದೆ" ಎಂಬ ಬರಹವಿರುವ ಪೋಸ್ಟರ್ ಅನ್ನು ವ್ಯಕ್ತಿಯೊಬ್ಬ ಹಿಡಿದುಕೊಂಡು ನಿಂತಿರುವುದು ಕಂಡುಬಂದಿದೆ.
ಮಾದ್ವಿ ಹಿಡ್ಮಾ ವಿರುದ್ಧ ಪೊಲೀಸರು ಮತ್ತು ನಾಗರಿಕರ ಹತ್ಯೆಯ ಆರೋಪ ಇದೆ. ಆತನ ವಿರುದ್ಧ ಕೇಸ್ ಗಳು ದಾಖಲಾಗಿದ್ದವು. ಪೊಲೀಸರು ಆಂಧ್ರದ ಅಲ್ಲೂರಿ ಸೀತಾರಾಮ ಜಿಲ್ಲೆಯಲ್ಲಿ ನಡೆಸಿದ ಎನ್ ಕೌಂಟರ್ ನಲ್ಲಿ ಆತನನ್ನು ಕೊಂದಿದ್ದಾರೆ. ಮಾದ್ವಿ ಹಿಡ್ಮಾ ಕುಖ್ಯಾತ ನಕ್ಸಲ್ ನಾಯಕನಾಗಿದ್ದ. ಆತನ ಪರವಾಗಿ ಘೋಷಣೆ ಕೂಗಿರುವುದು ಸಹ ಆಕ್ರೋಶಕ್ಕೆ ಕಾರಣವಾಗಿದೆ. ಹೀಗೆ ಘೋಷಣೆ ಕೂಗಿದವರ ಪೈಕಿ 22 ಮಂದಿಯನ್ನು ಗುರುತಿಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/11/24/pollution-protest-turned-as-naxal-protest-1-2025-11-24-12-34-49.jpg)
ಮಾವೋವಾದಿಗಳು ಈಗ ಸೋಷಿಯಲ್ ಆ್ಯಕ್ಟಿವಿಸ್ಟ್ ಗಳಾಗಿದ್ದಾರೆ ಎಂದು ದೆಹಲಿ ಸಚಿವ ಕಪಿಲ್ ಮಿಶ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿಯ ಪರಿಸರ ಮಾಲಿನ್ಯದ ವಿರುದ್ಧ ಪ್ರತಿಭಟನೆ ನಡೆಸಿ, ಲಾಲಾ ಸಲಾಂ ಘೋಷಣೆ ಕೂಗಿದ್ದಾರೆ.
ದೆಹಲಿಯಲ್ಲಿ ಮಾವೋವಾದಿ ಪರ ಘೋಷಣೆ ಕೂಗಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ದೇವೇಶ್ ಕುಮಾರ್ ಮಹಾಲ ಹೇಳಿದ್ದಾರೆ.
ದೆಹಲಿಯಲ್ಲಿ ವಾಯು ಮಾಲಿನ್ಯದ ವಿರುದ್ಧದ ಪ್ರತಿಭಟನೆಯೇ ನಕ್ಸಲ್ ಪರ ಪ್ರತಿಭಟನೆಯಾಗಿ ಪರಿವರ್ತನೆಯಾಗಿದ್ದು ಹೇಗೆ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಭಾಗಿಯಾದವರ ಹಿನ್ನಲೆ, ಪ್ರತಿಭಟನೆಯ ಹಿಂದಿರುವ ಶಕ್ತಿಗಳು ಯಾರು ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಪಾರ್ಲಿಮೆಂಟ್ ನಿಂದ ಕೇವಲ 2-3 ಕಿ.ಮೀ. ದೂರದಲ್ಲಿ, ರಾಷ್ಟ್ರ ರಾಜಧಾನಿಯ ಹೃದಯ ಭಾಗದಲ್ಲೇ ನಕ್ಸಲ್ ಪರ ಘೋಷಣೆ ಮೊಳಗಿಸಿದ್ದು ಕೇಂದ್ರ ಸರ್ಕಾರದ ಆಕ್ರೋಶಕ್ಕೂ ಕಾರಣವಾಗಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us