/newsfirstlive-kannada/media/media_files/2026/03/01/protest-in-pak-in-support-of-iran-2026-03-01-21-01-27.jpg)
ಇಸ್ರೇಲ್, ಅಮೆರಿಕ ದಾಳಿಗೆ ಖಮೇನಿ ಭೀಕರವಾಗಿ ಸಾವನ್ನಪ್ಪಿದ್ದಾರೆ. ಇದು ಹಲವು ದೇಶಗಳಲ್ಲಿ ಪರ-ವಿರೋಧಕ್ಕೆ ಎಡೆಮಾಡಿಕೊಟ್ಟಿದೆ. ಅದರಲ್ಲೂ ಭಾರತ ಹಾಗೂ ಪಾಕಿಸ್ತಾನದಲ್ಲಿ ತೀವ್ರ ಶೋಕಾಚರಣೆ ಮಾಡಲಾಗಿದೆ. ಕರಾಚಿಯಲ್ಲಿ ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ ಮಾಡಿ ಹಿಂಸಾಚಾರ ಸೃಷ್ಟಿಸಲಾಗಿದೆ. ಆದ್ರೆ ಇರಾನ್​ನ ಮಹಿಳೆಯರು ಮಾತ್ರ ಖಮೇನಿ ಹತ್ಯೆಯನ್ನು ಸಂಭ್ರಮಿಸಿದ್ದಾರೆ.
ಸಿಟ್ಟು.. ಆಕ್ರೋಶ.. ಪ್ರತಿಭಟನೆ ಹಾಗೂ ಆಕ್ರಂದನ.. ಈ ಎಲ್ಲಾ ಉದ್ವೇಗದ ದೃಶ್ಯ ಕಂಡುಬಂದಿದ್ದು ಪಾಕಿಸ್ತಾನದಲ್ಲಿ.. ಮಧ್ಯಪ್ರಾಚ್ಯದಲ್ಲಿ ಇರಾನ್​ನ ಸರ್ವೋಚ್ಛ ನಾಯಕ ಖಮೇನಿಯನ್ನು ಅಮೆರಿಕ, ಇಸ್ರೇಲ್ ಹತ್ಯೆ ಮಾಡಿದ್ದಕ್ಕೆ ಪಾಕಿಗಳು ಸಿಡಿದೆದ್ದಿದ್ದಾರೆ.
ಇರಾನ್​ನಲ್ಲಿ ಖಮೇನಿ ಹತ್ಯೆ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಕಿಚ್ಚು
ಅಮೆರಿಕ ರಾಯಭಾರಿ ಕಚೇರಿ ಮೇಲೆ ಕಲ್ಲು ತೂರಿ ಆಕ್ರೋಶ
ಇಸ್ರೇಲ್ ಹಾಗೂ ಅಮೆರಿಕ ಜಂಟಿ ದಾಳಿಗೆ ಇರಾನ್​ನ ಸರ್ವೋಚ್ಚ ನಾಯಕ ಅಲಿ ಖಮೇನಿ ಸಾವನ್ನಪ್ಪಿದ್ದಾರೆ. ಇದು ಜಗತ್ತಿನ ನಾನಾ ದೇಶಗಳ ಶಿಯಾ ಮುಸ್ಲಿಮರಲ್ಲಿ ಆಕ್ರೋಶದ ಕಿಡಿ ಹೊತ್ತಿಸಿದೆ. ಅದರಲ್ಲೂ ಪಾಕಿಸ್ತಾನದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಖಮೇನಿ ಹತ್ಯೆಗೆ ಅಮೆರಿಕವೇ ಕಾರಣ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರಾಚಿಯಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ದೊಣ್ಣೆ ಹಾಗೂ ಕಲ್ಲುಗಳನ್ನು ಹಿಡಿದಿದ್ದ ನೂರಾರು ಜನರು ಕಚೇರಿಯತ್ತ ನುಗ್ಗಿ ಕಲ್ಲು ತೂರಾಟ ಮಾಡಿ ಕಿಚ್ಚು ಹಚ್ಚಿದ್ದಾರೆ. ಕಚೇರಿಯ ಕಿಟಕಿ ಗ್ಲಾಸ್​​ಗಳನ್ನು ಒಡೆದಿದ್ದು ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆದಿದೆ.
ಇನ್ನು ಪ್ರತಿಭಟನಾಕಾರರ ಆಕ್ರೋಶ ಜೋರಾಗ್ತಿದ್ದಂತೆ ಭದ್ರತಾ ಪಡೆಗಳು ಕೂಡ ಸುರಕ್ಷತೆ ದೃಷ್ಟಿಯಿಂದ ಮರುದಾಳಿ ನಡೆಸಿವೆ. ಪರಿಣಾಮ 12 ಮಂದಿ ಮೃತಪಟ್ಟಿದ್ದು, 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಬೆನ್ನಲ್ಲೇ ಪಾಕಿಸ್ತಾನದ ಹಲವೆಡೆ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಖಮೇನಿ ಹತ್ಯೆಯನ್ನು ಸಂಭ್ರಮಿಸಿದ ಇರಾನ್ ಮಹಿಳೆಯರು!
ಇನ್ನು ಖಮೇನಿ ಸಾವಿನ ಸುದ್ದಿಗೆ ಜಾಗತಿಕ ಮಟ್ಟದಲ್ಲಿ ಪರ ವಿರೋಧ ಚರ್ಚೆಗಳು, ಪ್ರತಿಭಟನೆಗಳು ಜೋರಾಗಿವೆ. ಆದ್ರೆ ಇರಾನ್​ನಲ್ಲಿ ಮಾತ್ರ ಮಹಿಳೆಯರು ನೆಕ್ಸ್ಟ್​ ಲೆವೆಲ್​ಗೆ ಹೋಗಿದ್ದು ಭರ್ಜರಿ ಸಂಭ್ರಮಾಚರಣೆ ಮಾಡಿದ್ದಾರೆ. ಮಹಿಳೆಯರ ಹಕ್ಕುಗಳಿಗೆ ನಿರ್ಬಂಧ ಹೇರಿದ್ದ ಹಿನ್ನೆಲೆ ಅವರ ಸಾವಿನ ಬೆನ್ನಲೆ ತೆಹ್ರಾನ್ ಸೇರಿ ಹಲವು ನಗರಗಳಲ್ಲಿ ಜನರು ಬೀದಿಗಿಳಿದು ಡ್ಯಾನ್ಸ್​ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಇನ್ನು ಇರಾನ್ ಮಾತ್ರವಲ್ಲದೇ ಹೊರ ದೇಶಗಳಲ್ಲಿರುವ ಇರಾನಿಗರು ಖಮೇನಿ ಹತ್ಯೆಯನ್ನು ಸಂಭ್ರಮಿಸಿದ್ದಾರೆ. ಅಮೆರಿಕ, ಕೆನಡಾ, ಜರ್ಮನಿ, ಲಂಡನ್‌ನಲ್ಲಿ ಸಾವಿರಾರು ಇರಾನಿಯನ್ನರು ಬೀದಿಗಿಳಿದು ಸಂಭ್ರಮಿಸಿದ್ದಾರೆ. ಅದರಲ್ಲೂ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ 3 ವರೆ ಲಕ್ಷ ಜನ ಕುಣಿದು ಕುಪ್ಪಳಿಸಿದ್ದಾರೆ. ಇದೇ ವೇಳೆ ಖಮೇನಿ ಸಾವಿಗೆ ಇರಾನ್, ಇರಾಕ್ ಸೇರಿ ಹಲವೆಡೆ ಶೋಕಾಚರಣೆ ಕೂಡ ನಡೆದಿವೆ.
ಕಾಶ್ಮೀರದಲ್ಲಿ ಖಮೇನಿ ಹತ್ಯೆಗೆ ಪ್ರತಿಭಟನೆ
ಇನ್ನು ಭಾರತದಲ್ಲೂ ಖಮೇನಿ ಹತ್ಯೆ ಖಂಡಿಸಿ ಶೋಕಾಚರಣೆ, ಪ್ರತಿಭಟನೆಗಳು ನಡೆದಿವೆ. ಉತ್ತರಪ್ರದೇಶದ ಲಕ್ನೋ ಸೇರಿ ಹಲವೆಡೆ ನೂರಾರು ಜನ ಸೇರಿ ಪ್ರತಿಭಟನೆ ಮಾಡಿದ್ದಾರೆ. ಜಮ್ಮುಕಾಶ್ಮೀರದಲ್ಲೂ ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆಗಳು ನಡೆದಿವೆ.
ನ್ಯೂಸ್​ ಫಸ್ಟ್​ ಬ್ಯೂರೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us