/newsfirstlive-kannada/media/post_attachments/wp-content/uploads/2025/07/DOGS_1.jpg)
ಬೀದಿನಾಯಿಗಳ ಬಗ್ಗೆ ಸುಪ್ರೀಂಕೋರ್ಟ್ ಆದೇಶ
ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಎನ್‌ಸಿಆರ್ ವಲಯದಲ್ಲಿ ಬೀದಿನಾಯಿಗಳನ್ನು ಹಿಡಿದು ಡಾಗ್ ಶೆಲ್ಟರ್ ಗೆ ಹಾಕಬೇಕೆಂದು ಆಗಸ್ಟ್ 11 ರಂದು ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಇಂದು ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠ ಮಾರ್ಪಡಿಸಿದೆ. ಹಿಡಿದಿರುವ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಿ, ಆಯಾ ಪ್ರದೇಶಕ್ಕೆ ಮತ್ತೆ ವಾಪಸ್ ಬಿಡಬೇಕೆಂದು ಆದೇಶ ನೀಡಿದೆ. ಆಗಸ್ಟ್ 11 ರ ಆದೇಶವನ್ನು ಈಗ ಮಾರ್ಪಡಿಸಲಾಗಿದೆ. ಬೀದಿನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಬೇಕು. ಬಳಿಕ ಅವುಗಳಿದ್ದ ಏರಿಯಾಕ್ಕೆ ವಾಪಸ್ ಬಿಡಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಜೊತೆಗೆ ಬೀದಿನಾಯಿಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಗಳಲ್ಲಿರುವ ಎಲ್ಲ ಕೇಸ್ ಗಳನ್ನು ಸುಪ್ರೀಂಕೋರ್ಟ್ ಗೆ ವರ್ಗಾಯಿಸಲಾಗಿದೆ. ಇದು ಶ್ವಾನಪ್ರಿಯರ ಹೋರಾಟಕ್ಕೆ ಸಿಕ್ಕ ಜಯವಾಗಿದೆ.
ಆದರೇ, ರೇಬೀಸ್ ಮತ್ತು ಆಕ್ರಮಣಕಾರಿ ವರ್ತನೆ ಇರುವ ನಾಯಿಗಳನ್ನು ಬೀದಿಗೆ ಬಿಡಬಾರದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಈ ಮೊದಲು ದೆಹಲಿ ಹಾಗೂ ಎನ್‌ಸಿಆರ್ ನಗರಗಳಿಂದ ಬೀದಿನಾಯಿಗಳನ್ನು ಹಿಡಿದು ಡಾಗ್ ಶೆಲ್ಟರ್ ಹಾಕಬೇಕೆಂದು ದ್ವಿಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ಬೀದಿನಾಯಿಗಳಿಗೆ ಸಾರ್ವಜನಿಕವಾಗಿ ಆಹಾರ ನೀಡಬಾರದು. ಸಾರ್ವಜನಿಕವಾಗಿ ಆಹಾರ ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಆಗಸ್ಟ್ 11 ರಂದು ಸುಪ್ರೀಂಕೋರ್ಟ್ ನ ಜಸ್ಟೀಸ್ ಜೆ.ಬಿ.ಪರ್ದಿವಾಲಾ ಹಾಗೂ ಜಸ್ಟೀಸ್ ಆರ್. ಮಹದೇವನ್ ಅವರ ಪೀಠವು ಸ್ವಪ್ರೇರಣೆಯಿಂದ ಬೀದಿನಾಯಿಗಳ ಹಾವಳಿ ಬಗ್ಗೆ ಕೇಸ್ ದಾಖಲಿಸಿಕೊಂಡು ಆದೇಶ ನೀಡಿತ್ತು. ಆಗ ಶ್ವಾನಪ್ರಿಯರ ವಾದವನ್ನು ಆಲಿಸಿರಲಿಲ್ಲ. ಇದು ಏಕಪಕ್ಷೀಯ ಆದೇಶ ಎಂದು ಶ್ವಾನಪ್ರಿಯರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದವು. ಹೀಗಾಗಿ ಸಿಜೆಐ ಬಿ.ಆರ್. ಗವಾಯಿ ಶ್ವಾನಪ್ರಿಯರ ಅರ್ಜಿಗಳನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿದ್ದರು. ಸುಪ್ರೀಂಕೋರ್ಟ್ ನ ಜಸ್ಟೀಸ್ ವಿಕ್ರಮನಾಥ್, ಜಸ್ಟೀಸ್ ಎನ್.ವಿ.ಅಂಜರಿಯಾ ಹಾಗೂ ಜಸ್ಟೀಸ್ ಸಂದೀಪ್ ಮೆಹ್ತಾರ ಪೀಠವು ಈಗ ದೆಹಲಿ ಹಾಗೂ ಎನ್‌ಸಿಆರ್ ನಗರಗಳ ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ, ಮತ್ತೆ ದೆಹಲಿಯ ಬೀದಿಗಳಿಗೆ ಬಿಡಬೇಕೆಂದು ಆದೇಶ ನೀಡಿದೆ.
ಆದರೇ, ದೆಹಲಿ, ಎನ್‌ಸಿಆರ್ ನಗರಗಳಲ್ಲಿ ಬೀದಿನಾಯಿಗಳಿಗೆ ಜನರು ಆಹಾರ ನೀಡಬಾರದು. ಬೀದಿನಾಯಿಗಳಿಗೆ ಆಹಾರ ನೀಡಲು ಆಯ್ದ ಕೆಲ ಸ್ಥಳಗಳ ನಿಗದಿ ಮಾಡಬೇಕು. ಬೀದಿನಾಯಿಗಳ ಗರ್ಭಧಾರಣೆ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠ ಆದೇಶ ನೀಡಿದೆ.
ಇನ್ನೂ ಶ್ವಾನಗಳನ್ನು ಮತ್ತೆ ಬೀದಿಗೆ ಬಿಡಬೇಕೆಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಶ್ವಾನಪ್ರಿಯರು 25 ಸಾವಿರ ರೂಪಾಯಿ ಹಾಗೂ ಎನ್‌ಜಿಓ ಗಳು 2 ಲಕ್ಷ ರೂಪಾಯಿಯನ್ನು ಡಾಗ್ ಶೆಲ್ಟರ್ ಗಳಿಗಾಗಿ ಸುಪ್ರೀಂಕೋರ್ಟ್ ರಿಜಿಸ್ಟ್ಪಾರ್ ಬಳಿ ಠೇವಣಿ ಇಡಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದೆ.
8 ವಾರಗಳ ಬಳಿಕ ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠ ಬೀದಿನಾಯಿಗಳ ವಿಷಯದ ಬಗ್ಗೆ ವಿಚಾರಣೆ ನಡೆಸಲಿದೆ. ಬೀದಿನಾಯಿಗಳ ವಿಷಯದಲ್ಲಿ ರಾಷ್ಟ್ರೀಯ ನೀತಿ ರೂಪಿಸಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಹೀಗಾಗಿ ಹೈಕೋರ್ಟ್ ಗಳಲ್ಲಿದ್ದ ಬೀದಿನಾಯಿಗಳ ಕೇಸ್ ಗಳನ್ನು ಸುಪ್ರೀಂಕೋರ್ಟ್ ವರ್ಗಾಯಿಸಲು ಆದೇಶಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.