/newsfirstlive-kannada/media/media_files/2025/08/20/nh-544-sc-order-to-stop-toll-collcetion02-2025-08-20-12-02-16.jpg)
ಗುಂಡಿ ಬಿದ್ದ ಹೆದ್ದಾರಿಯಲ್ಲಿ ಟೋಲ್ ಶುಲ್ಕ ಸಂಗ್ರಹಿಸುವಂತಿಲ್ಲ ಎಂದ ಸುಪ್ರೀಂಕೋರ್ಟ್
ಕೇರಳದ ತ್ರಿಶೂರ್ ಜಿಲ್ಲೆಯ ಪಲಿಯೆಕ್ಕರ ಟೋಲ್ ಬೂತ್‌ನಲ್ಲಿ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಿದ್ದ ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ರಾಷ್ಟ್ರೀಯ ಹೆದ್ದಾರಿ 544 ರ ಎಡಪ್ಪಲ್ಲಿ-ಮನ್ನುತ್ತಿ ವಿಭಾಗದ ಹೆದ್ದಾರಿ ಕಳಪೆ ಸ್ಥಿತಿಗೆ ಸಂಬಂಧಿಸಿದಂತೆ ಈ ಆದೇಶವನ್ನು ಸುಪ್ರೀಂಕೋರ್ಟ್ ನೀಡಿದೆ. ಹೆದ್ದಾರಿಯಲ್ಲಿ ಸಂಪೂರ್ಣ ಗುಂಡಿಗಳು ಬಿದ್ದಿವೆ. ಇದರಿಂದಾಗಿ ವಾಹನ ಸಂಚಾರಕ್ಕೆ ಭಾರಿ ತೊಂದರೆಯಾಗಿದೆ. ಗುಂಡಿ ಬಿದ್ದ ಹೆದ್ದಾರಿಗಳಿಗೆ ಏಕೆ ಟೋಲ್ ಶುಲ್ಕ ಪಾವತಿಸಬೇಕು ಎಂದು ಸುಪ್ರೀಂಕೋರ್ಟ್ ನೇರವಾಗಿ ಎನ್‌ಎಚ್‌ಐಎ ಅನ್ನು ಪ್ರಶ್ನಿಸಿದೆ.
ಸೋಮವಾರ ಕಾಯ್ದಿರಿಸಿದ್ದ ಕೇಸ್ ತೀರ್ಪು ಅನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರ ಪೀಠವು ಮಂಗಳವಾರ ಸಂಜೆ ನೀಡಿದೆ. ಎನ್‌ಎಚ್‌ಎಐ ಸಲ್ಲಿಸಿದ್ದ ಎರಡೂ ಮೇಲ್ಮನವಿಗಳನ್ನು ವಜಾಗೊಳಿಸಲಾಗಿದೆ ಎಂದು ಹೇಳಿದೆ. ಹೆದ್ದಾರಿಯ ಕಳಪೆ ಸ್ಥಿತಿಯ ಕಾರಣದಿಂದಾಗಿ ಹೆದ್ದಾರಿಯಲ್ಲಿ ಟೋಲ್ ಶುಲ್ಕ ಸಂಗ್ರಹವನ್ನು ಹೈಕೋರ್ಟ್ ಸ್ಥಗಿತಗೊಳಿಸುವಂತೆ ಆದೇಶ ನೀಡಿತ್ತು. ಈ ಆದೇಶವನ್ನೇ ಈಗ ಸುಪ್ರೀಂಕೋರ್ಟ್ ಕೂಡ ಎತ್ತಿ ಹಿಡಿದಿದೆ. ದೇಶದಲ್ಲಿ ಹೆದ್ದಾರಿಗಳು ಕಳಪೆ ಸ್ಥಿತಿಯಲ್ಲಿದ್ದರೇ, ಅಂಥ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಪಾವತಿಸುವುದನ್ನು ಸ್ಥಗಿತಗೊಳಿಸುವಂತೆ ಆದೇಶ ನೀಡಲು ಈಗ ಹೈಕೋರ್ಟ್ ಗೆ ಈ ತೀರ್ಪು ಮೇಲ್ಪಂಕ್ತಿಯಾಗಿದೆ.
ವಿಚಾರಣೆಯ ಸಮಯದಲ್ಲಿ, ಇತ್ತೀಚೆಗೆ ಸುಮಾರು 12 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಕಂಡ ಎನ್. ಎಚ್. 544 ರ ಭಯಾನಕ ಸ್ಥಿತಿಯ ಬಗ್ಗೆ ಸುಪ್ರೀಂಕೋರ್ಟ್ ಸಿಜೆ ಪೀಠವು NHAI ಅನ್ನು ತೀವ್ರವಾಗಿ ಟೀಕಿಸಿತು.
ರಸ್ತೆಯ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಲು 12 ಗಂಟೆಗಳು ಬೇಕಾದರೆ ಒಬ್ಬ ವ್ಯಕ್ತಿಯು 150 ರೂ. ಏಕೆ ಪಾವತಿಸಬೇಕು? ಒಂದು ಗಂಟೆ ತೆಗೆದುಕೊಳ್ಳುವ ರಸ್ತೆ, 11 ಗಂಟೆಗಳು ಹೆಚ್ಚು ತೆಗೆದುಕೊಳ್ಳುತ್ತದೆ ಮತ್ತು ಜನರು ಟೋಲ್ ಕೂಡ ಪಾವತಿಸಬೇಕಾಗುತ್ತದೆ! ಎಂದು ಮುಖ್ಯ ನ್ಯಾಯಮೂರ್ತಿ ಗವಾಯಿ ಟೀಕಿಸಿದ್ದಾರೆ.
NH-544 ರ ಸ್ಥಿತಿ, ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್
ನ್ಯಾಯಮೂರ್ತಿ ವಿನೋದ್ ಚಂದ್ರನ್, ಈ ಮಾರ್ಗದಲ್ಲಿ ಸಂಚಾರ ದಟ್ಟಣೆಯ ಬಗ್ಗೆ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ್ದರು. ಇಬ್ಬರೂ ನ್ಯಾಯಾಧೀಶರು ಈ ಮಾರ್ಗದಲ್ಲಿ ವೈಯಕ್ತಿಕವಾಗಿ ಟ್ರಾಫಿಕ್ ದಟ್ಟಣೆಯನ್ನು ಅನುಭವಿಸಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗಟಾರಗಳು, ಗುಂಡಿಗಳು ಮತ್ತು ಪದೇ ಪದೇ ಸಂಚಾರ ದಟ್ಟಣೆ ಉಂಟಾಗುವುದು "ಅದಕ್ಷತೆಯ ಸಂಕೇತಗಳು" ಎಂದು ಮುಖ್ಯ ನ್ಯಾಯಮೂರ್ತಿ ಗವಾಯಿ ಟೀಕಿಸಿದರು.
ಆಗಸ್ಟ್ 6 ರಂದು, ಹೈಕೋರ್ಟ್‌ನ ವಿಭಾಗೀಯ ಪೀಠವು ನಾಲ್ಕು ವಾರಗಳ ಕಾಲ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಿತು. ಹೆದ್ದಾರಿಯ ಕಳಪೆ ನಿರ್ವಹಣೆ ಮತ್ತು ವಿಳಂಬವಾದ ಕೆಲಸಗಳಿಂದ ಉಂಟಾಗುವ ದೀರ್ಘಕಾಲದ ದಟ್ಟಣೆಯಿಂದಾಗಿ ಹೆದ್ದಾರಿಗಳಿಗೆ ಪ್ರವೇಶಕ್ಕೆ ಅಡಚಣೆಯಾದಾಗ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲಾಗುವುದಿಲ್ಲ ಎಂದು ಆದೇಶ ನೀಡಿತ್ತು. ನಾಗರಿಕರು ಟೋಲ್ ಶುಲ್ಕವನ್ನು ಪಾವತಿಸಲು ಬಾಧ್ಯರಾಗಿರುವುದರಿಂದ, ಸುಗಮ ಮತ್ತು ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು NHAI ಜವಾಬ್ದಾರವಾಗಿದೆ ಎಂದು ಹೈಕೋರ್ಟ್ ಹೇಳಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವೈಫಲ್ಯವು ಸಾರ್ವಜನಿಕ ನಂಬಿಕೆಗೆ ಧಕ್ಕೆ ತಂದಿದೆ. ಟೋಲ್‌ಗಳನ್ನು ಕೇಳುವ ಹಕ್ಕನ್ನು ಎನ್‌ಎಚ್‌ಎಐ ಕಳೆದುಕೊಂಡಿದೆ ಎಂದು ಹೈಕೋರ್ಟ್ ಹೇಳಿತ್ತು. ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ NHAI ಮತ್ತು ಇತರ ಅಧಿಕಾರಿಗಳು ಸಲ್ಲಿಸಿದ ಮೇಲ್ಮನವಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.