/newsfirstlive-kannada/media/media_files/2025/08/15/president_murmu_modi-2025-08-15-10-18-12.jpg)
ಇಂದು ದೇಶಾದ್ಯಂತ 79ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಹೋರಾಟಗಾರರನ್ನು ಸ್ಮರಿಸುವ ಸಲುವಾಗಿ ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ, ಉತ್ಸಾಹದಿಂದ ಆಚರಿಸಲಾಗುತ್ತಿದೆ.
ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ, ಜನವರಿ 26ರ ಗಣರಾಜ್ಯೋತ್ಸವ ದಿನಾಚರಣೆ ಇವೆರಡೂ ರಾಷ್ಟ್ರೀಯ ಹಬ್ಬಗಳು. ನಮ್ಮ ದೇಶದ ಜನತೆಗೆ ಇವೆರಡೂ ಮಹತ್ವದ ದಿನಗಳು. ಆಗಸ್ಟ್ 15 ಮತ್ತು ಜನವರಿ 26ರಂದು ಧ್ವಜಾರೋಹಣ ಮಾಡುವ ವಿಧಾನ ವಿಭಿನ್ನ. ಧ್ವಜಾರೋಹಣ ಮತ್ತು ಧ್ವಜ ಹಾರಿಸುವುದು ಎರಡೂ ಒಂದೇ ಆದರೂ, ಎರಡೂ ಬೇರೆ ಬೇರೆ ತತ್ವಗಳನ್ನು ಸಂಕೇತಿಸುತ್ತವೆ.
ಆಗಸ್ಟ್ 15ರಂದು ಪ್ರಧಾನಮಂತ್ರಿಗಳು ಧ್ವಜಾರೋಹಣ ಮಾಡಿದರೆ, ಜನವರಿ 26ರಂದು ರಾಷ್ಟ್ರಪತಿಗಳು ಧ್ವಜಾರೋಹಣ ಮಾಡುತ್ತಾರೆ.
ಇದನ್ನೂ ಓದಿ: ದೆಹಲಿಯ ಕೆಂಪು ಕೋಟೆಯಲ್ಲಿ 12ನೇ ಬಾರಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ
ಆ.15ರಂದು ಪ್ರಧಾನಮಂತ್ರಿಗಳು ಧ್ವಜಾರೋಹಣ ನೆರವೇರಿಸುತ್ತಾರೆ. ಆಗಸ್ಟ್ 15ರಂದು ಧ್ವಜವನ್ನು ಕಂಬದ ಕೆಳ ಭಾಗದಲ್ಲಿ ಕಟ್ಟಲಾಗುತ್ತದೆ. ಧ್ವಜವು ಕೆಳಗಿನಿಂದ ಮೇಲಕ್ಕೆ ಎಳೆದ ಬಳಿಕ ಧ್ವಜವನ್ನು ಹಾರಿಸುತ್ತಾರೆ. ಈ ಪ್ರಕ್ರಿಯೆಯನ್ನು ಧ್ವಜಾರೋಹಣ ಎಂದು ಕರೆಯಲಾಗುತ್ತದೆ. ಅಂದರೆ ನಾವು ಸ್ವಾತಂತ್ರ್ಯವನ್ನು ಸಾಧಿಸಿದ್ದೇವೆ ಮತ್ತು ನಮ್ಮ ತಲೆ ಮೇಲಕ್ಕೆತ್ತಿದ್ದೇವೆ ಎಂಬುದನ್ನು ಸೂಚಿಸುತ್ತದೆ. ಇದು ರಾಷ್ಟ್ರದ ಉದಯ, ದೇಶಭಕ್ತಿ, ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯದ ಸಂಕೇತ.
ಜನವರಿ 26ರಂದು ಸಹ ಧ್ವಜವನ್ನು ಹಾರಿಸಲಾಗುತ್ತದೆ. ಆದರೆ ಧ್ವಜವನ್ನು ಕಂಬದ ಮೇಲೆ ಕಟ್ಟಲಾಗುತ್ತದೆ. ರಾಷ್ಟ್ರಪತಿಗಳು ಧ್ವಜವನ್ನು ಹಾರಿಸುತ್ತಾರೆ. ಅಂದರೆ ನಾವೀಗಾಗಲೇ ಅತ್ಯುನ್ನತ ಸ್ಥಾನದಲ್ಲಿದ್ದೇವೆ. ನಮ್ಮ ಸಂವಿಧಾನದ ಪ್ರಕಾರ ಸ್ವತಂತ್ರ ರಾಷ್ಟ್ರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂಬರ್ಥ ಸೂಚಿಸುತ್ತದೆ.
ಎರಡೂ ರಾಷ್ಟ್ರೀಯ ಹಬ್ಬಗಳು ಆಚರಣೆಯಲ್ಲಿ ವಿಭಿನ್ನ, ವಿಶಿಷ್ಠವಾಗಿದ್ದರೂ ಭಾರತದ ಸ್ವಾತಂತ್ರ್ಯದ ಪಯಣ, ಸಾರ್ವಭೌಮ ರಾಷ್ಟ್ರವಾಗಿ ದೇಶದ ಅಭಿವೃದ್ಧಿ ಸ್ಮರಿಸುವ ಮಹತ್ವ ಹೊಂದಿವೆ.
ವಿಶೇಷ ವರದಿ:ವಿಶ್ವನಾಥ್,ಸೀನಿಯರ್ ಕಾಪಿ ಎಡಿಟರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ