/newsfirstlive-kannada/media/media_files/2026/02/01/union-budget-7-2026-02-01-15-16-13.jpg)
ಹೆಚ್ಚಿನ ಮೌಲ್ಯದ ಕೃಷಿ ಉತ್ಪನ್ನಗಳಾದ ತೆಂಗು, ಶ್ರೀಗಂಧ ಮತ್ತು ಗೋಡಂಬಿ ಬೆಳೆಗಳಿಗೆ ಗುರಿ ಆಧಾರಿತ ಬೆಂಬಲ ನೀಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಗ್ರಾಮೀಣ ಭಾಗದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಈ ಬಾರಿಯ ಬಜೆಟ್‌ನ ಪ್ರಮುಖ ಉದ್ದೇಶವಾಗಿದೆ.
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ನೇ ಸಾಲಿನ ಬಜೆಟ್‌ನಲ್ಲಿ ತೆಂಗು, ಶ್ರೀಗಂಧ, ಗೋಡಂಬಿ ಸೇರಿದಂತೆ ಪ್ರಮುಖ ವಾಣಿಜ್ಯ ಬೆಳೆಗಳ ಉತ್ತೇಜನಕ್ಕೆ ಹತ್ತಾರು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಈ ಬಾರಿ ಕೃಷಿಗಾಗಿ ಬರೋಬ್ಬರಿ 1,62,671 ಕೋಟಿ ಹಣವನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. ಈ ಬಾರಿಯ ಬಜೆಟ್‌ನ ಕೃಷಿ ಸಂಬಂಧಿತ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ
ತೆಂಗು ಪ್ರೋತ್ಸಾಹಕ ಯೋಜನೆ (Coconut Promotion Scheme):
ಭಾರತದ ತೆಂಗು ಕೃಷಿಯನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಲು ಹೊಸ 'ತೆಂಗು ಪ್ರೋತ್ಸಾಹಕ ಯೋಜನೆ'ಯನ್ನು ಸಚಿವರು ಘೋಷಿಸಿದ್ದಾರೆ. ತೆಂಗಿನ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು. ತೆಂಗು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಹಳೆಯ ಮತ್ತು ಇಳುವರಿ ನೀಡದ ಮರಗಳನ್ನು ತೆಗೆದು, ಅವುಗಳ ಬದಲಿಗೆ ಹೆಚ್ಚಿನ ಇಳುವರಿ ನೀಡುವ ಆಧುನಿಕ ತಳಿಗಳ ಸಸಿಗಳನ್ನು ನೆಡಲು ಸರ್ಕಾರ ನೆರವು ನೀಡಲಿದೆ. ಕೇಂದ್ರದ ಈ ಯೋಜನೆ ಕರ್ನಾಟಕದ ರೈತರಿಗೆ ಹೆಚ್ಚು ವರದಾನ ಆಗಲಿದೆ.
ಗೋಡಂಬಿ ಮತ್ತು ಕೋಕೋ ಸ್ವಾವಲಂಬನೆ
ಭಾರತವನ್ನು ಗೋಡಂಬಿ (Cashew) ಮತ್ತು ಕೋಕೋ (Cocoa) ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿಸಲು ವಿಶೇಷ ಕಾರ್ಯಕ್ರಮವನ್ನು ಪ್ರಕಟಿಸಲಾಗಿದೆ.
ಬ್ರ್ಯಾಂಡ್ ಇಂಡಿಯಾ: 2030ರ ವೇಳೆಗೆ ಭಾರತೀಯ ಗೋಡಂಬಿ ಮತ್ತು ಕೋಕೋ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ‘ಪ್ರೀಮಿಯಂ ಬ್ರ್ಯಾಂಡ್’ ಆಗಿ ರೂಪಿಸುವ ಗುರಿ ಹೊಂದಲಾಗಿದೆ. ಕಚ್ಚಾ ಗೋಡಂಬಿ ಉತ್ಪಾದನೆ ಮತ್ತು ಸಂಸ್ಕರಣೆಯನ್ನು ಹೆಚ್ಚಿಸುವ ಮೂಲಕ ರಫ್ತು ಸಾಮರ್ಥ್ಯಕ್ಕೆ ಉತ್ತೇಜನ ನೀಡಲಾಗುವುದು.
ಇದನ್ನೂ ಓದಿ: ಜಾಗತಿಕ ಮಟ್ಟದಲ್ಲಿ ಚಿನ್ನ, ಬೆಳ್ಳಿಯ ತೀವ್ರ ಮಾರಾಟ: ಇಂದು ಕೂಡ ಕುಸಿದ ಚಿನ್ನ, ಬೆಳ್ಳಿ ಬೆಲೆ!!
/filters:format(webp)/newsfirstlive-kannada/media/media_files/2026/02/01/union-budget-and-siddarmaiah-2-2026-02-01-12-33-52.jpg)
ಶ್ರೀಗಂಧದ ಕೃಷಿಗೆ ಮರುಜೀವ
ಶ್ರೀಗಂಧವು ಭಾರತದ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ ಎಂದು ಬಣ್ಣಿಸಿದ ಸಚಿವರು, ಶ್ರೀಗಂಧದ ಅರಣ್ಯ ಸಂಪತ್ತನ್ನು ಮರುಸ್ಥಾಪಿಸಲು ಒತ್ತು ನೀಡಿದ್ದಾರೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ಸೇರಿ ಶ್ರೀಗಂಧದ ವ್ಯವಸ್ಥಿತ ಕೃಷಿ ಮತ್ತು ಕೊಯ್ಲು ನಂತರದ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಮುಂದಾಗಿದೆ. ಇದರಿಂದ ಶ್ರೀಗಂಧದ ಪರಿಸರ ವ್ಯವಸ್ಥೆ ಮತ್ತೆ ಪುನಶ್ಚೇತನಗೊಳ್ಳಲಿದೆ.
ಒಣ ಹಣ್ಣುಗಳ (Dry Fruits) ತೋಟಗಳ ಪುನಶ್ಚೇತನ
ಆಕ್ರೋಟ್ (Walnut), ಬಾದಾಮಿ (Almond) ಮತ್ತು ಪೈನ್ ನಟ್ಸ್ (Pine nuts) ಬೆಳೆಗಾರರಿಗೆ ಬಜೆಟ್‌ನಲ್ಲಿ ಸಿಹಿ ಸುದ್ದಿ ನೀಡಲಾಗಿದೆ. ಕಡಿಮೆ ಇಳುವರಿ ನೀಡುವ ಹಳೆಯ ತೋಟಗಳನ್ನು ಆಧುನೀಕರಿಸಲು ಮತ್ತು ಹೆಚ್ಚಿನ ಸಾಂದ್ರತೆಯ ಕೃಷಿ (High-density cultivation) ಪದ್ಧತಿಯನ್ನು ವಿಸ್ತರಿಸಲು ಸರ್ಕಾರ ಬೆಂಬಲ ನೀಡಲಿದೆ. ಇದು ರೈತರ ಆದಾಯ ಹೆಚ್ಚಿಸುವುದಲ್ಲದೆ, ಯುವಜನತೆಗೆ ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶ ನೀಡಲಿದೆ.
ಪಶುಸಂಗೋಪನೆ ಮತ್ತು ಹೈನುಗಾರಿಕೆ
ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗಾಗಿ ಪಶುಸಂಗೋಪನಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಾಲ ಆಧಾರಿತ ಸಬ್ಸಿಡಿ ಕಾರ್ಯಕ್ರಮದ ಮೂಲಕ ಪಶುಸಂಗೋಪನಾ ಉದ್ಯಮಗಳನ್ನು ಆಧುನೀಕರಿಸಲಾಗುವುದು. ಡೈರಿ (ಹೈನುಗಾರಿಕೆ) ಮತ್ತು ಕುಕ್ಕುಟೋದ್ಯಮ (Poultry) ಕ್ಷೇತ್ರಗಳಲ್ಲಿ ಮೌಲ್ಯವರ್ಧಿತ ಸರಪಳಿಯನ್ನು ಅಭಿವೃದ್ಧಿಪಡಿಸಲಾಗುವುದು. ಪಶುಸಂಗೋಪನೆ ಮಾಡುವ ರೈತರಿಗಾಗಿ ಪ್ರತ್ಯೇಕ 'ರೈತ ಉತ್ಪಾದಕ ಸಂಸ್ಥೆ'ಗಳನ್ನು (FPOs) ರಚಿಸಲು ಸರ್ಕಾರ ಉತ್ತೇಜನ ನೀಡಲಿದೆ.
ಇದನ್ನೂ ಓದಿ: CNG ಯಲ್ಲಿ ಬಯೋ ಗ್ಯಾಸ್ ಬ್ಲೈಂಡಿಂಗ್ ಮಾಡಲು ಬಜೆಟ್ ನಲ್ಲಿ ಘೋಷಣೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us