/newsfirstlive-kannada/media/media_files/2025/09/16/engineering-students-2025-09-16-13-13-35.jpg)
ಇಂದು ಭಾರತೀಯ ಯುವಜನತೆಯ ಯಶಸ್ಸಿನ ಕನಸು ಕೇವಲ ದೇಶದ ಗಡಿಗೆ ಸೀಮಿತವಾಗಿಲ್ಲ. ಟರ್ನ್ ಗ್ರೂಪ್ ನಡೆಸಿದ ಇತ್ತೀಚಿನ ಅಧ್ಯಯನದ ಪ್ರಕಾರ, ಶೇಕಡಾ 52 ರಷ್ಟು ಯುವ ಭಾರತೀಯರು ವಿದೇಶಿ ನೆಲದಲ್ಲಿ ತಮ್ಮ ವೃತ್ತಿಜೀವನ ರೂಪಿಸಿಕೊಳ್ಳಲು ಹಾತೊರೆಯುತ್ತಿದ್ದಾರೆ. ಉತ್ತಮ ಸಂಬಳ, ವೃತ್ತಿಜೀವನದ ಬೆಳವಣಿಗೆ ಮತ್ತು ಸುಧಾರಿತ ಜೀವನಮಟ್ಟದ ಹುಡುಕಾಟದಲ್ಲಿ ಜಾಗತಿಕ ವೇದಿಕೆ ಏರಲು ಯುವಕರು ಸಜ್ಜಾಗುತ್ತಿರುವುದು ಈ ವರದಿಯಿಂದ ಸ್ಪಷ್ಟವಾಗಿದೆ.
ಇನ್ನೂ ಟರ್ನ್ ಗ್ರೂಪ್ ಸಮೀಕ್ಷೆಯಲ್ಲಿ ಏನಿದೆ?
ಈ ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಶೇ. 46 ರಷ್ಟು ಮಂದಿ ಹೆಚ್ಚಿನ ಆದಾಯದ ಮೂಲಕ ಆರ್ಥಿಕ ಪ್ರಗತಿ ಸಾಧಿಸುವುದು ತಮ್ಮ ಮುಖ್ಯ ಗುರಿ ಎಂದು ತಿಳಿಸಿದ್ದಾರೆ. ಉಳಿದಂತೆ ಶೇ. 34 ರಷ್ಟು ಮಂದಿ ಅಂತರರಾಷ್ಟ್ರೀಯ ಮಟ್ಟದ ಕೆಲಸದ ಅನುಭವದಿಂದ ವೃತ್ತಿಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಬಯಸುತ್ತಿದ್ದಾರೆ. ವೈಯಕ್ತಿಕ ಆದ್ಯತೆಗಳು ಸಹ ಕೆಲವರಿಗೆ ಪ್ರೇರಣೆಯಾಗಿದ್ದು, ಒಟ್ಟಾರೆ ಸುಸ್ಥಿರ ಭವಿಷ್ಯದ ಕನಸು ಯುವಜನತೆಯನ್ನು ವಿದೇಶಕ್ಕೆ ಸೆಳೆಯುತ್ತಿದೆ.
ಆಶ್ಚರ್ಯಕರ ಸಂಗತಿಯೆಂದರೆ, ಭಾರತೀಯ ಯುವಕರ ವಿದೇಶಿ ಆಯ್ಕೆಗಳಲ್ಲಿ ಈಗ ದೊಡ್ಡ ಬದಲಾವಣೆ ಕಂಡುಬಂದಿದೆ. ಒಮ್ಮೆ ಅಮೆರಿಕವೇ ಮೊದಲ ಆಯ್ಕೆಯಾಗಿದ್ದ ಕಾಲವಿತ್ತು, ಆದರೆ ಈಗ ಶೇ. 43 ರಷ್ಟು ಯುವಕರು ಜರ್ಮನಿಯತ್ತ ಮುಖ ಮಾಡಿದ್ದಾರೆ. ನಂತರದ ಸ್ಥಾನಗಳಲ್ಲಿ ಯುಕೆ (17%), ಜಪಾನ್ (9%) ಇದ್ದರೆ, ಅಚ್ಚರಿಯೆಂಬಂತೆ ಅಮೆರಿಕಕ್ಕೆ ಕೇವಲ ಶೇ. 4 ರಷ್ಟು ಜನರು ಮಾತ್ರ ಆದ್ಯತೆ ನೀಡುತ್ತಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಪ್ರತಿಭೆಗೆ ಭಾರೀ ಬೇಡಿಕೆಯಿದೆ ಎಂದು ಶೇ. 57 ರಷ್ಟು ಜನರು ಬಲವಾಗಿ ನಂಬಿದ್ದಾರೆ ಅನ್ನೋದಂತು ಸ್ಪಷ್ಟ.
ವಿದೇಶಕ್ಕೆ ತೆರಳುವ ಶೇ. 61 ರಷ್ಟು ಮಂದಿ ಎರಡನೇ ಮತ್ತು ಮೂರನೇ ಹಂತದ ಸಣ್ಣ ನಗರಗಳಿಂದ ಬಂದವರಾಗಿದ್ದಾರೆ. ದೆಹಲಿ (17%), ದಕ್ಷಿಣ ಭಾರತ (9%) ಮತ್ತು ಈಶಾನ್ಯ ರಾಜ್ಯಗಳು (9%) ನರ್ಸಿಂಗ್ ಪ್ರತಿಭೆಯ ಪ್ರಮುಖ ಮೂಲಗಳಾಗಿ ಹೊರಹೊಮ್ಮಿವೆ. ಸಣ್ಣ ನಗರಗಳಿಂದ ಜಾಗತಿಕ ಮಟ್ಟದ ಆಸ್ಪತ್ರೆಗಳವರೆಗೆ ಬೆಳೆಯುತ್ತಿರುವ ಇವರ ಹಂಬಲ ಗಮನಾರ್ಹವಾಗಿದೆ.
ಆದರೆ ಈ ಹಾದಿ ಅಂದುಕೊಂಡಷ್ಟು ಸುಲಭದ್ದಲ್ಲ. ವಿದೇಶಕ್ಕೆ ಹೋಗುವ ಹಂಬಲವಿದ್ದರೂ ಯುವಕರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಮುಖ್ಯವಾಗಿ ಭಾಷೆಯ ಅಡೆತಡೆಗಳು (44%) ಮತ್ತು ಮೋಸದ ಉದ್ಯೋಗ ಏಜೆನ್ಸಿಗಳ ಭಯ (48%) ಇವರನ್ನು ಹೆಚ್ಚಾಗಿ ಕಾಡುತ್ತಿದೆ. ಇದರೊಂದಿಗೆ ಸರಿಯಾದ ಮಾರ್ಗದರ್ಶನದ ಕೊರತೆಯೂ (33%) ದೊಡ್ಡ ಅಡೆತಡೆಯಾಗಿದೆ. ಆದಾಗ್ಯೂ, ಈ ಸವಾಲುಗಳನ್ನು ಮೀರಿ ಜಾಗತಿಕ ನಾಗರಿಕರಾಗಿ ಬೆಳೆಯುವ ಛಲ ಭಾರತೀಯ ಯುವಶಕ್ತಿಯಲ್ಲಿ ಎದ್ದು ಕಾಣುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us