/newsfirstlive-kannada/media/media_files/2025/08/11/bihar-si-suicide-2025-08-11-17-56-15.jpg)
PSI ಅನೂಜ್ ಮತ್ತು ಪಿಎಸ್‌ಐ ಸ್ವೀಟಿ ಕುಮಾರಿ
ಬಿಹಾರದ ಗಯಾದಲ್ಲಿ ಎಸ್‌ಐ ಅನುಜ್ ಕಶ್ಯಪ್ ಸಾವಿನ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿದೆ. ಶನಿವಾರ ಬೆಳಿಗ್ಗೆ ಬಾಡಿಗೆ ಕೋಣೆಯಲ್ಲಿ ಎಸ್‌ಐ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಬಾಗಿಲು ಒಡೆದು ನೋಡಿದಾಗ ಶವ ಪತ್ತೆಯಾಗಿತ್ತು. ಈ ವೇಳೆ ಘಟನಾ ಸ್ಥಳದಲ್ಲಿ ಜನರ ನಡುವೆಯೇ ಇದ್ದ ಮಹಿಳಾ ಇನ್ಸ್ ಪೆಕ್ಟರ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಕೇವಲ 24 ಗಂಟೆಯಲ್ಲೇ ಪ್ರಕರಣವನ್ನು ಬೇಧಿಸಿದ್ದಾರೆ. ಅಸಲಿಗೆ ಏನಿದು ಘಟನೆ?
ಎಸ್‌ಐ ಆತ್ಮಹತ್ಯೆ, ಮಹಿಳಾ ಇನ್‌ಸ್ಪೆಕ್ಟರ್ ಅರೆಸ್ಟ್!
ಜೂಹಿ ಎಂಬಾಕೆಯನ್ನು ಮದುವೆಯಾಗಿದ್ದ ಎಸ್‌ಐ ಅನೂಜ್ ಕಶ್ಯಪ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಗಯಾದಲ್ಲಿ ಸಬ್-ಇನ್ಸ್‌ಪೆಕ್ಟರ್ ಅನೂಜ್ ಕಶ್ಯಪ್‌ರ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. 24 ಗಂಟೆಗಳ ವಿಚಾರಣೆಯ ನಂತರ, ಪೊಲೀಸರು ಮಹಿಳಾ ಇನ್ಸ್‌ಪೆಕ್ಟರ್ ಸ್ವೀಟಿ ಕುಮಾರಿಯನ್ನು ಮಾನಸಿಕ ಕಿರುಕುಳ ಮತ್ತು ಮದುವೆಗೆ ಒತ್ತಡ ಹೇರಿದ ಆರೋಪದ ಮೇಲೆ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಇಬ್ಬರ ನಡುವೆ ಪ್ರೀತಿ ಶುರುವಾಗಿದ್ದು ಎಲ್ಲಿ?
2021ರಲ್ಲಿ ಇಮಾಮ್‌ಗಂಜ್ ಪೊಲೀಸ್ ಠಾಣೆಯಲ್ಲಿ ಮೊದಲು ಭೇಟಿಯಾದ ಅನುಜ್ ಕಶ್ಯಪ್ ಮತ್ತು ಸ್ವೀಟಿ ಕುಮಾರಿ, ಕೆಲಸದ ಸಂದರ್ಭದಲ್ಲಿ ಆಪ್ತರಾದರು. ಕ್ರಮೇಣ ಅವರ ಸಂಬಂಧ ಪ್ರೀತಿಯಾಗಿ ಬದಲಾವಣೆಯಾಗಿತ್ತು. ಒಟ್ಟಿಗೆ ತಿರುಗಾಡುವುದು, ರೆಸ್ಟೋರೆಂಟ್‌ಗಳಲ್ಲಿ ಕಾಲ ಕಳೆಯುವುದು ಸಾಮಾನ್ಯವಾಗಿತ್ತು. ಆದರೆ, ಈ ಸಂಬಂಧದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಾಗ, ಇಬ್ಬರನ್ನು ಬೇರೆ ಬೇರೆ ಸ್ಥಳಗಳಿಗೆ ವರ್ಗಾವಣೆ ಮಾಡಿದ್ದರು. ಅನುಜ್‌ರನ್ನು ಎಸ್‌ಎಸ್‌ಪಿ ಕಚೇರಿಯ ಮೀಡಿಯಾ ವಿಭಾಗಕ್ಕೆ, ಸ್ವೀಟಿಯನ್ನು ಬೆಳಗಂಜ್ ಠಾಣೆಗೆ ವರ್ಗಾವಣೆ ಮಾಡಿ ಆದೇಶ ನೀಡಲಾಗಿತ್ತು. ಇದರೊಂದಿಗೆ ಇಬ್ಬರ ನಡುವಿನ ಪ್ರೀತಿ ದೂರವಾಗಿತ್ತು.
ಪ್ರೇಮಕಥೆಯ ದುರಂತ ಅಂತ್ಯ
ಇತ್ತ ಕುಟುಂಬಸ್ಥರು ಜೂಹಿ ಎಂಬ ಯುವತಿಯನ್ನು ನೋಡಿ ಅನುಜ್ ಕಶ್ಯಪ್ ಅವರಿಗೆ ಮದುವೆ ಮಾಡಿದ್ದರು. ಇಬ್ಬರಿಗೂ ಮದುವೆಯಾಗಿ ಎರಡು ವರ್ಷಗಳಾಗಿದೆ. ಆದರೆ ಅನುಜ್ ಕಶ್ಯಪ್ ಪತ್ನಿ ಜೂಹಿ ದೆಹಲಿಯಲ್ಲಿ ಉಳಿದುಕೊಂಡು ಯುಪಿಎಸ್‌ಸಿಗೆ ತಯಾರಿ ನಡೆಸಿದ್ದರು. ಅನುಜ್ ಮಾತ್ರ ಗಯಾದ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು.
ಒಂದೆಡೆ ಪಿಎಸ್‌ಐ ಅನೂಜ್ ಕಶ್ಯಪ್- ಸ್ವೀಟಿ ಕುಮಾರಿ ಮತ್ತೊಂದೆಡೆ ಅನೂಜ್- ಪತ್ನಿ ಜೂಹಿ
ಮದುವೆ ಒತ್ತಡಕ್ಕೆ ಅನೂಜ್ ಬಲಿ
ಈ ನಡುವೆ ಸ್ವೀಟಿ ಕುಮಾರಿ ಹಾಗೂ ಅನುಜ್ ಕಶ್ಯಪ್ ನಡುವೆ ಮತ್ತೆ ಪೋನ್ ಸಂಭಾಷಣೆ ಆರಂಭವಾಗಿತ್ತಂತೆ. ಸ್ವೀಟಿ, ಅನುಜ್‌ರ ಪತ್ನಿ ಜೂಹಿಗೆ ವಿಚ್ಛೇದನ ನೀಡಿ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದರಂತೆ. ಈ ಒತ್ತಡವನ್ನು ತಾಳಲಾರದ ಅನುಜ್, ಗುರುವಾರ ರಾತ್ರಿ ಸ್ವೀಟಿಯೊಂದಿಗೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿರುವಾಗಲೇ, ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ನಂತರ, ಸ್ವೀಟಿ ಭಯಭೀತಳಾಗಿ ಬೆಳಗ್ಗೆ 5 ಗಂಟೆಗೆ ಅನುಜ್‌ರ ಬಾಡಿಗೆ ಮನೆಗೆ ಆಗಮಿಸಿದ್ದಾರೆ. ಆದರೆ ಬಾಗಿಲು ಓಪನ್ ಮಾಡಲು ಆಗದಿದ್ದಾಗ, ಮನೆ ಮಾಲೀಕರಿಗೆ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಡೋರ್ ಒಡೆದು ಒಳ ಪ್ರವೇಶ ಮಾಡಿದ್ದಾರೆ. ಆಗ ಅನೂಜ್ ಮೃತದೇಹ ಪತ್ತೆಯಾಗಿದೆ. ಇನ್ನು, ಪೊಲೀಸರ ವಿಚಾರಣೆಯಲ್ಲಿ ಸ್ವೀಟಿ, ಇಬ್ಬರ ನಡುವಿನ ಸಂಬಂಧದ ಬಗ್ಗೆ ಮಾಹಿತಿ ನೀಡಿದ್ದು, ಮದುವೆ ಮಾಡಿಕೊಳ್ಳುವಂತೆ ಒತ್ತಾಯ ಮಾಡುತ್ತಿರುವುದು ಕೂಡ ಸತ್ಯ ಎಂದು ಒಪ್ಪಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಅನುಜ್‌ರ ತಂದೆ ಕೂಡ ಸ್ವೀಟಿ ಕುಮಾರಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಪೊಲೀಸರು ಸ್ವೀಟಿಯನ್ನು ಬಂಧಿಸಿದ್ದಾರೆ. ಮೃತ ಅನೂಜ್ ಪೋಷಕರು ಆಕೆಯ ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸ್ವೀಟಿ ಕುಮಾರಿ ವಿರುದ್ಧ ಈಗ ಪಿಎಸ್‌ಐ ಅನೂಜ್ ಕಶ್ಯಪ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಕೇಸ್ ದಾಖಲಾಗಿದೆ. ಸ್ವೀಟಿ ಕುಮಾರಿಯನ್ನು ವಿಶೇಷ ತನಿಖಾ ದಳ ಬಂಧಿಸಿ ಜೈಲಿಗೆ ಕಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.