/newsfirstlive-kannada/media/media_files/2025/10/27/delhi-ramkesh-meena-murder02-2025-10-27-13-22-42.jpg)
ದೆಹಲಿಯ ಗಾಂಧಿ ವಿಹಾರ್‌ನ ಅಪಾರ್ಟ್ ಮೆಂಟ್ ನಲ್ಲಿ 32 ವರ್ಷದ ಯುಪಿಎಸ್‌ಸಿ ಆಕಾಂಕ್ಷಿಯ ರಾಮಕೇಶ್ ಮೀನಾ ಶವ ಪತ್ತೆಯಾಗಿತ್ತು. ಅಪಾರ್ಟ್ ಮೆಂಟ್‌ನ ನ ಪ್ಲ್ಯಾಟ್ ನಲ್ಲಿ ಸಿಲಿಂಡರ್ ಸ್ಪೋಟ ಹಾಗೂ ಎ.ಸಿ. ಸ್ಪೋಟದಿಂದ ರಾಮಕೇಶ್ ಮೀನಾ ಸಾವನ್ನಪ್ಪಿದ್ದಾರೆ ಎಂಬ ಅನುಮಾನ ಪ್ರಾರಂಭದಲ್ಲಿ ಬಂದಿತ್ತು. ಆದರೇ, ರಾಮಕೇಶ್ ಮೀನಾ ಸಾವಿನ ತನಿಖೆ ನಡೆಸಿದ ಪೊಲೀಸರು ಇದು ಸಿಲಿಂಡರ್ ನ ಆಕಸ್ಮಿಕ ಸ್ಪೋಟ ಹಾಗೂ ಎ.ಸಿ. ಸ್ಪೋಟದಿಂದ ಆದ ಸಾವು ಅಲ್ಲ, ಬದಲಿಗೆ ವ್ಯವಸ್ಥಿತ, ಯೋಜಿತ ಕೊಲೆ ಎಂದು ಪತ್ತೆ ಹಚ್ಚಿದ್ದಾರೆ.
ಯುಪಿಎಸ್‌ಸಿ ಪರೀಕ್ಷೆ ಪಾಸಾಗಿ ಐಎಎಸ್ ಅಧಿಕಾರಿಯಾಗುವ ಕನಸು ಅನ್ನು ರಾಮಕೇಶ್ ಮೀನಾ ಕಂಡಿದ್ದ. ಅದಕ್ಕಾಗಿ ದೆಹಲಿಯಲ್ಲಿ ಪ್ಲ್ಯಾಟ್ ಬಾಡಿಗೆ ಪಡೆದು ಓದುತ್ತಿದ್ದ. ಈ ರಾಮಕೇಶ ಮೀನಾಗೆ ಅಮೃತ್ ಚೌಹಾಣ್ ಎಂಬಾಕೆಯ ಪರಿಚಯವಾಗಿತ್ತು. ಆಕೆಯೊಂದಿಗೆ ಗೆಳೆತನ ಇತ್ತು.
ಕಳೆದ ಮೇ ತಿಂಗಳಿನಿಂದ ಅಮೃತಾ ಚೌಹಾಣ್ ಹಾಗೂ ರಾಮಕೇಶ್ ಮೀನಾ ಒಟ್ಟಿಗೆ ಲೀವ್ ಇನ್ ಪಾರ್ಟನರ್ ಗಳಾಗಿ ವಾಸಿಸುತ್ತಿದ್ದರು. ಈ ವೇಳೆ ಗೆಳೆತನ ಬಳಸಿಕೊಂಡು ರಾಮಕೇಶ್ ಮೀನಾ ಆಕೆಯ ಜೊತೆ ಖಾಸಗಿ ಕ್ಷಣಗಳನ್ನು ಕಳೆದಿದ್ದ. ಆ ಖಾಸಗಿ ಕ್ಷಣಗಳ ವಿಡಿಯೋ ಮಾಡಿಕೊಂಡು ಅಮೃತಾ ಚೌಹಾಣ್ ಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಆ ವಿಡಿಯೋಗಳನ್ನು ಡೀಲೀಟ್ ಮಾಡುವಂತೆ ಅಮೃತಾ ಚೌಹಾಣ್ , ರಾಮಕೇಶ್ ಮೀನಾನನ್ನು ಬೇಡಿಕೊಂಡಿದ್ದಾಳೆ. ಆದರೂ, ಆತ ಅಮೃತಾ ಚೌಹಾಣ್ ಮನವಿಗೆ ಒಪ್ಪಿರಲಿಲ್ಲ. ಇದರಿಂದಾಗಿ ರಾಮಕೇಶ್ ಮೀನಾಗೆ ಪಾಠ ಕಲಿಸಲು ಆತನನ್ನು ಕೊಲ್ಲುವ ನಿರ್ಧಾರವನ್ನೇ ಮಾಡಿಬಿಟ್ಟಿದ್ದಳು.
ಅಮೃತಾ ಚೌಹಾಣ್, ಪೋರೆನ್ಸಿಕ್ ಸೈನ್ಸ್ ಬಿ.ಎಸ್ಸಿ. ವಿದ್ಯಾರ್ಥಿನಿ. ತನ್ನ ಪೋರೆನ್ಸಿಕ್ ಸೈನ್ಸ್ ಜ್ಞಾನವನ್ನು ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡಲು ಬಳಕೆ ಮಾಡಿದ್ದಳು.
ತನ್ನ ಮಾಜಿ ಗೆಳೆಯ ಸುಮಿತ್ ಕಶ್ಯಪ್ ಹಾಗೂ ಆತನ ಸ್ನೇಹಿತ ಸಂದೀಪ್ ಕುಮಾರ್ ಜೊತೆ ಸೇರಿ ರಾಮಕೇಶ್ ಮೀನಾನನ್ನು ಆತನ ಪ್ಲ್ಯಾಟ್ ನಲ್ಲೇ ಮೊದಲಿಗೆ ಉಸಿರುಗಟ್ಟಿಸಿ ಕೊಂದಿದ್ದಾರೆ. ಬಳಿಕ ಆತನ ಶವದ ಮೇಲೆ ಎಣ್ಣೆ, ತುಪ್ಪ, ಲಿಕ್ಕರ್ ಹಾಕಿದ್ದಾರೆ. ಬಳಿಕ ಮನೆಯಲ್ಲಿದ್ದ ಎ.ಸಿ. ಹಾಗೂ ಗ್ಯಾಸ್ ಸಿಲಿಂಡರ್ ಸ್ಪೋಟವಾಗುವಂತೆ ಮಾಡಿ ಅದರಿಂದಲೇ ರಾಮಕೇಶ್ ಮೀನಾ ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಿದ್ದರು.
ಆದರೇ, ಪೊಲೀಸರಿಗೆ ಇದು ಆಕಸ್ಮಿಕ ಬೆಂಕಿಯಿಂದ ಆದ ಸಾವು ಅಲ್ಲ, ಕೊಲೆ ಎಂಬ ಸುಳಿವು ನೀಡಿದ್ದು ಕಟ್ಟಡದ ಸಿಸಿಟಿವಿ ದೃಶ್ಯಗಳು. ಅಕ್ಟೋಬರ್ 5ರ ರಾತ್ರಿ ಅಮೃತ್ ಚೌಹಾಣ್, ಸುಮೀತ್ ಕಶ್ಯಪ್ ಹಾಗೂ ಸಂದೀಪ್ ಕುಮಾರ್ ಮೂವರು ಗಾಂಧಿವಿಹಾರ್ ನಲ್ಲಿರುವ ರಾಮಕೇಶ್ ಮೀನಾನ ಪ್ಲ್ಯಾಟ್ ಪ್ರವೇಶ ಮಾಡಿದ್ದಾರೆ. ಇದರಲ್ಲಿ ಇಬ್ಬರು ಯುವಕರು ಮುಸುಕುಧಾರಿಗಳಾಗಿ ಕಟ್ಟಡ ಪ್ರವೇಶಿಸಿದ್ದರು. ನಂತರ ಅಮೃತಾ ಚೌಹಾಣ್ ಬಂದಿದ್ದಾಳೆ.
ಬೆಳಗಿನ ಜಾವ 2.57 ರ ಸುಮಾರಿಗೆ ಅಮೃತಾ ಚೌಹಾಣ್ ಹಾಗೂ ಇಬ್ಬರು ಪುರುಷರು ಹೊರ ಹೋಗಿರುವುದು ಸಿಸಿಟಿವಿ ನಲ್ಲಿ ರೆಕಾರ್ಡ್ ಆಗಿತ್ತು.
ಈ ಮೂವರು ಹೊರ ಹೋದ ಬಳಿಕವಷ್ಟೇ ರಾಮಕೇಶ್ ಮೀನಾ ಪ್ಲ್ಯಾಟ್ ಗೆ ಬೆಂಕಿ ಹತ್ತಿಕೊಂಡಿದೆ. ಇದು ಪೊಲೀಸರ ಅನುಮಾನಕ್ಕೆ ಕಾರಣವಾಗಿತ್ತು. ಪೊಲೀಸರು ಪೋರೆನ್ಸಿಕ್ ತಜ್ಞರ ನೆರವಿನೊಂದಿಗೆ ಕೇಸ್ ತನಿಖೆ ನಡೆಸಿದ್ದರು. ಆಗ ಇದು ಆಕಸ್ಮಿಕ ಬೆಂಕಿಯಿಂದ ಆದ ಸಾವು ಅಲ್ಲ, ಬದಲಿಗೆ ಕೊಲೆ ಎಂಬುದು ದೃಢಪಟ್ಟಿತ್ತು.
ಜೊತೆಗೆ ಘಟನೆಯ ಸಮಯದಲ್ಲಿ ಅಮೃತಾ ಚೌಹಾಣ್ ಮೊಬೈಲ್ ಅಪರಾಧ ನಡೆದ ಸ್ಥಳದಲ್ಲಿ ಇದ್ದಿದ್ದು ಮೊಬೈಲ್ ಟವರ್ ಲೋಕೇಷನ್ ನಿಂದ ದೃಢಪಟ್ಟಿತ್ತು. ಅಮೃತಾ ಚೌಹಾಟ್ ಕಾಲ್ ಡೀಟೈಲ್ಸ್ ರೆಕಾರ್ಡ್ ಪರಿಶೀಲಿಸಿದಾಗ, ಆಕೆ ಸುಮಿತ್ ಮತ್ತು ಸಂದೀಪ್ ಜೊತೆ ಸಂಪರ್ಕದಲ್ಲಿರೋದು ಕೂಡ ದೃಢಪಟ್ಟಿತ್ತು.
ಬಳಿಕ ದೆಹಲಿ ಪೊಲೀಸರು ಉತ್ತರ ಪ್ರದೇಶದ ಮೊರದಾಬಾದ್ ನಲ್ಲಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡರು. ಅಮೃತಾ ಚೌಹಾಣ್ ಳನ್ನು ವಿಚಾರಣೆಗೊಳಪಡಿಸಿದಾಗ, ಆಕೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಳು.
ತಾನು ಸುಮೀತ್ ಹಾಗೂ ಸಂದೀಪ್ ಮೂವರೂ ಸೇರಿ , ರಾಮಕೇಶ್ ಮೀನಾನನ್ನು ಹಲ್ಲೆ ಮಾಡಿ, ಕತ್ತು ಹಿಸುಕಿ ಕೊಂದು ಬಳಿಕ ಬೆಂಕಿ ಹಚ್ಚಿದ್ದಾಗಿ ಹೇಳಿದ್ದಳು. ರಾಮಕೇಶ್ ಮೀನಾ ದೇಹದ ಮೇಲೆ ತುಪ್ಪ, ಎಣ್ಣೆ, ಲಿಕ್ಕರ್ ಅನ್ನು ಸುರಿದಿದ್ದಾಗಿ ಹೇಳಿದ್ದಳು. ಬಳಿಕ ಮೂವರು ಗ್ಯಾಸ್ ಸಿಲಿಂಡರ್ ಓಪನ್ ಮಾಡಿ ಸ್ಪೋಟ ಮಾಡಿದ್ದಾಗಿ ಹೇಳಿದ್ದರು.
ಎಲ್‌ಪಿಜಿ ವಿತರಕರಾಗಿ ಕೆಲಸ ಮಾಡುವ ಸುಮಿತ್, ಗ್ಯಾಸ್ ಸಿಲಿಂಡರ್ ಅನ್ನು ಸ್ಫೋಟಿಸಲು ಮತ್ತು ಅಪಘಾತದಂತೆ ಕಾಣುವಂತೆ ಮಾಡಲು ಬಳಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ತಪ್ಪಿಸಿಕೊಳ್ಳುವ ಮೊದಲು, ಮೂವರು ಅನುಮಾನ ಬರದಂತೆ ಕಬ್ಬಿಣದ ಗೇಟ್‌ನ ಸಣ್ಣ ರಂಧ್ರದ ಮೂಲಕ ಫ್ಲಾಟ್ ಅನ್ನು ಒಳಗಿನಿಂದ ಲಾಕ್ ಮಾಡಿದರು. ನಿಮಿಷಗಳ ನಂತರ, ಸ್ಫೋಟ ಸಂಭವಿಸಿದೆ. ಸಾಕ್ಷ್ಯಗಳನ್ನು ನಾಶಮಾಡಲು ಅವರು ಮೀನಾ ಅವರ ಹಾರ್ಡ್ ಡಿಸ್ಕ್, ಲ್ಯಾಪ್‌ಟಾಪ್‌ಗಳು ಮತ್ತು ಇತರ ವಸ್ತುಗಳೊಂದಿಗೆ ಪರಾರಿಯಾಗಿದ್ದರು.
/filters:format(webp)/newsfirstlive-kannada/media/media_files/2025/10/27/delhi-ramkesh-meena-murder-2025-10-27-13-23-19.jpg)
ಅಮೃತಾಳ ವಿಧಿವಿಜ್ಞಾನದ ಹಿನ್ನೆಲೆ ಮತ್ತು ಅಪರಾಧ ವೆಬ್ ಸರಣಿಯ ಮೇಲಿನ ಆಕರ್ಷಣೆಯು ಕೊಲೆಯನ್ನು ಯೋಜಿಸಲು ಮತ್ತು ಅದನ್ನು ಬೆಂಕಿಯ ಅಪಘಾತವೆಂದು ಮರೆಮಾಚಲು ಸಹಾಯ ಮಾಡಿದೆ ಎಂದು ಪೊಲೀಸರು ಹೇಳಿದ್ದಾರೆ.
ಆಕೆಯ ತಪ್ಪೊಪ್ಪಿಗೆಯ ನಂತರ, ಪೊಲೀಸರು ಆರೋಪಿಯಿಂದ ಹಾರ್ಡ್ ಡಿಸ್ಕ್, ಟ್ರಾಲಿ ಬ್ಯಾಗ್, ಮೀನಾ ಅವರ ಶರ್ಟ್ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡರು.
ಆಕೆಯ ಮಾಹಿತಿ ಆಧಾರದ ಮೇಲೆ, ಸುಮಿತ್ ಅವರನ್ನು ಅಕ್ಟೋಬರ್ 21 ರಂದು ಮತ್ತು ಸಂದೀಪ್ ಅವರನ್ನು ಅಕ್ಟೋಬರ್ 23 ರಂದು ಬಂಧಿಸಲಾಯಿತು. ವಿಚಾರಣೆಯ ಸಮಯದಲ್ಲಿ ಇಬ್ಬರೂ ತಮ್ಮ ಪಾತ್ರ ಒಪ್ಪಿಕೊಂಡರು.
ತಾಂತ್ರಿಕ ಕಣ್ಗಾವಲು, ಕರೆ ದಾಖಲೆಗಳು ಮತ್ತು ಸ್ಥಳೀಯ ಗುಪ್ತಚರ ಮಾಹಿತಿಗಳನ್ನು ಒಟ್ಟುಗೂಡಿಸಿ ಘಟನೆಗಳ ಅನುಕ್ರಮವನ್ನು ಒಟ್ಟುಗೂಡಿಸಿ ತಿಮಾರ್ಪುರ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಂಕಜ್ ತೋಮರ್ ತನಿಖೆಯ ನೇತೃತ್ವ ವಹಿಸಿದ್ದರು. ಕೊಲೆ, ಪಿತೂರಿ ಮತ್ತು ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ. ಮೂವರು ಆರೋಪಿಗಳು ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us