/newsfirstlive-kannada/media/post_attachments/wp-content/uploads/2024/10/JAMMU-KASHMIR-ELECTION-1.jpg)
ಶ್ರೀನಗರ: 2019ರಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿರಲಿಲ್ಲ. ಜಮ್ಮು ಕಾಶ್ಮೀರವನ್ನು ಎರಡು ಭಾಗಗಳಾಗಿ ಮಾಡಿ ಲಡಾಖ್ ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ಬಳಿಕ ಮೊದಲ ಬಾರಿ ವಿಧಾನಸಭಾ ಚುನಾವಣೆ ನಡೆದಿದ್ದು, ಈ ಚುನಾವಣೆಯಲ್ಲಿ ಜಮ್ಮು ಕಾಶ್ಮೀರದ ಮತದಾರರು ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರನ್ಸ್ ಮೈತ್ರಿಗೆ ಜೈ ಎಂದಿದ್ದಾರೆ. ಒಟ್ಟು 90 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ 49 ಕ್ಷೇತ್ರಗಳಲ್ಲಿ ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರನ್ಸ್ ಮೈತ್ರಿ ಪ್ರಚಂಡ ಗೆಲುವು ಸಾಧಿಸಿ ಅಧಿಕಾರ ಗದ್ದುಗೆ ಹಿಡಿಯಲು ಸಜ್ಜಾಗಿದೆ.
ಇದನ್ನೂ ಓದಿ:ಹರಿಯಾಣದಲ್ಲಿ ಕಾಂಗ್ರೆಸ್ ಜಾದು ನಡೆಯಲಿಲ್ಲ ಯಾಕೆ? ಬಿಜೆಪಿ ಗೆಲುವಿಗೆ 7 ಕಾರಣಗಳು ಇಲ್ಲಿದೆ!
ಈ ಗೆಲುವಿನ ಮೂಲಕ ಮತ್ತೊಮ್ಮೆ ಓಮರ್ ಅಬ್ದುಲ್ಲಾ ಜಮ್ಮು ಕಾಶ್ಮೀರದ ಸಿಎಂ ಆಗುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಚುನಾವಣೆ ಪೂರ್ವದಲ್ಲಿಯೇ ನಡೆದ ಮೈತ್ರಿಯಲ್ಲಿ ಒಟ್ಟು 99 ಕ್ಷೇತ್ರಗಳಲ್ಲಿ ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ 51 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, 35 ಕ್ಷೇತ್ರಗಳನ್ನು ಕಾಂಗ್ರೆಸ್​ಗೆ ಬಿಟ್ಟುಕೊಟ್ಟು ಒಂದೊಂದು ಕ್ಷೇತ್ರವನ್ನು ಸಿಪಿಐ (ಎಂ) ಮತ್ತು ಪ್ಯಾಂಥರ್ಸ್ ಪಾರ್ಟಿಗೆ ಬಿಟ್ಟುಕೊಡಲಾಗಿತ್ತು. ಒಟ್ಟು 90 ಕ್ಷೇತ್ರಗಳಲ್ಲಿ ಈ ಮೈತ್ರಿ ಪಡೆ 49 ಕ್ಷೇತ್ರಗಳಲ್ಲಿ ಗೆದ್ದುಕೊಂಡಿದೆ. ಅದರಲ್ಲಿ 42 ಕ್ಷೇತ್ರಗಳಲ್ಲಿ ಜೆಕೆಎನ್​ ಗೆಲುವ ಸಾಧಿಸಿದ್ದರೆ, ಕಾಂಗ್ರೆಸ್ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು. ಸಿಪಿಐ (ಎಂ) ಒಂದು ಕ್ಷೇತ್ರದಲ್ಲಿ ಗೆಲುವು ದಾಖಲಿಸಿದೆ. ಒಟ್ಟು 49 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಮೈತ್ರಿ ಸರ್ಕಾರ ಅಧಿಕಾರ ಗದ್ದುಗೆಯನ್ನು ಏರಲು ಸಜ್ಜಾಗಿದೆ.
ಬಿಜೆಪಿಯ ನಯಾ ಕಾಶ್ಮೀರ ಕನಸು ನುಚ್ಚು ನೂರು
ಇನ್ನು ಕಾಶ್ಮೀರದಲ್ಲಿ ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬರುವ ಕನಸು ಕಂಡಿತ್ತು. ನಯಾ ಕಾಶ್ಮೀರ್​ ಕನಸುಕಟ್ಟಿಕೊಂಡಿದ್ದ ಬಿಜೆಪಿಗೆ ಭಾರೀ ಹಿನ್ನೆಡೆಯಾಗಿದೆ. ಸ್ಪರ್ಧಿಸಿದ್ದ ಒಟ್ಟು ಕ್ಷೇತ್ರಗಳಲ್ಲಿ ಕೇವಲ 29 ಕ್ಷೇತ್ರಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇನ್ನು ಮೆಹಬೂಬಾ ಮುಫ್ತಿಯವರ ಪಿಡಿಪಿ ಮೂರೇ ಮೂರು ಕ್ಷೇತ್ರಗಳಲ್ಲಿ ಗೆದ್ದು ತೀವ್ರ ಮುಖಭಂಗ ಅನುಭವಿಸಿದೆ. ಮೆಹಬೂಬಾ ಪುತ್ರಿ ಇಲ್ತೀಜಾ ಮುಫ್ತಿ ಮೊದಲ ಬಾರಿ ಅದೃಷ್ಟ ಪರೀಕ್ಷೆಗೆ ಚುನಾವಣೆ ಇಳಿದಿದ್ದರು. ಆದ್ರೆ ಪಿಡಿಪಿಯ ಅಬೇಧ್ಯ ಕೋಟೆಯಾದ ಬಿಜ್​ ಬೆಹರ್ ಕ್ಷೇತ್ರದಲ್ಲಿಯೇ ಇಲ್ತೀಜಾ ಮುಫ್ತಿ ಮುಗ್ಗರಿಸಿದ್ದಾರೆ.
ಇದನ್ನೂ ಓದಿ:VineshPhogat: ಅಗ್ನಿ ಪರೀಕ್ಷೆಯಲ್ಲಿ ವಿಜಯ ಪತಾಕೆ.. ಗೆದ್ದು ಬೀಗಿದ ವಿನೇಶ್ ಫೋಗಟ್!
ಇನ್ನು ಜಮ್ಮು ಕಾಶ್ಮೀರದಲ್ಲಿ ಮೊದಲ ಬಾರಿ ಆಮ್ ಆದ್ಮಿ ಪಕ್ಷ ಖಾತೆ ತೆರೆದಿದೆ. ದೊಡಾ ಕ್ಷೇತ್ರದಲ್ಲಿ ಮೊಡಾ ಮಲ್ಲಿಕ್ 4538 ಮತಗಳ ಅಂತರದಲ್ಲಿ ಗೆಲ್ಲುವ ಮೂಲಕ ಆಮ್ ಆದ್ಮಿ ಪಕ್ಷಕ್ಕೆ ಜಮ್ಮು ಕಾಶ್ಮೀರದಲ್ಲಿ ಪ್ರವೇಶ ದ್ವಾರ ತೆರೆದಿದ್ದಾರೆ. ಇನ್ನು ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 7 ಸ್ವತಂತ್ರ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಲಂಗಾಟೆ, ಶೋಪಿಯಾನ್, ಇಂದೇರವಾಲಾ, ಬನಿ, ಛಂಬ್, ಥನ್​ಮಂಡಿ ಮತ್ತು ಸುರನ್​ಕೋಟೆ ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us