/newsfirstlive-kannada/media/post_attachments/wp-content/uploads/2024/12/Nelamangala-Accident-11.jpg)
ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿದ್ದಾರೆ. ವೀಕೆಂಡ್ ಹಿನ್ನೆಲೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಚಂದ್ರಮ್ ಯೋಗಪ್ಪ ಗೊಳ್ ಕುಟುಂಬ ಹೊಸ ವೋಲ್ವೋ ಕಾರಿನಲ್ಲಿ ಬೆಂಗಳೂರಿನಿಂದ ಪ್ರವಾಸಕ್ಕೆ ಹೊರಟಿದ್ದರು. ನೆಲಮಂಗಲದ ಬಳಿ ವೇಗವಾಗಿ ಬಂದ ಕಂಟೇನರ್ ಕಾರಿನ ಮೇಲಿ ಅಪ್ಪಳಿಸಿದ್ದು ಈ ಘೋರ ದುರಂತ ನಡೆದಿದೆ.
ಅಸಲಿಗೆ ಆಗಿದ್ದೇನು?
ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಸರಣಿ ಅಪಘಾತ ನಡೆದಿದೆ. ಈಚರ್ ಕ್ಯಾಂಟರ್ ಗಾಡಿ ಬೆಂಗಳೂರು ಕಡೆಯಿಂದ ತುಮಕೂರಿಗೆ ಹೋಗುತ್ತಾ ಇತ್ತು. ಕ್ಯಾಂಟರ್‌ನ ಹಿಂದೆ ವೋಲ್ವೋ ಕಾರು ಬರುತ್ತಾ ಇತ್ತು. ಪಕ್ಕದ ರಸ್ತೆಯಲ್ಲಿ ಬೆಂಗಳೂರು ಕಡೆಗೆ ಕಂಟೇನರ್ ಲಾರಿಯೊಂದು ವೇಗವಾಗಿ ಹೋಗುತ್ತಾ ಇತ್ತು.
ಬೆಂಗಳೂರು ಕಡೆಗೆ ಬರುತ್ತಿದ್ದ ಕಂಟೇನರ್ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಮೀಡಿಯನ್ ಹತ್ತಿಸಿದ್ದಾನೆ. ಎದುರುಗಡೆಯ ರಸ್ತೆಗೆ ಇಳಿದ ಕಂಟೇನರ್ ತುಮಕೂರು ಕಡೆ ಹೋಗುತ್ತಿದ್ದ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದೆ. ಕ್ಯಾಂಟರ್‌ಗೆ ಡಿಕ್ಕಿಯಾದ ಬಳಿಕ ಕಂಟೇನರ್ ಹಿಂದೆಯಿದ್ದ ವೋಲ್ವೋ ಕಾರಿನ ಮೇಲೆ ಬಿದ್ದಿದೆ.
ಕಂಟೇನರ್ ಬಿದ್ದ ಪರಿಣಾಮ ವೋಲ್ವೋ ಕಾರು ಪೂರ್ತಿ ಜಖಂಗೊಂಡಿದೆ. ಆಗ ಕಾರಿನಲ್ಲಿದ್ದ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲಾರಿ ಹಾಗೂ ಕ್ಯಾಂಟರ್ ಚಾಲಕರಿಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಹೊಸ ಕಾರಿನಲ್ಲಿ ವೀಕೆಂಡ್ ಪ್ರವಾಸ.. ನಜ್ಜುಗುಜ್ಜಾದ ಒಂದೇ ಕುಟುಂಬದ 6 ಮಂದಿ; ಘೋರ ದುರಂತ!
ಮೃತರ ಗುರುತು ಪತ್ತೆ!
ನೆಲಮಂಗಲ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದವರ ಗುರುತು ಪತ್ತೆ ಹಚ್ಚಲಾಗಿದೆ. ಚಂದ್ರ ಏಗಪ್ಪಗೋಳ (48), ಗೌರಾಬಾಯಿ (42) ವಿಜಯಲಕ್ಷ್ಮಿ (36) ಧೀಕ್ಷಾ (12), ಜಾನ್ (16), ಆರ್ಯ (6) ಮೃತರು. ಇವರೆಲ್ಲರೂ ಮಹಾರಾಷ್ಟ್ರ ರಾಜ್ಯದ ಜತ್ತ ತಾಲೂಕಿನ ಮೊರಬಗಿ ಗ್ರಾಮದವರು.
ಚಂದ್ರಮ್ ಯೋಗಪ್ಪ ಗೊಳ್ ಅವರು IAST ಸಾಫ್ಟ್‌ವೇರ್ ಸಲ್ಯೂಷನ್ಸ್ನ ಎಂಡಿ, ಸಿಇಒ ಆಗಿದ್ದರು. ಆಟೋಮೋಟಿವ್, ಎಂಬೆಡೆಡ್ ಸಾಫ್ಟ್‌ವೇರ್ ಡೆವಲ್ಪಮೆಂಟ್ನಲ್ಲಿ ಅನುಭವಿ ಆಗಿದ್ದು, 18 ವರ್ಷಗಳಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಎಲೆಕ್ಟ್ರಿಕ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರ. ಸೂರತ್ಕಲ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದಿದ್ದರು.
ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
ಬೆಳಗ್ಗೆ 11 ಗಂಟೆ ಸಮಯದಲ್ಲಿ ಬೆಂಗಳೂರು ತುಮಕೂರು NH 48 ಹೈವೇ ರಸ್ತೆ ತಿಪ್ಪಗೊಂಡನಹಳ್ಳಿ ಹತ್ತಿರ KA 06 AB 0645 ಈಚರ್ ಕ್ಯಾಂಟರ್ ವಾಹನ ಬೆಂಗಳೂರು ಕಡೆಯಿಂದ ತುಮಕೂರು ಕಡೆಗೆ ಹೋಗುತ್ತಿತ್ತು. ಅದೇ ಸಮಯದಲ್ಲಿ ಕ್ಯಾಂಟರ್‌ನ ಹಿಂದೆ KA. 01. ND. 1536 ವೋಲ್ವೋ ಕಾರು ಬರುತ್ತಿದ್ದಾಗ ಇದೇ ಸಮಯದಲ್ಲಿ ಬೆಂಗಳೂರು ಕಡೆಗೆ ಹೋಗುತ್ತಿತ್ತು. KA. 52 B 3076 ಲಾರಿಯನ್ನು ಕಂಟೇನರ್ ಲಾರಿಯ ಚಾಲಕ ತನ್ನ ಲಾರಿಯನ್ನು ಅತಿ ವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿ ಬಂದು ರಸ್ತೆಯ ಮಧ್ಯದ ಮೀಡಿಯನ್ ಹತ್ತಿಸಿದ್ದಾನೆ. ಬೆಂಗಳೂರು ತುಮಕೂರು ರಸ್ತೆಗೆ ಬಂದು ರಸ್ತೆಯಲ್ಲಿ ಬರುತ್ತಿದ್ದ ಕ್ಯಾಂಟರ್ ವಾಹನಕ್ಕೆ ಡಿಕ್ಕಿ ಹೊಡೆದು ನಂತರ ವೋಲ್ವೋ ಕಾರಿನ ಮೇಲೆ ಲಾರಿಯನ್ನು ಪಲ್ಟಿ ಹೊಡೆಸಿದಾಗ ವೋಲ್ವೋ ಕಾರ್ ಪೂರ್ತಿ ಜಖಂಗೊಂಡು ವೋಲ್ವೋ ಕಾರಿನಲ್ಲಿದ್ದವರು ಮೃತಪಟ್ಟಿದ್ದಾರೆ.
ಕಂಟೇನರ್ ಪಲ್ಟಿ ಹೊಡೆದು ಬಿದ್ದಾಗ ಯಾವುದೇ ಶಬ್ದ, ಚೀರಾಟವೇ ಕೇಳಸಲಿಲ್ಲ. 6 ಜನರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಟಾಟಾ ಕ್ಯಾಂಟರ್ ಮತ್ತು ಕಂಟೇನರ್ ವಾಹನದಲ್ಲಿದ್ದ ಚಾಲಕರು ಗಾಯಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ