/newsfirstlive-kannada/media/post_attachments/wp-content/uploads/2024/12/Nelamangala-Accident-13.jpg)
ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡು ಕೇಳರಿಯದ ಭೀಕರ ಅಪಘಾತ ಸಂಭಿಸಿದೆ. ಕಂಟೇನರ್ ಒಂದು ವೋಲ್ವೋ ಕಾರಿನ ಮೇಲೆ ಬಿದ್ದಿದ್ದು ಕಾರು ಹಾಗೂ ಕಾರಿನಲ್ಲಿದ್ದ ಒಂದೇ ಕುಟುಂಬದ 6 ಮಂದಿ ಅಪ್ಪಚ್ಚಿಯಾಗಿದ್ದಾರೆ. ಚಂದ್ರಮ್ ಕುಟುಂಬದ ಈ ದುರಂತ ಕರುಣಾಜನಕವಾಗಿದೆ.
ಅಪಘಾತದ ಬಳಿಕ ಒಂದೇ ಕುಟುಂಬದ 6 ಮಂದಿಯ ಮೃತ ದೇಹವನ್ನ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಮೃತ ಚಂದ್ರಮ್ ಸಹೋದರ & ವಿಜಯಲಕ್ಷ್ಮಿ ಪತಿ ಮಲ್ಲಿನಾಥ್ ಅವರಿಂದ ಸಹಿ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದರು.
ಮರಣೋತ್ತರ ಪರೀಕ್ಷೆಯ ಬಳಿಕ ಚಂದ್ರಮ್ ಹಾಗೂ ಕುಟುಂಬಸ್ಥರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗಿದೆ. 6 ಜನರ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮುರಬಗಿಯಲ್ಲಿ ನಾಳೆ ಚಂದ್ರಮ್ ಕುಟುಂಬಸ್ಥರ ಅಂತ್ಯಕ್ರಿಯೆ ನೆರವೇರಲಿದೆ.
ಬಾಸ್‌ಗೆ ನೋವಿನ ವಿದಾಯ!
ಚಂದ್ರಮ್ ಯೋಗಪ್ಪ ಗೊಳ್ ಅವರು IAST ಸಾಫ್ಟ್ವೇರ್ ಸಲ್ಯೂಷನ್ಸ್ನ ಎಂಡಿ, ಸಿಇಒ ಆಗಿದ್ದರು. 5 ವರ್ಷದ ಹಿಂದೆ ಚಂದ್ರಮ್ ಈ ಕಂಪನಿಯನ್ನ ಆರಂಭ ಮಾಡಿದ್ದರು. ಯಶಸ್ವಿಯಾಗಿ ನಡೆಯುತ್ತಿದ್ದ ಈ ಕಂಪನಿಯಲ್ಲಿ 150ಕ್ಕೂ ಹೆಚ್ಚು ಕೆಲಸಗಾರರು ಇದ್ದರು. ಇಂದು ಚಂದ್ರಮ್ ಅವರನ್ನ ಕಳೆದುಕೊಂಡು ನೂರಾರು ನೌಕರರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: ನೆಲಮಂಗಲ ಅಪಘಾತ! ದುರಂತ ಅಸಲಿಗೆ ನಡೆದಿದ್ದು ಹೇಗೆ? ಕಂಟೇನರ್ ಡ್ರೈವರ್ ಹೇಳೋದೇನು?
ನೆಲಮಂಗಲ ಆಸ್ಪತ್ರೆ ಬಳಿ ಬಂದಿರುವ ಚಂದ್ರಮ್ ಕಂಪನಿಯ ನೌಕರರು ನಮ್ ಬಾಸ್ ದೇವರಂತಹ ಮನುಷ್ಯ. ಸಿಬ್ಬಂದಿ ಸಮಸ್ಯೆಗಳಿಗೆ ವೈಯುಕ್ತವಾಗಿ ಸ್ಪಂದಿಸುತ್ತಿದ್ದರು. ತಮ್ಮ ಸಮಸ್ಯೆಗಳಿಗೆ ವೈಯುಕ್ತಿಕವಾಗಿ ಸಹಾಯ ಮಾಡುತ್ತಿದ್ದರು ಎಂದು ಕಣ್ಣೀರು ಹಾಕಿದ್ದಾರೆ.
2 ದಿನದ ಹಿಂದೆ ನಮ್ಮ ಬಾಸ್ ಜೊತೆ ಮಾತನಾಡಿದ್ದೆ. ಮಹಾರಾಷ್ಟ್ರದ ತಮ್ಮ ಊರಿಗೆ ಹೋಗಿ ಬರ್ತೀನಿ. ಕಂಪನಿ ಕಡೆ ನೋಡ್ಕೊಳ್ಳಿ ಅಂದಿದ್ದರು. ಊರಿಗೆ ಹೋಗಿ ಬರ್ತೀನಿ ಅಂದವರಿಗೆ ಈ ರೀತಿಯಾಗಿದೆ. ಸಂಬಂಧಿಕರಿಗೆ ಹುಷಾರಿಲ್ಲವೆಂದು ಹೇಳಿ ಊರಿಗೆ ಹೋಗುತ್ತಾ ಇದ್ದರು. ಬಾಸ್ ಮೃತಪಟ್ಟಿದ್ದಾರೆ ಅನ್ನೋದನ್ನ ನಂಬೋಕೆ ಆಗ್ತಿಲ್ಲವೆಂದು ನೌಕರರು ಭಾವುಕರಾಗಿ ಕಣ್ಣೀರಿನ ವಿದಾಯ ಹೇಳಿದ್ದಾರೆ. ನಾಳೆ ಚಂದ್ರಮ್ ಕುಟುಂಬಸ್ಥರ ಅಂತ್ಯಕ್ರಿಯೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮುರಬಗಿಯಲ್ಲಿ ನೆರವೇರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ