/newsfirstlive-kannada/media/post_attachments/wp-content/uploads/2024/12/NELAMANGALA-ACCIDENT.jpg)
ಒಂದೇ ಕುಟುಂಬದ 6 ಮಂದಿ ಬಲಿ ಪಡೆದ ಕಂಟೇನರ್ ಕ್ರೌರ್ಯ ಬೆಚ್ಚಿಬೀಳಿಸಿದೆ. ಆದರೆ, ಕಂಟೇನರ್ ಡ್ರೈವರ್ ಮಾತ್ರ ಬೇರೆಯದ್ದೇ ಕಥೆ ಹೇಳುತ್ತಿದ್ದಾನೆ. ಆಸ್ಪತ್ರೆ ಬೆಡ್ ಮೇಲೆ ಮಲಗಿರೋ ಕಂಟೇನರ್ ಡ್ರೈವರ್ ವರ್ಷನ್ ಏನು? ಚಂದ್ರಮ್ ಕುಟುಂಬದ ಬಗ್ಗೆ ಅವರ ಆಫೀಸ್ನ ಸಿಬ್ಬಂದಿ ಹೇಳೋದೇನು? ವೋಲ್ವೋ ಕಾರ್ ತಂದ ಕೆಲವೇ ತಿಂಗಳಲ್ಲೇ ಹೀಗೇಕಾಯ್ತು.
ಸಿಸಿಟಿವಿ ಕಂಟೇನರ್ ಕ್ರೌರ್ಯ ಎಂಥದ್ದು ಅನ್ನೋದನ್ನ ಸಾರಿ ಸಾರಿ ಹೇಳ್ತಿದೆ. ಚಂದ್ರಮ್ ಯೋಗಪ್ಪಗೋಳ ಕುಟುಂಬ ಅಪ್ಪಚ್ಚಿ ಆಗಿದ್ದೇಗೆ ಅನ್ನೋದನ್ನ ಪ್ರತ್ಯಕ್ಷದರ್ಶಿ ಹೇಳ್ತಿದ್ದಾರೆ. ಹೊಚ್ಚ ಹೊಸ ಕಾರು ಜಖಂ ಆಗಿರೋದನ್ನ ನೋಡಿದ್ರೆ ದಾರುಣ ಎಂಥದ್ದು ಅನ್ನೋದು ಸ್ಪಷ್ಟವಾಗುತ್ತದೆ. ಆದರೇ, ಅದ್ಯಾವ ಕಂಟೇನರ್ನಿಂದಾಗಿ ಈ ದುರಂತ ಆಯ್ತೋ? ಅದೇ ಕಂಟೇನರ್ ಡ್ರೈವರ್ ಮಾತ್ರ ಬೇರೆಯದ್ದೇ ಕಥೆ ಹೇಳುತ್ತಿದ್ದಾನೆ.
ಕಂಟೇನರ್ ಪಲ್ಟಿ ಹೊಡೆದಾಗ ಅಲ್ಲಿ ಯಾವ ಕಾರೂ ಇರಲಿಲ್ಲ"
ಇಲ್ಲಿ ಆಸ್ಪತ್ರೆ ಬೆಡ್ ಮೇಲೆ ಮಲಗಿರೋ ವ್ಯಕ್ತಿಯೇ ಭೀಕರ ದುರಂತಕ್ಕೆ ಕಾರಣ ಆಗಿರೋ ಕಂಟೇನರ್ ಡ್ರೈವರ್. ಅಪಘಾತದಿಂದಾಗಿ ಗಾಯಗೊಂಡಿರೋ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚೇತರಿಸಿಕೊಂಡಿರೋ ಕಂಟೇನರ್ ಡ್ರೈವರ್ ವಿಲಕ್ಷಣ ಕಥೆ ಹೇಳುತ್ತಿದ್ದಾನೆ. ಕಂಟೇನರ್ ಪಲ್ಟಿ ಹೊಡೆದಾಗ ಕಾರೇ ಇರಲಿಲ್ಲ ಅಂತಿದ್ದಾನೆ.
ನನ್ನ ಎದುರಿಗೆ ಇದ್ದ ಕಾರಿನವನು ಬಂದ. ಅರ್ಜೆಂಟ್ ಬ್ರೇಕ್ ಹಾಕಿಬಿಟ್ಟ. ನನ್ನ ಮುಂದಿದ್ದ ಕಾರ್‌ಗೆ ಗುದ್ದಬಾರದು ಅಂದುಕೊಂಡೆ, ಅವನನ್ನು ಸೇಫ್ ಮಾಡಲು ಹೋಗಿ, ಸ್ಟೇರಿಂಗ್ನ ಎಡಗಡೆಗೆ ಎಳೆದುಕೊಂಡೆ. ಬ್ರೇಕ್ ಹಾಕೋದಕ್ಕೆ ನೋಡಿದೆ, ಸಾಧ್ಯವಾಗಲಿಲ್ಲ. ಕಾರ್ ಬಚಾವ್ ಮಾಡೋದಕ್ಕೆ ಹೋಗಿ ಗಾಡಿಯನ್ನ ಡಿವೈಡರ್ ಮೇಲೆ ಹತ್ತಿಸಿಬಿಟ್ಟೆ. ಅತ್ತ ಬಲಗಡೆಯಿಂದಲೂ ಗಾಡಿಗಳು ಬರುತ್ತಿದ್ದವು. ಸ್ಟೇರಿಂಗ್ ಲೆಫ್ಟ್‌ಗೆ ಎಳೆದುಕೊಂಡೆ ಗಾಡಿ ರಸ್ತೆ ಮೇಲೆ ಪಲ್ಟಿ ಹೊಡೀತು. ಕೆಳಗೆ ಯಾವುದೇ ಕಾರ್ ಇರಲಿಲ್ಲ ಎಂದು ಹೇಳಿದ್ದಾನೆ.
ಇದೇ ಕಂಟೇನರ್ ಡ್ರೈವರ್ ಡಾಬಸ್ಪೇಟೆಯಿಂದ ಬೆಂಗಳೂರಿನ ಬೈಪಾಸ್ ಕಡೆ ಬರ್ತಿದ್ದ. ಇದೇ ವೇಳೆಯೇ ಬೆಂಗಳೂರಿನಿಂದ ತುಮಕೂರಿನತ್ತ ಸಾಗುತ್ತಿದ್ದ ಚಂದ್ರಮ್ ಯೋಗಪ್ಪಗೋಳ ಕಾರು ಕಂಟೇನರ್ ಕೆಳಕ್ಕೆ ಸಿಕ್ಕಿ ಅಪ್ಪಚ್ಚಿ ಆಯ್ತು. ಆ ಕ್ಷಣ ನಿಜಕ್ಕೂ ಕಾರೊಳಗಿದ್ದ ಅಷ್ಟೂ ಮಂದಿ ಕ್ಷಣ ಕಾಲ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಮೃತರ ಕಳೇಬರ ಇದೇ ತಣ್ಣನೆಯ ಕ್ರೌರ್ಯದ ಕಥೆ ಹೇಳುತ್ತಿದೆ. ಆದರೇ, ಕಂಟೇನರ್ ಪಲ್ಟಿ ಹೊಡೆದಾಗ ಯಾವ ಕಾರೂ ಇರ್ಲಿಲ್ಲ ಅಂತಿದ್ದಾನೆ. ಸಿಸಿಟಿವಿ ದೃಶ್ಯ ಮಾತ್ರ ಅಸಲಿ ಸಾಕ್ಷಿ ಹೇಳುತ್ತಿದೆ. ಚಂದ್ರಮ್ ಯೋಗಪ್ಪಗೋಳ ಕಾರು ಸಾಧಾರಣ ವೇಗದಲ್ಲಿ ಬರುತ್ತಿತ್ತು. ಆದರೇ, ಕಂಟೇನರ್ ಅತಿಯಾದ ವೇಗವಾಗಿ ಬಂದಿದ್ದರಿಂದಾಗಿಯೇ ಇಂಥಾ ದಾರುಣ ಆಗಿದೆ ಅನ್ನೋದನ್ನ ಪ್ರತ್ಯಕ್ಷದರ್ಶಿ ಹೇಳುತ್ತಿದ್ದಾರೆ.
200ಕ್ಕೂ ಅಧಿಕ ಮಂದಿಗೆ ಅನ್ನದಾತ ಆಗಿದ್ರು ಯೋಗಪ್ಪಗೋಳ!
ಶ್ರೀನಿವಾಸುಲು, ಚಂದ್ರಮ್ ಯೋಗಪ್ಪಗೋಳ ಅವರ ಕಂಪನಿಯ ಮ್ಯಾನೇಜರ್. ಐದಾರು ವರ್ಷಗಳಿಂದ ಜೊತೆಯಲ್ಲೇ ಇದ್ದೋರು. IAST ಸಾಫ್ಟ್ವೇರ್ ಸಲ್ಯೂಷನ್ಸ್ ಕಂಪನಿಯಲ್ಲಿ 200ಕ್ಕೂ ಅಧಿಕ ಮಂದಿ ದುಡಿಯುತ್ತಿದ್ದಾರೆ. ತಮ್ಮ ಮಾಲೀಕನ ಕುಟುಂಬವೇ ಸಾವನ್ನಪ್ಪಿದ ವಿಚಾರ ತಿಳಿದು ಕಣ್ಣೀರಿಡುತ್ತಲೇ ಸ್ಥಳಕ್ಕಾಗಮಿಸಿದ್ದರು. ಇದೇ ವೇಳೆ ಕಂಪನಿ ಮ್ಯಾನೇಜರ್ ಶ್ರೀನಿವಾಸುಲು ಭಾವುಕರಾದರು. ತಮ್ಮ ಮಾಲೀಕ ಎಂಥಾ ಒಳ್ಳೆ ಮನುಷ್ಯ ಅನ್ನೋದನ್ನ ಹೇಳುತ್ತಲೇ ಬಿಕ್ಕಳಿಸಿದರು.
ಇದನ್ನೂ ಓದಿ:ನೆಲಮಂಗಲ ಭೀಕರ ಅಪಘಾತ.. ಚಂದ್ರಮ್ ಯೋಗಪ್ಪಗೋಳ ಕುಟುಂಬದ ದುರಂತ ಹೇಗಾಯ್ತು?
ಅಸ್ವಸ್ಥಗೊಂಡಿದ್ದ ಅಪ್ಪ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ರು. ಅವರ ಆರೋಗ್ಯ ವಿಚಾರಿಸಿ, ಮಕ್ಕಳ ಕ್ರಿಸ್ಮಸ್ ರಜೆಯನ್ನು ಮುಗಿಸಿಕೊಂಡು ಬರಲು ಹೋದ ಕುಟುಂಬವನ್ನ ಹೆದ್ದಾರಿಯ ಯಮ ಬಲಿ ಪಡೆದಿದ್ದಾನೆ. ಕಂಟೇನರ್ ಪಲ್ಟಿ ಹೊಡೆದು ಬಿದ್ದಾಗ ಯಾವುದೇ ಶಬ್ದ, ಚೀರಾಟವೇ ಕೇಳಸಲಿಲ್ಲ. 6 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಅನ್ನೋದನ್ನ ಪ್ರತ್ಯಕ್ಷದರ್ಶಿ ಹೇಳ್ತಿದ್ದಾರೆ. ಅಲ್ಲಿನ ಒಂದೊಂದು ದೃಶ್ಯವೂ ಸಹ ಸಾಯೋಕೆ ಮುನ್ನ ನರಕ ಅನುಭವಿಸಿದ್ದಾರೆ ಅನ್ನೋ ಸಾಕ್ಷಿ ನುಡಿಯುತ್ತಿವೆ. ಕಂದಮ್ಮಗಳ ಕಳೇಬರ ಈ ಕ್ಷಣಕ್ಕೂ ಕಣ್ಣಾಲಿಗಳಲ್ಲಿ ನೀರು ಜಿನುಗುವಂತೆ ಮಾಡ್ತಿದೆ.
ಇದನ್ನೂ ಓದಿ:ಕರಾಳ ಶನಿವಾರಕ್ಕೆ 13 ಮಂದಿ ಬಲಿ.. ರಾಜ್ಯದ ವಿವಿಧೆಡೆ ಇಂದು ಭೀಕರ ಅಪಘಾತ; ಎಲ್ಲೆಲ್ಲಿ? ಏನಾಯ್ತು?
ಬಾಳಿ ಬದುಕಬೇಕಿದ್ದ ಕಂದಮ್ಮಗಳು ನಿರ್ದಯವಾಗಿ ಕಣ್ಮುಚ್ಚಿವೆ. ಇನ್ನು, ನೂರಾರು ಮಂದಿಗೆ ಅನ್ನ ಹಾಕ್ತಿದ್ದ ಕುಟುಂಬ ದಾರುಣ ಅಂತ್ಯ ಕಂಡಿದೆ. ವೋಲ್ವಾದಂಥಾ ವೋಲ್ವಾ ಕಾರಲ್ಲಿದ್ರೂ ಕಂಟೇನರ್ ಬಿದ್ದ ಕಾರಣಕ್ಕೆ ಇಡೀ ಕುಟುಂಬ ಸಾವನ್ನಪ್ಪಿದೆ. ಒಂದು ವೇಳೆ ಎದುರಿಗೆ ಅದೇ ಕಂಟೇನರ್ ಬಂದು ಗುದ್ದಿದ್ದರೂ ಬದುಕುಳಿಯೋ ಸಾಧ್ಯತೆ ಇರುತ್ತಿತ್ತು. ಆದರೇ, ವಿಧಿ ಹೂಡುವ ಆಟವೇ ಬೇರೆಯದ್ದಾಗಿರುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ