/newsfirstlive-kannada/media/post_attachments/wp-content/uploads/2024/07/WhatsApp-Image-2024-06-11-at-17.35.21.webp)
ನವದೆಹಲಿ: ಆರ್​ಎಸ್​ಎಸ್.. ದೇಶದ ಹಿಂದುಗಳ ಸ್ವಾಭಿಮಾನವನ್ನ ಜಾಗೃತಗೊಳಿಸುವ ಒಂದು ಉದ್ದೇಶದಿಂದಾಗಿಯೇ ಸ್ಥಾಪನೆಯಾದ ಒಂದು ಸಂಘಟನೆ. 1925 ಅಕ್ಟೋಬರ್​ 27 ರಂದು ಕೇಶವ ಬಲಿರಾಮ್ ಹೆಡ್ಗೆವಾರ್ ಅವರಿಂದ ಅಧಿಕೃತವಾಗಿ ಸ್ಥಾಪನೆಗೊಂಡಿತು. ಹಿಂದೂ ಪರಂಪರೆ ಸಂಸ್ಕೃತಿ, ಈ ಧರ್ಮ ನಡೆದು ಬಂದ ದಾರಿ ಭಾರತೀಯರ ಚಿಂತನೆಗಳು ಇವುಗಳ ಜಾಗೃತಿ ಮೂಡಿಸುವ ಸಲುವಾಗಿ ಸೃಷ್ಟಿಯಾದ ಈ ಒಂದು ಸಂಘಟನೆ ಈಗ ದೇಶದ ಉದ್ದಗಲಕ್ಕೂ ತನ್ನನ್ನು ತಾನು ಚಾಚಿಕೊಂಡಿದೆ.
ಇದನ್ನೂ ಓದಿ: ಮೋದಿ ಬಳಿಕ ಯೋಗಿಗೆ ಶುರುವಾಯ್ತು ಅಗ್ನಿ ಪರೀಕ್ಷೆ.. ಯುಪಿ ಕೇಸರಿ ಪಡೆಯಲ್ಲಿ ಭುಗಿಲೆದ್ದ ಬಂಡಾಯ; ಆಗಿದ್ದೇನು?
ಸೇವೆ ಎನ್ನುವ ಧ್ಯೇಯವಾಕ್ಯದೊಂದಿಗೆ ಶುರುವಾದ ಈ ಸಂಘಟನೆಗೆ ತನ್ನದು ಅಂತ ಒಂದು ರಾಜಕೀಯ ಪಕ್ಷವನ್ನು ಹುಟ್ಟುಹಾಕಿಕೊಳ್ಳುವ ಧ್ಯೇಯ ಆರಂಭದಲ್ಲಿ ಇರಲಿಲ್ಲ. ಆದ್ರೆ ಯಾವಾಗ ಮಹಾತ್ಮ ಗಾಂಧೀಜಿಯವರ ಹತ್ಯೆಯ ನಂತರ ಆರ್​​ಎಸ್​ಎಸ್ ಬ್ಯಾನ್ ಆಯ್ತೋ ಆಗ ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಎರಡನೇ ಸರಸಂಘಚಾಲಕರಾಗಿದ್ದ ಗೋಳವಲ್ಕರ ಅವರಿಗೆ ತಮ್ಮ ವಿಚಾರಧಾರೆಯನ್ನು ಜನರಿಗೆ ತಿಳಿಸುವ ಒಂದು ರಾಜಕೀಯ ಪಕ್ಷ ಬೇಕು ಎಂದು ಮನವರಿಕೆಯಾಯಿತು. ಆಗ 1951ರಲ್ಲಿ ಆರಂಭವಾಗಿದ್ದೇ ಜನಸಂಘ ಅನ್ನೊ ಕಟ್ಟರ್ ಹಿಂದುತ್ವಾದಿಗಳ ರಾಜಕೀಯ ಪಕ್ಷ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ದೊಡ್ಡ ಬದಲಾವಣೆ ಆಗಲಿದೆಯೇ..? ಬಿಜೆಪಿ ಜೊತೆ RSS ಸಭೆ..
ಹಿಂದು ಮಹಾಸಭಾ ತೊರೆದು ಆಚೆ ಬಂದಿದ್ದ ಶ್ಯಾಮಪ್ರಸಾದ್ ಮುಖರ್ಜಿಯವ ನೇತೃತ್ವದಲ್ಲಿ ಈ ಒಂದು ಪಕ್ಷ ಅಸ್ತಿತ್ವಕ್ಕೆ ಬಂತು. ನಿರಂತರ ಹೋರಾಟ ಫಲವಾಗಿ 20 ವರ್ಷಗಳ ಬಳಿಕ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಮಟ್ಟಕ್ಕೆ ಬಂದು ತಲುಪಿತು. ಜನಸಂಘವೇ ಮುಂದೆ ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿಯಾಗಿ ಬದಲಾಯ್ತು. ಮುಂದೆ ನಡೆದಿದ್ದು ಇತಿಹಾಸ.
ವಿಶ್ವದಲ್ಲಿಯೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದ ಪಕ್ಷವಾಗಿ ಇಂದು ಭಾರತೀಯ ಜನತಾ ಪಾರ್ಟಿ ಗುರುತಿಸಿಕೊಂಡಿದೆ. ಇದರ ಪ್ರತಿ ಹೆಜ್ಜೆಯ ಹಿಂದೆ ಆರ್​ಎಸ್​ಎಸ್​ ನೆರಳು ಇದೆ. 1951ರಿಂದ ಇಂದಿನವರೆಗೂ ಬಿಜೆಪಿ ಹಾಗೂ ಆರ್​ಎಸ್​ಎಸ್​ ಒಂದೇ ನಾಣ್ಯದ ಎರಡು ಮುಖಗಳಂತೆ ಜೊತೆಯಾಗಿ ಸಾಗುತ್ತಾ ಬಂದಿವೆ. ಆದ್ರೆ ಇತ್ತೀಚೆಗೆ ಈ ಸಣ್ಣದೊಂದು ಬಿರುಕು ಇಬ್ಬರ ನಡುವೆ ಮೂಡುತ್ತಿದೆ. ಆರ್​ಎಸ್​ಎಸ್​​ ಹಾಗೂ ಬಿಜೆಪಿ ನಡುವೆ ಶೀತಲ ಸಮರವೊಂದು ಶುರುವಾಗಿ ಅದು ಬಹಿರಂಗವಾಗಿಯೇ ವಾಗ್ಯುದ್ಧಗಳಿಗೆ ವೇದಿಕೆಯಾಗಿ ಪರಿಣಮಿಸುತ್ತಿದೆ. ಹಾಗಿದ್ದರೆ ಆರ್​ಎಸ್​ಎಸ್ ಹಾಗೂ ಬಿಜೆಪಿ ನಡುವೆ ಶುರುವಾಗಿರುವ ಆ ಸಮರ ಯಾವುದು? ಅದಕ್ಕೆ ಮೂಲ ಕಾರಣವೇನು? ಇಷ್ಟು ವರ್ಷದಲ್ಲಿ ಇಂತಹದೊಂದು ಭಿನ್ನಾಭಿಪ್ರಾಯ ಇದೇ ಮೊದಲ ಬಾರಿಗೆ ಬಂದಿದ್ದಾ ಅನ್ನೋದನ್ನ ಎಳೆ ಎಳೆಯಾಗಿ ನೋಡುತ್ತಾ ಹೋಗೋಣ.
ಪರೋಕ್ಷವಾಗಿ ಮೋದಿಯೆಡೆಗೆ ಬಾಣ ಎಸೆದ್ರಾ ಮೋಹನ್ ಭಾಗವತ್?
/newsfirstlive-kannada/media/post_attachments/wp-content/uploads/2024/07/Mohan-Bhagwat-On-Modi.jpg)
ಇತ್ತೀಚೆಗೆ ಆರ್​ಎಸ್​ಎಸ್​ನ ಸರಸಂಘ ಚಾಲಕರಾದ ಮೋಹನ್ ಭಾಗವತ್ ಅವರ ಒಂದು ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ವಿಪಕ್ಷಗಳಂತೂ ಇದು ಪ್ರಧಾನಿ ನರೇಂದ್ರ ಮೋದಿಯವರಿಗೆ ಗುರಿಯಿಟ್ಟು ಹೊಡೆದ ಬಾಣ ಅಂತಲೇ ಬಿಂಬಿಸುತ್ತಿವೆ. ಅಸಲಿಗೆ ಮೋಹನ್ ಭಾಗವತ್ ಹೇಳಿದ್ದೇನು ಅಂತ ನೋಡ್ತಾ ಹೋಗುವುದಾದ್ರೆ, ಮನುಷ್ಯನ ಆಂತರಿಕ ಹಾಗೂ ಬಾಹ್ಯ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಾ ಮೋಹನ್ ಭಾಗವತ್ ಅವರು, ವಿಕಾಸಕ್ಕೆ ಅಭಿವೃದ್ಧಿಗೆ ಕೊನೆ ಎಂಬುದು ಇಲ್ಲ. ಕೆಲವು ಅಭಿವೃದ್ಧಿಯ ಹತ್ತಿರ ಮನುಷ್ಯ ಹೋದ ಬಳಿಕ ಮನುಷ್ಯ ತನ್ನನ್ನು ತಾನು ಅತೀತ ಮಾನವ ಅಂದ್ರೆ ಸೂಪರ್ ಮ್ಯಾನ್ ಎಂದು ಪರಿಗಣಿಸಿಕೊಳ್ಳಲು ಆರಂಭಿಸುತ್ತಾನೆ. ಆದ್ರೆ ಅಭಿವೃದ್ಧಿ ಸೀಮೆ ಎಂಬುದು ಅಲ್ಲಿಗೆ ಮುಗಿಯಲಿಲ್ಲ ಎನ್ನುವ ಅರಿವು ಆದ ಮೇಲೆ, ವಿಕಾಸದ ಕೊನೆಯ ಹಂತ ದೇವರು, ಆ ದೇವರೇ ನಾನು ಎಂಬ ಭ್ರಮೆಯಲ್ಲಿ ಆತ ಮುಳುಗಲು ಆರಂಭಿಸುತ್ತಾನೆ. ನನ್ನಲ್ಲೊಂದು ಅತೀತ ಶಕ್ತಿ ಅಲೌಕಿಕ ಶಕ್ತಿ ಇದೆ ಎಂಬುವ ಭಾವ ಅವನಲ್ಲಿ ಆವರಿಸಿಕೊಳ್ಳುತ್ತದೆ. ಆದ್ರೆ ದೇವರು ಎಂಬುವುದು ನಿರಾಕಾರ ಬ್ರಹ್ಮ, ಅವನ ಅಸಲಿಯ ರೂಪವೇ ಅದು. ಹೀಗಾಗಿ ವಿಕಾಸಕ್ಕೆ ಕೊನೆ ಎಂಬುದು ಇಲ್ಲ. ವಿಕಾಸದ ಒಂದು ಸೀಮೆಯನ್ನು ತಲುಪಿದ ಬಳಿಕ ನಾನೇ ಸೂಪರ್ ಮ್ಯಾನ್ ಎಂಬ ಭಾವಬಿಡಬೇಕು. ಅಭಿವೃದ್ಧಿ ಅನ್ನೋದಕ್ಕೆ ಕೊನೆಯಂಬುದು ಇಲ್ಲ ಎಂದು ತಮ್ಮ ಭಾಷಣದಲ್ಲಿ ಭಾಗವತ್ ಅವರು ಹೇಳಿದ್ದಾರೆ. ಇದು ಈಗ ರಾಜಕಾರಣದಲ್ಲಿ ಹಲ್​ಚಲ್ ಎಬ್ಬಿಸಿದೆ. ಇದು ಮೋದಿಯವರಿಗೆ ಮೋಹನ್ ಭಾಗವತ್ ಪರೋಕ್ಷವಾಗಿ ಹೂಡಿದ ಬಾಣ ಎಂದಲೇ ಅವರ ಮಾತುಗಳು ಬಿಂಬಿತವಾಗುತ್ತಿವೆ. ಹಾಗಿದ್ರೆ ಈ ವಾದ ವಿವಾದಗಳು ಶುರುವಾಗಿದ್ದು ಎಲ್ಲಿಂದ. ಬಿಜೆಪಿ ಹಾಗೂ ಆರ್​ಎಸ್​ಎಸ್​ ಗೋಡೆಯ ನಡುವೆ ಸೀಳುಗಳು ಸೃಷ್ಟಿಯಾಗಲು ಆರಂಭವಾಗಿದ್ದು ಏಕೆ.? ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಆ ಹೇಳಿಕೆ ಇಂಥಹದೊಂದು ಸ್ಥಿತ್ಯಂತರಕ್ಕೆ ಕಾರಣವಾಯ್ತಾ.?
'ಸಂಘದ ಬೆಂಬಲ ಈಗ ಬೇಕಿಲ್ಲ': ನಡ್ಡಾ ಹೇಳಿಕೆ ಅಸಲಿ ಮರ್ಮವೇನು..?
/newsfirstlive-kannada/media/post_attachments/wp-content/uploads/2023/07/JPNADDA.jpg)
ಲೋಕಸಭಾ ಚುನಾವಣೆ ಆರಂಭಕ್ಕೂ ಮುನ್ನ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಒಂದು ಹೇಳಿಕೆ ಈ ಉಭಯ ನಾಯಕರ ನಡುವೆ ಒಂದು ಕಂದಕ ಸೃಷ್ಟಿಸಿತು. ಮೊದಲು ನಮಗೆ ಅಷ್ಟೊಂದು ಬಲ ಇರಲಿಲ್ಲ, ಹೀಗಾಗಿ ಸಂಘದ ಸಹಾಯದ ಅನಿವಾರ್ಯವಿತ್ತು, ಈಗ ನಾವು ಸಾಕಷ್ಟು ಬಲಿಷ್ಠರಾಗಿದ್ದೇವೆ ಸ್ವತಂತ್ರವಾಗಿ ಗೆಲ್ಲುವ ಬಲ ಬಂದಿದೆ ಹೀಗಾಗಿ ನಮಗೆ ಈಗ ಆರ್​​ಎಸ್​ಎಸ್​ನ ಅವಶ್ಯಕತೆ ಇಲ್ಲ ಎಂದು ಹೇಳಿಕೆ ನೀಡಿದ್ದರು. ಇದು ಕೂಡ ಸಾಕಷ್ಟು ಪರ ವಿರೋಧದ ವಾದಕ್ಕೆ ಪುಷ್ಠಿಕೊಟ್ಟಿತ್ತು. ಈ ಒಂದು ಹೇಳಿಕೆ ಆರ್​ಎಸ್​ಎಸ್ ಹಾಗೂ ಬಿಜೆಪಿ ನಡುವೆ ಒಂದು ಬಹುದೊಡ್ಡ ಕಂದಕಕ್ಕೆ ಮೊದಲ ಕಾರಣವಾಗಿತ್ತು.
ಬಿಜೆಪಿ ಹಾಗೂ ಆರ್​ಎಸ್​ಎಸ್​ನಲ್ಲಿ ಎರಡು ಪರಿವಾರಗಳ ಸೃಷ್ಟಿ
/newsfirstlive-kannada/media/post_attachments/wp-content/uploads/2024/07/88_1718113070.jpg)
2014ರಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿಯಿತು. ಮೋದಿ ಪ್ರಧಾನಿಯಾದ ಬಳಿಕ ಬಿಜೆಪಿಗೆ ಸಾಕಷ್ಟು ಬಲ ಬಂತು. ಬಿಜೆಪಿಗೆ ನೆಲೆಯೇ ಇಲ್ಲದಂತ ತ್ರಿಪುರಾದಂತ ರಾಜ್ಯಗಳಲ್ಲಿಯೂ ಕೂಡ ಬಿಜೆಪಿ ಸ್ವತಂತ್ರವಾಗಿ ಅಧಿಕಾರ ಹಿಡಿಯುವ ಮಟ್ಟಿಗೆ ಹೋಯ್ತು. ಇದೇ ಸಂದರ್ಭದಲ್ಲಿ ಅಂದ್ರೆ 2014ರಲ್ಲಿ ಬಿಜೆಪಿ ಗೆದ್ದ ಬಳಿಕ ವಿಶ್ವ ಹಿಂದು ಸಮ್ಮೇಳನದಲ್ಲಿ ವಿಶ್ವ ಹಿಂದೂ ಪರಿಷದ್ ಮುಖಂಡ ಅಶೋಕ್ ಸಿಂಘಲ್, ಪೃಥ್ವಿರಾಜ್ ಚೌಹಾನ್ ಕೈಯಿಂದ ತಪ್ಪಿ ಹೋಗಿದ್ದ ದೆಹಲಿ ಗದ್ದುಗೆ 800 ವರ್ಷಗಳ ಬಳಿಕ ಸ್ವಾಭಿಮಾನಿ ಹಿಂದೂ ಒಬ್ಬರ ಕೈಗೆ ಸಿಕ್ಕಿದೆ ಎಂದು ಹೇಳಿದ್ದರು. ಅದು ಕೂಡ ಇದೇ ಮೋಹನ್ ಭಾಗವತ್ ಅವರ ಸಮ್ಮುಖದಲ್ಲಿ. 2014ರ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಮೋದಿಯದ್ದೇ ಒಂದು ನೆರೇಷನ್ ಸೃಷ್ಟಿಯಾಯ್ತಾ ಹೋಯ್ತು.. ಬಿಜೆಪಿ ಹಾಗೂ ಆರ್​ಎಸ್​ಎಸ್​ನಲ್ಲಿ ಎರಡು ಪರಿವಾರಗಳು ಅಸ್ತಿತ್ವಕ್ಕೆ ಬಂದ್ವು. ಒಂದು ಸಂಘ ಪರಿವಾರ ಆದ್ರೆ ಮತ್ತೊಂದು ಮೋದಿ ಪರಿವಾರವೆಂಬ ಹೊಸದೊಂದು ಶಬ್ದ ಅಸ್ತಿತ್ವಕ್ಕೆ ಬಂತು. ಇವೆಲ್ಲ ಬೆಳವಣಿಗೆಗಳು ಕೂಡ ಸಂಘ ಹಾಗೂ ಬಿಜೆಪಿ ನಡುವೆ ಇರುವ ಕಂದಕವನ್ನು ಇನ್ನಷ್ಟು ಆಳಕ್ಕೆ, ಅಗಲಕ್ಕೆ ವಿಸ್ತರಿಸಿದವು.ಹಾಗಿದ್ರೆ ಇದೇ ಮೊದಲ ಬಾರಿಗೆ ಈ ಬಗೆಯ ಬಿರುಕುಗಳು ಇಬ್ಬರ ನಡುವೆ ಹುಟ್ಟಿವೆಯಾ ಅಂತ ನೋಡಿದ್ರೆ ಇಲ್ಲ, ಅಟಲ್​ ಜೀ ಅವರ ಕಾಲದಲ್ಲಿಯೂ ಕೂಡ ಇಂಥಹದೊಂದು ಶೀತಲ ಸಮರ ಜಾರಿಯಲ್ಲಿಯೇ ಇತ್ತು. 1984ರ ಸೋಲಿನ ಬಳಿಕ ಆರ್​ಎಸ್​ಎಸ್ ಅಡ್ವಾಣಿಯರಿಗೆ ಹೆಚ್ಚು ಮಣೆ ಹಾಕಲು ಶುರು ಮಾಡ್ತು. 99ರಲ್ಲಿ ಜಸ್ವಂತ್ ಸಿಂಹರನ್ನು ಹಣಕಾಸು ಸಚಿವರನ್ನಾಗಿ ಮಾಡುವ ವಿಚಾರದಲ್ಲಿ ಅಂದಿನ ಆರ್​ಎಸ್​ಎಸ್ ಸರಸಂಘ ಚಾಲಕರಾಗಿದ್ದ ಸುದರ್ಶನ್ ಕೊಟ್ಟು ವಾಜಪೇಯಿ ಅವರ ವಿರುದ್ಧ ನೇರವಾಗಿ ವಾಗ್ದಾಳಿ ಮಾಡಿದ್ದರು. 2017ರಲ್ಲಿ ಯೋಗಿ ಸಿಎಂ ಆಗುವ ವಿಚಾರದಲ್ಲಿಯೂ ಕೂಡ ಅಮಿತ್ ಶಾ ಹಾಗೂ ಆರ್​ಎಸ್​ಎಸ್ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ್ವು. ಗಡ್ಕರಿ ಮೋದಿ ನಡುವಿನ ಶೀತಲ ಸಮರ ಆರ್​ಎಸ್​ಎಸ್ ಹಾಗೂ ಬಿಜೆಪಿ ನಡುವೆ ಮತ್ತಷ್ಟು ಬಿರುಕುಗಳನ್ನು ಮೂಡಿಸಿತ್ತು.
ಆರ್​ಎಸ್​ಎಸ್ ಹಾಗೂ ಬಿಜೆಪಿ ನಡುವಿನ ಸಮರಗಳು ಶ್ಯಾಮಪ್ರಸಾದ್ ಮುಖರ್ಜಿ ಕಾಲದಿಂದಲೂ ಕೂಡ ಜಾರಿಯಲ್ಲಿವೆ. ಆದ್ರೆ ಅವು ಯಾವವೂ ಈ ಮಟ್ಟದ ನೇರ ಸಮರಕ್ಕೆ ಸಾಕ್ಷಿಯಾಗಿದ್ದಿಲ್ಲ. ನೀವು ನಮಗೆ ಬೇಕಿಲ್ಲ, ನೀವು ಸೂಪರ್ ಮ್ಯಾನ್ ಅಲ್ಲ ಅನ್ನುವ ವಾಗ್ಯುದ್ಧಗಳಿಗೆ ಕಾರಣವಾಗಿರಲಿಲ್ಲ. ಒಂದು ಮೂಲಗಳ ಪ್ರಕಾರ ಸಂಘ ಪರಿವಾರ ಹಾಗೂ ಮೋದಿ ಪರಿವಾರ ಎಂಬ ಎರಡು ಕವಲಿನ ಹಾದಿಯೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಶಾಪವಾಗಿ ಪರಿಣಮಿಸಿದ್ದು ಎಂದು ಕೂಡ ಹೇಳಲಾಗುತ್ತಿದೆ. ಪರಂಪರಾನುಗತವಾಗಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತಿದ್ದ, ರಾಷ್ಟ್ರ ರಾಜಕಾರಣದ ರಣರಂಗದಲ್ಲಿ ಬಿಜೆಪಿ ಯೋಧನ ಸ್ಥಾನದಲ್ಲಿದ್ರೆ ಆರ್​​ಎಸ್​ಎಸ್​ ಸಾರಥಿ ಸ್ಥಾನದಲ್ಲಿ ನಿಲ್ಲುತ್ತಿದ್ದ ಸಮಯವೂ ಇನ್ಮುಂದೆ ಕಳೆದು ಹೋಗಲಿದೆಯಾ.? ಆರ್​ಎಸ್​ಎಸ್ ಹಾಗೂ ಬಿಜೆಪಿ ನಡುವೆ ಸೃಷ್ಟಿಯಾಗಿರುವ ಈ ಕಂದರ, ಅಂತರ ಕೇವಲ ತಾತ್ಕಾಲಿಕವಾ ಅನ್ನೋದು ಕಾಲವೇ ನಿರ್ಧರಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us