/newsfirstlive-kannada/media/post_attachments/wp-content/uploads/2025/04/TOWNSHIP.jpg)
ಬೆಂಗಳೂರು ಈಗ ಭಾರತದ ಸಿಲಿಕಾನ್ ವ್ಯಾಲಿ. ಬೆಂಗಳೂರು ಭಾರತ ಸೇರಿದಂತೆ ಎಲ್ಲೆಡೆಯಿಂದ ಜನರನ್ನು ತನ್ನತ್ತ ಸೆಳೆಯುತ್ತಿದೆ. ಇದರಿಂದ ಬೆಂಗಳೂರಿನಲ್ಲಿ ಜನಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹೆಚ್ಚಾದ ಜನಸಂಖ್ಯೆಗೆ ತಕ್ಕಂತೆ ಮೂಲಸೌಕರ್ಯ, ಕುಡಿಯುವ ನೀರು ಪೂರೈಕೆಯೇ ದೊಡ್ಡ ಸವಾಲಾಗಿದೆ. ಬೆಂಗಳೂರು ಮಹಾನಗರದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಈ ಒತ್ತಡವನ್ನು ತಗ್ಗಿಸಲು ಬೆಂಗಳೂರಿನ ಸುತ್ತ ಸ್ಯಾಟಲೈಟ್ ಟೌನ್ಶಿಪ್ ನಿರ್ಮಾಣಕ್ಕೆ ಈಗ ರಾಜ್ಯ ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ ಗ್ರೇಟರ್ ಬೆಂಗಳೂರು ಡೆವಲಪ್ಮೆಂಟ್ ಅಥಾರಿಟಿ ಅಡಿ ಬಿಡದಿ ಬಳಿ ಟೌನ್ಶಿಪ್ ನಿರ್ಮಿಸಲು ರಾಜ್ಯ ಸರ್ಕಾರದ ಕ್ಯಾಬಿನೆಟ್ನಲ್ಲಿ ಒಪ್ಪಿಗೆ ನೀಡಲಾಗಿದೆ.
ಹಾಗಾದರೇ, ಬಿಡದಿ ಟೌನ್ಶಿಪ್ನಲ್ಲಿ ಏನೇನಿರಲಿದೆ? ಬಿಡದಿಯಲ್ಲಿ ಯಾವ ಭಾಗದಲ್ಲಿ ಟೌನ್ಶಿಪ್ ನಿರ್ಮಾಣ ಮಾಡಲಾಗುತ್ತೆ. ಇದಕ್ಕಾಗಿ ರಾಜ್ಯ ಸರ್ಕಾರ ಏನೇನು ಸಿದ್ಧತೆ ನಡೆಸುತ್ತಿದೆ, ಬಿಡದಿ ಬಳಿಕ ಬೇರೆ ಎಲ್ಲಿ ಟೌನ್ಶಿಪ್ ನಿರ್ಮಿಸುವ ಪ್ಲ್ಯಾನ್ ಇದೆ ಅನ್ನೋದರ ಪೂರ್ಣ ಮಾಹಿತಿ ನೀಡಲಾಗಿದೆ.
ಬೆಂಗಳೂರಿನ ಮೇಲೆ ಹೆಚ್ಚಾಗುತ್ತಿರುವ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಬಿಡದಿ ಟೌನ್ಶಿಪ್ ಅನ್ನು ನಿರ್ಮಿಸಲಾಗುತ್ತಿದೆ. ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಪಕ್ಕದಲ್ಲಿ 8,032 ಎಕರೆ ಜಾಗದಲ್ಲಿ ಹೊಸ ಟೌನ್ಶಿಪ್ ತಲೆ ಎತ್ತಲಿದೆ. ಬಿಡದಿ ಬಳಿಯ 10 ಗ್ರಾಮಗಳಲ್ಲಿ ಹೊಸ ಟೌನ್ಶಿಪ್ ನಿರ್ಮಾಣಕ್ಕಾಗಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಭೈರಮಂಗಲ, ಬನ್ನಿಗೆರೆ, ಹೊಸೂರು, ಕೆಜಿ ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಲಾಳುಸಂದ್ರ, ಕೆಂಪಯ್ಯನಪಾಳ್ಯ, ಕಂಚುಗಾರನಹಳ್ಳಿ ಕಾವಲ್, ಮಂದಲಹಳ್ಳಿ, ವಡೇರಹಳ್ಳಿ ಗ್ರಾಮಗಳಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಈ ಟೌನ್ಶಿಪ್ ಅನ್ನು ಜನರ ವರ್ಕ್, ಲೀವ್ ಅಂಡ್ ಪ್ಲೇ ಕಲ್ಪನೆಯನ್ನು ಇಟ್ಟುಕೊಂಡು ನಿರ್ಮಿಸಲಾಗುತ್ತಿದೆ.
ಅಂದರೇ, ಟೌನ್ಶಿಪ್ನಲ್ಲಿ ವಾಸಿಸುವವರ ವರ್ಕ್ ಮತ್ತು ಲೈಫ್ ಅನ್ನ ಬ್ಯಾಲೆನ್ಸ್ ಮಾಡುವಂತೆ ಟೌನ್ಶಿಪ್ ಅನ್ನು ನಿರ್ಮಿಸಲಾಗುತ್ತೆ. ಹೊಸ ಟೌನ್ಶಿಪ್ನಲ್ಲಿ ಇಂಟಿಗ್ರೇಟೆಡ್ ಇಂಡಸ್ಟ್ರೀಗಳು ಇರುತ್ತಾವೆ. ಪ್ರೀಮಿಯಂ ರೆಸಿಡೆನ್ಷಿಯಲ್ ಕಾಂಪ್ಲೆಕ್ಸ್ ಗಳನ್ನು ನಿರ್ಮಾಣ ಮಾಡಲಾಗುತ್ತೆ. ದೊಡ್ಡದಾದ ಪಾರ್ಕ್ , ಮನರಂಜನಾ ತಾಣಗಳನ್ನು ನಿರ್ಮಾಣ ಮಾಡಲಾಗುತ್ತೆ. 1,100 ಎಕರೆ ಜಾಗದಲ್ಲಿ ಅಂದರೇ, ಶೇ.15 ರಷ್ಟು ಜಾಗದಲ್ಲಿ ಪಾರ್ಕ್, ಓಪನ್ ಸ್ಪೇಸ್ ಇರಲಿದೆ. ಗ್ರೇಟರ್ ಬೆಂಗಳೂರು ಡೆವಲಪ್ ಮೆಂಟ್ ಅಥಾರಿಟಿಗೆ ಹೊಸ ಟೌನ್ ಷಿಪ್ ನಲ್ಲಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವ ಆಲೋಚನೆಯೂ ಇದೆ. ಸರ್ವೀಸ್ ಇಂಡಸ್ಟ್ರಿಗಳು ಹೊಸ ಟೌನ್ ಷಿಪ್ ನಲ್ಲಿ ನಿರ್ಮಾಣವಾಗಲಿವೆ. ಸದ್ಯ ಇರುವ ಭೈರಮಂಗಲ ಕೆರೆಯ ನೀರು ಅನ್ನು ಶುದ್ಧೀಕರಣ ಮಾಡಲಾಗುತ್ತೆ. ಬಿಡಬ್ಲ್ಯುಎಸ್ಎಸ್‌ಬಿಯಿಂದ ಕಾವೇರಿ ನೀರು ಅನ್ನು ಟೌನ್ಶಿಪ್ಗೆ ಪೂರೈಸಲಾಗುತ್ತೆ.
ಸ್ಟಾಂಡರ್ಡ್ಗೆ ತಕ್ಕಂತೆ ಟೌನ್ಶಿಪ್ ವಿನ್ಯಾಸ
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಟೌನ್ಶಿಪ್ ನಿರ್ಮಾಣದ ಮೇಲುಸ್ತುವಾರಿ ಮಾಡಲಿದೆ. ಜೊತೆಗೆ ಬೇರೆ ಬೇರೆ ಇಲಾಖೆಗಳ ಜೊತೆಗೆ ಕೋ ಅರ್ಡಿನೇಷನ್ ಮಾಡಲಿದೆ. ಜಾಗತಿಕ ಮಟ್ಟದ ಸಂಸ್ಥೆಯು ಅಂತಾರಾಷ್ಟ್ರೀಯ ಸ್ಟಾಂಡರ್ಡ್ಗೆ ತಕ್ಕಂತೆ ಟೌನ್ಶಿಪ್ ವಿನ್ಯಾಸ ಮಾಡಲಿದೆ. ವರ್ಲ್ಡ್ ಬ್ಯಾಂಕ್ನಿಂದ ಈ ಟೌನ್ಶಿಪ್ಗೆ ಕುಡಿಯುವ ನೀರು ಪೂರೈಕೆಗೆ ಹಣಕಾಸಿನ ನೆರವು ಪಡೆಯಲಾಗುತ್ತೆ. ಈ ಹೊಸ ಟೌನ್ಶಿಪ್ಗೆ ಉತ್ತಮ ರಸ್ತೆ, ರೈಲು ಸಂಪರ್ಕ ನೀಡಲಾಗುತ್ತೆ. ಸುಸ್ಥಿರ ಮೂಲಸೌಕರ್ಯ, ಉದ್ಯೋಗವಕಾಶ ನೀಡುವ ಪ್ಲ್ಯಾನ್ ಮಾಡಲಾಗಿದೆ.
ಈಗಾಗಲೇ ರಾಜ್ಯ ಸರ್ಕಾರ ಹೊಸ ಟೌನ್ಶಿಪ್ಗೆ ನಿರ್ಮಾಣಕ್ಕಾಗಿ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ. ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದೆ. ಭೂಮಿ ಮಾಲೀಕರಿಗೆ ಭೂ ಸ್ವಾಧೀನದ ವಿರುದ್ಧ ತಮ್ಮ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಉದ್ದೇಶಿತ ಟೌನ್ಶಿಪ್ ಹತ್ತು ಗ್ರಾಮಗಳಲ್ಲಿ ಜನರು ಭೂಮಿ ಮಾರದಂತೆ, ಬೇರೆಯವರಿಗೆ ವರ್ಗಾವಣೆ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ. ಭೂಮಿ ಕಳೆದುಕೊಳ್ಳುವ ರೈತರಿಗೆ ಮುಂದಿನ 1 ವರ್ಷದಲ್ಲಿ ಹಣಕಾಸು ಪರಿಹಾರ ನೀಡಲಾಗುತ್ತೆ. ಮುಂದಿನ 3 ವರ್ಷದಲ್ಲಿ ಅಭಿವೃದ್ಧಿ ಹೊಂದಿದ ಭೂಮಿಯನ್ನು ಪರಿಹಾರದ ರೂಪದಲ್ಲಿ ನೀಡುವ ಪ್ಲ್ಯಾನ್ ಇದೆ. ಗ್ರೇಟರ್ ಬೆಂಗಳೂರು ಡೆವಲಪ್ ಮೆಂಟ್ ಅಥಾರಿಟಿ ಈಗಾಗಲೇ 4 ಸಾವಿರ ಪ್ರಾಪರ್ಟಿಗಳನ್ನು ಡಿಜಿಟೈಜ್ ಮಾಡಿದೆ.
ಇದನ್ನೂ ಓದಿ: RCB ಭರ್ಜರಿ ಗೆಲುವು.. ಐಪಿಎಲ್ನಲ್ಲಿ ಐತಿಹಾಸಿಕ ರೆಕಾರ್ಡ್ ಬ್ರೇಕ್ ಮಾಡಿದ ಕಿಂಗ್ ಕೊಹ್ಲಿ!
2005ರಿಂದಲೂ ಟೌನ್ಶಿಪ್ ನಿರ್ಮಿಸುವ ಉದ್ದೇಶ
ಬಿಡದಿ ಬಳಿ ಟೌನ್ಶಿಪ್ ನಿರ್ಮಿಸುವ ಉದ್ದೇಶ ರಾಜ್ಯ ಸರ್ಕಾರಕ್ಕೆ 2005ರಿಂದಲೂ ಇದೆ. ಆದರೇ ಈಗ 20 ವರ್ಷದ ವಿಳಂಬದ ಬಳಿಕ ಕಾರ್ಯರೂಪಕ್ಕೆ ತರಲು ರಾಜ್ಯ ಸರ್ಕಾರ ಹೊರಟಿದೆ. ಬಿಡದಿ ಟೌನ್ಶಿಪ್ ನಿರ್ಮಾಣವಾದರೇ, ಬೆಂಗಳೂರಿನ ಮೊದಲ ಸ್ಯಾಟಲೈಟ್ ಟೌನ್ಶಿಪ್ ಆಗಲಿದೆ. ಟೌನ್ಶಿಪ್ ನಿರ್ಮಾಣಕ್ಕಾಗಿ ಕನ್ಸಲ್ಟೆಂಟ್ ಅನ್ನು ಕೂಡ ರಾಜ್ಯ ಸರ್ಕಾರ ನೇಮಿಸಿಕೊಳ್ಳುತ್ತಿದೆ. ಹೊಸ ಟೌನ್ಶಿಪ್ ಟೆಕ್ನಾಲಜಿ ದೃಷ್ಟಿಯಿಂದ ಅಡ್ವಾನ್ಸ್ ಆಗಿರುತ್ತೆ. ಸುಸ್ಥಿರ ಸಿಟಿ ಸೆಂಟರ್ ಆಗಿ ಅಭಿವೃದ್ದಿ ಮಾಡಲಾಗುತ್ತೆ. ಹೊಸ ಟೌನ್ಶಿಪ್ 37 ಕಿಮೀ ಎಕನಾಮಿಕ್ ಕಾರಿಡಾರ್ ಹೊಂದಿರಲಿದ್ದು, ನೈಸ್ ರಸ್ತೆಗೆ ಕನೆಕ್ಟ್ ಆಗಲಿದೆ. ಜೊತೆಗೆ ಎನ್‌ಎಚ್ 204, ಎನ್‌ಎಚ್ 275, ಸ್ಯಾಟಲೈಟ್ ಟೌನ್ ರಿಂಗ್ ರೋಡ್ಗೆ ಕನೆಕ್ಟ್ ಆಗಲಿದೆ. ಈ ಕಾರಿಡಾರ್ನಲ್ಲಿ ಟ್ರಾನ್ಸ್ ಪೋರ್ಟ್ ನೆಟ್ ವರ್ಕ್, ಪ್ರೊಡಕ್ಷನ್ ಸೆಂಟರ್, ಡಿಮ್ಯಾಂಡ್ ಸೆಂಟರ್, ಟಿಪಿಕಲ್ ಕ್ರಾಸ್ ಸೆಕ್ಷನ್ , ಜಂಕ್ಷನ್ಗಳನ್ನು ಹೊಂದಿರಲಿದೆ. ಬಿಡದಿ ಟೌನ್ಶಿಪ್ ನಿರ್ಮಾಣಕ್ಕೆ 13 ಸಾವಿರ ಕೋಟಿ ರೂ ವೆಚ್ಚವಾಗುವ ಅಂದಾಜು ಇದೆ. ಹುಡ್ಕೋ ಕೂಡ ಹೊಸ ಟೌನ್ಶಿಪ್ ನಿರ್ಮಾಣಕ್ಕೆ ಹಣಕಾಸಿನ ನೆರವು ನೀಡುವ ಭರವಸೆ ನೀಡಿದೆ.
ಮುಂದೆ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಬಳಿಯೂ ಹೊಸ ಟೌನ್ಶಿಪ್ ನಿರ್ಮಿಸುವ ಪ್ರಸ್ತಾವ ರಾಜ್ಯ ಸರ್ಕಾರದ ಮುಂದೆ ಇದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ