/newsfirstlive-kannada/media/post_attachments/wp-content/uploads/2025/04/BNG-AIRHOSTER.jpg)
ಬೆಂಗಳೂರು: ಖಾಸಗಿ ಏರ್ಲೈನ್ಸ್ ಸಿಬ್ಬಂದಿ ಬಷೀರ್ ವುಲ್ಲ ಅವರ ಪತ್ನಿ ಅಸ್ಮಾ (29) ಸಾವು ಪ್ರಕರಣ ಭಾರೀ ಸಂಚಲನ ಮೂಡಿಸಿದೆ. ಬಷೀರ್ ಬೇರೆ ಯುವತಿಯ ಜೊತೆ ಅನೈತಿಕ ಸಂಬಂಧ ಇಟ್ಕೊಂಡಿದ್ದ. ಅದಕ್ಕೆ ನೊಂದು ಅಸ್ಮಾ ಜೀವ ತೆಗೆದುಕೊಂಡಿದ್ದಾಳೆ ಅಂತಾ ಆಕೆಯ ಪೋಷಕರು ಆರೋಪಿಸಿದ್ದಾರೆ. ಹೆಬ್ಬಾಳದ ಕನಕನಗರದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಬೆಂಗಳೂರಲ್ಲಿ ಆಘಾತಕಾರಿ ಘಟನೆ.. ಸುಂದರ ಬದುಕಿಗೆ ವಿದಾಯ ಹೇಳಿದ ಮಹಿಳೆ
ಏನಿದು ಪ್ರಕರಣ..?
ಕಳೆದ ವರ್ಷ 2023ರ ಜುಲೈನಲ್ಲಿ ವಿಜಯನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಾಹರ್ ಅಸ್ಮಾ ಹಾಗೂ ಬಷೀರ್ ವುಲ್ಲಾ ವಿವಾಹ ನಡೆದಿತ್ತು. ಕುಟುಂಬದ ಹಿರಿಯರು ನಿಶ್ವಯಿಸಿದ ಮದುವೆ ಇದಾಗಿತ್ತು. ಪತಿ ಬಷೀರ್ ವುಲ್ಲ ಸುಲ್ತಾನ್ ಪಾಳ್ಯದ ನಿವಾಸಿಯಾಗಿದ್ದ. ಬಾಹರ್ ಅಸ್ಮಾ ಬಾಪೂಜಿನಗರ ಶ್ಯಾಮಣ್ಣ ಗಾರ್ಡನ್ ನಿವಾಸಿಯಾಗಿದ್ದಳು. ಮೃತ ಬಾಹರ್ ಅಸ್ಮಾ ಎಂ.ಎ ಪದವಿಧರೆ. ಈಕೆಯ ಪತಿ ಬಷೀರ್ ವುಲ್ಲ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಖಾಸಗಿ ಏರ್ಲೈನ್ಸ್ ಸಿಬ್ಬಂದಿಯಾಗಿದ್ದ. ಏರ್ ಲೈನ್ಸ್ನ ಕ್ರೂ ಮೆಂಬರ್ಸ್ಗೆ ಟ್ರೈನಿಂಗ್ ಕೊಡುವ ಕೆಲಸ ಮಾಡ್ತಿದ್ದ. ಈ ಖಾಸಗಿ ಏರ್ಲೈನ್ಸ್ನ ಮಹಿಳಾ ಸಿಬ್ಬಂದಿ ಹಾಗೂ ಗಗನಸಖಿಯರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಅನ್ನೋದು ಮೃತ ಅಸ್ಮಾ ಪೋಷಕರ ಆರೋಪವಾಗಿದೆ.
ಆರೋಪ ಏನು..?
ಅಕ್ರಮ ಸಂಬಂಧ ವಿಚಾರವಾಗಿ ಪತಿ ಮತ್ತು ಪತ್ನಿಯ ಮಧ್ಯೆ ಆಗಾಗ ಗಲಾಟೆ ಆಗುತ್ತಿತ್ತು. ಬಷೀರ್ ವುಲ್ಲ ಮೊಬೈಲ್ನಲ್ಲಿ ಗಗನಸಖಿಯರ ಜೊತೆ ಲವ್ವಿಡವ್ವಿಗೆ ಸಂಬಂಧಿಸಿದ ಸಾಕ್ಷ್ಯಗಳು ಸಿಕ್ಕದ್ದವು. ಇದನ್ನು ನೋಡಿದ ಪತ್ನಿ ಮೊಬೈಲ್ನಲ್ಲಿರುವ ಗಗನಸಖಿಯರ ಬಗ್ಗೆ ಪ್ರಶ್ನೆ ಮಾಡಿದ್ದಾಳೆ. ಆಸ್ಮಾ ಮೇಲೆ ಬಷೀರ್ ಹಲ್ಲೆ ಮಾಡಿದ್ದ. ಇದೇ ವಿಚಾರಕ್ಕೆ ಸಂಬಂಧಿಸಿ ಏಪ್ರಿಲ್ 05 ರಂದು ಇಬ್ಬರ ಮಧ್ಯೆ ಮತ್ತೆ ಗಲಾಟೆ ಆಗಿದೆ. ಅಂದು ಬೆಳಗ್ಗೆ ಆಸ್ಮಾ, ತನ್ನ ಸಹೋದರಿ ಅಮೀನಾಗೆ ಕರೆ ಮಾಡಿದ್ದಳು. ಕರೆ ಮಾಡಿದ ಅಸ್ಮಾ ಪತಿ ಹಲ್ಲೆ ಮಾಡಿರುವ ಬಗ್ಗೆ ತಿಳಿಸಿದ್ದಾಳೆ ಎನ್ನಲಾಗಿದೆ.
ಅಲ್ಲದೇ ಪತಿ ಬಷೀರ್ ಗಗನಸಖಿಯರ ಜೊತೆಗೆ ಮಾಡಿರುವ ವಾಟ್ಸ್ಆ್ಯಪ್ ಚಾಟ್ಗಳನ್ನ ಸಹೋದರಿಗೆ ಕಳಿಸಿದ್ದಳಂತೆ. ಆದರೆ ಅಸ್ಮಾ ತವರು ಮನೆಯವರೆಲ್ಲ ಏಪ್ರಿಲ್ 04ರಂದು ಹಾಸನಕ್ಕೆ ತೆರಳಿದ್ದರು. ಹಾಸನದಿಂದ ಬರ್ತಿದ್ದಂತೆ ಕರೆ ಮಾಡು, ನಾನು ಮನೆಗೆ ಬರ್ತೀನಿ ಎಂದು ಅಸ್ಮಾ ಹೇಳಿದ್ದಳಂತೆ. ಅಪ್ಪ-ಅಮ್ಮನ ಬಳಿ ನನ್ನ ಗಂಡನ ವಿಚಾರವನ್ನ ತಿಳಿಸಬೇಕು ಎಂದಿದ್ದಳಂತೆ. ಸರಿ ಏಪ್ರಿಲ್ 06 ರಂದು ಭಾನುವಾರ ಬೆಂಗಳೂರಿಗೆ ಬರ್ತೀವಿ. ಗಂಡನ ಜೊತೆ ಜಗಳ ಆಡಬೇಡ ಊಟ ಮಾಡಿ ಮಲಗು ಎಂದು ಸಹೋದರಿ ಆಮೀನಾ ಹೇಳಿದ್ದಳಂತೆ.
ಭಾನುವಾರ ಬೆಳಗ್ಗೆ ಮತ್ತೆ ಸಹೋದರಿ ಆಮೀನಾ ಅಸ್ಮಾಗೆ ಕರೆ ಮಾಡಿದ್ದಳು. ಬಷೀರ್ ನನ್ನೊಬ್ಬಳನ್ನೇ ಬಿಟ್ಟು ಹೋಗಿದ್ದಾನೆ. ಮನೆಯಲ್ಲಿ ಯಾರೂ ಇಲ್ಲ. ಕರೆ ಮಾಡಿದ್ರೆ ಸ್ವೀಕರಿಸ್ತಿಲ್ಲ ಅಂತಾ ನೋವು ಹೇಳಿಕೊಂಡಿದ್ದಳಂತೆ. ಭಾನುವಾರ ಮಧ್ಯಾಹ್ನದ ವೇಳೆಗೆ ಆಸ್ಮಾ ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ. ಕೂಡಲೇ ಅಸ್ಮಾ ಕುಟುಂಬಸ್ಥರು ಬಷೀರ್ಗೆ ಕರೆ ಮಾಡಿದ್ದರು. ಆತ ಕರೆ ಸ್ವೀಕರಿಸಿರಲಿಲ್ಲ ಎಂಬ ಆರೋಪವಿದೆ.
ಏಪ್ರಿಲ್ 07ರ ಬೆಳಗ್ಗೆ ಆಸ್ಮಾಳ ತಂದೆ ಜಮೀರ್ ಮನೆ ಬಳಿ ತೆರಳಿ ಅಳಿಯನಿಗೆ ಕರೆ ಮಾಡಿ ಬರುವಂತೆ ಹೇಳಿದ್ದಾರೆ. ಆದರೆ ಬಷೀರ್ ವುಲ್ಲ ನೇರವಾಗಿ ಹೆಬ್ಬಾಳ ಠಾಣೆಗೆ ತೆರಳಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದಾನೆ. ಕೂಡಲೇ ಪೊಲೀಸರು ಮನೆಗೆ ಹೋಗಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಆಸ್ಮಾ ಮೃತದೇಹ ಪತ್ತೆಯಾಗಿದೆ. ಬಷೀರ್ ವುಲ್ಲಾ ಕೊಲೆ ಮಾಡಿ ನೇಣು ಹಾಕಿದ್ದಾನೆಂದು ಆಸ್ಮಾ ಕುಟುಂಬಸ್ಥರು ಆರೋಪಿಸಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಷೀರ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ