ಲಕ್ಷಾಂತರ ಪತ್ರಕರ್ತರಿಗೆ ಅಕ್ಷರಾಭ್ಯಾಸ ಮಾಡಿಸಿದ ದಾರ್ಶನಿಕ; ರಾಮೋಜಿ ರಾವ್ ಅವರಿಗೆ ನುಡಿ ನಮನ

author-image
admin
Updated On
ಲಕ್ಷಾಂತರ ಪತ್ರಕರ್ತರಿಗೆ ಅಕ್ಷರಾಭ್ಯಾಸ ಮಾಡಿಸಿದ ದಾರ್ಶನಿಕ; ರಾಮೋಜಿ ರಾವ್ ಅವರಿಗೆ ನುಡಿ ನಮನ
Advertisment
  • ಈನಾಡು ಮುಖ್ಯಸ್ಥ ರಾಮೋಜಿ ರಾವ್​ ಅವರ ಸಮಯಪ್ರಜ್ಞೆ ಹೇಗಿತ್ತು ಗೊತ್ತಾ?
  • ಪೂರ್ವಗ್ರಹವಿಲ್ಲದೆ ಪ್ರತಿಭೆ ಗುರುತಿಸುವ ಇವರ ಗುಣ ಅಮೋಘ
  • ದಕ್ಷಿಣ ಭಾರತದತ್ತ ಎಲ್ಲರೂ ತಿರುಗಿ ನೋಡವಂತೆ ಮಾಡಿದ ಧೀಮಂತ

ಬೆಂಗಳೂರು: ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡೋರು ನಾವು. ಪ್ರತಿದಿನ ಸಾಮಾನ್ಯ ಸಂಗತಿಗಳ ಜೊತೆ ಸೆನ್ಸೇಷನಲ್​ ಅನ್ನೋ ಸುದ್ದಿಗೆ ಹುಡುಕಾಟ ನಡೆಸೋ ಮನಸು ನಮ್ಮದು. ಆದರೆ, ಜೂನ್ 8ರಂದು ಸೂರ್ಯ ಉದಯಿಸಿದ ಕೂಡಲೇ ಕೇಳಿ ಬಂದಿದ್ದು ಶಾಕಿಂಗ್​ ಸುದ್ದಿ. ಮನಸಿಗೆ ನೋವು ಕೊಡೋ ಸುದ್ದಿ. ಈ ಕಾಲದ ದಾರ್ಶನಿಕ ಮಾಧ್ಯಮ ಲೋಕದ ದಿಗ್ಗಜ ರಾಮೋಜಿರಾವ್​ ಹೃದಯ ಸಂಬಂಧಿ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದರು.

ಇದನ್ನೂ ಓದಿ: ಉಪ್ಪಿನಕಾಯಿ ಮಾರಾಟದಿಂದ ಸಾಮ್ರಾಜ್ಯ ಕಟ್ಟಿದ ಧೀಮಂತ.. ರಾಮೋಜಿ ರಾವ್ ಬದುಕಿನ ರೋಚಕ ಕಥೆ ಇಲ್ಲಿದೆ

publive-image

ಸುದೀರ್ಘ 25 ವರ್ಷಗಳಿಂದ ಅವರನ್ನ ನೋಡಿದ ನನಗೆ ಈ ಸುದ್ದಿ ಜೀರ್ಣಿಸಿಕೊಳ್ಳಲು ಸ್ವಲ್ಪ ಸಮಯಬೇಕಾಯ್ತು. ನನ್ನ ವೃತ್ತಿ ಜೀವನಕ್ಕೆ ಅಡಿಪಾಯ ಹಾಕಿದ ಈಟಿವಿ ಸಂಸ್ಥೆಯ ಸಂಸ್ಥಾಪಕರೂ ಆಗಿದ್ದ ರಾಮೋಜಿರಾವ್​ ಅವರು ಇನ್ನಿಲ್ಲ ಅನ್ನೋ ಸುದ್ದಿ ಕೇಳಿ ಮನಸಿಗೆ ನೋವಾಯ್ತು. ನಾನು ಮೊದಲಿಗೆ ಅವರನ್ನು ನೋಡಿದ್ದು, 1999ರಲ್ಲಿ ಎಂಎಸ್​. ಕಮ್ಯುನಿಕೇಷನ್​ನಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದ ನಾನು ಯಾವುದಾದರೂ ಒಂದು ಎಲೆಕ್ಟ್ರಾನಿಕ್​ ಮಾಧ್ಯಮದಲ್ಲಿ ಇಂಟರ್ನ್​ಶಿಪ್​ ಮಾಡಲೇಬೇಕಾಗಿತ್ತು. ಕರ್ನಾಟಕದಲ್ಲಿ ಅಂತಹ ವ್ಯವಸ್ಥೆ ಆಗ ಇರದ ಕಾರಣ, ನಾನು ಈಟಿವಿ ತೆಲುಗು ವಾಹಿನಿಯಲ್ಲಿ ಇಂಟರ್ನ್​ಶಿಪ್​ ಮಾಡುವ ಅವಕಾಶ ಸಿಕ್ಕಿತ್ತು. ಹೈದರಾಬಾದ್​ನ ಸೋಮಾಜಿಗುಡ ಕಚೇರಿಯಲ್ಲಿ ನಾನು ಕೆಲಸ ಮಾಡ್ತಿದ್ದೆ. ಆದರೆ, ರಾಮೋಜಿರಾವ್​ ಅವರನ್ನ ನೋಡೋ ಅವಕಾಶವೂ ಸಿಕ್ಕಿರಲಿಲ್ಲ.

publive-image

ಅದೃಷ್ಟ ಅನ್ನುವಂತೆ ಈನಾಡು ಪತ್ರಿಕೆ ಆರಂಭವಾಗಿ 25 ವರ್ಷ ಆಗಿತ್ತು. ಆದಿನ ಕಚೇರಿಯಲ್ಲಿ ಸಂಭ್ರಮ, ಅವರು ರಾಮೋಜಿರಾವ್​ ಅವರು ಕಚೇರಿಗೆ ಬರ್ತಾರೆ ಅಂದ ಕೂಡಲೇ ಅವನ್ನು ನೋಡೋ ಕುತೂಹಲ. ವಿಶೇಷ ಏನಂದ್ರೆ, ಅವರು ಈನಾಡು ಕಚೇರಿಯಲ್ಲಿದ್ದ ಪ್ರತಿಯೊಬ್ಬರನ್ನು ವೈಯಕ್ತಿಕವಾಗಿ ಕೈ ಕುಲುಕಿ ಮಾತನಾಡಿದ್ರು. ಯಾವ ವ್ಯಕ್ತಿಯನ್ನ ನೋಡಿದ್ರೆ ಸಾಕು ಅಂದುಕೊಂಡಿದ್ನೋ ಅದೇ ವ್ಯಕ್ತಿ ಕೈ ಕುಲುಕಿ ನೀನ್ಯಾರು ಅಂತಾ ಮಾತನಾಡಿಸಿದಾಗ ಆದ ರೋಮಾಂಚನ ಇದೆಯಲ್ಲಾ ಅದನ್ನ ಇವತ್ತಿಗೂ ಮರೆಯೋಕೆ ಆಗ್ತಿಲ್ಲ. ಅದೇ ನನ್ನ ಮೊದಲ ಭೇಟಿ. ಅವರೊಂದಿಗಿನ ಮೊದಲ ಅನುಭವ. ಮುಂದೆ 2000ನೇ ಇಸವಿಯಲ್ಲಿ ಅದೇ ಈಟಿವಿ ಸಂಸ್ಥೆಯೊಂದಿಗೆ ನನ್ನ ವೃತ್ತಿಜೀವನ ಆರಂಭವಾಗಿದ್ದು, ರಾಮೋಜಿರಾವ್​ ಎಂಬ ವ್ಯಕ್ತಿ ಅನ್ನೋದಕ್ಕಿಂತ ಒಂದು ಶಕ್ತಿಯನ್ನ ತುಂಬಾ ಹತ್ತಿರದಿಂದ ತಿಳಿದುಕೊಳ್ಳೋ ಅವಕಾಶ ನನಗೆ ಸಿಕ್ಕಿತ್ತು.

publive-image

2000ನೇ ಇಸವಿಯಲ್ಲಿ ಎಲೆಕ್ಟ್ರಾನಿಕ್​ ಮಾಧ್ಯಮದಲ್ಲಿ ಕೆಲಸ ಮಾಡಬೇಕು ಅಂದುಕೊಂಡವರಿಗೆ ಇದ್ದ ಆಯ್ಕೆ ಒಂದೇ ಅದು ಈಟಿವಿ. ನಾವೆಲ್ಲಾ ಕಾಲೇಜ್​ನಲ್ಲಿ ಥಿಯರಿ ಓದಿದವರು. ಪ್ರಾಕ್ಟಿಕಲ್​ ಎಕ್ಸ್‌ಪೀರಿಯೆನ್ಸ್​ ಅಂತಾ ಸಿಕ್ಕಿದ್ದೇ ಈಟಿವಿಯಲ್ಲಿ. ಆಗಿನ ಕಾಲಕ್ಕೆ ಎಷ್ಟು ಉದಾರವಾದ ವ್ಯವಸ್ಥೆ ಅಲ್ಲಿತ್ತು ಅಂದ್ರೆ, ಪ್ರೊಡಕ್ಷನ್​ ವಿಭಾದವರು ಸ್ಕ್ರಿಪ್ಟ್​ ಮಾಡೋದನ್ನ ಕಲಿಯಬಹುದಿತ್ತು. ಎಡಿಟೋರಿಯಲ್​ ವಿಭಾಗದವರು ಮತ್ಯಾವುದೋ ವಿಭಾಗದ ಕೆಲಸ ಕಲಿಯೋಕೆ ಅವಕಾಶವಿತ್ತು. ಅಂತಹ ಒಂದು ವ್ಯವಸ್ಥೆಯನ್ನ ರಾಮೋಜಿರಾವ್​ ಅವರ ಕಲ್ಪಿಸಿಕೊಟ್ಟಿದ್ರು. ಹೀಗೆ ಕಲಿಯೋ ಸಂದರ್ಭಗಳಲ್ಲಿ ಕೆಲವು ಎಕ್ವಿಪ್​​ಗಳನ್ನ ನಾವು ಹಾಳು ಮಾಡಿದ್ದೂ ಇದೆ. ಆದರೂ ಅದಕ್ಕಾಗಿ ಯಾವುದೇ ಪನಿಶ್​ಮೆಂಟ್​ ಆಗಲಿಲ್ಲ. ಬದಲಾಗಿ ಕಲಿಯೋಕೆ ಪ್ರೋತ್ಸಾಹ ಸಿಗ್ತಿತ್ತು. ಇನ್​​ಫ್ರಾಸ್ಟ್ರಕ್ಚರ್​ ವಿಚಾರದಲ್ಲಿ ಕೊರತೆ ಅನ್ನೋ ಪದವೇ ಯಾರ ಬಾಯಲ್ಲೂ ಕೇಳಿ ಬರ್ತಿರಲಿಲ್ಲ. ಅವತ್ತಿಗೆ 24ಗಂಟೆಯ ಸುದ್ದಿವಾಹಿನಿಗಳೂ ಇರಲಿಲ್ಲ. ಇವತ್ತು ಇರುವಂತಹ ಕಾಂಪಿಟಿಷನ್​ ಕೂಡ ಇರ್ಲಿಲ್ಲ. ಆದರೂ, ಅಗತ್ಯಕ್ಕಿಂತ ಸ್ವಲ್ಪ ಹೆಚ್ಚು ಅನ್ನುವಷ್ಟು ಸೌಲಭ್ಯಗಳು ನಮಗೆ ಇದ್ವು. ಕಲಿಸಿಕೊಡೋ ಉದಾರ ಮನಸು ಅವರಲ್ಲಿತ್ತು. ಕಲಿಯಬೇಕು ಅನ್ನೋ ಹಂಬಲ ನಮ್ಮಲ್ಲಿದ್ರೆ, ಇದಕ್ಕಿಂತ ಇನ್ನೇನು ಬೇಕು.

publive-image

ಈಟಿವಿಯಲ್ಲಿ ಕೆಲಸ ಮಾಡಿದ ಯಾವುದೇ ಉದ್ಯೋಗಿಯಾದ್ರೂ ಅವರಿಗೆ ಮೊದಲು ತಿಳಿದುಬರೋ ವಿಚಾರವೇ ರಾಮೋಜಿರಾವ್​ ಅವರ ಸಮಯಪ್ರಜ್ಞೆ. ಅವರು ಭಾಗವಹಿಸೋ ಯಾವುದೇ ಮೀಟಿಂಗ್​ ಆದ್ರೂ ಅಲ್ಲಿದ್ದ ಸೀನಿಯರ್ಸ್​ ನಮಗೆ ಹೇಳ್ತಾ ಇದ್ದಿದ್ದು, ರಾಮೋಜಿರಾವ್​ ಅವರು ಬರೋ ಸಮಯ ನೋಡಿ ನಮ್ಮ ವಾಚ್​ ಟೈಮ್​ ಸೆಟ್​​ ಮಾಡಿಕೊಳ್ಳಬಹುದು ಅನ್ನೋದು. ಅದು ನನ್ನ ಅನುಭವಕ್ಕೂ ಬರೋಕೆ ತುಂಬಾ ಸಮಯ ಏನು ಬೇಕಾಗಿರಲಿಲ್ಲ. ಉದಾಹರಣೆಗೆ ಹತ್ತು ಗಂಟೆಗೆ ಮೀಟಿಂಗ್​ ಅಂದ್ರೆ ಪಕ್ಕಾ 10ಗಂಟೆಗೇ ಮೀಟಿಂಗ್​ ಆರಂಭವಾಗ್ತಿತ್ತು. ಯಾವುದೇ ಮೀಟಿಂಗ್​ ಒಂದು ನಿಮಿಷ ಕೂಡ ತಡ ಆಗಿರೋದನ್ನ ನಾನು ನೋಡಿಯೂ ಇಲ್ಲಾ. ಕೇಳಿಯೂ ಇಲ್ಲ.

ಇದನ್ನೂ ಓದಿ:ರಾಮೋಜಿ ರಾವ್‌ಗೆ ನಿಧನಕ್ಕೆ ಸಂತಾಪ; ರಜನಿಕಾಂತ್, ಚಿರಂಜೀವಿ, ಪವನ್ ಕಲ್ಯಾಣ್ ಭಾವುಕ; ಹೇಳಿದ್ದೇನು?

publive-image

ನಾನು ಈಟಿವಿ ನ್ಯೂಸ್​ನ ಪ್ರೊಡಕ್ಷನ್​ ವಿಭಾಗದಲ್ಲಿ ಕೆಲಸ ಮಾಡ್ತಿದ್ದೆ. ಅವತ್ತಿಗೆ ನನಗೆ ಕೇವಲ ಎರಡು ವರ್ಷಗಳ ಅನುಭವ. ಅದೇ ಸಮಯದಲ್ಲಿ ಈಟಿವಿ ಗುಜರಾತ್​ ಮತ್ತು ಈಟಿವಿ ಮಧ್ಯಪ್ರದೇಶ ಚಾನೆಲ್​​ಗಳನ್ನ ಆರಂಭಿಸೋಕೆ ಮ್ಯಾನೇಜ್​ಮೆಂಟ್​ ನಿರ್ಧರಿಸಿತ್ತು. ನನಗೆ ಇದೇ ಸಂದರ್ಭದಲ್ಲಿ ಅದ್ಭುತವಾದ ಅವಕಾಶ ಒಂದನ್ನ ಸಂಸ್ಥೆ ಒದಗಿಸಿ ಕೊಡ್ತು. ಪತ್ರಕರ್ತರಿಗೆ ಟೆಲಿಷನ್ ಪ್ರೊಡಕ್ಷನ್, ಸ್ಟೋರಿ ಪ್ರೆಸೆಂಟೇಷನ್ ಮತ್ತು ಟೆಲಿವಿಷನ್‌ ವಾಹಿನಿಗೆ ಸುದ್ದಿವರದಿಗಾರಿಕೆ ಕುರಿತು ತರಬೇತಿ ನೀಡುವ ಗುರುತರ ಜವಾಬ್ದಾರಿಯನ್ನ ನನ್ನ ಹೆಗಲಿಗೆ ವಹಿಸಿದ್ರು, ಇಲ್ಲಿ ಎಷ್ಟು ವರ್ಷ ಎಕ್ಸ್​ಪೀರಿಯೆನ್ಸ್ ಆಗಿದೆ ಅನ್ನೋದಕ್ಕಿಂತ ಈ ಕೆಲಸ ಯಾರು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲರು ಅನ್ನೋದು ಮುಖ್ಯವಾಗಿತ್ತು. ಅಂದ್ರೆ, ಯಾವುದೇ ಪೂರ್ವಾಗ್ರಹಗಳಿಲ್ಲದೇ, ಟ್ಯಾಲೆಂಟ್​​ಗಳನ್ನ ಗುರುತಿಸುವ ವ್ಯವಸ್ಥೆ ಕೂಡ ಅಲ್ಲಿ ಇತ್ತು. ಇದು ನನ್ನ ಸೌಭಾಗ್ಯ ಈಟಿವಿ ಸಂಸ್ಥೆಯಲ್ಲಿ ನಾವು ಊಹೆ ಮಾಡಿಕೊಳ್ಳೋಕೂ ಆಗದ ವ್ಯವಸ್ಥೆ ಜಾರಿಯಲ್ಲಿತ್ತು.

publive-image

ನಾನು ಕೆಲಸ ಮಾಡ್ತಿದ್ದ ಅವಧಿಯಲ್ಲಿ ಆಗಲೇ ಕರ್ನಾಟಕ, ಆಂಧ್ರ, ರಾಜಸ್ತಾನ, ಗುಜರಾತ್​​, ಮಧ್ಯಪ್ರದೇಶ, ಪಶ್ಚಿಬಂಗಾಳ, ಒಡಿಶಾ ಸೇರಿಂತೆ ಉರ್ದು ಹೀಗೆ ಇಡೀ ದೇಶದಲ್ಲಿ ಈಟಿವಿಯ 11 ಚಾನೆಲ್​​ಗಳು ಕಾರ್ಯನಿರ್ವಹಿಸುತ್ತಿದ್ದವು. ಪ್ರತಿ ಮೂರು ತಿಂಗಳಿಗೆ ಒಮ್ಮ ಪ್ರತಿ ಚಾನಲ್​​ನ ರಿಪೋರ್ಟರ್​​, ಎಡಿಟೋರಿಯಲ್​ ಸಿಬ್ಬಂದಿ, ಪ್ರೊಡಕ್ಷನ್​ ಸಿಬ್ಬಂದಿ ಹೀಗೆ ಬೇರೆ ಬೇರೆ ವಿಭಾಗದ ಉದ್ಯೋಗಿಗಳನ್ನ ಭೇಟಿ ಮಾಡೋದು ಸಂಪ್ರದಾಯವಾಗಿತ್ತು. ಪ್ರತಿ ಮೂರು ತಿಂಗಳಿಗೊಮ್ಮೆ ರೊಟೇಷನ್​ ಆಧಾರದಲ್ಲಿ ಎಲ್ಲ ಉದ್ಯೋಗಿಗಳನ್ನು ಅವರು ಭೇಟಿ ಮಾಡ್ತಿದ್ರು. ಇದೇ ರೀತಿ ಈಟಿವಿ ಸಮೂಹ ಸಂಸ್ಥೆಯ ಬೇರೆ ಬೇರೆ ಉದ್ಯೋಗಿಗಳನ್ನೂ ಅವರು ಭೇಟಿ ಮಾಡ್ತಿದ್ರು. ಇವತ್ತಿಗೂ ನನ್ನನ್ನ ಕಾಡೋ ಪ್ರಶ್ನೆ ಅದೇ. ಒಬ್ಬ ವ್ಯಕ್ತಿ ಅಷ್ಟೊಂದು ಜನರನ್ನ ಭೇಟಿ ಮಾಡಿ ಮಾತಾಡೋಕೆ ಹೇಗೆ ಸಾಧ್ಯ. ಸಮಯ ಹೇಗೆ ಮ್ಯಾನೇಜ್ ​​ಮಾಡ್ತಿದ್ರು ಅನ್ನೋದನ್ನ ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ಆದರೆ, ಅವರಿಗೆ ಅದು ಸಾಧ್ಯವಾಗಿತ್ತು. ಮತ್ತೊಂದು ವಿಶೇಷ ಏನಂದ್ರೆ, ಹೀಗೆ ಭೇಟಿ ಮಾಡೋ ಮೊದಲು ನಾವು ಕೆಲಸ ಮಾಡ್ತಿರೋ ವಿಭಾಗದ ಕುಂದು ಕೊರತೆಗಳು, ಅಭಿಪ್ರಾಯಗಳು, ಸಲಹೆಗಳನ್ನು ವರದಿ ರೂಪದಲ್ಲಿ ಸಿದ್ದಪಡಿಸಿ ಅವರಿಗೆ ತಲುಪಿಸೋ ಕೆಲಸ ಮಾಡ್ತಿದ್ವಿ. ನಿಗದಿತ ದಿನದಂದು ನಮ್ಮನ್ನ ಅವರು ಭೇಟಿ ಮಾಡ್ತಿದ್ರು. ಆಶ್ಚರ್ಯ ಅಂದ್ರೆ ನಾವು ಕೊಡೋ ಪ್ರತಿಯೊಬ್ಬರ ವರದಿಯನ್ನ ಓದಿ ಅವುಗಳಲ್ಲಿ ತುಂಬಾ ಗಂಭೀರವಾದ ವಿಚಾರಗಳನ್ನ, ಅತ್ಯುತ್ತಮ ಸಲಹೆಗಳನ್ನ, ಉಪಯುಕ್ತವಾಗುವಂತಹ ಅಭಿಪ್ರಾಯಗಳನ್ನ ಅವರು ಮಾರ್ಕ್​ ಮಾಡಿಕೊಂಡು ಬರ್ತಿದ್ರು. ಆ ವಿಚಾರಗಳ ಬಗ್ಗೆ ಮೀಟಿಂಗ್​​ನಲ್ಲಿ ಚರ್ಚೆ ಮಾಡ್ತಿದ್ರು. ಉತ್ತಮವಾಗಿ ಕೆಲಸ ಮಾಡಿರುವಂತ ಉದ್ಯೋಗಿಗಳಿಗೆ ಅಭಿನಂದಿಸ್ತಿದ್ರು. ನಾವು ಪ್ರಸ್ತಾಪ ಮಾಡಿರೋ ಸಮಸ್ಯೆಗಳ ಬಗ್ಗೆ ಕೂಡಲೇ ಸ್ಪಂದಿಸುವಂತೆ ಸಂಬಂಧಪಟ್ಟ ವಿಭಾಗಗಳ ಮುಖ್ಯಸ್ಥರಿಗೆ ಸೂಚನೆ ಕೊಡ್ತಿದ್ರು. ಹೊಸದಾಗಿ ಕೆಲಸಕ್ಕೆ ಸೇರಿದ ಟ್ರೈನಿಯಿಂದ ಹಿಡಿದು ಹಿರಿಯರ ತನಕ ಯಾರೇ ಉತ್ತಮ ಸಲಹೆ ಕೊಟ್ರೂ ಅದನ್ನ ಸ್ವೀಕರಿಸುತ್ತಿದ್ರು. ಜೊತೆಗೆ ಅನುಷ್ಠಾನ ಮಾಡ್ತಿದ್ರು. ಇದು, ಬಹುಶಃ ಭಾರತದ ಮಾಧ್ಯಮಗಳಲ್ಲೇ ಮೋಸ್ಟ್​ ಡೆಮಾಕ್ರೆಟಿಕ್​ ಸೆಟಪ್​ ಅಂದ್ರೆ ಆಶ್ಚರ್ಯವಿಲ್ಲ. ನಾವು ಭೇಟಿ ಮಾಡೋದೆ ಕಷ್ಟ ಅಂದುಕೊಂಡಿರೋ ವ್ಯಕ್ತಿ, ಅತ್ಯಂತ ಸಂಯಮದಿಂದ ನಮ್ಮ ಮಾತುಗಳನ್ನ ಆಲಿಸ್ತಿದ್ರು, ಅದಕ್ಕೆ ಸ್ಪಂದಿಸುತ್ತಿದ್ರು ಅನ್ನೋದೇ ಜೀವನಪೂರ್ತಿ ಮರೆಯಲಾರದ ಅನುಭವ. ಇದು ಆ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದ ಪ್ರತಿಯೊಬ್ಬರಿಗೂ ಸಹಜವಾಗಿಯೇ ರಾಮೋಜಿರಾವ್​ ಅವರ ಮೇಲಿನ ಗೌರವ ಹೆಚ್ಚಾಗುವಂತೆ ಮಾಡಿತ್ತು.

publive-image

ಎಲ್ಲಾ ಭಾಷೆಗಳಿಗೆ ಸಮಾನ ಗೌರವ ಕೊಡೋದನ್ನ ಅವರು ರೂಢಿಸಿಕೊಂಡಿದ್ರು, ಕನ್ನಡವೂ ಸೇರಿದಂತೆ ಯಾವುದೇ ಭಾಷೆಯಲ್ಲಿ ಹೊಸ ಚಾನೆಲ್​ ಆರಂಭವಾದಾಗ, ಮೊದಲ ಮಾತುಗಳನ್ನ ಅದೇ ಭಾಷೆಯಲ್ಲಿ ಹೇಳ್ತಿದ್ರು. ಇದರಿಂದಾಗಿ ಪ್ರತಿರಾಜ್ಯದವರಿಗೆ ಇದು ನಮ್ಮ ಚಾನೆಲ್​ ಅನ್ನೋ ಭಾವನೆ ಮೂಡಿಸ್ತಿತ್ತು. ಅಷ್ಟೇ ಅಲ್ಲಾ ಕರ್ನಾಟಕದಲ್ಲೂ ಕರಾವಳಿ ಕನ್ನಡ, ಉತ್ತರ ಕರ್ನಾಟಕ, ಗಡಿಪ್ರದೇಶಗಳ ಕನ್ನಡ ಬೇರೆ ಬೇರೆ ಇರೋದು ಗೊತ್ತೇ ಇದೆ. ಸುದ್ದಿಗೆ ಸಂಬಂಧಿಸಿದಂತೆ ಜನರ ಪ್ರತಿಕ್ರಿಯೆ ತೆಗೆದುಕೊಳ್ಳುವಾಗ ಆಯಾ ಭಾಗದ ಭಾಷೆಯಲ್ಲಿ ಜನರ ಪ್ರತಿಕ್ರಿಯೆ ಪಡೆದುಕೊಳ್ಳಬೇಕು ಅಂತಾ ಅನೇಕ ಬಾರಿ ಸೂಚನೆ ಕೊಟ್ಟಿದ್ದಿದೆ. ಇದು ಅವರಲ್ಲಿರುವ ದೂರದೃಷ್ಟಿಗೆ ಸಾಕ್ಷಿಯಾಗಿತ್ತು.

ರಾಮೋಜಿರಾವ್​ ಯಾಕೆ ದಾರ್ಶನಿಕ ಅಂತೀವಿ ಅವರಿಗೆ ದೂರದೃಷ್ಟಿ ಎಷ್ಟರಮಟ್ಟಿಗೆ ಇತ್ತು ಅನ್ನೋದಕ್ಕೆ ಮತ್ತೊಂದು ಉದಾಹರಣೆ, ಅವರು ದೇಶದ ವಿವಿಧ ಭಾಷೆಗಳಲ್ಲಿ ಆರಂಭಿಸಿದ್ದ ಚಾನೆಲ್​​ಗಳ ನ್ಯೂಸ್‌ ರೂಂ ಮತ್ತು ಸ್ಟುಡಿಯೋಗಳು ರಾಮೋಜಿ ಫಿಲ್ಮ್​ ಸಿಟಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದವು. ಇದು ನಿಜವಾದ ಅರ್ಥದಲ್ಲಿ ಮಿನಿ ಭಾರತವೇ ಆಗಿತ್ತು. ಎಲ್ಲ ಭಾಷೆಯನ್ನ ಮಾತನಾಡುವ ಜನರು ಒಂದೇ ಜಾಗದಲ್ಲಿದ್ರು ಅನ್ನೋದೇ ಆಶ್ಚರ್ಯಪಡುವಂತಹ ಸಂಗತಿ. ಒಂದೇ ಫ್ಲೋರ್​ನಲ್ಲಿ ಹಲವು ಭಾಷೆಗಳ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದರಿಂದ ಬೇರೆ ಬೇರೆ ರಾಜ್ಯದಲ್ಲಿ ಏನಾಗ್ತಿದೆ ಅನ್ನೋ ಮಾಹಿತಿ ನಮಗೆ ಕುಳಿತ ಜಾಗದಲ್ಲಿಯೇ ಸಿಗ್ತಿತ್ತು. ಕನ್ನಡದ ಯಾವುದೋ ಒಂದು ಪ್ರಮುಖ ಬೆಳವಣಿಗೆ ಇತರೆ ರಾಜ್ಯದ ಸಿಬ್ಬಂದಿಗೆ ತಕ್ಷಣ ಸಿಗ್ತಿತ್ತು. ಅದೇ ರೀತಿ ಪಶ್ಚಿಮಬಂಗಾಳ, ಗುಜರಾತ್​, ಅಂಧ್ರಪ್ರದೇಶದ ಸುದ್ದಿಗಳು ನಮಗೂ ಅಷ್ಟೇ ವೇಗವಾಗಿ ಸಿಗುತ್ತಿತ್ತು. ಇದರಿಂದಾಗಿ ಒಂದು ಭಾಷೆಯ ಚಾನೆಲ್​ನವರು ಮತ್ತೊಂದು ಭಾಷೆಯ ಚಾನಲ್​ನವರ ಜೊತೆ ವ್ಯವಹರಿಸ್ತಾ ಇದ್ರು. ಇದರಿಂದಾಗಿ ಹಲವು ಭಾಷೆಯ ಸಿಬ್ಬಂದಿ ಜೊತೆಗೆ ನಮಗೆ ಸೌಹಾರ್ದತೆ ಇತ್ತು. ನನಗೆ ಈಗಲೂ ಚೆನ್ನಾಗಿ ನೆನಪಿದೆ ಕನ್ನಡದಲ್ಲಿ ಕೆಲಸ ಮಾಡ್ತಿದ್ದ ನನ್ನ ಎಷ್ಟೋ ಸಹೋದ್ಯೋಗಿಗಳು, ಬೆಂಗಾಲಿ ಭಾಷೆ ಕಲಿತಿದ್ರು, ಗುಜರಾತಿ ಭಾಷೆ ಕಲಿತಿದ್ರು, ತೆಲುಗು ಕಲಿತಿದ್ರು. ಉಳಿದ ಭಾಷೆಯವರಿಗೂ ಅಂತಾದ್ದೇ ಅವಕಾಶ ಸಿಕ್ಕಿತ್ತು. ಅವರ ಹಬ್ಬ ಹರಿದಿನಗಳಿಗೆ ನಾವು ಶುಭಾಶಯ ಕೋರುತ್ತಿದ್ದೆವು. ನಮ್ಮ ಹಬ್ಬ ಹರಿದಿನಗಳಲ್ಲಿ ಅವರು ಶುಭಾಶಯ ಕೋರುತ್ತಿದ್ದರು. ಅಲ್ಲಿ ನಮಗೆ ನಿಜವಾದ ಸಾಂಸ್ಕೃತಿಕ ವಿನಿಮಯ ಆಗ್ತಿತ್ತು. ಅಷ್ಟೇ ಅಲ್ಲಾ ಊಟ ತಿಂಡಿಯ ವಿಚಾರಗಳಲ್ಲೂ ನಮಗೆ ಆ ವೈವಿಧ್ಯದ ಪರಿಚಯವಾಗ್ತಿತ್ತು. ದೇಶ ಸುತ್ತಬೇಕು ಕೋಶ ಓದಬೇಕು ಅನ್ನೋ ಒಂದು ಮಾತಿದೆ. ಆದರೆ, ಹೈದರಾಬಾದ್​ನ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಕೆಲಸ ಮಾಡಿದ್ರೆ ಸಾಕು, ದೇಶವನ್ನೂ ಸುತ್ತಬೇಕಾಗಿಲ್ಲ, ಕೋಶವನ್ನೂ ಓದಬೇಕಾಗಿಲ್ಲ ಅಂತಾ ನಾವೆಲ್ಲಾ ತಮಾಷೆಯಾಗಿ ಮಾತನಾಡಿಕೊಂಡಿದ್ದೇವೆ.

publive-image

ರಾಮೋಜಿರಾವ್​ ಉದ್ಯೋಗಿಗಳ ವಿಚಾರದಲ್ಲಿ, ಅವರ ಪ್ರತಿಯೊಂದು ವಿಚಾರಗಳಲ್ಲೂ ಎಷ್ಟು ಕಾಳಜಿವಹಿಸ್ತಿದ್ರು ಅನ್ನೋದನ್ನ ನಾನು ಹೇಳಲೇಬೇಕು. ನಾವೆಲ್ಲಾ ಕೆಲಸಕ್ಕೆಂದು ಹೈದರಾಬಾದ್​ಗೆ​ ಹೋದಾಗ ಅದು ದೂರದ ಪ್ರದೇಶ, ನಮ್ಮವರು ಅನ್ನೋದು ಇಲ್ಲದ ಊರು, ಎಲ್ಲಿ ಹೋಗಬೇಕು ಎಲ್ಲಿ ಉಳಿದುಕೊಳ್ಳಬೇಕು ಅನ್ನೋ ಪ್ರಶ್ನೆ ಇದ್ದೇ ಇರುತ್ತೆ. ವಿಶೇಷ ಏನಂದ್ರೆ ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ಫಿಲ್ಮ್​​ಸಿಟಿಯಲ್ಲಿ ಸುಮಾರು 15 ದಿನಗಳವರೆಗೆ ಉಳಿದುಕೊಳ್ಳೋಕೆ ವ್ಯವಸ್ಥೆ ಇತ್ತು. ಈ ಅವಧಿಯಲ್ಲಿ ನಾವು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗಿತ್ತು. ಇದಲ್ಲದೇ ಫಿಲ್ಮ್​​ಸಿಟಿಯಲ್ಲಿರೋ ಆಫೀಸ್​ಗೆ ಹೋಗೋಕೆ ಬರೋಕೆ ಹೈದರಾಬಾದ್​ನ ಮೂಲೆ ಮೂಲೆಯಿಂದಲೂ ಬಸ್​​ವ್ಯವಸ್ಥೆ ಇತ್ತು. ಅದು ಕೂಡ ಉಚಿತವಾಗಿ. ಉದ್ಯೋಗಿಗಳ ಅನುಕೂಲಕ್ಕಾಗಿಯೇ ಕ್ಯಾಂಟೀನ್​ ಕೂಡ ಇತ್ತು. ಕೇವಲ ಐಡಿ ಕಾರ್ಡ್​ ತೋರಿಸಿ ನಮಗೆ ಬೇಕಾದ ಊಟ ತಿಂಡಿ ಮಾಡೋ ಅವಕಾಶವಿತ್ತು. ಅದಕ್ಕೆ ತಗುಲುವ ವೆಚ್ಚವನ್ನ ಸಂಬಂಳದಲ್ಲಿ ಸರಿದೂಗಿಸೋ ವ್ಯವಸ್ಥೆ ಮಾಡಲಾಗಿತ್ತು. ಇದರಿಂದಾಗಿ ಜೇಬಿನಲ್ಲಿ ದುಡ್ಡಿರಲೇಬೇಕು ಅನ್ನೋ ಪರಿಸ್ಥಿತಿಯಂತೂ ಇರಲಿಲ್ಲ. ಬದುಕು ರೂಪಿಸಿಕೊಳ್ಳೋಕೆ ಇದಕ್ಕಿಂತ ಇನ್ನೇನು ಬೇಕು ಹೇಳಿ. ಕೆಲಸ ಕೊಟ್ಟು, ತರಬೇತಿ ಕೊಟ್ಟು, ಸೌಲಭ್ಯಕೊಟ್ಟು, ಸಂಬಳಕೊಟ್ಟು ಬದುಕು ರೂಪಿಸಿಕೊಳ್ಳೋಕೆ ಅವಕಾಶ ಕೊಟ್ಟ ಮಹಾನ್​ ವ್ಯಕ್ತಿ ರಾಮೋಜಿರಾವ್​. ನ್ಯೂಸ್​​ ಚಾನಲ್​, ನ್ಯೂಸ್​ಪೇಪರ್​, ಹೋಟೆಲ್​ ಉದ್ಯಮ, ಫಿಲ್ಮ್​ ನಿರ್ಮಾಣ ಹೀಗೆ ವಿವಿಧ ಉದ್ಯಮಗಳ ಮೂಲಕ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಬದುಕುಕೊಟ್ಟ ರಾಮೋಜಿರಾವ್​ ನಿಜವಾದ ಭಾರತರತ್ನ.

ವಿಶೇಷ ಲೇಖನ: ಎಸ್. ರವಿಕುಮಾರ್, MD & CEO, ನ್ಯೂಸ್‌ ಫಸ್ಟ್ ಕನ್ನಡ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment