/newsfirstlive-kannada/media/post_attachments/wp-content/uploads/2023/08/Congress-Leaders.jpg)
ಕರುನಾಡಿನಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಕೆಲ ತಿಂಗಳಷ್ಟೇ ಕಳೆದಿವೆ. ಗ್ಯಾರಂಟಿಗಳ ಗುಂಗಿನಲ್ಲೇ ಸರ್ಕಾರದ ಹನಿಮೂನ್ ಪಿರಿಯಡ್ ಮುಗಿದಿದೆ. ಇದರ ಮಧ್ಯೆ ಸರ್ಕಾರದ ಒಳಗೆ ಕೆಲ ಆಂತರಿಕ ಕಚ್ಚಾಟಗಳು ಬೀದಿಗೆ ಬಿದ್ದಿವೆ. ಪಕ್ಷದೊಳಗಿನ ಸಮಸ್ಯೆಗಳು, ಅಸಮಾಧಾನಗಳನ್ನ ಪರಿಹರಿಸಲು ದೆಹಲಿ ಹೈಕಮಾಂಡ್ ಮಹತ್ವದ ಸಭೆ ಕರೆದಿದೆ. ಈ ಮೂಲಕ ರಾಜ್ಯ ಹಸ್ತ ಪಾಳಯದಲ್ಲಿನ ಗೊಂದಲ ನಿವಾರಿಸಲು ಮುಂದಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದು ಇಂದಿಗೆ 80 ದಿನ. ಈ ಅಲ್ಪಕಾಲದಲ್ಲೇ ಸಿದ್ದರಾಮಯ್ಯ ಸರ್ಕಾರದಲ್ಲಿ ಆಂತರಿಕ ಬೇಗುದಿ ಬೀದಿಗೆ ಬಿದ್ದಿರೋ ಸನ್ನಿವೇಶಗಳು ಸೃಷ್ಟಿಯಾಗಿವೆ. ಅನುದಾನ ಸಿಗುತ್ತಿಲ್ಲ ಸರ್ಕಾರದ ವಿರುದ್ಧವೇ ಕೆಲ ಶಾಸಕರು ಅಸಮಧಾನಗೊಂಡಿದ್ದಾರೆ. ಜೊತೆಗೆ ಸಿಎಂ ಹುದ್ದೆ ಬಗ್ಗೆಯೇ ಬಹಿರಂಗ ಮಾತಿನ ಸ್ಫೋಟವೂ ನಡೆದಿದೆ. ಇದಲ್ಲದೇ ಹೊಸ ಸರ್ಕಾರದಲ್ಲಿ ಹತ್ತಾರು ಗೊಂದಲಗಳು ಮೂಡಿವೆ. ಇದಕ್ಕೆಲ್ಲಾ ಮದ್ದರೆಯಲು ಕಾಂಗ್ರೆಸ್ ಹೈ ಕಮಾಂಡ್ ಸಜ್ಜಾಗಿದೆ.
ಕಾಂಗ್ರೆಸ್ ಪ್ರಮುಖ ನಾಯಕರಿಗೆ ದೆಹಲಿಗೆ ಬುಲಾವ್
ಹೊಸ ಸರ್ಕಾರದ ಆಗುಹೋಗುಗಳ ಬಗ್ಗೆ ಪರಾಮರ್ಶೆ ನಡೆಸಲು ಕಾಂಗ್ರೆಸ್ ಹೈಕಮಾಂಡ್ ಆಗಸ್ಟ್ 2 ಅಂದ್ರೆ ನಾಳೆ ಮಹತ್ವದ ಸಭೆ ಕರೆದಿದೆ. ಸಿಎಂ ಸಿದ್ದರಾಮಯ್ಯ ಸಂಪುಟದ ಕೆಲ ಸದಸ್ಯರು ಸೇರಿ ಆಯ್ದ 37 ಕಾಂಗ್ರೆಸ್ ಮುಖಂಡರಿಗೆ ದೆಹಲಿಗೆ ಬರುವಂತೆ ಹೈ ಕಮಾಂಡ್ ಬುಲಾವ್ ನೀಡಿದೆ. ಹೀಗಾಗಿ ಸಚಿವರೆಲ್ಲ ತಮ್ಮ ಎರಡು ತಿಂಗಳ ಕಾರ್ಯವೈಖರಿ ವರದಿ ಸಿದ್ಧಪಡಿಸಿಕೊಂಡು ದೆಹಲಿ ಫ್ಲೈಟ್ ಏರಲು ಸಜ್ಜಾಗಿದ್ದಾರೆ.. ಇವತ್ತೇ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ನಾಳೆ ದೆಹಲಿ ಯಾತ್ರೆ ಮಾಡಲಿದ್ದಾರೆ. ಇನ್ನುಳಿದಂತೆ ಇಂದು ಮಧ್ಯಾಹ್ನ ಕೆಲ ಕೈ ನಾಯಕರು ದೆಹಲಿಗೆ ತೆರಳಲಿದ್ರೆ, ಇನ್ನುಳಿದವರು ನಾಳೆ ಪ್ರಯಾಣ ಬೆಳಸಲಿದ್ದಾರೆ ಎಂದು ತಿಳಿದುಬಂದಿದೆ.
ಉಳಿದ ಅರ್ಧ ನಿಗಮಗಳಿಗೆ ಪಕ್ಷದ ಮುಖಂಡರಿಗೆ ಜವಾಬ್ದಾರಿ
ನಾಳೆ ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಹೈ ಕಮಾಂಡ್ ಸಭೆ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕಳೆದ 2 ತಿಂಗಳಲ್ಲಿ ಸರ್ಕಾರದ ಮೇಲಿನ ದೂರುಗಳ ಬಗ್ಗೆ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಮುಖ್ಯವಾಗಿ ಸಚಿವರ ವಿರುದ್ಧ ಶಾಸಕರು ನೀಡಿದ್ದ ದೂರಿನ ಬಗ್ಗೆ ಚರ್ಚೆಯಾಗಲಿದೆ ಎಂದು ತಿಳಿದುಬಂದಿದೆ. ವಿಶೇಷ ಅನುದಾನ ನೀಡುತ್ತಿಲ್ಲ ಎಂದು ಸಹಿ ಸಂಗ್ರಹ ಮಾಡಲಾಗಿದ್ದು, ಇದರಲ್ಲಿ ಸಹಿ ಹಾಕಿದ್ದ ಶಾಸಕರಿಗೆ ನಿಗಮ ಮಂಡಳಿ ನೀಡಿ ಸಮಾಧಾನಪಡಿಸುವ ಸಾಧ್ಯತೆ ಇದೆ. ಕೆಲ ಶಾಸಕರಿಗೆ ಅರ್ಧದಷ್ಟು ನಿಗಮ ಮಂಡಳಿಗಳಲ್ಲಿ ಸ್ಥಾನ ನೀಡುವುದು, ಉಳಿದ ಅರ್ಧ ನಿಗಮಗಳಿಗೆ ಜಿಲ್ಲೆಗಳ ಪಕ್ಷದ ಮುಖಂಡರಿಗೆ ಜವಾಬ್ದಾರಿ ನೀಡುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಅಲ್ಲದೇ ಸಂಭಾವ್ಯರ ಪಟ್ಟಿ ಕೂಡಾ ಸಿದ್ಧವಾಗುವ ಹಂತದಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಾಜಿ ಸಚಿವ ಬಸವರಾಜ ರಾಯರಡ್ಡಿ, ಶಾಸಕರಾದ ಬಿ.ಆರ್.ಪಾಟೀಲ್, ವಿನಯ್ ಕುಲಕರ್ಣಿ ಈ ಮೂವರನ್ನ ಹೊರತುಪಡಿಸಿ ಸಹಿ ಹಾಕಿದ ಉಳಿದವರಿಗೂ ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೂ ಕಾಂಗ್ರೆಸ್ ಸರ್ಕಾರದಲ್ಲಿನ ಗೊಂದಲಗಳ ನಿವಾರಣೆಗೆ ಸಮಿತಿಯನ್ನೂ ರಚಿಸುವ ಬಗ್ಗೆ ಚರ್ಚೆ ನಡೆಯಲದೆ ಎಂದು ತಿಳಿದುಬಂದಿದೆ.
ಶಾಸಕರು-ಸರ್ಕಾರದ ನಡುವೆ ಉಂಟಾಗಿರುವ ಗೊಂದಲ
ಶಾಸಕರು-ಸರ್ಕಾರದ ನಡುವೆ ಉಂಟಾಗಿರುವ ಗೊಂದಲ ಪರಿಹಾರಕ್ಕೆ ಸಮನ್ವಯ ಸಮಿತಿ ರಚನೆ ಮಾಡುವ ಸಾಧ್ಯತೆ ಇದೆ. ದೆಹಲಿಯ ಸಭೆಯಲ್ಲಿ ಈ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸಮಿತಿ ಕಾರ್ಯನಿರ್ವಹಿಸಲಿದೆಯಂತೆ.. ಈ ಮೂಲಕ ಶಾಸಕರು ದೂರು ನೀಡಬೇಕಿದ್ದಲ್ಲಿ ಅಧ್ಯಕ್ಷರನ್ನ ಭೇಟಿಯಾಗಬಹುದಾಗಿದೆ. ಬಳಿಕ ಅಧ್ಯಕ್ಷರು ಸಚಿವರನ್ನ ನೇರವಾಗಿ ಸಂಪರ್ಕಿಸಿ ಪರಿಹಾರ ನೀಡುವ ಸೂತ್ರವನ್ನ ಕಾಂಗ್ರೆಸ್ ಹೆಣೆಯುತ್ತಿದೆ ಎನ್ನಲಾಗಿದೆ.
ಇನ್ನೂ ಲೋಕಸಭೆ ಚುನಾವಣೆ ಬಗ್ಗೆಯೂ ಕಾಂಗ್ರೆಸ್ ಸಭೆಯಲ್ಲಿ ಚರ್ಚೆ ನಡೆಯಲಿದೆ. ಲೋಕಸಭೆ ಚುನಾವಣಾ ತಯಾರಿಗಳಲ್ಲಿ ಪಕ್ಷದ ಸಂಘಟನೆಯಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆಯೂ ಇದೆ.
ಕೆಪಿಸಿಸಿ ಕಾರ್ಯಾಧ್ಯಕ್ಷರ ಬದಲಾವಣೆ?
ಕೆಪಿಸಿಸಿ ಕಾರ್ಯಾಧ್ಯಕ್ಷರನ್ನ ಬದಲಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಸಚಿವ ಸ್ಥಾನದ ಜೊತೆ ಕಾರ್ಯಾಧ್ಯಕ್ಷ ಸ್ಥಾನ ಹೊರೆ ಎಂಬ ಚರ್ಚೆ ನಡೆದಿದ್ದು, ಇದನ್ನ ಹೈಕಮಾಂಡ್ ಗಮನಕ್ಕೆ ಸಚಿವ ಸತೀಶ್ ಜಾರಕಿಹೊಳಿ ತಂದಿದ್ದಾರೆ. ಹೀಗಾಗಿ ಐವರು ಕಾರ್ಯಾಧ್ಯಕ್ಷರ ಪೈಕಿ ಮೂವರನ್ನ ಬದಲಾವಣೆ ಮಾಡುವ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ಇನ್ನೂ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದ್ದೆ ಅಂತ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸಿಡಿದೆದ್ದಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಪಕ್ಷದ ದೆಹಲಿ ನಾಯಕರು ಚರ್ಚೆ ನಡೆಸಲಿದ್ದು, ಅವರಿಗೆ ಯಾವ ಹೊಣೆ ನೀಡಲಿದ್ದಾರೆ ಎಂಬ ಕೌತುಕ ಶುರುವಾಗಿದೆ.. ಒಟ್ಟಾರೆ, ಎದ್ದಿರೋ ಎಲ್ಲಾ ಸಮಸ್ಯೆಗಳಿಗೆ ನಾಳೆಯ ಸಭೆಯಲ್ಲಿ ಬ್ರೇಕ್ ಹಾಕೋದೆ ಹಸ್ತ ಹೈಕಮಾಂಡ್ ಅಜೆಂಡಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ