/newsfirstlive-kannada/media/post_attachments/wp-content/uploads/2024/07/wayanadu-newsfirst-Ground-report.jpg)
ವಯನಾಡ್: ಕೇರಳದ ಭೂಕುಸಿತಕ್ಕೆ ಸಾವನ್ನಪ್ಪಿದವರ ಸಂಖ್ಯೆ ನೂರರ ಗಡಿ ದಾಟಿದೆ. ಇದುವರೆಗೂ 106 ಮಂದಿ ಸಾವನ್ನಪ್ಪಿದ್ದು, 128 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ದೇವರನಾಡಿನ ಭೂಕುಸಿತ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ.
ಭೂಕುಸಿತದ ವಯನಾಡಿನಲ್ಲಿ ಕನ್ನಡದ ನ್ಯೂಸ್ ಫಸ್ಟ್ ಚಾನೆಲ್ ಗ್ರೌಂಡ್ ರಿಪೋರ್ಟ್ ಮಾಡೋ ಸಾಹಸ ಮಾಡುತ್ತಿದೆ. ವಯನಾಡ್ಗೆ ತೆರಳಿರುವ ನ್ಯೂಸ್ಫಸ್ಟ್ ವರದಿಗಾರರು ಅಲ್ಲಿಯ ಜನರನ್ನು ಮಾತನಾಡಿಸಿದಾಗ ಅವರು ತಮ್ಮ ದುಃಖ ದುಮ್ಮಾನಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಅದರಲ್ಲಿ ಒಬ್ಬರು ನಾವು ಆರು ಜನ ಇಲ್ಲಿಗೆ ಬಂದಿದ್ವಿ ಅದರಲ್ಲಿ ಮೂರು ಜನ ಉಳಿದುಕೊಂಡಿದ್ದೇವೆ. ಇನ್ನುಳಿದ ಮೂರು ಜನ ಕಾಣುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಆ ಮೂರು ಜನರಲ್ಲಿ 9 ವರ್ಷದ ಕೂಸು ಕೂಡ ಒಂದಿದೆ. ನಾವೆಲ್ಲಾ ಒಂದೇ ಮನೆಯವರು, ಚೂರಲಮಲಕ್ಕೆ ಹೋಗಿ ಬರುವಾಗ ಈ ಘಟನೆ ನಡೆದಿದೆ ಎಂದು ಹೇಳಿದ್ರೆ. ಮತ್ತೊಬ್ರು, ಮುಂಜಾನೆ ಸುಮಾರು 3 ರಿಂದ 4 ಗಂಟೆಯ ಸುಮಾರಿಗೆ ಈ ಘಟನೆ ನಡೆಯಿತು. ಎದ್ದು ನೋಡಿದಾಗ ಮನೆಯವರು ಇರಲಿಲ್ಲ, ಬರೀ ಕಲ್ಲು ಮಣ್ಣು ಬಿಟ್ರೆ ಈ ಪ್ರದೇಶದಲ್ಲಿ ಏನೂ ಇರಲಿಲ್ಲ ಎಂದು ಕಣ್ಣೀರಿಟ್ಟರು.
ಇದನ್ನೂ ಓದಿ:93ಕ್ಕೇರಿದ ಸಾವು.. ಭೂ ಕುಸಿತಕ್ಕೆ ಬೆಚ್ಚಿ ಬಿದ್ದ ಕೇರಳ; ಸಿಎಂ ಪಿಣರಾಯಿ ವಿಜಯನ್ ಹೇಳಿದ್ದೇನು?
ಮೂರು ಜನ ಅಣ್ಣಂದಿರನ್ನು, ಹೆಂಡತಿಯನ್ನು ಕಳೆದುಕೊಂಡಿದ್ದೇನೆ:
ಕೇರಳದ ಮೆಪ್ಪಾಡಿಯಲ್ಲಿ ನಾಸೀರ್ ಅನ್ನುವವರನ್ನು ನಮ್ಮ ಪ್ರತಿನಿಧಿ ಮಾತನಾಡಿಸಿದಾಗ, ಅವರು ಕೂಡ ಉಮ್ಮಳಿಸಿ ಬಂದ ದುಃಖವನ್ನು ತಡೆಹಿಡಿದು, ನನ್ನ ಮೂರು ಜನ ಅಣ್ಣಂದಿರು ಹೋಗಿದ್ದಾರೆ. ಪತ್ನಿಯನ್ನು ಕಳೆದುಕೊಂಡಿದ್ದೇನೆ, ಹೆಂಡತಿಯನ್ನು ಕಳೆದುಕೊಂಡಿದ್ದೇನೆ, ಮನೆ ಮಠ ಎಲ್ಲವನ್ನೂ ಕಳೆದುಕೊಂಡಿದ್ದೇನೆ ಎಂದು ಗದ್ಗದಿತರಾಗಿ ಉತ್ತರಿಸಿದ್ರು. ಮೇಪಾಡಿಯಲ್ಲಿ ಟೀ ಎಸ್ಟೇಟ್ನಲ್ಲಿ ಕೆಲಸ ಮಾಡುತ್ತಿದ್ದ ನಾಸೀರ್ , ಇಂದು ನಡೆದ ಭೀಕರ ದುರಂತದಲ್ಲಿ ತಮ್ಮವರನ್ನೆಲ್ಲಾ ಕಳೆದುಕೊಂಡು, ಮನೆ ಮಠವನ್ನೂ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಂದಿದ್ದಾರೆ. ನಾವು ವಾಸಿಸುತ್ತಿದ್ದ ಪ್ರದೇಶದಲ್ಲಿದ್ದ ನೂರು ನೂರಿಪ್ಪತ್ತು ಮನೆಗಳು ಭೂಕುಸಿತದಲ್ಲಿ ಕೊಚ್ಚಿಕೊಂಡು ಹೋಗಿದೆ ಎಂದು ನಾಸೀರ್ ಕಣ್ಣಂಚಲ್ಲಿ ನೀರು ತಂದುಕೊಂಡು ಹೇಳಿದ್ರು. ಕನಿಷ್ಠ 500 ರಿಂದ 600 ಜನರು ಮೃತಪಟ್ಟಿದ್ದಾರೆ ಎಂದು ಹೇಳಿದ್ರು.
ಇದನ್ನೂ ಓದಿ:ಕೇರಳ ಮಳೆಯ ಎಫೆಕ್ಟ್.. ಕೊಡಗಿನಲ್ಲೂ 2 ದಿನ ರೆಡ್ ಅಲರ್ಟ್; ಕಾವೇರಿ ತೀರಕ್ಕೂ ಪ್ರವಾಹದ ಭೀತಿ
ಭೂಕುಸಿತದಲ್ಲಿ ತಮ್ಮ ಕುಟುಂಬನ್ನ, ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವವರದ್ದು ಒಂದೊಂದು ಕಥೆ, ಮನೆ ಆಸ್ತಿ ಪಾಸ್ತಿ ಜೊತೆ ಬಂಧು ಬಳಗವನ್ನು ಕಳೆದುಕೊಂಡು ಅನಾಥರಾಗಿ ನಿರಾಶ್ರಿತರ ಕೇಂದ್ರದಲ್ಲಿ ಏನಾದರೂ ಸಿಹಿ ಸುದ್ದಿ ಬರಬಹುದಾ, ಕಾಣೆಯಾಗಿರುವ ನಮ್ಮ ಮನೆಯವರು ಜೀವಂತವಾಗಿ ಹಿಂದಿರುಗಬಹುದಾ ಅನ್ನೋ ಸಾಸಿವೆಕಾಳಷ್ಟು ಭರವಸೆಯನ್ನು ಅಂಗೈಯಲ್ಲಿಟ್ಟುಕೊಂಡು ಕಾಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ