/newsfirstlive-kannada/media/post_attachments/wp-content/uploads/2024/11/Nikhil-Kumaraswamy-1.jpg)
ರಾಮನಗರ: ಚನ್ನಪಟ್ಟಣ ಉಪಚುನಾವಣೆಯ ಸೋಲಿನ ಬಳಿಕ ಜೆಡಿಎಸ್ ಕೃತಜ್ಞತಾ ಸಭೆ ನಡೆಸಿದೆ. ಖಾಸಗಿ ರೆಸಾರ್ಟ್‌ನಲ್ಲಿ ಪರಾಜಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಕ್ಷೇತ್ರದ ಕಾರ್ಯಕರ್ತರು, ಮತದಾರರಿಗೆ ಧನ್ಯವಾದ ತಿಳಿಸಿದ್ದಾರೆ.
ಚನ್ನಪಟ್ಟಣ ಮತದಾರರ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನವೆಂಬರ್ 23ನೇ ತಾರೀಖಿನ ಫಲಿತಾಂಶವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದರೂ ಕ್ಷೇತ್ರದ ಜನ 87ಸಾವಿರಕ್ಕೂ ಹೆಚ್ಚು ಮತ ನೀಡಿದ್ದಾರೆ. ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಇಡೀ ರಾಜ್ಯ ಸರ್ಕಾರವನ್ನೇ ಎದುರಿಸಿದ್ದೀರಿ. ನಿಮ್ಮ ಪಾದಗಳಿಗೆ ನಮಸ್ಕರಿಸಿ ಕೇಳ್ತೇನೆ ನನ್ನ ಮೇಲೆ ಅನುಮಾನ ಪಡಬೇಡಿ. ಅನಿರೀಕ್ಷಿತವಾಗಿ ನಾನು ಸ್ಪರ್ಧೆ ಮಾಡಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ‘ಸಿದ್ದರಾಮಯ್ಯ ಪರ ಸಮಾವೇಶ’ಕ್ಕೆ ಕಾಂಗ್ರೆಸ್ನಿಂದಲೇ ವಿರೋಧ; ಹೈಕಮಾಂಡ್ಗೆ ದೂರು..!
ಸತತ 3ನೇ ಸೋಲು!
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೆ. ರಾಮನಗರ ವಿಧಾನಸಭಾ ಚುನಾವಣೆಯಲ್ಲೂ ಕೆಲವು ಕಾರಣಗಳಿಂದ ಸೋತಿದ್ದೇನೆ. ಅನಿರೀಕ್ಷಿತವಾಗಿ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಅನಿವಾರ್ಯ ಆಗಿತ್ತು. ಕುಮಾರಸ್ವಾಮಿ ಅವರಿಗೆ ಮೂರು ಬಾರಿ ಆಪರೇಷನ್ ಆದ್ರೂ ಪಕ್ಷ ಉಳಿಸಲು ಹೋರಾಟ ಮಾಡ್ತಿದ್ದಾರೆ.
ಸೋತ ಮಾತ್ರಕ್ಕೆ ನಾನು ಮನೆಯಲ್ಲಿ ಕೂರುವವನಲ್ಲ. ಮೂರು ಬಾರಿ ಸೋತರೂ ಎದೆಗುಂದುವುದಿಲ್ಲ. ಯಾವುದೇ ಮುಖಂಡರು, ಕಾರ್ಯಕರ್ತರು ಕಣ್ಣಲ್ಲಿ ನೀರು ಹಾಕಬೇಡಿ. ನಾವು ಸತ್ತಿಲ್ಲ, ಸೋತಿದ್ದೀವಿ ಅಷ್ಟೇ. ನನಗಿನ್ನು 35 ವರ್ಷ ವಯಸ್ಸು. ರಾಜ್ಯದ ಜನತೆಯ ಆಶೀರ್ವಾದ ನಮ್ಮ ಜೊತೆ ಇದೆ. ಸರ್ಕಾರದ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟ ಮಾಡೋಣ. 2004ರಲ್ಲಿ ಜೆಡಿಎಸ್ 54 ಸೀಟ್ ಪಡೆದಿತ್ತು. ಮುಂದಿನ ಚುನಾವಣೆಗೆ ಅದೇ ರೀತಿಯ ಹೋರಾಟ ಮಾಡಬೇಕು. ಕಾರ್ಯಕರ್ತರು, ಮುಖಂಡರು ನಮಗೆ ಬಲ ತುಂಬಬೇಕು ಎಂದು ನಿಖಿಲ್ ಮನವಿ ಮಾಡಿದ್ದಾರೆ.
ದಯಮಾಡಿ ನನ್ನ ಮೇಲೆ ಯಾರೂ ಅನುಮಾನ ಪಡೆಯಬೇಡಿ. ದೇವೇಗೌಡರ ಮಾರ್ಗದರ್ಶನದಲ್ಲಿ ಈ ಪಕ್ಷವನ್ನ ದಡ ಮುಟ್ಟಿಸಬೇಕು. ನಾನು ಎಲ್ಲೂ ಹೋಗಲ್ಲ, ಇಲ್ಲೇ ಇರ್ತೀನಿ. 2018ರಲ್ಲಿ ಜಿಲ್ಲೆಯ ಮೂರು ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದಿತ್ತು. ಆ ಕಾಲ ಮತ್ತೆ ಬರಲಿದೆ, ನಾಲ್ಕು ಕ್ಷೇತ್ರವೂ ಜೆಡಿಎಸ್ ಗೆಲ್ಲಲ್ಲು ಕೆಲಸ ಮಾಡೋಣ. ಜನಾಭಿಪ್ರಾಯಕ್ಕೆ ನಾವು ತಲೆಬಾಗಲೇಬೇಕು. ಯಾರ ಮೇಲೂ ದೂರುವ ಪ್ರಶ್ನೆ ಇಲ್ಲ. ಎಲ್ಲರೂ ಸಾಮೂಹಿಕ ಹೊಣೆ ಹೊತ್ತು ಮುಂದೆ ಜಿಲ್ಲೆಯ ನಾಲ್ಕು ಕ್ಷೇತ್ರ ಗೆಲ್ಲುವ ಗುರಿ ಇಟ್ಟುಕೊಳ್ಳೊಣ. ಎಲ್ಲರ ಮುಖದಲ್ಲಿ ನಗು ಇರಲಿ, ಯಾರೂ ಬೇಸರ ಮಾಡಿಕೊಳ್ಳೊದು ಬೇಡ ಎಂದು ಕೃತಜ್ಞತಾ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ