/newsfirstlive-kannada/media/post_attachments/wp-content/uploads/2025/01/ISRO_-Nirmalanandanatha_Swamiji.jpg)
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72ನೇ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯ ಮಹತ್ವಾಕಾಂಕ್ಷಿ ಸ್ಪೇಡೆಕ್ಸ್ ಯೋಜನೆಯ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ್ದಾರೆ.
"ಸ್ಪೇಡೆಕ್ಸ್ ಯೋಜನೆ ಬಾಹ್ಯಾಕಾಶ ಡಾಕಿಂಗ್ ಸಾಮರ್ಥ್ಯವನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ. ಇದಕ್ಕಾಗಿ ಅವಿರತವಾಗಿ ಶ್ರಮಿಸಿದ ಇಸ್ರೋದ ನಿಕಟ ಪೂರ್ವ ಅಧ್ಯಕ್ಷರಾದ ಎಸ್.ಸೋಮನಾಥ್, ಪ್ರಸ್ತುತ ಇಸ್ರೋ ಮುಖ್ಯಸ್ಥರಾದ ಎಸ್.ನಾರಾಯಣನ್, ಇಸ್ರೋದ ಅಸಾಧಾರಣ ವಿಜ್ಞಾನಿಗಳು ಮತ್ತು ಔದ್ಯಮಿಕ ಸಹಯೋಗಿಗಳಿಗೆ ಅಭಿನಂದನೆಗಳು. ಈ ಐತಿಹಾಸಿಕ ಸಾಧನೆ, ಬಾಹ್ಯಾಕಾಶದಲ್ಲಿ ಉಪಗ್ರಹಗಳ ಡಾಕಿಂಗ್ ಸಾಮರ್ಥ್ಯ ಗಳಿಸಿರುವ 4ನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮುವಂತೆ ಮಾಡಿದೆ. ಇದು ಇಸ್ರೋ ಹೊಂದಿರುವ ಪ್ರಾವೀಣ್ಯತೆಯನ್ನು ಪ್ರದರ್ಶಿಸಿದ್ದು, ಮುಂದಿನ ತಲೆಮಾರುಗಳಲ್ಲಿ ಬಾಹ್ಯಾಕಾಶ ಅನ್ವೇಷಣೆಯ ಕುರಿತು ಆಸಕ್ತಿ ಮತ್ತು ಸ್ಫೂರ್ತಿ ನೀಡಿದೆ ಎಂದು ಸ್ವಾಮೀಜಿ ಶ್ಲಾಘಿಸಿದ್ದಾರೆ.
ಇದನ್ನೂ ಓದಿ:ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮತ್ತೊಂದು ಸಾಧನೆ; ಚಂದ್ರಯಾನ-4, ಗಗನಯಾನಕ್ಕೆ ವೇದಿಕೆ ಸಿದ್ಧ..!
ಸ್ಪೇಡೆಕ್ಸ್ ಯೋಜನೆ ತನ್ನ ಉಡಾವಣಾ ವಾಹನದ 4ನೇ ಹಂತವಾದ ಪೋಯಮ್-4ನಲ್ಲಿ (POEM-4) ಇಸ್ರೋ, ಶಿಕ್ಷಣ ಸಂಸ್ಥೆಗಳು ಮತ್ತು ಸ್ಟಾರ್ಟಪ್‌ಗಳು ನಿರ್ಮಿಸಿದ ಪೇಲೋಡ್‌ಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ದಿತ್ತು. ಈ ಪೇಲೋಡ್‌ಗಳಲ್ಲಿ, ಆದಿಚುಂಚನಗಿರಿ ಮಠದ ಬಿಜಿಎಸ್ ಅರ್ಪಿತ್ ಪೇಲೋಡ್ ಸಹ ಸೇರಿತ್ತು. ಈಗಾಗಲೇ ಬಾಹ್ಯಾಕಾಶ ಸೇರಿರುವ ಈ ಪೇಲೋಡ್, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ನವೀನ ತಂತ್ರಜ್ಞಾನ ಜಾಗತಿಕ ಅಮೆಚೂರ್ ಕ್ಲಬ್‌ಗಳಿಗೆ ಬೆಂಬಲ ಒದಗಿಸಲಿದೆ. ಈ ಯೋಜನೆ ಯಶಸ್ವಿಯಾಗುವಂತೆ ಸಹಕಾರ ನೀಡಿದ ಇಸ್ರೋ ಸಂಸ್ಥೆಗೆ ಆದಿಚುಂಚನಗಿರಿ ಮಠ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತದೆ ಎಂದು ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ