NISAR ಉಡಾವಣೆಗೆ ಕೌಂಟ್​ಡೌನ್; ಇಸ್ರೋ-ನಾಸಾದ ಈ ಜಂಟಿ ಪ್ರಾಜೆಕ್ಟ್​​ ವಿಶೇಷತೆಗಳು ಏನೇನು..?

author-image
Ganesh
Updated On
NISAR ಉಡಾವಣೆಗೆ ಕೌಂಟ್​ಡೌನ್; ಇಸ್ರೋ-ನಾಸಾದ ಈ ಜಂಟಿ ಪ್ರಾಜೆಕ್ಟ್​​ ವಿಶೇಷತೆಗಳು ಏನೇನು..?
Advertisment
  • ಭೂಮಿಯ ಮೇಲೆ ಕಣ್ಣಿಡುವ ಸ್ಯಾಟಲೈಟ್ ಉಡಾವಣೆ
  • ಇಂದು ಸಂಜೆ ಇಸ್ರೋ- ನಾಸಾದಿಂದ ಜಂಟಿಯಾಗಿ ಉಡಾವಣೆ
  • 12,500 ಕೋಟಿ ಪ್ರಾಜೆಕ್ಟ್​​ಗೆ ಇಸ್ರೋ ಭರಿಸುತ್ತಿರುವ ವೆಚ್ಚ ಎಷ್ಟು ಗೊತ್ತಾ?

ಇಂದು ಇಸ್ರೋ-ನಾಸಾದಿಂದ (ISRO-NASA) ಜಂಟಿಯಾಗಿ ಮತ್ತೊಂದು ಸ್ಯಾಟಲೈಟ್ ಉಡಾವಣೆ ಆಗಲಿದೆ. ನಾಸಾ-ಇಸ್ರೋ ಜಂಟಿಯಾಗಿ ಭಾರತದ ಶುಭಾಂಶು ಶುಕ್ಲಾರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳಿಸಿದ್ದ ಬಳಿಕ ಮತ್ತೊಂದು ಜಂಟಿ ಪ್ರಾಜೆಕ್ಟ್​​​ಗೆ ಕೈಹಾಕಿವೆ.

ನಿಸಾರ್ ಹೆಸರಿನ ಭೂಮಿಯನ್ನ ಬಾಹ್ಯಾಕಾಶದಿಂದ ರೆಕಾರ್ಡ್ ಮಾಡುವ ಸ್ಯಾಟಲೈಟ್ ಉಡಾವಣೆ ಆಗಲಿದೆ. ಇಂದು ಸಂಜೆ (ಜುಲೈ 30) 5.40ಕ್ಕೆ ನಿಸಾರ್ ಸ್ಯಾಟಲೈಟ್ (NISAR Satellite) ಉಡಾವಣೆ ಆಗಲಿದೆ. ಆಂಧ್ರದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸ್ಯಾಟಲೈಟ್ ಉಡಾವಣೆ ಆಗಲಿದ್ದು, ಜಿಎಸ್‌ಎಲ್‌ವಿ- ಎಂಕೆ2 (Geosynchronous Satellite Launch Vehicle) ಮೂಲಕ ಸ್ಯಾಟಲೈಟ್ ಉಡಾವಣೆ ಆಗಲಿದೆ.

12,500 ಕೋಟಿ ರೂಪಾಯಿ ವೆಚ್ಚ

ಇದು ಬರೋಬ್ಬರಿ 12,500 ಕೋಟಿ ರೂಪಾಯಿ ವೆಚ್ಚದಲ್ಲಿ ಉಡಾವಣೆ ಆಗುತ್ತಿರುವ ಸ್ಯಾಟಲೈಟ್. ಆದರೆ ಭಾರತವು 788 ಕೋಟಿ ರೂಪಾಯಿ ಹಣವನ್ನು ಮಾತ್ರ ವೆಚ್ಚ ಮಾಡುತ್ತಿದೆ. ಉಳಿದ ಬಾಕಿ ಹಣವನ್ನು ಅಮೆರಿಕಾದ ನಾಸಾ ವೆಚ್ಚ ಮಾಡುತ್ತಿದೆ. ಭಾರತದಿಂದ ಕಡಿಮೆ ವೆಚ್ಚ, ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ರಿಟರ್ನ್ಸ್​ ಗಳಿಸುವ ಪ್ಲಾನ್ ಇದೆ. ನಿಸಾರ್, ಬಾಹ್ಯಾಕಾಶದಿಂದ ಭೂಮಿಯನ್ನು ಸೆರೆ ಹಿಡಿಯಲಿದೆ. ಪ್ರತಿ 97 ನಿಮಿಷಗಳಿಗೊಮ್ಮೆ ಭೂಮಿಯನ್ನು ಸೆರೆ ಹಿಡಿಯಲಿದೆ. ಇದರ ಡಾಟಾವನ್ನು ಓಪನ್ ಸೋರ್ಸ್ ಮೂಲಕ ಎಲ್ಲ ವಿಜ್ಞಾನಿ, ಸಂಶೋಧಕರಿಗೆ ಉಚಿತವಾಗಿ ನೀಡಲಿದೆ.

ಇದನ್ನೂ ಓದಿ: ಡಿಕೆಶಿ ಹೊರಗಿಟ್ಟು CM ಸಭೆ; ಸಿದ್ದು ಎದುರಲ್ಲೇ ರಾಜಣ್ಣ- ಗುಬ್ಬಿ ಶಾಸಕ ಶ್ರೀನಿವಾಸ್ ಜಟಾಪಟಿ..!

ಈ ನಿಸಾರ್ ಸ್ಯಾಟಲೈಟ್ ಅನ್ನು ನಾಸಾದ ಎಲ್ ಬ್ಯಾಂಡ್ ರಾಡಾರ್ ಮತ್ತು ಇಸ್ರೋದ ಎಸ್ ಬ್ಯಾಂಡ್ ರಾಡಾರ್ ಬಳಸಿ ಉಡಾವಣೆ ಮಾಡುತ್ತಿರುವುದು ವಿಶೇಷ. ಎರಡು ಬೇರೆ ಬೇರೆ ಪ್ರಿಕ್ವೆನ್ಸಿ ಹೊಂದಿರುವ ಸಿಂಥೆಟಿಕ್ ಅಪರಚರ್ ರಾಡಾರ್​ಗಳನ್ನು ಒಗ್ಗೂಡಿಸಿ ಸ್ಯಾಟಲೈಟ್ ಉಡಾವಣೆ ಮಾಡಲಾಗುತ್ತಿದೆ. ಇದರಿಂದ ಹಗಲು ಮತ್ತು ರಾತ್ರಿ ಎರಡೂ ವೇಳೆಯೂ ಭೂಮಿಯ ಮೇಲೆ ನಿಸಾರ್ ನಿಗಾ ಇಡಲಿದೆ. ಎಲ್ -ಬ್ಯಾಂಡ್ ಜೀವಸಂಕುಲ, ಬಂಡೆ, ಮರದ ಟೊಂಗೆಗಳ ಮೇಲೆ ನಿಗಾ ಇಟ್ಟರೆ, ಎಸ್ -ಬ್ಯಾಂಡ್ ಎಲೆಗಳು, ಭೂಮಿಯ ಮೇಲ್ಪದರ, ಮೋಡಗಳ ಮೇಲೆ ಕಣ್ಣಿಡುತ್ತದೆ. ಹೀಗೆ ಒಂದೇ ಪ್ರದೇಶದ ಮಾಹಿತಿಯನ್ನು ಎರಡು ಪ್ರತೇಕ ರಾಡಾರ್​​ಗಳ ಮೂಲಕ ಸಂಗ್ರಹಿಸಲಾಗುತ್ತೆ. ಈ ನಿಸಾರ್ ಸ್ಯಾಟಲೈಟ್ ನಿಂದ ಭೂಮಿಯ ಮೇಲಿನ ಬದಲಾವಣೆಗಳನ್ನು ಗಮನಿಸಬಹುದು.

ಏನೆಲ್ಲ ಪ್ರಯೋಜನ..?

ಭೂಮಿಯ ಒಳಭಾಗದ ಭೂಕಂಪದ ಫಾಲ್ಟ್ ಶಿಫ್ಟ್ ಆಗುವುದನ್ನು ಗಮನಿಸಬಹುದು. ಭೂಮಿಯ ಮೇಲ್ಭಾಗ, ಒಳಭಾಗದ ಬದಲಾವಣೆಗಳನ್ನು ಅರ್ಥ ಮಾಡಿಕೊಂಡು ಕ್ರಮಕೈಗೊಳ್ಳಲು ಸಾಧ್ಯವಾಗುತ್ತೆ. ಭೂಮಿಯ ಬದಲಾವಣೆಗಳ ಮಾಹಿತಿ ಸಂಗ್ರಹಿಸುವ ನಿಸಾರ್ ಅದನ್ನು 12 ದಿನಕ್ಕೊಮ್ಮೆ ಭೂಮಿಗೆ ಕಳಿಸುತ್ತ. ಇದಕ್ಕಾಗಿ ಸ್ವೀಪ್ ಸಾರ್ ತಂತ್ರಜ್ಞಾನ ಬಳಸಲಾಗಿದೆ.

ಉಪಗ್ರಹದಲ್ಲಿ ಈ ತಂತ್ರಜ್ಞಾನ ಬಳಕೆ ಇದೇ ಮೊದಲು. ನಿಸಾರ್, ತನ್ನಲ್ಲಿರುವ ಸ್ವೀಪ್ ಸಾರ್ ತಂತ್ರಜ್ಞಾನ ಬಳಸಿ, 747 ಕಿ.ಮೀ.ಎತ್ತರದಿಂದ ಭೂಮಿಯ ಮೇಲೆ ನಿಗಾ ವಹಿಸಲಿದೆ. ಸ್ವೀಪ್ ಸಾರ್ ತಂತ್ರಜ್ಞಾನ ಅಂದರೆ ಅತ್ಯಾಧುನಿಕ ರಾಡಾರ್ ಇಮೇಜಿಂಗ್ ತಂತ್ರಜ್ಞಾನವಾಗಿದೆ. ಈ ತಂತ್ರಜ್ಞಾನದ ಬಳಕೆಯಿಂದ ನಿಸಾರ್ ಉಪಗ್ರಹ ಒಂದು ಭಾರಿ ಕಕ್ಷೆಗೆ ಸುತ್ತು ಬರುವಷ್ಟರಲ್ಲಿ 242 ಕಿ.ಮೀ. ಭೂಮಿ ಅಥವಾ ಸಾಗರ ಪ್ರದೇಶದ ಡೇಟಾವನ್ನು ಸೆರೆ ಹಿಡಿಯುತ್ತದೆ. 3-10 ಮೀಟರ್ ರೆಸಲ್ಯೂಷನ್ ಹೊಂದಿರುವ ಈ ಉಪಗ್ರಹವು, ಅಷ್ಟು ಸಣ್ಣ ಪ್ರದೇಶದಲ್ಲಿ ಆಗುವ ಸೂಕ್ಷ್ಮ ಬದಲಾವಣೆಗಳನ್ನು ಪತ್ತೆ ಮಾಡಬಲ್ಲದು. ನಿಸಾರ್​​ನ ಪ್ರತಿ ಪಿಕ್ಸೆಲ್​ನಲ್ಲಿ ಟೆನಿಸ್ ಕೋರ್ಟ್​ನ ಅರ್ಧ ಗಾತ್ರ ಪ್ರದೇಶ ಸೆರೆಯಾಗುವುದು ವಿಶೇಷ.

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರು ತಳುಕು..?

ಪ್ರತಿ 12 ದಿನಗಳಿಗೊಮ್ಮೆ ಹವಾಮಾನ ವರದಿ ಲಭ್ಯವಾಗುವುದರಿಂದ ನೈಸರ್ಗಿಕ ವಿಕೋಪಗಳನ್ನು ಮೊದಲೇ ಪತ್ತೆ ಮಾಡಿ, ಮುಂಜಾಗ್ರತೆ ವಹಿಸುವುದು ಸಾಧ್ಯವಾಗುತ್ತೆ. 90 ರ ದಶಕದಲ್ಲಿ ಭಾರತ, ಕ್ರಯೋಜನಿಕ್ ಎಂಜಿನ್ ಅಭಿವೃದ್ಧಿಗೆ ಯತ್ನಿಸುತ್ತಿತ್ತು. ಇದಕ್ಕಾಗಿ ರಷ್ಯಾದ ತಂತ್ರಜ್ಞಾನವನ್ನು ಪಡೆಯುವ ಯತ್ನದಲ್ಲಿತ್ತು. ಭಾರತದ ಪರಮಾಣು ಬಾಂಬ್ ಪ್ರಯೋಗ ಖಂಡಿಸಿ, ಭಾರತದ ಮೇಲೆ ಅಮೆರಿಕಾ ನಿರ್ಬಂಧ ಹೇರಿತ್ತು. ಈ ಮೂಲಕ ಭಾರತಕ್ಕೆ ರೆಡಿಯಾಗಿದ್ದ ಕ್ರಯೋಜನಿಕ್ ಇಂಜಿನ್ ನೀಡಲು ಅಮೆರಿಕಾ, ಆಗ ತಡೆಯೊಡ್ಡಿತ್ತು. ಆದರೂ, ಇಸ್ರೋ ಸ್ವದೇಶಿಯಾಗಿ ಕ್ರಯೋಜನಿಕ್ ಇಂಜಿನ್, ಜಿಎಸ್‌ಎಲ್‌ವಿ ರಾಕೆಟ್‌ ಅಭಿವೃದ್ದಿಪಡಿಸಿತ್ತು. ಈಗ ಅದೇ ರಾಕೆಟ್ ಮೂಲಕ ನಿಸಾರ್ ಸ್ಯಾಟಲೈಟ್ ಉಡಾವಣೆಯೂ ಜಾಗತಿಕ ಮಟ್ಟದಲ್ಲಿ ಬದಲಾದ ಭಾರತದ ಶಕ್ತಿಗೊಂದು ಉದಾಹರಣೆಯಾಗಿದೆ.

ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್​ಫಸ್ಟ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment