/newsfirstlive-kannada/media/post_attachments/wp-content/uploads/2024/12/Ayya-Swamy-Male-death.jpg)
ಹುಬ್ಬಳ್ಳಿ: ಅಯ್ಯಪ್ಪನ ದರ್ಶನಕ್ಕಾಗಿ ಮಾಲೆ ಹಾಕಿದ್ದ ಮಾಲಾಧಾರಿಗಳ ದುರಂತ ಅಂತ್ಯವಾಗಿದೆ. ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದವರು ಹೆಣವಾಗಿ ಮನೆಗೆ ಮರಳಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ 9 ಮಂದಿ ಪೈಕಿ ಚಿಕಿತ್ಸೆ ಫಲಿಸದೇ ಇವತ್ತು ಕೂಡ ಓರ್ವ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಪಾರ್ಥನೆ ತಲುಪಲಿಲ್ಲ. ಚಿಕಿತ್ಸೆ ಫಲಿಸಲಿಲ್ಲ. ಅಯ್ಯಪ್ಪ ಕಾಪಾಡಲಿಲ್ಲ. ಶಬರಿಗಿರಿವಾಸನ ದರ್ಶನಕ್ಕೆ ವೃತ ಮಾಡ್ತಿದ್ದ ಮಾಲಾಧಾರಿಗಳು ದುರಂತ ಅಂತ್ಯ ಕಂಡಿದ್ದಾರೆ. ಸ್ವಾಮಿಯೇ ಶರಣಂ ಅಯ್ಯಪ್ಪ ಅಂತ ತಲೆ ಮೇಲೆ ಇರುಮುಡಿ ಹೊತ್ತು ಶಬರಿಮಲೆಯ 18 ಮೆಟ್ಟಿಲು ಹತ್ತ ಬೇಕಿದ್ದ ಮಾಲಾಧಾರಿಗಳು ಅದೊಂದು ದುರಂತದಿಂದಾಗಿ ಒಬ್ಬೊಬ್ಬರಾಗಿ ಸಾವಿನ ಕದ ತಟ್ಟಿದ್ದಾರೆ.
ಸಿಲಿಂಡರ್ ದುರಂತದಲ್ಲಿ ಮತ್ತೊಬ್ಬ ಮಾಲಾಧಾರಿ ದುರ್ಮರಣ
ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಮಾಲಾಧಾರಿ ಕೂಡ ಇವತ್ತು ಸಾವಿನ ಕದ ತಟ್ಟಿದ್ದಾರೆ. ಹುಬ್ಬಳ್ಳಿ ಉಣಕಲ್ನ ಸಾಯಿ ನಗರದಲ್ಲಿ ಡಿಸೆಂಬರ್ 22 ರಂದು ಸಿಲಿಂಡರ್ ಸ್ಫೋಟಗೊಂಡು 9 ಮಂದಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ರು. ಆದ್ರೆ, ಚಿಕಿತ್ಸೆ ಫಲಿಸದೇ ಒಬ್ಬೊಬ್ಬರಾಗಿ ನಿನ್ನೆವರೆಗೆ 7 ಮಂದಿ ಮೃತಪಟ್ಟಿದ್ರು. ನಿಜಲಿಂಗಪ್ಪ ಬೇಪುರಿ, ಸಂಜಯ್ ಸವದತ್ತಿ, ರಾಜು ಹರ್ಲಾಪುರ, ಪವನ ಅಲಿಯಾಸ್ ಲಿಂಗರಾಜ ಬೀರನೂರ, ಶಂಕರ್ ಉರಬಿ, ಮಂಜುನಾಥ್ ವಾಗ್ಮೋಡೆ ಸಾವಿನ ಕದ ತಟ್ಟಿದ್ರು. ಇವತ್ತು ಚಿಕಿತ್ಸೆ ಫಲಿಸದೇ ಮತ್ತೊಬ್ಬ ಮಾಲಾಧಾರಿ ಪ್ರಕಾಶ್ ಭಾರಕೇರ್ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಪ್ರಕಾಶ್ ಮಗ ವಿನಾಯಕ್ ಆರೋಗ್ಯ ಚೇತರಿಕೆ
ಅದೃಷ್ಟವಶಾತ್ ಪ್ರಕಾಶ್ ಭಾರಕೇರ್ ಪುತ್ರನ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪ್ರಕಾಶ್ ಭಾರಕೇರ್ ಪುತ್ರ ವಿನಾಯಕ್ ಭಾರಕೇರ್ ಕೂಡ ತಂದೆ ಜೊತೆ ಮಾಲೆ ಧರಿಸಿದ್ದ. ಸಿಲಿಂಡರ್ ಸ್ಫೋಟದಲ್ಲಿ ವಿನಾಯಕ ಬಾರಕೇರನಿಗೆ 25ರಷ್ಟು ಸುಟ್ಟ ಗಾಯಗಳಾಗಿತ್ತು. ಸದ್ಯ ಬಾಲಕ ಚೇತರಿಸಿಕೊಂಡಿದ್ದು, ನಾಳೆ ಒಳಗೆ ಡಿಸ್ಚಾರ್ಜ್ ಮಾಡೋದಾಗಿ ಕಿಮ್ಸ್ ನಿರ್ದೆಶಕರು ತಿಳಿಸಿದ್ದಾರೆ.
ಇನ್ನೂ, ಶಾಸಕ ಮಹೇಶ್ ಟೆಂಗಿನಕಾಯಿ ಆಸ್ಪತ್ರೆಗೆ ಭೇಟಿ ನೀಡಿ ಮೃತ ಪ್ರಕಾಶ್ ಭಾರಕೇರ್ ಕುಟುಂಬಕ್ಕೆ ಸಾಂತ್ವನ ಹೇಳಿದ್ರು. ಅಲ್ಲದೆ, ಪ್ರಕಾಶ್ ಪುತ್ರ ವಿನಾಯಕ್ ಆರೋಗ್ಯವನ್ನು ವಿಚಾರಿಸಿದ್ದಾರೆ. ಈ ವೇಳೆ ಮಾತನಾಡಿದ ಶಾಸಕ ಮಹೇಶ್ ಟೆಂಗಿನಕಾಯಿ, ಮೃತಪಟ್ಟಿರೋ 8 ಮಂದಿಗೆ ಸರ್ಕಾರ ಇನ್ನೂ ಹೆಚ್ಚಿನ ಸಹಾಯ ಮಾಡಬೇಕು ಎಂದು ವಿನಂತಿ ಮಾಡಿದ್ರು. ಅಲ್ಲದೆ, ನಮ್ಮ ಕಡೆಯಿಂದ ಏನಾಗುತ್ತೋ ಆ ಸಹಾಯವನ್ನು ಮಾಡ್ತೀನಿ ಅಂತ ಭರವಸೆ ನೀಡಿದ್ರು.
ಇದನ್ನೂ ಓದಿ:2025ರ ಐಪಿಎಲ್; ಆರ್ಸಿಬಿ ಸೇರಿದ ಬೆನ್ನಲ್ಲೇ ಕನ್ನಡಿಗ ದೇವದತ್ ಪಡಿಕ್ಕಲ್ಗೆ ಶಾಕಿಂಗ್ ನ್ಯೂಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ