/newsfirstlive-kannada/media/post_attachments/wp-content/uploads/2025/02/LAXMI-TOMBOTTU.jpg)
ರಾಜ್ಯದಲ್ಲಿ ನಕ್ಸಲ್ ಹೋರಾಟಗಾರರ ಶರಣಾಗತಿ ಪರ್ವ ನಡೆಯುತ್ತಿದೆ. ವಿಕ್ರಂ ಗೌಡ ಹತ್ಯೆ ನಂತರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮಾವೋ ಉಗ್ರರು ಶಸ್ತ್ರತ್ಯಾಗ ಮಾಡಿದ್ದರು. ಕಾಡಿನಲ್ಲಿದ್ದು ನಾಡಿನ ಜನಕ್ಕಾಗಿ ಬಂದೂಕಿನ ಹೋರಾಟದ ಮೊರೆ ಹೋಗಿದ್ದ ಉಡುಪಿ ಮೂಲದ ಲಕ್ಷ್ಮೀ ಇಂದು ಕೋವಿ ಕೆಳಗಿಳಿಸಿ ಶರಣಾಗಲಿದ್ದಾರೆ.
ಕಾಡಂಚಿನ ಜನರ ಪರವಾಗಿ ಬಂದೂಕು ಹಿಡಿದು ಹೋರಾಟ ನಡೆಸುತ್ತಿದ್ದ ನಕ್ಸಲರ ಶರಣಾಗತಿಪರ್ವ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಎಲ್ಲಾ ನಕ್ಸಲರು ಶರಣಾದರು ಎಂದು ಭಾವಿಸಲಾಗಿತ್ತು. ಆದ್ರೆ ಮತ್ತೊಬ್ಬರು ನಕ್ಸಲರು ಶರಣಾಗಲು ಕ್ಷಣಗಣನೆ ಶುರುವಾಗಿದೆ.
ಶಸ್ತ್ರ ತ್ಯಾಗ ಮಾಡಿ ಸಾಮಾಜಿಕ ಜೀವನಕ್ಕೆ ನಕ್ಸಲರು ವಾಪಸ್!
ಎರಡೂವರೆ ದಶಕದಿಂದ ಕಾಡೊಳಗೆ ಇದ್ದುಕೊಂಡೇ ಹೋರಾಟ ನಡೆಸುತ್ತಿದ್ದ ಮೋಸ್ಟ್ ವಾಂಟೆಡ್ ಆರು ನಕ್ಸಲರು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾಗಿದ್ದರು. ಇಂದು ಮತ್ತೋರ್ವ ನಕ್ಸಲ್ ಮಹಿಳೆ ಶರಣಾಗತಿಗೆ ಮುಂದಾಗಿದ್ದಾರೆ. ಬಹುತೇಕ ಉಡುಪಿ ಎಸ್‌ಪಿ ಕಚೇರಿಯಲ್ಲಿ ಇಂದು ಬೆಳಗ್ಗೆ ನಕ್ಸಲ್ ಮಹಿಳೆ ಲಕ್ಷ್ಮೀ ತೊಂಬೊಟ್ಟು ಶರಣಾಗುತ್ತಿದ್ದಾರೆಂಬ ಮಾಹಿತಿ ಸಿಕ್ಕಿದೆ. ಕುಂದಾಪುರ ತಾಲೂಕಿನ ಅಮಾಸೆಬೈಲು ಸಮೀಪದ ಮಚ್ಚಟ್ಟು ಗ್ರಾಮದ ತೊಂಬೊಟ್ಟು ಲಕ್ಷ್ಮೀ ಬಂದೂಕು ಕೆಳಗಿಳಿಸುವ ಮಾಹಿತಿ ಸಿಕ್ಕಿದೆ. 2006 ಮಾರ್ಚ್ 6 ರಿಂದ ಕಣ್ಮರೆಯಾಗಿದ್ದ ಲಕ್ಷ್ಮೀ, ನಕ್ಸಲ್ ಚಳುವಳಿಯಲ್ಲಿ ಭಾಗಿಯಾಗಿ ವಾರಾಹಿ ಮತ್ತು ಕರಾವಳಿ ದಳದಲ್ಲಿ ಗುರುತಿಸಿಕೊಂಡಿದ್ದಳು. ಗ್ರಾಮದ ರಸ್ತೆ ಸಮಸ್ಯೆ, ಸಾರಾಯಿ ಅಂಗಡಿ ವಿರುದ್ಧ ಹೋರಾಟಗಳಲ್ಲಿ ಭಾಗಿಯಾಗಿ ಸಾಮಾಜಿಕವಾಗಿ ಗುರುತಿಸಿಕೊಂಡು, ನಕ್ಸಲ್ ಚಳುವಳಿಯಿಂದ ಆಕರ್ಷಿತಳಾಗಿದ್ದಳು.
ನಕ್ಸಲ್ ಗುಂಪಿನಲ್ಲಿ ಬಂಡಾಯದ ಹಾಡುಗಾರ್ತಿಯಾಗಿದ್ದ ಲಕ್ಷ್ಮೀ 2009 ರಲ್ಲೇ ಆಂಧ್ರಪ್ರದೇಶದಲ್ಲಿ ಪೋಲಿಸರಿಗೆ ಶರಣಾಗಿ ಮಾಜಿ ನಕ್ಸಲ್ ಸಂಜೀವ್ ಅಲಿಯಾಸ್ ಸಲೀಂನನ್ನು ವಿವಾಹವಾಗಿದ್ದಳು. ಪ್ರಸ್ತುತ ಕೌಟುಂಬಿಕ ಜೀವನವನ್ನು ಆಂಧ್ರಪ್ರದೇಶದಲ್ಲಿ ನಡೆಸುತ್ತಿದ್ದರೂ ಕರ್ನಾಟಕದಲ್ಲಿ ಮೂರು ಪ್ರಕರಣ ಈಕೆಯ ಮೇಲಿದೆ.
ಇದನ್ನೂ ಓದಿ: ಹಾಸನದಲ್ಲಿ ಲಾಂಗ್ ತೋರಿಸಿ ಆವಾಜ್ ಕೇಸ್; ಪೊಲೀಸರಿಂದ ಫೈಯರ್! ಯಾರು ಈ ಪುಡಿ ರೌಡಿ?
ಲಕ್ಷ್ಮೀ ತೊಂಬೊಟ್ಟು ಮೇಲೆ ಮೂರು ಕೇಸ್ಗಳಿವೆ. 2007ರಲ್ಲಿ ಕೂಂಬಿಂಗ್ ಮಾಡುತ್ತಿದ್ದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ಹಾಗೂ 2008 ರಲ್ಲಿ ಗಿರಿ ಜನರಿಗೆ ಕಾಡುತ್ಪತ್ತಿಗಳನ್ನು ಸಂಗ್ರಹ ಮಾಡಲು ನಾರಾಯಣ ನಾಯ್ಕ ಅಡ್ಡಿಪಡಿಸುತ್ತಾರೆಂಬ ಕಾರಣಕ್ಕೆ ಅವರಿಗೆ ಬೆದರಿಕೆ ಹಾಕಿದ ಕೇಸ್ ಕೂಡ ಇದೆ. 2009ರಲ್ಲಿ ಕುಂದಾಪುರ ತಾಲೂಕಿನ ಹಲವೆಡೆ ನಕ್ಸಲ್ ಕರಪತ್ರಗಳು ಅಂಟಿಸಿ ಪ್ರಚಾರ ಮಾಡಿದ್ದ ಪ್ರಕರಣ ಕೂಡ ಇದೆ.
ಲಕ್ಷ್ಮೀ ಪತಿ ಸಂಜೀವ್ ಸದ್ಯ ನಕ್ಸಲ್ ಚಟುವಟಿಕೆ ಬಿಟ್ಟು ಮುಖ್ಯ ವಾಹಿನಿಗೆ ಬಂದಿದ್ದಾರೆ. ಸದ್ಯ ಲಕ್ಷ್ಮೀ ಕೂಡ ಶರಣಾಗಲು ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ