ಕನಸು ನನಸಾಗೋಕೆ ಒಂದೇ ಹೆಜ್ಜೆ.. ಬಿಗ್ ಮೆಸೇಜ್​ ಕಳಿಸಿದ ವಿರಾಟ್​ ಕೊಹ್ಲಿ!

author-image
Bheemappa
Updated On
ನಿವೃತ್ತಿಗೂ ವಿರಾಟ್ ಪಕ್ಕಾ ಪ್ಲಾನ್; ಎರಡು ಬಿಗ್ ಟಾರ್ಗೆಟ್ ಫಿಕ್ಸ್ ಮಾಡಿದ ಕೊಹ್ಲಿ..!
Advertisment
  • ಸೀಸನ್​​ 18, ಕೊಹ್ಲಿ ಜೆರ್ಸಿ ನಂ-​ 18, ಟ್ರೋಫಿ RCBದು ಆಗುತ್ತಾ?
  • ಐಪಿಎಲ್​ನಲ್ಲಿ ಬೊಂಬಾಟ್ ಪರ್ಫಾಮೆನ್ಸ್​ ನೀಡುತ್ತಿರುವ ವಿರಾಟ್
  • One More To Go ಈ ಮೆಸೇಜ್​ ಕೊಹ್ಲಿ ಕಳಿಸಿದ್ದು ಯಾರಿಗೆ?

ಸೀಸನ್​ 18ರ ಐಪಿಎಲ್​ನಲ್ಲಿ ಆರ್​​ಸಿಬಿ ಫೈನಲ್​ಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಅಸಂಖ್ಯ ಅಭಿಮಾನಿಗಳ ಕನಸು ನನಸಾಗಲು ಒಂದೇ ಒಂದು ಹೆಜ್ಜೆ ಬಾಕಿ. ಅಭಿಮಾನಿಗಳ ವಲಯದಲ್ಲಿ ಟ್ರೋಫಿ ಕನಸು ಚಿಗುರೊಡೆದಿರುವಾಗಲೇ ಆರ್​​ಸಿಬಿಯ ಕಿಂಗ್​​​​ ವಿರಾಟ್​ ಕೊಹ್ಲಿ ಒಂದು ಸಂದೇಶ ಸಾರಿದ್ದಾರೆ. ವಿರಾಟ ಸಂದೇಶ ಏನು?.

ಒಂದಲ್ಲ, ಎರಡಲ್ಲ ಸುದೀರ್ಘ 18 ವರ್ಷಗಳ ಕನಸು. 2008ರ ಚೊಚ್ಚಲ ಆವೃತ್ತಿಯಿಂದ ಈವರೆಗೆ ಭಗ್ನವಾದ ಹೃದಯಗಳು ಅದೆಷ್ಟೋ, ನುಚ್ಚು ನೂರಾದ ಕನಸುಗಳು ಅದೆಷ್ಟೋ. ಈ ತಾಳ್ಮೆ, ಸಂಯಮ ಅನ್ನೋ ಪದಕ್ಕೆ ಸಮಾನಾರ್ಥಕ ಪದವೇ ಆರ್​​ಸಿಬಿ ಅಭಿಮಾನಿಗಳು. ನಿಷ್ಠೆ ಅನ್ನೋ ಪದಕ್ಕಂತೂ ತಕ್ಕಂತೆ ಬದುಕಿರೋದು ರಾಯಲ್​​ ಪಡೆಯ ಲಾಯಲ್​​​ ಅಭಿಮಾನಿಗಳು. ಗೆಲುವಿಗಾಗಿ ದೇವರನ್ನ ಪ್ರಾರ್ಥಿಸಿ, ಸೋತಾಗ ಆ ದೇವರಿಗೆ ಬೈಯ್ದ ಮನಸ್ಸುಗಳಿಗೆ ಬರವೇ ಇಲ್ಲ. ಸುದೀರ್ಘ ಕಾಯುವಿಕೆಯ ಬಳಿಕ ಕೊನೆಗೂ ಆ ದೇವರು ಕಣ್ಣು ಬಿಟ್ಟಂತಿದೆ.

publive-image

18 ವರ್ಷ... ಒಂದು ಕನಸು.. ಒಂದೇ ಹೆಜ್ಜೆ ಬಾಕಿ.!

ಸೀಸನ್​​ 18ರ ಐಪಿಎಲ್​ನ ಕ್ವಾಲಿಫೈಯರ್​​ ಫೈಟ್​ನಲ್ಲಿ ಬೆಂಕಿ ಪರ್ಫಾಮೆನ್ಸ್​​ ನೀಡಿ RCB ಫೈನಲ್​ಗೆ ರಾಯಲ್​​ ಎಂಟ್ರಿ ಕೊಟ್ಟಿದೆ. ಪಂಜಾಬ್​ನ ಚಿಂದಿ ಉಡಾಯಿಸಿದ ಆರ್​​ಸಿಬಿ 18 ವರ್ಷಗಳ ಐಪಿಎಲ್​ ಇತಿಹಾಸದಲ್ಲಿ 4ನೇ ಬಾರಿ ಫೈನಲ್​ಗೆ ಲಗ್ಗೆ ಇಟ್ಟಿದೆ. ಆದ್ರೆ, ಈ ಹಿಂದಿನ 3 ಬಾರಿಗೆ ಹೋಲಿಸಿದ್ರೆ, ಈ ಬಾರಿ ಆರ್​​ಸಿಬಿ ಎಲ್ಲಾ ಆಯಾಮದಲ್ಲೂ ಸ್ಪಷ್ಟ ಹಾಗೂ ಬಲಿಷ್ಠವಾಗಿದೆ. ರೆಡ್​ ಆರ್ಮಿಯ ಬೊಂಬಾಟ್​ ಪರ್ಫಾಮೆನ್ಸ್​ ನೋಡಿ ಆರ್​​ಸಿಬಿಯ ಫ್ಯಾನ್ಸ್​ ಮಾತ್ರವಲ್ಲ, ಕ್ರಿಕೆಟ್​ ಲೋಕವೇ ಈ ಸಲ ಕಪ್​ ಆರ್​​ಸಿಬಿಯದ್ದೇ ಅಂತಿದೆ.

ಸೀಸನ್​​ 18, ಜೆರ್ಸಿ ನಂಬರ್​ 18, ಕೊಹ್ಲಿಗಾಗಿ ಕಪ್​​​.!

ಆರ್​ಸಿಬಿ ಅಂದ್ರೆ ಕೊಹ್ಲಿ.. ಕೊಹ್ಲಿ ಅಂದ್ರೆ ಆರ್​​ಸಿಬಿ.. ಆರ್​​ಸಿಬಿ ಅನ್ನೋದು ಆಕರ್ಷಣೆಯಾಗಿದ್ದೇ ವಿರಾಟ್​​ ಕೊಹ್ಲಿ ಅಯಸ್ಕಾಂತದಿಂದಾಗಿ. ಇವತ್ತು ಫ್ರಾಂಚೈಸಿ ಏನೇ ಆಗಿದ್ರೂ ಒಂದು ವಿರಾಟ್​ ಕೊಹ್ಲಿಯಿಂದ, ಇನ್ನೊಂದು ಅಭಿಮಾನಿಗಳಿಂದ. ಈ ಕೊಹ್ಲಿ ಮತ್ತು ಅಭಿಮಾನಿಗಳಿಗಿರೋ ಒಂದು ಸಾಮ್ಯತೆ ಅಂದ್ರೆ ಅದು ಲಾಯಲಿಟಿ. ಒಂದು ಬಾರಿ.. ಒಂದು ಬಾರಿ ಕಪ್​ ನಮ್ದಾಗಬೇಕು ಅನ್ನೋದಷ್ಟೇ ಕೊಹ್ಲಿ ಹಾಗೂ ಅಭಿಮಾನಿಗಳ ಅಲ್ಟಿಮೇಟ್​ ಡ್ರೀಮ್​. ಜೆರ್ಸಿ ನಂಬರ್​​ 18ರ ಒಡೆಯ ಕೊಹ್ಲಿಗಾಗಿ 18ನೇ ಸೀಸನ್​ನ ಕಪ್​ ಗೆಲ್ಲಬೇಕು ಅನ್ನೋದು ಎಲ್ಲರ ಆಸೆಯಾಗಿದೆ.

publive-image

ಗೆಲುವಿನ ಬಳಿಕ ಪತ್ನಿ ಅನುಷ್ಕಾಗೆ ಕೊಹ್ಲಿ ಸಂದೇಶ.!

ಪಂಜಾಬ್​ ವಿರುದ್ಧದ ಪಂದ್ಯ ಗೆದ್ದ ಬೆನ್ನಲ್ಲೇ ಆರ್​​ಸಿಬಿ ಡಗೌಟ್​ನಲ್ಲಿದ್ದ ಕೊಹ್ಲಿ ಸಂಭ್ರಮದ ಕಡಲಲ್ಲಿ ತೇಲಾಡಿದ್ರು. ಜಂಪ್​ ಮಾಡಿ ಸೆಲಬ್ರೇಟ್​ ಮಾಡಿದ ವಿರಾಟ್​​ ಕೊಹ್ಲಿ ಇದೇ ವೇಳೆ ಸ್ಟ್ಯಾಂಡ್​ನಲ್ಲಿದ್ದ ಪ್ರೀತಿಯ ಪತ್ನಿ ಅನುಷ್ಕಾ ಶರ್ಮಾ ಕಡೆ ಸನ್ನೆ ಮಾಡಿದ್ರು. ONE MORE TO GO.., YES..! ನನ್ನ ಕನಸು ನನಸಾಗೋಕೆ ಒಂದೇ ಹೆಜ್ಜೆ ಬಾಕಿ ಎಂಬರ್ಥದಲ್ಲಿ ಕೊಹ್ಲಿ ಸನ್ನೆ ಮಾಡಿದ್ರು. ಕೊಹ್ಲಿಯ ಈ ಸಂದೇಶ, ಹಾಗೂ ಈ ಸೀಸನ್​ನಲ್ಲಿ ಕೊಹ್ಲಿ ಆಡ್ತಿರೋ ಆಟ ಅಭಿಮಾನಿಗಳ ವಲಯದಲ್ಲಿ ಕಪ್​ ನಮ್ದಾಗುತ್ತೆ ಅನ್ನೋ ಆಸೆಯನ್ನ ದುಪ್ಪಟ್ಟು ಮಾಡಿದೆ.

ಮುಲ್ಲನ್​​ಪುರದಲ್ಲಿ ‘ಲೀಡರ್​ ಕೊಹ್ಲಿ’ಯ ದರ್ಶನ.!

ಕಪ್​ ಕೊರಗಿಗೆ ಬ್ರೇಕ್​ ಹಾಕೋ ನಿಟ್ಟಿನಲ್ಲಿ ಮೊದಲ ಸೀಸನ್​​ನಿಂದಲೂ ವಿರಾಟ್​​ ಕೊಹ್ಲಿ ತನ್ನಿದಾಂದ ಎಲ್ಲಾ ಪ್ರಯತ್ನ ಮಾಡಿದ್ದಾರೆ. ಆದ್ರೆ, ಅದೃಷ್ಟ ಕೈ ಹಿಡಿದಿಲ್ಲ. ಈ ಬಾರಿ ಕೂಡ ಕೊಹ್ಲಿ ತಂಡಕ್ಕಾಗಿ ಎಲ್ಲವನ್ನೂ ಧಾರೆ ಎರೀತಿದ್ದಾರೆ. ಮೊನ್ನೆ ನಡೆದ ಮಹತ್ವದ ಕ್ವಾಲಿಫೈಯರ್​ ಪಂದ್ಯದಲ್ಲೂ ಅಷ್ಟೇ ನಾಯಕ ರಜತ್​ ಪಾಟಿದಾರ್​ ಬೆನ್ನಿಗೆ ಕೊಹ್ಲಿ ನಿಂತಿದ್ದರು.

ಅನುಭವಿ ಹಾಗೂ ಸೀನಿಯರ್​ ಆಟಗಾರನಾಗಿ ನಾಯಕ, ಬೌಲರ್​ಗಳಿಗೆ ಅಗತ್ಯ ಸಲಹೆ-ಸೂಚನೆ ನೀಡ್ತಾ ಇದ್ರು. ಬೌಲಿಂಗ್​ ಬದಲಾವಣೆ, ಫೀಲ್ಡ್​ ಪ್ಲೇಸ್​ಮೆಂಟ್​ ವಿಚಾರದಲ್ಲಿ ವಿರಾಟ್​​ ಫುಲ್​ ಇನ್ವಾಲ್ವ್​ ಆಗಿದ್ರು. ಲೀಡರ್ ಕೊಹ್ಲಿಯ ಇನ್ವಾಲ್ವ್​ಮೆಂಟ್​​ ಆರ್​​ಸಿಬಿಯ ಅಬ್ಬರದ ಗೆಲುವಿನಲ್ಲಿ ಕೊಹ್ಲಿ ಮಹತ್ವದ ಪಾತ್ರ ನಿರ್ವಹಿಸಿಸ್ತು.

ಇದನ್ನೂ ಓದಿ: RCB ಟ್ರೋಫಿ ಗೆದ್ದೇ ಗೆಲ್ಲುತ್ತೆ.. ಮಿಸ್ಟರ್​ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಏನ್ ಹೇಳಿದರು?

publive-image

ಬ್ಯಾಟಿಂಗ್​ನಲ್ಲಿ ವೀರಾವೇಷ.. ಚೇಸಿಂಗ್​​ನಲ್ಲಿ ವಿರಾಟ​ ಬಲ.!

ಪಂಜಾಬ್​ ವಿರುದ್ಧದ ಕ್ವಾಲಿಫೈಯರ್​ ಪಂದ್ಯದಲ್ಲಿ ನಾಯಕನ ಅವತಾರದಲ್ಲಿ ಕಾಣಿಸಿಕೊಂಡ ಕೊಹ್ಲಿ, ಇಡೀ ಸೀಸನ್​ನಲ್ಲಿ ಬ್ಯಾಟಿಂಗ್​ನಲ್ಲಿ ವೀರಾವೇಷ ತೋರಿದ್ದಾರೆ. 55.81ರ ಸರಾಸರಿಯಲ್ಲಿ ರನ್​ ಕೊಳ್ಳೆ ಹೊಡೆದಿರೋ ವಿರಾಟ್​ 5 ಹಾಫ್​​ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. 614 ರನ್​ಗಳಿಸಿರೋ ವಿರಾಟ್ ಆರ್​ಸಿಬಿಯ ಬ್ಯಾಟಿಂಗ್​ ಬಲವಾಗಿದ್ದಾರೆ. ಚೇಸಿಂಗ್​ನಲ್ಲಂತೂ ರೆಡ್​ ಆರ್ಮಿಯ ರಿಯಲ್​ ಪವರ್​ ಅಡಗಿರೋದೆ ಕೊಹ್ಲಿಯಲ್ಲಿ ಎಬಂತಾಗಿದೆ.

ಐಪಿಎಲ್​​ ಇತಿಹಾಸದ ಮೋಸ್ಟ್​ ಅನ್​ ಲಕ್ಕಿ ಟೀಮ್ ಅಂದ್ರೆ ಬಹುತೇಕರು ಆರ್​​ಸಿಬಿ ಹೆಸರೇಳ್ತಾರೆ. ಅನ್​​ಲಕ್ಕಿ ಪ್ಲೇಯರ್​​ ಯಾರು ಅಂದ್ರೆ ವಿರಾಟ್​ ಕೊಹ್ಲಿ ಅನ್ನೋ ಉತ್ತರ ಬರುತ್ತೆ. ವಿಶ್ವ ಶ್ರೇಷ್ಠ ಆಟಗಾರರು ಬಂದ್​ ಹೋದ್ರೂ, ಚಾಣಕ್ಯರಂತ ಕೋಚ್​ಗಳು ಬಂದ್​ ಹೋದ್ರೂ, ಟೀಮ್ ಎಷ್ಟೇ ಬಲಿಷ್ಠವಾಗಿ ಕಂಡರೂ 18 ಸೀಸನ್​ನಲ್ಲಿ ಬರಿಗೈಯಲ್ಲಿ ವಾಪಸ್​ ಆಗಿದೆ. ಆದ್ರೆ, ಈ ಬಾರಿ ಆರ್​​ಸಿಬಿ ಇತಿಹಾಸವನ್ನ ಬದಲಿಸಲು ಪಣ ತೊಟ್ಟಂತಿದೆ. ಅಹ್ಮದಾಬಾದ್​​ನಿಂದು ಕಪ್​ ಗೆದ್ದು ಬೆಂಗಳೂರಿಗೆ ಬರಲಿ ಅನ್ನೋದು ಎಲ್ಲರ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment