/newsfirstlive-kannada/media/post_attachments/wp-content/uploads/2025/04/Sparrow_1.jpg)
ತಿರುವನಂತಪುರಂ: ಟೆಕ್ಸ್ಟೈಲ್ ಅಂಗಡಿಯೊಂದರಲ್ಲಿ ಕಳೆದ 3 ದಿನಗಳಿಂದ ಆಹಾರ, ನೀರು ಇಲ್ಲದೆ ಸಿಲುಕಿಕೊಂಡಿದ್ದ ಒಂದೇ ಒಂದು ಗುಬ್ಬಿಯ ಜೀವವನ್ನು ಗ್ರಾಮಸ್ಥರು, ಜಿಲ್ಲಾಧಿಕಾರಿಗಳು ಹಾಗೂ ನ್ಯಾಯಾಂಗ ಅಧಿಕಾರಿಗಳು ಸೇರಿ ಕಾಪಾಡಿದ್ದಾರೆ.
ಕೇರಳದ ಕಣ್ಣೂರಿನ ಉಳ್ಳಿಕಲ್ ಗ್ರಾಮದಲ್ಲಿ ಪಾಲುದಾರರ ಮಧ್ಯೆ ವಿವಾದ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದಂತೆ ಕಳೆದ 6 ತಿಂಗಳಿಂದ ಟೆಕ್ಸ್ಟೈಲ್ ಅಂಗಡಿಯನ್ನು ಮುಚ್ಚಲಾಗಿತ್ತು. ಈ ಟೆಕ್ಸ್ಟೈಲ್ ಅಂಗಡಿ ಒಳಗೆ ಸಂಪರ್ಕ ಇರುವ ಪೈಪ್ ಮೂಲಕ ಗುಬ್ಬಚ್ಚಿ ಒಳಗೆ ಹೋಗಿದೆ. ಆದರೆ ಮತ್ತೆ ಹೊರಗೆ ಹೇಗೆ ಬರುವುದೆಂದು ಅದಕ್ಕೆ ಗೊತ್ತಾಗಿಲ್ಲ. ಇದನ್ನು ಗ್ಲಾಸ್ ಮೂಲಕ ಸ್ಪಷ್ಟವಾಗಿ ಕಾಣುತ್ತಿದ್ದನ್ನು ನೋಡಿದ ಗ್ರಾಮಸ್ಥರು ಅದನ್ನು ಹೊರ ತೆಗೆಯಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.
ಕೋರ್ಟ್ ಆದೇಶದಂತೆ ಅಂಗಡಿ ಮುಚ್ಚಿದ್ದರಿಂದ ಅದರ ಶೆಟರ್ ಬಾಗಿಲು ತೆಗೆಯಲು ಯಾರು ಮುಂದೆ ಬಂದಿಲ್ಲ. ಗ್ರಾಮಸ್ಥರೆಲ್ಲ ಸೇರಿ ಗ್ರಾಮ ಪಂಚಾಯತಿ ಸಿಬ್ಬಂದಿ, ಅರಣ್ಯ ಹಾಗೂ ಕಂದಾಯ ಅಧಿಕಾರಿಗಳನ್ನ ಸಂಪರ್ಕ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಈ ಘಟನೆಯು ಮಾಧ್ಯಮದ ಮೂಲಕ ಎಲ್ಲರ ಹೃದಯ ಸ್ಪರ್ಶಿಸಿದೆ. ಬಳಿಕ ಜಿಲ್ಲಾಧಿಕಾರಿ ಅರುಣ್ ಕೆ ವಿಜಯನ್ ಅವರನ್ನು ಗ್ರಾಮದವರು ಸಂಪರ್ಕ ಮಾಡಿದ್ದಾರೆ.
ಈ ವೇಳೆ ಜಿಲ್ಲಾಧಿಕಾರಿಗಳು, ಗ್ರಾಮಸ್ಥರು ಸೇರಿ ಜಿಲ್ಲಾ ನ್ಯಾಯಾಧೀಶ ನಿಸಾರ್ ಅಹ್ಮದ್ ಅವರನ್ನು ಸಂಪರ್ಕಿಸಿ ಮನವಿ ಮಾಡಿದ್ದಾರೆ. ಇದರ ಬಗ್ಗೆ ಮರು ಮಾತನಾಡದೇ ಜಿಲ್ಲಾ ನ್ಯಾಯಾಧೀಶರು ಹೈಕೋರ್ಟ್ನ ಇಬ್ಬರು ನ್ಯಾಯಾಧೀಶರನ್ನು ಸಂಪರ್ಕ ಮಾಡಿ ಅಂಗಡಿ ತೆರೆಯಲು ಅನುಮತಿ ಪಡೆದುಕೊಂಡರು.
ಬಳಿಕ ಥಲಸೆರಿ ನಗರದಿಂದ 50 ಕಿಲೀ ಮೀಟರ್ ದೂರ ಪ್ರಯಾಣ ಮಾಡಿದ ಜಿಲ್ಲಾಧಿಕಾರಿಗಳು, ಜಿಲ್ಲಾ ನ್ಯಾಯಾಧೀಶರು ಸೇರಿ ಗ್ರಾಮಕ್ಕೆ ಆಗಮಿಸಿ ಟೆಕ್ಸ್ಟೈಲ್ ಅಂಗಡಿಯ ಶೆಟರ್ ತೆರೆದಿದ್ದಾರೆ. ಶೆಟರ್ನ್ನು ತೆರೆಯುತ್ತಿದ್ದಂತೆ ಗುಬ್ಬಿಚ್ಚಿ ಸಂತಸದಿಂದ ಹಾರಿಕೊಂಡು ಹೋಗಿದೆ. ಗುಬ್ಬಿ ಹಾರಿ ಹೋಗುತ್ತಿದ್ದಂತೆ ಟೆಕ್ಸ್ಟೈಲ್ ಅಂಗಡಿ ಬಳಿ ಸೇರಿದ್ದ ನೂರಾರು ಜನರು ಓಹೋ.. ಎಂದು ಕೂಗಿ ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:LSG ವಿರುದ್ಧದ ಪಂದ್ಯಕ್ಕೂ ಮೊದಲೇ ಗಿಲ್ಗೆ ಬಿಗ್ ಶಾಕ್.. ಸ್ಟಾರ್ ಆಲ್ರೌಂಡರ್ IPLನಿಂದಲೇ ಔಟ್..!
ಈ ಸಂತಸದ ಕ್ಷಣ ಬಗ್ಗೆ ಜಿಲ್ಲಾ ನ್ಯಾಯಾಧೀಶ ನಿಸಾರ್ ಅಹ್ಮದ್ ಮಾತನಾಡಿ, ಭೂಮಿ ಮೇಲೆ ಪ್ರತಿಯೊಂದು ಜೀವ ಕೂಡ ಮುಖ್ಯ. ನಾವು ಮಾಡಿದ ಕಾನೂನುಗಳು ಕೆಲವೊಮ್ಮೆ ತೊಡಕಾಗಬಹುದು. ಆದರೆ ತಾಳ್ಮೆಯಿಂದ ಕಾನೂನು ಪ್ರಕಾರ ಹೋದರೆ ಎಲ್ಲವೂ ಸುಲಭ. ಯಾವುದೇ ಜೀವಕ್ಕೆ ಕಾನೂನು ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ