/newsfirstlive-kannada/media/post_attachments/wp-content/uploads/2025/05/Operation-Sindhoor-1.jpg)
ಆಪರೇಷನ್ ಸಿಂಧೂರ್ ಹೆಸರಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಆದರೂ ಇನ್ನೂ ದೇಶದ ಜನ ದಿಲ್ ಮಾಂಗೇಮೋರ್ ಅಂತಾ ಹೇಳುತ್ತಾ ಇದ್ದಾರೆ. ಮುಂದಿನ 24 ಗಂಟೆಯಲ್ಲಿ ಪ್ರತಿದಾಳಿಯ ಬಗ್ಗೆ ಪಾಕಿಸ್ತಾನ ಕೂಡ ಎಚ್ಚರಿಸಿದೆ. ಪಾಕ್ ಮತ್ತೆ ತನ್ನ ನರಿಬುದ್ಧಿ ತೋರಿಸಿದರೆ ಭಾರತ ಆಪರೇಷನ್ ಸಿಂಧೂರ 2.O ನಡೆಸಲು ಹಿಂದೆ ಮುಂದೆ ನೋಡಲ್ಲ.
ಭಾರತ ಕೇವಲ 25 ನಿಮಿಷಗಳಲ್ಲಿ 9 ಉಗ್ರರ ಅಡಗುತಾಣಗಳನ್ನ ಧ್ವಂಸಗೊಳಿಸಿದೆ. 90ಕ್ಕೂ ಹೆಚ್ಚು ಉಗ್ರರು ಪರಲೋಕ ಸೇರಿರುವ ಬಗ್ಗೆ ಮಾಹಿತಿ ಇದೆ. ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ಕುಟುಂಬ, ಆಪ್ತರು ಸೇರಿ 14 ಜನ ಸಾವನ್ನಪ್ಪಿದ್ದಾರೆ.
ಭಾರತದಲ್ಲಿ ಭಯೋತ್ಪಾದಕತೆ ಹರಡಲು ಈ ಎಲ್ಲಾ ಸಂಘಟನೆಗಳಿಗೆ ಪಾಕಿಸ್ತಾನ ಸೇನೆ, ಪಾಕ್ನ ಗುಪ್ತಚರ ಸಂಸ್ಥೆ ಐಎಸ್ಐ ಬೆಂಬಲ ನೀಡುತ್ತದೆ. ಇಲ್ಲಿನ ಉಗ್ರರಿಗೆ ಸಂಪನ್ಮೂಲ, ಸೈದ್ಧಾಂತಿಕ, ಮಿಲಿಟರಿ ಬೆಂಬಲ, ನೇರ ಯುದ್ಧ ತರಬೇತಿ ಕೂಡ ಸೇನೆಯೇ ನೀಡುತ್ತದೆ.
ಇದನ್ನೂ ಓದಿ: ಪತರಗುಟ್ಟಿದ ಪಾಕಿಸ್ತಾನ.. ಆಪರೇಷನ್ ಸಿಂಧೂರ ಸಕ್ಸಸ್ ಸೀಕ್ರೆಟ್ಸ್ ಏನು?
ಇಲ್ಲಿನ ತರಬೇತಿ ಶಿಬಿರಗಳಿಗೆ ಪಾಕಿಸ್ತಾನಿ ಮಿಲಿಟರಿ ಅಧಿಕಾರಿಗಳು ರೆಗ್ಯುಲರ್ ಅಗಿ ಭೇಟಿ ನೀಡುತ್ತಾರೆ. ಈ ಗುಂಪುಗಳೆಲ್ಲಾ ಜಾಗತಿಕವಾಗಿ ಗಮನ ತಪ್ಪಿಸಲು ಈ ಗುಂಪುಗಳಿಗೆ ದಿ ರೆಸಿಸ್ಟೆನ್ಸ್ ಫ್ರಂಟ್(TRF), ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್ (PAFF) ಮತ್ತು ಕಾಶ್ಮೀರಿ ಟೈಗರ್ಸ್(KT) ಎಂಬ ಹೆಸರಿನಡಿಯೂ ಚಟುವಟಿಕೆ ಮಾಡುತ್ತವೆ.
ಭಾರತೀಯ ಸೇನೆ ಧ್ವಂಸಗೊಳಿಸಿರುವ 9 ಉಗ್ರ ಶಿಬಿರಗಳ ಬಗ್ಗೆ ಸಂಕ್ಷಿಪ್ತವಾಗಿ ನೋಡುವುದಾದರೆ.
1. ಮರ್ಕಜ್ ಸುಭಾನ್ ಅಲ್ಲಾ, ಬಹವಾಲ್ಪುರ್
ಇದು ಜೈಶ್-ಎ-ಮೊಹ್ಮದ್ ಸಂಘಟನೆಯ ತರಬೇತಿ ಕೇಂದ್ರ. 2015ರಿಂದ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿಯೇ ಜೈಶ್-ಎ-ಮೊಹ್ಮದ್ ಸಂಘಟನೆಯ ಪ್ರಧಾನ ಕಚೇರಿ ಇತ್ತು. 2019ರ ಫೆ.14ರಂದು ನಡೆದ ಪುಲ್ವಾಮಾ ದಾಳಿ ಸೇರಿ ಪ್ರಮುಖ ದಾಳಿಗಳ ಯೋಜನೆ ಸಿದ್ಧವಾಗಿದ್ದು ಇಲ್ಲಿಯೇ. ಇಲ್ಲಿ ಜೈಶ್-ಎ-ಮೊಹ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್, ಮುಫ್ತಿ ಅಬ್ದುಲ್ ರೌಫ್ ಅಸ್ಗರ್, ಮೌಲಾನಾ ಅಮ್ಮರ್ ಕುಟುಂಬ ಸಮೇತ ಇಲ್ಲಿಯೇ ವಾಸಿಸುತ್ತಿದ್ದ. ಮಸೂದ್ ಅಜರ್ ಇಲ್ಲಿಯೇ ಅನೇಕ ಬಾರಿ ಭಾರತ ವಿರೋಧಿ ಭಾಷಣ ಮಾಡಿ, ಮುಸ್ಲಿಂ ಯುವಕರು ಇಸ್ಲಾಮಿಕ್ ಜಿಹಾದ್ ಸೇರಲು ಕರೆ ನೀಡಿದ್ದ.
2. ಮರ್ಕಜ್ ತೈಬಾ, ಮುರಿಡ್ಕೆ
2000ನೇ ಇಸವಿಯಲ್ಲಿ ಸಹದಾನ್, ಮುರಿಡ್ಕೆ (ಶೇಖ್ಪುರ, ಪಂಜಾಬ್)ನಲ್ಲಿ ಸ್ಥಾಪನೆಯಾದ ಮರ್ಕಜ್ ತೈಬಾ ಶಿಬಿರ ಲಷ್ಕರ್ -ಎ-ತೊಯ್ಬಾದ ಮುಖ್ಯ ತರಬೇತಿ ಶಿಬಿರ. ಇಲ್ಲಿ ಉಗ್ರರಿಗೆ ಶಸ್ತ್ರಾಸ್ತ್ರ ನಿರ್ವಹಿಸುವ ತರಬೇತಿ, ಯವಕರನ್ನು ಮತಾಂಧರನ್ನಾಗಿ ಮಾಡಲು ಇಲ್ಲಿ ಧಾರ್ಮಿಕ ಭಾಷಣ ಮಾಡಲಾಗುತ್ತಿತ್ತು. ಪ್ರತಿ ವರ್ಷ ಇಲ್ಲಿ ಸುಮಾರು 1 ಸಾವಿರ ಯುವಕರು ಪ್ರವೇಶ ಪಡೆಯುತ್ತಿದ್ದರು. ಇಲ್ಲಿ ಮಸೀದಿ, ಅತಿಥಿಗೃಹ ನಿರ್ಮಾಣಕ್ಕೆ ಉಗ್ರ ಒಸಾಮಾ ಬಿನ್ ಲಾಡೆನ್ ಆರ್ಥಿಕ ನೆರವು ನೀಡಿದ್ದ. ಮುಂಬೈ ದಾಳಿಕೋರರಿಗೆ ಇಲ್ಲಿಯೇ ತರಬೇತಿ ನೀಡಲಾಗಿತ್ತು. ಉಗ್ರ ಅಜ್ಮಲ್ ಕಸಬ್ ಕೂಡ ಇಲ್ಲಿಯೇ ತರಬೇತಿ ಪಡೆದಿದ್ದ.
3. ಸರ್ಜಲ್/ತೆಹ್ರಾ ಕಲಾನ್
ಪಾಕಿಸ್ತಾನದ ಪಂಜಾಬ್ನ ನರೋವಲ್ ಜಿಲ್ಲೆಯಲ್ಲಿರುವ ಇದು ಜೈಶ್-ಎ-ಮೊಹ್ಮದ್ ಸಂಘಟನೆಯ ಪ್ರಾಥಮಿಕ ಕೇಂದ್ರದಂತೆ ಕಾರ್ಯನಿರ್ವಹಿಸುತ್ತಿತ್ತು. ಜಮ್ಮು-ಕಾಶ್ಮೀರದ ಸಾಂಬಾ ಸೆಕ್ಟರ್ ಬಳಿಯ ಅಂತಾರಾಷ್ಟ್ರೀಯ ಗಡಿಯಿಂದ 6 ಕಿಮೀ ದೂರದಲ್ಲಿರುವ ಈ ಸ್ಥಳದಲ್ಲಿ ಸುರಂಗ ನಿರ್ಮಾಣ, ಡ್ರೋಣ್ ಕಾರ್ಯಾಚರಣೆ, ಮಾದಕ ವಸ್ತು ಕಳ್ಳಸಾಗಾಣಿಕೆಗೆ ಬಳಕೆಯಾಗುತ್ತಿತ್ತು. ಉಗ್ರ ಮುಫ್ತಿ ಅಬ್ದುಲ್ ರೌಫ್ ಆಸ್ಗರ್ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದ.
4. ಮಹಮೂನ ಜೋಯಾ ಕೇಂದ್ರ, ಸಿಯಾಲ್ಕೋಟ್
ಸಿಯಾಲ್ಕೊಟ್ನ ಹೆಡ್ ಮಾರ್ಲಾದ ಕೋಟ್ಲಿಯಲ್ಲಿರುವ ಈ ಉಗ್ರ ಶಿಬಿರದಲ್ಲಿ ಹಿಜ್ಬುಲ್ ಮುಜಾಹುದ್ದೀನ್ ಉಗ್ರರಿಗೆ ತರಬೇತಿ ಮತ್ತು ದಾಳಿಯ ತಂತ್ರಗಳ ತರಬೇತಿ ನೀಡಲಾಗುತ್ತಿತ್ತು. ಇದರ ಉಸ್ತುವಾರಿ ಮತ್ತೋರ್ವ ಉಗ್ರ ಮೊಹ್ಮದ್ ಇರ್ಫಾನ್ ಖಾನ್(ಇರ್ಫಾನ್ ತಂಡಾ). ಈತ ಹಲವು ದಾಳಿಗಳ ಸೂತ್ರದಾರ.
5. ಮರ್ಕಜ್ ಅಹಲೆ ಹದೀಸ್, ಬರ್ನಾಲಾ
ಬರ್ನಾಲಾದ ಹೊರವಲಯದಲ್ಲಿರುವ ಇದು ಲಷ್ಕರ್ ಉಗ್ರರ ತರಬೇತಿ ಶಿಬಿರ. ಇಲ್ಲಿ 100-150 ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ. ಇದು ಪೂಂಚ್, ರಜೌರಿ, ರಿಯಾಸಿ ಪ್ರದೇಶಕ್ಕೆ ಲಷ್ಕರ್ ಭಯೋತ್ಪಾದಕರು ಕಾರ್ಯಾಚರಣೆಗಳಗೆ ವೇದಿಯಾಗಿ ಈ ಸ್ಥಳ ಬಳಸುತ್ತಾರೆ. ಉಗ್ರರಾದ ಖಾಸೀಂ ಗುಜ್ಜರ್, ಖಾಸೀಂ ಖಾಂಡಾ, ಅನಸ್ ಜರಾರ್ ಇಲ್ಲಿಂದಲೇ ಕಾರ್ಯನಿರ್ವಹಿಸುತ್ತಾರೆ.
6. ಮರ್ಕಜ್ ಅಬ್ಬಾಸ್, ಕೋಟ್ಲಿ
ಇದನ್ನು ಮರ್ಕಜ್ ಸೈದ್ನಾ ಹಜರತ್ ಅಬ್ಬಾಸ್ ಬಿನ್ ಅಬ್ದುಲ್ ಮುತ್ತಲಿಬ್ ಅಂತಲೂ ಕರೆಯುತ್ತಾರೆ. ಇದನ್ನು ಜೈಶ್-ಎ-ಮೊಹ್ಮದ್ನ ಹಫೀಜ್ ಅಬ್ದುಲ್ ಶಕೂರ್ ನೋಡಿಕೊಳ್ಳುತ್ತಾನೆ. ಮುಫ್ತಿ ಅಬ್ದುಲ್ ರೌಫ್ ಅಸ್ಗರ್ ಇವನ ಸಹಚರ. ಇಲ್ಲಿ 100-125 ಉಗ್ರರು ತರಬೇತಿ ಪಡೆಯುತ್ತಾರೆ. ಇದು ಪೂಂಚ್, ರಜೌರಿ ವಲಯದಲ್ಲಿ ಒಳನುಸುಳುವಿಕೆ ಕಾರ್ಯಾಚರಣೆಗೆ ಯೋಜನೆ ರೂಪಿಸಲಾಗುತ್ತಿತ್ತು. ಇಲ್ಲಿರುವ ಉಗ್ರ ಕ್ವಾರಿ ಜರಾರ್ ಎನ್ಐಎಗೆ ಮೋಸ್ಟ್ ವಾಂಟೆಡ್.
7. ಮಸ್ಕರ್ ರಹೀಲ್ ಶಾಹೀದ್, ಕೋಟ್ಲಿ
ಇಲ್ಲಿಯೂ 150-200 ಉಗ್ರರು ತರಬೇತಿ ಪಡೆಯುತ್ತಿದ್ದರು. ಇಲ್ಲಿ ಶಸ್ತ್ರಾಸ್ತ್ರ ತರಬೇತಿ ಜೊತೆಗೆ ಗುಡ್ಡಗಾಡು ಪ್ರದೇಶದಲ್ಲಿ ಹೇಗೆ ಬದುಕ ಬೇಕು ಎಂಬ ಬಗ್ಗೆ ಉಗ್ರರಿಗೆ ತರಬೇತಿ ನೀಡಲಾಗುತ್ತಿತ್ತು.
8. ಶವಾಯಿ ನಲ್ಲಾ ಕ್ಯಾಂಪ್, ಮುಜಫರಾಬಾದ್
ಈ ಉಗ್ರ ಶಿಬಿರವನ್ನು ಬೈತ್-ಉಲ್-ಮುಜಾಹಿದ್ದೀನ್ ಅಂತಲೂ ಕರೆಯುತ್ತಾರೆ. 2000ನೇ ಇಸವಿಯಿಂದಲೂ ಇದು ಕಾರ್ಯನಿರ್ವಹಿಸುತ್ತಿತ್ತು. ಇಲ್ಲಿ ಧಾರ್ಮಿಕ ಶಿಕ್ಷಣ, ಜಿಪಿಎಸ್, ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆ ತರಬೇತಿ ನೀಡಲಾಗುತ್ತಿತ್ತು. ಮುಂಬೈ ದಾಳಿಕೋರರು ಇಲ್ಲಿಯೇ ತರಬೇತಿ ಪಡೆದಿದ್ದರು. ಉತ್ತರ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ಈ ಸ್ಥಳ ಬಳಕೆ.
9. ಮರ್ಕಜ್ ಸೈಯದ್ನಾ ಬಿಲಾಲ್
ಮುಜಫರಾಬಾದ್ನಲ್ಲಿ ಇದು ಪಿಒಕೆಯಲ್ಲಿನ ಪ್ರಮುಖ ಉಗ್ರ ಕೇಂದ್ರ. ಭಯೋತ್ಪಾದಕರು ಜಮ್ಮು-ಕಾಶ್ಮೀರಕ್ಕೆ ನುಗ್ಗುವ ಮೊದಲು ಇಲ್ಲಿ ತರಬೇತಿ ಪಡೆಯುತ್ತಾರೆ. ಇದು 50-100 ಉಗ್ರರಿಗೆ ಆಶ್ರಯತಾಣ. ಈ ಉಗ್ರ ಕೇಂದ್ರವನ್ನು ಮುಫ್ತಿ ಅಸ್ಗರ್ ಖಾನ್ ಕಾಶ್ಮೀರಿ ನಡೆಸುತ್ತಾನೆ. ಆಶಿಕ್ ನೆಂಗ್ರೂ, ಅಬ್ದುಲ್ಲಾ ಜಿಹಾದಿಯಂತಹ ಭಯೋತ್ಪಾದಕರು ಇಲ್ಲಿಯೇ ಇರುವುದು. ಪಾಕ್ ಸೇನೆಯ ಎಸ್ಎಸ್ಜಿ ಕಮಾಂಡೋಗಳು ಸಹ ಇಲ್ಲಿಯೇ ತರಬೇತಿ ಪಡೆಯುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ