/newsfirstlive-kannada/media/post_attachments/wp-content/uploads/2024/10/MOSSAD-OPERATION.jpg)
ಅದು 1970ರ ಸಮಯ, ಗೋಲ್ಡಾ ಮೈರ್ ಇಸ್ರೇಲ್ ಪ್ರಧಾನಿಯಾಗಿದ್ದ ಕಾಲ. ಸಿರಿಯಾ ಅಂಗಳದಲ್ಲಿ ಅದೆಷ್ಟೋ ಯುವತಿಯರು ಕಾಮಕೂಪದ ಕತ್ತಲಲ್ಲಿ ಬೆಂದು ಹೋಗುತ್ತಿದ್ದರು. ಸಿರಿಯಾದಲ್ಲಿ ಯಾವುದೇ ರಾಜಕೀಯ ಅಧಿಕಾರಿಯನ್ನು ಮೆಚ್ಚಿಸಲು ಎಳೆ ಪ್ರಾಯದ ಇಸ್ರೇಲ್ನ ಯುವತಿಯರನ್ನೇ ಬಳಸಲಾಗುತ್ತಿತ್ತು. ಈ ಕತ್ತಲ ಲೋಕದಲ್ಲಿ ಕನಲಿ ಹೋಗಿದ್ದ ಸಾವಿರಾರು ಇಸ್ರೇಲ್ ಯುವತಿಯರು ಸಿರಿಯಾದಲ್ಲಿ ಆಕಾಶವನ್ನೇ ದಿಟ್ಟಿಸುತ್ತಾ ಮುಕ್ತಿ ಯಾವಾಗ ಎಂದೇ ಕೇಳಿಕೊಳ್ಳುತ್ತಿದ್ದರು. ಅದೇ ಸಮಯದಲ್ಲಿ ಕರ್ನಲ್ ಝಾಭು ಬೆನ್ಝಿವ್, ಬೆಹರೂದ್ ನಗರದಿಂದ ತಪ್ಪಿಸಿಕೊಂಡು ಬಂದಿದ್ದ 12 ಯುವತಿಯರನ್ನು ರಕ್ಷಿಸಿ ನೇರವಾಗಿ ತನ್ನ ಬೋಟ್ನಲ್ಲಿ ಹೈಫಾಗೆ ಕರೆದುಕೊಂಡು ಬಂದಿದ್ದ. ಆ ಯುವತಿಯರನ್ನು ಸ್ವಾಗತಿಸಲು ಖುದ್ದು ಅಂದಿನ ಇಸ್ರೇಲ್ ಪ್ರಧಾನಿಯಾಗಿದ್ದ ಗೋಲ್ಡಾ ಮೈರ್ ಬಂದಿದ್ದರು. ಸಿರಿಯಾದ ಆ ಪಾಪಕೂಪದಿಂದ ತಪ್ಪಿಸಿಕೊಂಡು ಬಂದಿದ್ದ ಆ ಹೆಣ್ಣು ಮಕ್ಕಳನ್ನು ಕಂಡ ಗೋಲ್ಡಾ ಮೇರ್ ಅಕ್ಷರಶಃ ಕಣ್ಣೀರಾಗಿದ್ದರು. ಆ ಗಂಡಿನೆದೆಯ ಛಲಗಾತಿ ಅಂದೇ ಒಂದು ಪ್ರತಿಜ್ಞೆ ಮಾಡಿದಳು. ಸಿರಿಯಾದಲ್ಲಿ ಸಿಲುಕಿ ಕತ್ತಲೆಯ ಕೂಪದಲ್ಲಿ ಕರಗಿ ಹೋಗುತ್ತಿರುವ ಇಸ್ರೇಲ್ನ ಪ್ರತಿ ಮಹಿಳೆಯೂ ವಾಪಸ್ ದೇಶಕ್ಕೆ ಬರುವವರೆಗೆ ವಿರಮಿಸಬೇಡಿ ಎಂದು ಮೊಸಾದ್ಗೆ ಸೂಚನೆ ನೀಡಿದರು. ಅಲ್ಲಿಂದ ಆರಂಭಗೊಂಡಿದ್ದೇ ಈ ಆಪರೇಷನ್ ಸ್ಮಿಖಾ.
ನವೆಂಬರ್ 1971 ಒಂದು ದಿನ ಹೈಫಾದಿಂದ ಇಸ್ರೇಲ್ನ ಬೋಟ್ ಒಂದು ಸಿರಿಯಾದ ಡೆಮಾಸ್ಕಸ್ನತ್ತ ಯಮವೇಗದಲ್ಲಿ ಹೊರಡುತ್ತದೆ. ಮೆಡಿಟೇರಿಯನ್ ಸಮುದ್ರದ ನೀರನ್ನು ಸೀಳುತ್ತಾ ಸಾಗಿದ ಆ ಬೋಟ್ ಅದೇ ದಿನ ಸಂಜೆ ಬಂದು ಸೇರಿದ್ದು ಟರ್ಕಿ ಬಾರ್ಡನ್ನ ಸಿರಿಯನ್ನ ಲಟಾಕೀಯ ಪೋರ್ಟ್ ಬಳಿ. ಅಲ್ಲಿ ರಬ್ಬರ್ ಬೋಟ್ ಬಿಚ್ಚಿದ ಮೂವರು ಕಮಾಂಡರ್ಗಳು ತಮ್ಮ ಸಮವಸ್ತ್ರವನ್ನು ಕಳಚಿ ಸಾಮಾನ್ಯ ವ್ಯಕ್ತಿಗಳು ಹಾಕಿಕೊಳ್ಳುವ ಧಿರಿಸನ್ನು ಧರಿಸಿ ರಬ್ಬರ್ ಬೋಟ್ ಮೂಲಕ ಡೆಮಾಸ್ಕಸ್ ನಗರಕ್ಕೆ ಬಂದು ತಲುಪಿದರು. ಅವರನ್ನು ಬರಮಾಡಿಕೊಳ್ಳಲು ಅದಾಗಲೇ ಒಬ್ಬ ಅಲ್ಲಿ ನಿಂತಿದ್ದ ಆ ವ್ಯಕ್ತಿಯ ಕೋಡ್ ನೇಮ್ ಪ್ರಾಸ್ಪರ್
ಡೆಮಾಸ್ಕಸ್ಗೆ ಬಂದ ಮೂವರನ್ನು ಒಂದು ಕಾರಿನಲ್ಲಿ ಕೂರಿಸಿಕೊಂಡು ಹೊರಟ ಪ್ರಾಸ್ಪರ್, ಆತನ ಅಸಲಿ ಹೆಸರು ಜೋನಾಥನ್, ಬಂದ ಕಮಾಂಡರ್ಗಳಿಗೆ ಹೋಟೆಲ್ನಲ್ಲಿ ಪ್ರತ್ಯೇಕ ರೂಮ್ ಮಾಡಿಕೊಟ್ಟು ತಾನು ಬೇರೆಯೆಡೆಗೆ ಹೊರಟ. ಪ್ರವಾಸಿಗರಂತೆಯೇ ಸಿರಿಯಾದ ಬೀದಿ ಬೀದಿ ತಿರುಗಿದ ಇಸ್ರೇಲಿನ ಮೊಸಾದ್ ಕಮಾಂಡರ್ಗಳು. ಸಾಸಿವೆ ಕಾಳಷ್ಟು ಬೇರೆಯವರಿಗೆ ಸಂಶಯ ಬರದಂತೆ ಇದ್ದರು. ಅನೇಕ ಅಂಗಡಿಗಳಿಗೆ ಹೋಗಿ ಇಷ್ಟವಾದ ವಸ್ತುಗಳನ್ನು ಖರೀದಿಸಿ ಖುಷಿಪಟ್ಟು ವಾಪಸ್ ರೂಮ್ಗೆ ಬಂದ ಘಾತಕ ಪಡೆ ಸಜ್ಜಾಗಿದ್ದು ಇಸ್ರೇಲ್ ಮಹಿಳೆಯರ ರಕ್ಷಣೆಗೆ.
ಡೆಮಾಸ್ಕಸ್ ನಗರದ ಆ ಒಂದು ಬೇಕರಿಯ ಹತ್ತಿರ ಇರುವ ಗ್ಯಾರೇಜ್ ಪಕ್ಕವೇ ಜೋನಾಥನ್ ಕಾರು ನಿಂತಿತ್ತು. ಒಂದಿಷ್ಟು ಸಂಶಯ ಬರದಂತೆ ಮೋಸಾದ್ ಕಮಾಂಡರ್ಗಳು ಆಚೆ ನಿಂತಿದ್ದರು.ನಗರದ ಎಲ್ಲ ಕಡೆಗೂ ಬ್ರೇಡ್ ಪೂರೈಕೆ ಮಾಡುವ ಟ್ರಕ್ ಅಲ್ಲಿ ಬಂದು ನಿಂತಾಗ ಕಮಾಂಡರ್ಗಳ ಮುಖದಲ್ಲಿ ಏನೋ ಗೆದ್ದ ನಗುವೊಂದು ಚೆಲ್ಲಿ ಹೋಯ್ತು. ಡೆಮಾಸ್ಕಸ್ ಎಂಬ ನಗರ ಆಗಿನ್ನೂ ನಿದ್ದೆಗೆ ಜಾರುವ ಸಮಯ. ಅಲ್ಲಿದ್ದ ಜನಸಂದಣಿ ನಿಧಾನಕ್ಕೆ ಕರಗಲು ಆರಂಭವಾಯ್ತು. ಬೂಟಿನೊಳಗೆ ಗನ್ ಇಟ್ಟುಕೊಂಡಿದ್ದ ಕಮಾಂಡರ್ಗಳು ನಿಧಾನಕ್ಕೆ ಟ್ರಕ್ ಹತ್ತಿರ ಬಂದರು. ಅವರಿಗೆ ಶತ್ರು ಪಾಳಯದಲ್ಲಿ ಎಷ್ಟು ಜನ ಇದ್ದಾರೆ. ಯಾವೆಲ್ಲಾ ಆಯುಧಗಳು ಅವರು ಕೈಯಲ್ಲಿವೆ ಎಂಬುದು ತಿಳಿದುಕೊಳ್ಳಬೇಕಿತ್ತು. ಜೋನಾಥನ್ ಕಾರು ಅಲ್ಲಿಂದ ಜಸ್ಟ್ 60 ಮೀಟರ್ ದೂರದಲ್ಲಿ ನಿಂತಿತ್ತು.
ನಿಂತಿದ್ದ ಟ್ರಕ್ನೊಳಗಡೆ ಸಾಲಾಗಿ ಜನರು ಹತ್ತಿದರು ಒಂದಿಬ್ಬರನ್ನು ಎಳೆದು ತಂದು ಟ್ರಕ್ನಲ್ಲಿ ತುಂಬಲಾಯ್ತು.ಅಲ್ಲಿಗೆ ಬೇಟೆ ಇರುವ ಜಾಗಕ್ಕೆ ನಾವು ಬಂದಿದ್ದೇವೆ ಎಂದು ಕಮಾಂಡರ್ಗಳಿಗೆ ಇನ್ನಷ್ಟು ಖಚಿತವಾಯ್ತು. ಇನ್ನೇನು ಟ್ರಕ್ ಹೊರಡುವುದಿತ್ತು. ಪ್ರಾಸ್ಪರ್ ಅಲಿಯಾಸ್ ಜೋನಾಥನ್ ಕಮಾಂಡೋಗಳಿಗೆ ಒಂದು ಸಂದೇಶ ರವಾನಿಸಿಬಿಟ್ಟ. ಕೂಡಲೇ ಆ್ಯಕ್ಟಿವ್ ಆದ ಕಮಾಂಡರ್ಗಳು ತಾವು ತಂದಿದ್ದ ಗನ್ಗೆ ಸೈಲೆನ್ಸರ್ ತುರುಕಿ ಕೈಯಲ್ಲಿ ಆಯಧವಿಟ್ಟುಕೊಂಡಿದ್ದ ಮೂವರನ್ನು ಅದಾಗಲೇ ಗುರುತಿಸಿದ್ದ ಕಮಾಂಡರ್ಗಳು, ನೇರವಾಗಿ ಅವರ ನೆತ್ತಿ ಸೀಳುವಂತೆ ಗುಂಡಿಟ್ಟರು. ಏನಾಗುತ್ತಿದೆ ಅನ್ನುವಷ್ಟರಲ್ಲಿ ಮೂರು ಹೆಣಗಳು ಬಿದ್ದು ಹೋಗಿದ್ದವು. ಅಷ್ಟರಲ್ಲಿ ಟ್ರಕ್ನಲ್ಲಿದ್ದ ಹೆಣ್ಣು ಮಕ್ಕಳ ಚೀರಾಟ ಶುರುವಾಯ್ತು. ಕೂಡಲೇ ಒಬ್ಬ ಕಮಾಂಡರ್ ಟ್ರಕ್ಗೆ ಹಾಕಿದ್ದ ಪರದೆ ಸರಿಸಿ ಹಿಬ್ರೂ ಭಾಷೆಯಲ್ಲಿ ತಾವು ಯಾರು ಎಂಬುದನ್ನು ಹೇಳಿದ. ಇಡೀ ಟ್ರಕ್ ಸ್ತಬ್ಧವಾಯ್ತು. ನಮ್ಮನ್ನು ಕಾಯಲು ರಣಧುರಂಧರ ಪಡೆಯೇ ಬಂದಿದೆ ಎಂದು ನಿಟ್ಟುಸಿರು ಬಿಟ್ಟರು. ಕೆಲವೇ ಕ್ಷಣ ಪ್ರಾಸ್ಪರ್ ಕಾರು ಯಮವೇಗದಲ್ಲಿ ಡೆಮಾಸ್ಕಸ್ ನಗರದ ರಸ್ತೆಗಳನ್ನು ಸೀಳಿಕೊಂಡು ನುಗ್ಗತೊಡಗಿತು. ಅದರ ಹಿಂದೆಯೇ ಟ್ರಕ್ ಕೂಡ ಅದೇ ವೇಗದಲ್ಲಿ ಹೊರಟಿತು ಹೀಗೆ ಹೊರಟ ಟ್ರಕ್ ಮತ್ತು ಕಾರ್ ಬಂದು ಸೇರಿದ್ದು ಸಿರಿಯಾ ಕಡಲತಡಿಗೆ
ಇದನ್ನೂ ಓದಿ: VIDEO: ಟೈಟಾನಿಕ್ ರೀತಿಯಲ್ಲೇ ಮತ್ತೊಂದು ಹಡಗು ದುರಂತ; 78 ಮಂದಿ ದಾರುಣ ಸಾವು
ಹೊರಡುತ್ತಿರುವಾಗಲೇ ಎಲ್ಲಿಗೆ ಬೋಟ್ ಕಳುಹಿಸಿ ಕೊಡಬೇಕು ಅಂತ ನೌಕಾಪಡೆಗೆ ಪ್ರಾಸ್ಪರ್ ಸೂಚನೆ ನೀಡಿದ್ದ ಅದರಂತೆ ಬೋಟ್ ಬಂದು ಕಾಯುತ್ತಿತ್ತು. ಇನ್ನೇನು ಬೋಟ್ ಹತ್ತಬೇಕು ಅನ್ನುವಷ್ಟರಲ್ಲಿ ಗುಂಡಿನ ಸುರಿಮಳೆಗಳು ಸುರಿಯತೊಡಗಿದವು. ನಮ್ಮ ಆಪರೇಷನ್ ರಹಸ್ಯ ತಿಳಿಯಿತೇ ಎಂದು ಗಾಬರಿಗೊಂಡ ಮಿಸೈಲ್ ಬೋಟಿನ ಮುಖ್ಯಸ್ಥ ಕಾರ್ಯಾಲಯಕ್ಕೆ ಕರೆ ಮಾಡಿ ವಿಷಯ ತಿಳಿಸಿದ ಯುವತಿಯರನ್ನು ಏಜೆಂಟ್ಗಳನ್ನು ಎಲ್ಲಾದರೂ ಸುರಕ್ಷಿತ ಜಾಗಕ್ಕೆ ಬಿಟ್ಟು ಬರುವಂತೆ ಆದೇಶ ಬಂತು. ಇದರಿಂದ ಕಂಗಾಲಾದ ಪ್ರಾಸ್ಪರ್, ಜೀವ ಬೇಕಾದರೂ ಬಿಟ್ಟೇನು ಈ ಹುಡುಗಿಯರನ್ನು ಈ ಕೂಪದಲ್ಲಿ ಮಾತ್ರ ಬಿಡಲಾರೆ ಎಂದು ನಿರ್ಧಾರ ಮಾಡಿ, ಯಾವ ಕಾರಣಕ್ಕೂ ಆಪರೇಷನ್ ರದ್ದಾಗಲ್ಲ ನೀವು ಕೂಡಲೇ ಉತ್ತರ ದಿಕ್ಕಿನತ್ತ ಹೊರಡಿ ನಾವು ಅಲ್ಲಿಯೇ ಬರುತ್ತೇವೆ ಎಂದು ಸಂದೇಶ ಕಳುಹಿಸಿದ.
ಇದನ್ನೂ ಓದಿ:ಜಸ್ಟ್ 1 ಗಂಟೆಯಲ್ಲಿ 100, 200, 500 ಅಲ್ಲ.. ಅತಿದೊಡ್ಡ ಅಲ್ ಖೈದಾ ಹತ್ಯಾಕಾಂಡ; ಬಲಿಯಾದವರು ಎಷ್ಟು?
ಮತ್ತೆ ಪ್ರಾಸ್ಪರ್ ಕಾರಿಗೆ ಯಮವೇಗ ಬಂತು ಹಾಗೆ ಹೊರಟ ಟ್ರಕ್ ಮತ್ತು ಕಾರ್ಗಳು ಉತ್ತರ ದಿಕ್ಕಿ ಕಡಲ ತೀರದಲ್ಲಿ ನಿಂತಿದ್ದ ಮಿಸೈಲ್ ಬೋಟ್ ಗಮನಿಸಿ ಟ್ರಕ್ ಹಾಗೂ ಕಾರ್ ನಿಲ್ಲಿಸಿದರು. ತಡಮಾಡದೇ ಟ್ರಕ್ನಲ್ಲಿದ್ದ ಎಲ್ಲಾ ಯುವತಿಯರನ್ನು ಮಿಸೈಲ್ ಬೋಟ್ನಲ್ಲಿ ಕೂರಿಸಿದರು. ಒಬ್ಬ ಬಾಲಕ ಸೇರಿದಂತೆ ಒಟ್ಟು 26 ಜನರನ್ನು ರಕ್ಷಣೆ ಮಾಡಿತ್ತು ಮೋಸಾದ್ ಪಡೆ. ಆ ನಂತರ ಸಮುದ್ರಯಾನದ ಮೂಲಕ ಯುವತಿಯರ ರಕ್ಷಣೆಯ ಕಾರ್ಯಾಚರಣೆಯನ್ನು ಕೈ ಬಿಟ್ಟ ಇಸ್ರೇಲ್ ಅದನ್ನೂ ಭೂಮಾರ್ಗದಿಂದ ಮಾಡಲು ಶುರು ಮಾಡಿತು ಆದ್ರೆ ಅಂದು ಡೆಮಾಸ್ಕಸ್ ಕಡಲ ತೀರದಲ್ಲಿ ಯಾರು ಗುಂಡು ಹಾರಿಸಿದರು ಎಂಬುದು ಸ್ಪಷ್ಟವಾಗಿಲ್ಲ.
ಮೊಸಾದ್ನ ಒಂದು ತನಿಖೆ ಹೇಳುವ ಪ್ರಕಾರ. ಅಲ್ಲಿದ್ದವರನ್ನು ಸ್ಮಗ್ಲರ್ಗಳು ಎಂದು ಭಾವಿಸಿ ಪೊಲೀಸ್ ಸೈರನ್ ಆದ ಕಾರಣ ಗುಂಡು ಹಾರಿದವು ಎಂದು ಹೇಳಲಾಗುತ್ತೆ ಆದ್ರೆ ಇದ್ಯಾವುದು ಸ್ಪಷ್ಟವಾಗಿ ಇನ್ನೂ ಗೊತ್ತಾಗಿಲ್ಲ. ಇದಾದ ಬಳಿಕ ಮೋಸಾದ್ 1971 ರಿಂದ 1973ರವರೆಗೆ ಒಟ್ಟು 20 ಪ್ರಮುಖ ರೆಸ್ಕ್ಯೂ ಆಪರೇಷನ್ ನಡೆಸಿದೆ. ಅವುಗಳಲ್ಲಿ 120 ಮಂದಿ ಮಹಿಳೆಯರನ್ನು ರಕ್ಷಣೆ ಮಾಡಿದೆ. ಇಡೀ ವಿಶ್ವದಲ್ಲಿ ಯಾವುದೇ ಮೂಲೆಯಲ್ಲಿ ಒಬ್ಬನೇ ಒಬ್ಬ ಯಹೂದಿ ಸಂಕಷ್ಟದಲ್ಲಿದ್ದರೆ ಅವರನ್ನು ಪಾರು ಮಾಡಲು ಆ ದೇವರು ಬರುತ್ತಾನೆ. ಇಲ್ಲವಾದರೆ ಮೊಸಾದ್ ಬರುತ್ತದೆ.ಯಾಕಂದ್ರೆ ಇಸ್ರೇಲ್ನ ರಣಪಡೆ ಮೋಸಾದ್ಗೆ ಆ ತಾಕತ್ತು ಇದೆ.
ಗ್ರಂಥ ಋಣ: ಯಹೂದಿ, ಶ್ರೀಕಾಂತ್ ಶೆಟ್ಟಿ ಕಾರ್ಕಳ (ಮಹಾಕಾಲ್)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ