/newsfirstlive-kannada/media/post_attachments/wp-content/uploads/2025/02/Virat-kohli-4.jpg)
ಚಾಂಪಿಯನ್ ಟ್ರೋಫಿ ನಡೆಯುವ ವೇಳೆ ಸರಿಯಾದ ಭದ್ರತೆ ಒದಗಿಸುವಲ್ಲಿ ವಿಫಲವಾದ 100ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ಪಾಕಿಸ್ತಾನದ ಪಂಜಾಬ್ ನಗರದಲ್ಲಿ ವಜಾಗೊಳಿಸಲಾಗಿದೆ. ಪೊಲೀಸ್ ಪಡೆಯ ವಿವಿಧ ವಿಭಾಗಗಳಲ್ಲಿದ್ದ ಅಧಿಕಾರಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಹೇಳಲಾಗಿದೆ.
ಈ ಬಾರಿ ಪಾಕಿಸ್ತಾನದಲ್ಲಿ ಚಾಂಪಿಯನ್ ಟ್ರೋಫಿ ನಡೆಯುತ್ತಿದ್ದರಿಂದ ಭದ್ರತೆ ಹೆಚ್ಚಿನ ಮಟ್ಟದಲ್ಲೇ ಇರಲಿದೆ ಎಂದು ಮೊದಲೇ ತಿಳಿಸಲಾಗಿತ್ತು. ಹೀಗಾಗಿ ಅಲ್ಲಿನ ಭದ್ರತಾ ಇಲಾಖೆ ಎಲ್ಲ ಕ್ರಮ ತೆಗೆದುಕೊಂಡಿತ್ತು. ಆದ್ರೆ ಪಂದ್ಯ ನಡೆಯುವಾಗ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದ ಹಲವಾರು ಪೊಲೀಸರು ಸರಿಯಾದ ಕಾರಣ ನೀಡದೇ ಕೆಲಸಕ್ಕೆ ಬಂದಿಲ್ಲ. ಹೀಗಾಗಿ 100ಕ್ಕೂ ಹೆಚ್ಚು ಪೊಲೀಸರನ್ನು ಉದ್ಯೋಗದಿಂದ ವಜಾ ಮಾಡಲಾಗಿದೆ ಎಂದು ಪಂಜಾಬ್ನ ಐಜಿಪಿ ಉಸ್ಮಾನ್ ಅನ್ವರ್ ಹೇಳಿದ್ದಾರೆ.
ಗಡಾಫಿ ಸ್ಟೇಡಿಯಂ ಲಾಹೋರ್ ಸೇರಿದಂತೆ ಗೊತ್ತುಪಡಿಸಿದ ಹೋಟೆಲ್‌ಗಳ ಹೊರಗೆ ಕ್ರಿಕೆಟ್ ಆಟಗಾರರ ಭದ್ರತೆಗಾಗಿ ಪೊಲೀಸರನ್ನು ನೇಮಿಸಲಾಗಿತ್ತು. ಕ್ರಿಕೆಟ್ ಪ್ಲೇಯರ್ಸ್ ಎಲ್ಲಿ ಹೋಗ್ತಾರೆ ಅಲ್ಲೆಲ್ಲಾ ಭದ್ರತೆ ನೀಡುವಂತೆ ತಿಳಿಸಲಾಗಿತ್ತು. ಆದರೆ ಪೊಲೀಸರು ಗೈರು ಹಾಜರಾಗಿದ್ದಲ್ಲದೇ ಇರುವ ಪೊಲೀಸರು ಕೂಡ ಸರಿಯಾದ ಭದ್ರತೆ ನೀಡಿರಲಿಲ್ಲ. ಅಂತರಾಷ್ಟ್ರೀಯ ಕಾರ್ಯಕ್ರಮಗಳ ಭದ್ರತೆ ವಿಚಾರದಲ್ಲಿ ನಿರ್ಲಕ್ಷ್ಯಕ್ಕೆ ಮಾಡಿದ ಕಾರಣ ಪೊಲೀಸರನ್ನ ತೆಗೆದು ಹಾಕಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Champions Trophy ಮೇಲೆ ಉಗ್ರರ ಕಣ್ಣು.. ಪ್ಲೇಯರ್ಸ್ ಎದೆಯಲ್ಲಿ ಢವ ಢವ; ಫ್ಯಾನ್ಸ್ಗೆ ನಡುಕ!
ಫೆಬ್ರುವರಿ 24 ರಂದು ರಾವಲ್ಪಿಂಡಿಯಲ್ಲಿ ಬಾಂಗ್ಲಾ ಹಾಗೂ ನ್ಯೂಜಿಲೆಂಡ್ ಪಂದ್ಯವಾಡುತ್ತಿದ್ದವು. ಈ ವೇಳೆ ಮೈದಾನಕ್ಕೆ ಓಡಿ ಬಂದ ಓರ್ವ ಆಗಂತುಕ ನಿಷೇಧಿತ ಸಂಘಟನೆಯ ಅಧ್ಯಕ್ಷನ ಫೋಟೋ ಹಿಡಿದು, ಬ್ಯಾಟಿಂಗ್ ಮಾಡುತ್ತಿದ್ದ ಕಿವೀಸ್ ಪ್ಲೇಯರ್ ಕನ್ನಡಿಗ ರಚಿನ್ ರವೀಂದ್ರರನ್ನು ತಬ್ಬಿಕೊಂಡ. ಇದರಿಂದ ಮೈದಾನದಲ್ಲಿ ಕೆಲ ಸಮಯ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅಲ್ಲದೇ ಕನ್ನಡಿಗ ರಚಿನ್ ರವೀಂದ್ರ ಕೂಡ ಫುಲ್ ಶಾಕ್ ಆಗಿದ್ದರು. ಇಲ್ಲಿ ಕೂಡ ದೊಡ್ಡಮಟ್ಟದಲ್ಲಿ ಭದ್ರತೆ ವಿಫಲವಾಗಿತ್ತು ಎನ್ನಲಾಗಿದೆ.
ಇನ್ನು ಚಾಂಪಿಯನ್ ಟ್ರೋಫಿಯಿಂದ ಪಾಕಿಸ್ತಾನ ಟೀಮ್ ಹೊರ ನಡೆದಿದೆ. ನ್ಯೂಜಿಲೆಂಡ್ ಹಾಗೂ ಭಾರತ ವಿರುದ್ಧ ಸೋತ ಪಾಕ್ ಭಾರೀ ಮುಖಭಂಗ ಅನುಭವಿಸಿದೆ. ಇನ್ನು ಚಾಂಪಿಯನ್ ಟ್ರೋಫಿಗೆ ಯಾವುದೇ ಬೆದರಿಕೆ ಕರೆ ಬಂದಿಲ್ಲ ಎಂದು ಪಾಕಿಸ್ತಾನದ ಸಚಿವರೊಬ್ಬರು ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ