/newsfirstlive-kannada/media/post_attachments/wp-content/uploads/2025/04/AJIT_BALAKRISHNA_ASHWIN.jpg)
ನವದೆಹಲಿ: ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್ ರವಿಚಂದ್ರನ್ ಅಶ್ವಿನ್, ತಮಿಳುನಾಡಿನ ಸ್ಟಾರ್ ಅಜಿತ್ ಕುಮಾರ್, ಟಾಲಿವುಡ್ ನಟ ಬಾಲಕೃಷ್ಣ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್ ಆರ್.ಅಶ್ವಿನ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಭಾರತದ ಕ್ರಿಕೆಟ್ ಕ್ಷೇತ್ರದಲ್ಲಿ ಆರ್.ಅಶ್ವಿನ್ ಅವರು ಮಾಡಿದ ಸಾಧನೆ ಗುರುತಿಸಿ ಈ ಅತ್ಯುನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಇದೇ ವೇಳೆ ತಮಿಳುನಾಡಿನ ಸ್ಟಾರ್ ನಟ ಅಜಿತ್ ಕುಮಾರ್ ಎಸ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರದ್ಮಭೂಷಣ ಪ್ರಶಸ್ತಿಯನ್ನು ಸ್ವೀಕಾರ ಮಾಡಿದ್ದಾರೆ. ಅಮರಾವತಿ ಸಿನಿಮಾ ಮೂಲಕ ತಮಿಳು ಸಿನಿಮಾ ರಂಗಕ್ಕೆ ಕಾಲಿಟ್ಟ ಅಜಿತ್ ಕುಮಾರ್ ಅವರು ಸಿನಿ ಕ್ಷೇತ್ರದಲ್ಲೇ ಅತ್ಯುನ್ನತ ಸ್ಥಾನದಲ್ಲಿ ತಮ್ಮನ್ನು ಇಂದು ಗುರುತಿಸಿಕೊಂಡಿದ್ದಾರೆ. ಕಲಾ ಕ್ಷೇತ್ರದಲ್ಲಿ ಅವರ ಮಹಾನ್ ಸಾಧನೆಗಳಿಗಾಗಿ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಟಾಲಿವುಡ್ನ ಹಿರಿಯ ನಟ ಹಾಗೂ ರಾಜಕಾರಣಿ ನಂದಮೂರಿ ಬಾಲಕೃಷ್ಣ ಅವರಿಗೂ ಇದೇ ವೇಳೆ ಪದ್ಮಭೂಷಣ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೀಡಿದರು. ತೆಲುಗು ಸಿನಿಮಾ ಕ್ಷೇತ್ರದಲ್ಲಿ ನಂದಮೂರಿ ಬಾಲಕೃಷ್ಣ ಅವರ ಸಾಧನೆಯನ್ನು ಗುರುತಿಸಿ ದೇಶದ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗಿದೆ. ನಂದಮೂರಿ ಬಾಲಕೃಷ್ಣ ಅವರು ಸಿನಿಮಾ ಕ್ಷೇತ್ರವಲ್ಲದೇ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದು ಸದ್ಯ ಆಂಧ್ರಪ್ರದೇಶದ ಹಿಂದುಪುರಂ ಕ್ಷೇತ್ರಕ್ಕೆ ಅವರು ಶಾಸಕರಾಗಿದ್ದಾರೆ.
ಇದನ್ನೂ ಓದಿ:ಆರೆಂಜ್, ಪರ್ಪಲ್ ಕ್ಯಾಪ್ ಎರಡನ್ನೂ ಕಬಳಿಸಿದ RCB ಸ್ಟಾರ್ಸ್.. ಲಿಸ್ಟ್ನಲ್ಲಿ ಯಾರ್ ಯಾರಿದ್ದಾರೆ?
2025ರ ಜನವರಿ 25 ರಂದು ಪದ್ಮಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರ 7 ಪದ್ಮವಿಭೂಷಣ ಪ್ರಶಸ್ತಿಗಳನ್ನು ಘೋಷಣೆ ಮಾಡಿತ್ತು. ಇದರ ಜೊತೆಗೆ 19 ಪದ್ಮಭೂಷಣ, 113 ಪದ್ಮಶ್ರೀ ಪ್ರಶಸ್ತಿಗಳನ್ನು ಅನೌನ್ಸ್ ಮಾಡಿತ್ತು. ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದವರನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ಘೋಷಿಸಲಾಗಿತ್ತು. ಇಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ