/newsfirstlive-kannada/media/post_attachments/wp-content/uploads/2025/06/pahalgam_attack_1.jpg)
ಪಹಲ್ಗಾಮ್ ದಾಳಿಕೋರರಿಗೆ ಆಶ್ರಯ ನೀಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಎನ್‌ಐಎ ಅಧಿಕಾರಿಗಳು, ಇಂದು ಕೋರ್ಟ್ಗೆ ಹಾಜರುಪಡಿಸಿದ್ದಾರೆ.
ಭೈಸರಾನ್ ವ್ಯಾಲಿಯಿಂದ 3 ಕಿಮೀ ದೂರದಲ್ಲಿ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಸೋದರರನ್ನು ಎನ್‌ಐಎ ಬಂಧಿಸಿದೆ. ಪರ್ವೇಜ್, ಬಶೀರ್ ಅಹಮದ್ ಜೋತರ್ ಎಂಬ ಸೋದರರೇ ಉಗ್ರರಿಗೆ ಆಶ್ರಯ ನೀಡಿದವರು. ತಾವು ಆಶ್ರಯ ನೀಡಿದ್ದು ಉಗ್ರಗಾಮಿಗಳಿಗೆ ಎಂಬುದು ಪರ್ವೇಜ್, ಬಶೀರ್ ಅಹಮದ್ ಜೋತರ್‌ಗೆ ಗೊತ್ತಿತ್ತು. ಉಗ್ರಗಾಮಿಗಳು ಎಂಬುದು ಗೊತ್ತಿದ್ದು ಆಶ್ರಯ ನೀಡಿದ್ದಕ್ಕಾಗಿ ಇಬ್ಬರನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಪಹಲ್ಗಾಮ್ ಉಗ್ರ ಜಾಡು ಹಿಡಿದ ಎನ್‌ಐಎ
ಪಹಲ್ಗಾಮ್ ದಾಳಿಯ ಉಗ್ರರ ಜಾಡು ಹಿಡಿಯುವಲ್ಲಿ ಎನ್‌ಐಎ ಯಶಸ್ವಿಯಾಗಿದೆ. ದಾಳಿಕೋರ ಉಗ್ರರು 2022 ರಿಂದಲೂ ಜಮ್ಮು ಕಾಶ್ಮೀರದಲ್ಲಿ ವಿವಿಧೆಡೆ ದಾಳಿ ನಡೆಸಿದ್ದಾರೆ. 2022ರಲ್ಲಿ ಪೂಂಚ್ ಜಿಲ್ಲೆಯ ದೇರಾ ಕಾ ಗಲ್ಲಿ ಪ್ರದೇಶದ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ಉಗ್ರರು ಒಳನುಸುಳಿದ್ದರು. ಜಮ್ಮುವಿನಲ್ಲಿ ಒಂದು ವರ್ಷ ಉಗ್ರಗಾಮಿಗಳು ಸಕ್ರಿಯವಾಗಿದ್ದರು. ಭಾರತದ ಭದ್ರತಾ ಪಡೆಗಳ ಮೇಲೆ ನಡೆದ ಕನಿಷ್ಠ 3 ದಾಳಿಯಲ್ಲಿ ಇದೇ ಉಗ್ರರು ಭಾಗಿಯಾಗಿದ್ದಾರೆ ಎಂದು ಎನ್‌ಐಎ ಹೇಳಿದೆ. 2024ರ ಉತ್ತರಾರ್ಧದಲ್ಲಿ ಕಾಶ್ಮೀರಕ್ಕೆ ಶಿಫ್ಟ್ ಆಗಿದ್ದ ಉಗ್ರರು, ಜಮ್ಮು ವಲಯ ಮತ್ತು ಕಾಶ್ಮೀರ ವಲಯಗಳಲ್ಲಿ ಭದ್ರತಾ ಪಡೆಗಳು, ವಲಸಿಗರ ಕಾರ್ಮಿಕರ ಮೇಲೆ ದಾಳಿ ನಡೆಸಿದ್ದಾರೆ. ಅದಾದ ಬಳಿಕ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಅಮಾನುಷ ಕೃತ್ಯ ಎಸಗಿದ್ದಾರೆ.
ಮೊದಲಿಗೆ 2023ರ ಡಿಸೆಂಬರ್ 1 ರಂದು ಪೂಂಛ್ ಜಿಲ್ಲೆಯ ದೇರಾ ಕಿ ಗಲ್ಲಿಯಲ್ಲಿ ಸೇನೆ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಭಾರತೀಯ ಸೇನೆಯ ನಾಲ್ವರು ಯೋಧರು ಹುತಾತ್ಮರಾಗಿದ್ದರು. 2024ರ ಮೇ ತಿಂಗಳಿನಲ್ಲಿ ಮತ್ತೆ ಏರ್ ಪೋರ್ಸ್ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ್ದರು. ಪೂಂಚ್ ಜಿಲ್ಲೆಯ ದಟ್ಟಕಾಡಿನಲ್ಲಿ ಸೇನೆಯ ಮೇಲೆ ದಾಳಿ ನಡೆಸಿದ ಬಳಿಕ ಕಾಶ್ಮೀರಕ್ಕೆ ಶಿಫ್ಟ್ ಆಗಿದ್ದ ಉಗ್ರರು ಅಲ್ಲೂ, ವಿವಿಧೆಡೆ ಜನರು, ಸೇನೆ, ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದರು. 2024ರ ಆಕ್ಟೋಬರ್ ನಲ್ಲಿ ಸ್ಥಳೀಯ ಉಗ್ರಗಾಮಿ ಜುನೇದ್ ಸೋನಮಾರ್ಗ್ ನಲ್ಲಿ ಪಾಕ್ ಉಗ್ರರ ಜೊತೆ ಸೇರಿ ವಲಸಿಗ ಕಾರ್ಮಿಕರ ಮೇಲೆ ದಾಳಿ ನಡೆಸಿದ್ದ. ಈ ವೇಳೆ ಸ್ಥಳೀಯ ಉಗ್ರರು ಮತ್ತು ಪಾಕ್ ಉಗ್ರರು ಎರಡು ಟೀಮ್ಗಳಾಗಿ ಬೇರೆ ಬೇರೆ ಕಡೆ ಹೋಗಿ ದಾಳಿ ನಡೆಸಿದ್ದರು.
ಇದನ್ನೂ ಓದಿ: ಇಲ್ಲೇ ಇರು ಬರುತ್ತೇನೆ.. ಹೆತ್ತ ತಾಯಿನ ನಡು ರಸ್ತೆಯಲ್ಲಿ ಬಿಟ್ಟು ಹೋದ ಪಾಪಿ ಮಗ!
2024ರ ಅಕ್ಟೋಬರ್ 26 ರಂದು ಮತ್ತೊಂದು ಟೀಮ್ನಿಂದ ಆರ್ಮಿ ಟ್ರಕ್ ಮೇಲೆ ದಾಳಿ ನಡೆದಿತ್ತು. ಬಳಿಕ ಕಾಶ್ಮೀರದ ಶ್ರೀನಗರದ ಬಳಿ ಜುನೇದ್ನನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು. ಈ ವೇಳೆ ಜುನೇದ್ ಪೋನ್ನಿಂದ ಇದೇ ಟೀಮ್ ಈ ಹಿಂದೆ ಬೇರೆ ಬೇರೆ ಕಡೆ ದಾಳಿ ನಡೆಸಿದ್ದು ದೃಢಪಟ್ಟಿತ್ತು. ಬಳಿಕ 2 ಉಗ್ರಗಾಮಿ ತಂಡಗಳು ಒಗ್ಗೂಡಿ ಪೆಹಲ್ಗಾಮ್ನಲ್ಲಿ ದಾಳಿ ನಡೆಸಿದ್ದು ಈಗ ದೃಢಪಟ್ಟಿದೆ. ಹಫತನಾರ್, ಟ್ರಾಲ್, ಡಿಎಚ್ ಪುರ ಪ್ರದೇಶದ ಕಮ್ಯೂನಿಕೇಷನ್ ಸಿಗ್ನಲ್ ಗಳನ್ನು ಭದ್ರತಾ ಪಡೆಗಳು, ಎನ್‌ಐಎ ವಿಶ್ಲೇಷಣೆ ನಡೆಸಿವೆ.
ಉಗ್ರಗಾಮಿಗಳ ತಂಡಗಳು ರಸ್ತೆಗಳನ್ನು ಬಿಟ್ಟು ಬೆಟ್ಟಗುಡ್ಡಗಳ ಮಾರ್ಗಗಳಲ್ಲಿ ಸಂಚರಿಸಿರುವುದು ಬೆಳಕಿಗೆ ಬಂದಿದೆ. ಒಂದಕ್ಕೊಂದು ಸಂಪರ್ಕ ಇರುವ ಬೆಟ್ಟಗುಡ್ಡಗಳು ಉಗ್ರಗಾಮಿಗಳ ಸಂಚಾರಕ್ಕೆ ಉತ್ತಮ ಮಾರ್ಗಗಳಾಗಿದ್ದವು. ಇದರಿಂದಾಗಿ ಭದ್ರತಾ ಪಡೆಗಳಿಗೆ ಉಗ್ರಗಾಮಿಗಳನ್ನು ಟ್ರ್ಯಾಕ್ ಮಾಡಲು, ಬೆನ್ನತ್ತಿ ಹೋಗಲು ಸಾಧ್ಯವಾಗಿಲ್ಲ. ಉಗ್ರಗಾಮಿಗಳ ದಾಳಿಯ ವಿಧಾನ, ಮಾರ್ಗಗಳು ಸ್ಪಷ್ಟವಾಗಿರುವುದರಿಂದ ಭದ್ರತಾ ಪಡೆಗಳು ಈಗ ಉಗ್ರಗಾಮಿಗಳ ವಿರುದ್ಧದ ದಾಳಿಯನ್ನು ತೀವ್ರಗೊಳಿಸಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ