/newsfirstlive-kannada/media/post_attachments/wp-content/uploads/2025/04/MODI_1.jpg)
ನವದೆಹಲಿ: ಪಹಲ್ಗಾಮ್ ಪ್ರದೇಶದಲ್ಲಿ ನಡೆದ ಭಯೋತ್ಪಾದನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಈ ಸಂಬಂಧ ಇಂದು ಸಂಜೆ 6 ಗಂಟೆಗೆ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಪಹಲ್ಗಾಮ್ ದಾಳಿಗೆ ಪ್ರತಿ ದಾಳಿಯ ಬಗ್ಗೆ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ಸಂಪುಟ ಉಪಸಮಿತಿಯು ಭದ್ರತೆ ಕುರಿತು ಮಹತ್ವದ ಸಭೆ ಇಂದು ಸಂಜೆ ನಡೆಯಲಿದೆ. ಈ ಸಭೆಯಲ್ಲಿ ಗಡಿ ಭದ್ರತೆಗೆ ಧಕ್ಕೆ ತಂದ ಈ ಸನ್ನಿವೇಶದಿಂದ ಮುಂದೇನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಚರ್ಚೆ ಮಾಡಲಾಗುತ್ತದೆ. ದೇಶದ ಭದ್ರತೆಗೆ ಸಂಬಂಧಿಸಿದ ಉನ್ನತ ತೀರ್ಮಾನಗಳನ್ನು ಇದರಲ್ಲಿ ಕೈಗೊಳ್ಳಲಾಗುತ್ತದೆ. ಸಭೆಯಲ್ಲಿ ಕೈಗೊಳ್ಳಲಾಗುವ ನಿರ್ಧಾರಗಳನ್ನು ಜಾರಿಗೆ ತರುವವರೆಗೂ ಕೇಂದ್ರ ಸರ್ಕಾರ ರಹಸ್ಯ ಕಾಪಾಡಿಕೊಳ್ಳಲಿದೆ ಎಂದು ಹೇಳಲಾಗಿದೆ.
ಇಂದು ನಡೆಯುವ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳನ್ನು ಮುಂದಿನ ಕೆಲವೇ ದಿನಗಳಲ್ಲಿ ರಹಸ್ಯವಾಗಿ ಜಾರಿ ಮಾಡಲಾಗುತ್ತದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಕೇಂದ್ರದ ಕ್ಯಾಬಿನೆಟ್‌ನ ಭದ್ರತೆಯ ಉಪಸಮಿತಿ ಸಭೆ ನಡೆಸಲಿದೆ.
ಇದನ್ನೂ ಓದಿ:ಪಹಲ್ಗಾಮ್ ದಾಳಿಯ ಓರ್ವ ಭಯೋತ್ಪಾದಕನ ಫೋಟೋ ರಿವೀಲ್..
ಉಗ್ರರ ಲಾಂಚ್ ಪ್ಯಾಡ್ಗಳನ್ನು ನಾಶಪಡಿಸುವ ಬಗ್ಗೆ ಸಭೆಯಲ್ಲಿ ಮಾತುಕತೆ ನಡೆಸುವ ಸಾಧ್ಯತೆ ಇದೆ. ಭಾರತದ ಗಡಿ ಆಚೆಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಲಾಂಚ್ ಪ್ಯಾಡ್ಗಳನ್ನು ಧ್ವಂಸ ಮಾಡಲು ನಿರ್ಧಾರ ತೆಗೆದುಕೊಳ್ಳುತ್ತಾರೆ. ಗಡಿ ಆಚೆ ಇರುವ 42 ಲಾಂಚ್ಪ್ಯಾಡ್ಗಳಲ್ಲಿ 110 ರಿಂದ 130 ಭಯೋತ್ಪಾದಕರು ಇದ್ದಾರೆ. 60 ರಿಂದ 65 ಭಯೋತ್ಪಾದಕರು ಜಮ್ಮು, ರಾಜೋರಿ, ಪೂಂಚ್ ಭಾಗದಲ್ಲಿದ್ದಾರೆ ಎನ್ನುವ ಮಾಹಿತಿ ಸರ್ಕಾರಕ್ಕೆ ಇದೆ.
ಇನ್ನು 70 ರಿಂದ 75 ಉಗ್ರರು ಕಾಶ್ಮೀರ ಕಣಿವೆಯಲ್ಲಿ ನೆಲಸಿದ್ದಾರೆ. ಪಹಲ್ಗಾಮ್ ಘಟನೆ ಹಿನ್ನೆಲೆಯಲ್ಲಿ ಈ ಎಲ್ಲ ಲಾಂಚ್ಪ್ಯಾಡ್ಗಳನ್ನು ನಾಶಪಡಿಸಿ, ಉಗ್ರರಿಗೆ ತಕ್ಕ ಪಾಠ ಕಲಿಸಬೇಕಾದ ಅನಿವಾರ್ಯತೆ ಇದೆ. ಈಗ ಮತ್ತೊಮ್ಮೆ ಪಿಒಕೆ ಮೇಲೆ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ನಡೆಸುವ ಸಾಧ್ಯತೆ ದಟ್ಟವಾಗಿದೆ. ಪಹಲ್ಗಾಮ್ ದಾಳಿಗೆ ಕೇಂದ್ರ ಸರ್ಕಾರ ಪ್ರತಿ ದಾಳಿ ನಡೆಸುವ ಯೋಜನೆಯಲ್ಲಿದೆ ಎನ್ನಲಾಗಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ