/newsfirstlive-kannada/media/post_attachments/wp-content/uploads/2025/06/IT.jpg)
ನಮ್ಮ ಭಾರತದಲ್ಲಿ ಆದಾಯ ತೆರಿಗೆ ಕಟ್ಟುವವರಿಗೆ ಸರಿಯಾದ ಉದ್ಯೋಗ ಭದ್ರತೆಯೇ ಇಲ್ಲ. ಉದ್ಯೋಗ ರಂಗದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂಬ ಸ್ಥಿತಿ ಇದೆ. ಅಮೆರಿಕಾದಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಉದ್ಯೋಗ ಭತ್ಯೆ ನೀಡ್ತಾರೆ. ನಮ್ಮ ದೇಶದಲ್ಲಿ ಅಂಥ ವ್ಯವಸ್ಥೆ ಇಲ್ಲ. ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬರು 5 ವರ್ಷಕ್ಕೆ 30 ಲಕ್ಷ ರೂಪಾಯಿ ಆದಾಯ ತೆರಿಗೆ ಕಟ್ಟಿದ್ದಾರೆ. ಆದರೆ ಈಗ ಧೀಡಿರನೇ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಯಾಗಿದ್ದಾರೆ!
ಮನೆಯಲ್ಲಿರುವ ಮಕ್ಕಳ ವಿದ್ಯಾಭ್ಯಾಸಕ್ಕೆ ವರ್ಷಕ್ಕೆ 1.95 ಲಕ್ಷ ರೂಪಾಯಿ ಸ್ಕೂಲ್ ಫೀಜು ಕಟ್ಟಬೇಕು. ಈಗ ಏನು ಮಾಡೋದು ಅಂತ ಗೊತ್ತಾಗದೇ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಕೆಲಸ ಕಳೆದುಕೊಂಡ ಮೇಲೆ ಟೆಕ್ಕಿ ಡಿಪ್ರೆಷನ್​​ಗೆ ಹೋಗಿದ್ದಾರೆ ಎಂದು ಟ್ವೀಟರ್​ನಲ್ಲಿ ಟ್ವೀಟ್ ಮಾಡಿದ್ದಾರೆ. ಅದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ದೇಶದಲ್ಲಿ ಪ್ರಾಮಾಣಿಕವಾಗಿ ಆದಾಯ ತೆರಿಗೆ ಕಟ್ಟುವವರಿಗೆ ರಕ್ಷಣೆ, ಉದ್ಯೋಗ ಭದ್ರತೆ, ಸಂಕಷ್ಟದಲ್ಲಿ ಬೆಂಬಲ, ನೆರವು ಯಾವುದೂ ಇಲ್ಲ.
ವೆಂಕಟೇಶ್ ಅಲ್ಲಾ ಎಂಬುವವರು ಮಾಡಿರುವ ಟ್ವೀಟ್ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ತರೇಹವಾರಿ ಚರ್ಚೆಗೂ ಕಾರಣವಾಗಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ (ಎನ್‌ಐಟಿ) ಯಲ್ಲಿ ಓದಿದ್ದ ಸಲೀಂ, ಬೆಂಗಳೂರಿನಲ್ಲಿ ಟಾಪ್ ಇಂಜಿನಿಯರ್ ಆಗಿದ್ದರು. ಟೆಕ್ ಕಂಪನಿಯೊಂದರಲ್ಲಿ ವಾರ್ಷಿಕ 43.5 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದರು.
ಇದನ್ನೂ ಓದಿ: ಕರ್ನಾಟಕದಲ್ಲಿ 90,000 ವಿದ್ಯಾರ್ಥಿಗಳು ಫೇಲ್ ಎಂದ ತಮಿಳುನಾಡು ಸಚಿವ.. ಅನುತ್ತಿರ್ಣಕ್ಕೆ ಅಸಲಿ ಕಾರಣ ಏನು..?
ಕಳೆದ 5 ವರ್ಷಗಳಲ್ಲಿ 30 ಲಕ್ಷ ರೂಪಾಯಿ ಆದಾಯ ತೆರಿಗೆ ಸರ್ಕಾರಕ್ಕೆ ಪಾವತಿಸಿದ್ದಾರೆ. ಇದರಲ್ಲಿ ಕಳೆದ ವರ್ಷ 11.22 ಲಕ್ಷ ರೂಪಾಯಿ ಆದಾಯ ತೆರಿಗೆ ಪಾವತಿಸಿರುವುದು ಕೂಡ ಸೇರಿದೆ. ಸಲೀಂ ಅವರನ್ನು ಅವರು ಕೆಲಸ ಮಾಡುತ್ತಿದ್ದ ಕಂಪನಿ ಈಗ ಕೆಲಸದಿಂದ ತೆಗೆದು ಹಾಕಿದೆ. ಕಂಪನಿಯು ಮೂರು ತಿಂಗಳ ಸಂಬಳವನ್ನು ನೀಡಿ ಕೆಲಸದಿಂದ ತೆಗೆದು ಹಾಕಿದೆಯಂತೆ. ಕೆಲಸದಿಂದ ತೆಗೆದು ಹಾಕಿದ ಬಳಿಕ ಯಾರಿಂದಲೂ ಯಾವುದೇ ಬೆಂಬಲ ಸಿಕ್ಕಿಲ್ಲ. ಕೆಲಸ ಕಳೆದುಕೊಂಡು ನಿರುದ್ಯೋಗಿಯಾಗಿರುವ ಸಲೀಂ, ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲು ಪರದಾಡುತ್ತಿದ್ದಾರೆ. ಉಳಿತಾಯದ ಹಣದಿಂದ ಪ್ರತಿ ಮಗುವಿನ ವಿದ್ಯಾಭ್ಯಾಸಕ್ಕೆ ಸ್ಕೂಲ್ ಫೀಜು ಆಗಿ ವರ್ಷಕ್ಕೆ 1.95 ರೂಪಾಯಿ ಪಾವತಿಸಬೇಕಾಗಿದೆ. ರಿವಾರ್ಡ್ ಮಕ್ಕಳ ಶಾಲಾ ಶಿಕ್ಷಣಕ್ಕೆ ಪಾವತಿಸಬೇಕಾಗಿದೆ.
ತೆರಿಗೆ ಕೊಡುಗೆಗೆ ಯಾವುದೇ ಗೌರವವೂ ಇಲ್ಲ
ಸಲೀಂ ಅವರ ಆದಾಯ ತೆರಿಗೆ ಕೊಡುಗೆಗೆ ಯಾವುದೇ ಗೌರವವೂ ಇಲ್ಲ. ಇನ್ನೂ ಕೆಟ್ಟ ಪರಿಸ್ಥಿತಿ ಅಂದರೆ ಕೆಲಸ ಕಳೆದುಕೊಂಡ ಬಳಿಕ ಸಲೀಂ ಡಿಪ್ರೆಷನ್​ಗೆ ಒಳಗಾಗಿದ್ದಾರೆ. ಸಲೀಂಗೆ ದಿಢೀರನೇ ಬೀದಿಪಾಲಾದ ಅನುಭವ ಆಗಿದೆ. ಎಲ್ಲರೂ ತಮ್ಮನ್ನು ದೂರ ತಳ್ಳಿಬಿಟ್ಟರು ಎಂಬ ಭಾವನೆ ಬಂದಿದೆಯಂತೆ. ಲಕ್ಷಾಂತರ ರೂಪಾಯಿ ತೆರಿಗೆ ಕಟ್ಟಿಸಿಕೊಂಡ ಸರ್ಕಾರವೆ ಬೆಂಬಲ ಅಗತ್ಯವಿದ್ದಾಗ, ತನಗೆ ದ್ರೋಹ ಮಾಡಿತು ಎಂಬ ಭಾವನೆ ಬಂದಿದೆಯಂತೆ.
ಇದನ್ನೂ ಓದಿ: ಉದ್ಯಮ ಆರಂಭಿಸುವ ಆಸೆ ನಿಮಗಿದ್ಯಾ..? ಹಾಗಾದ್ರೆ ಬ್ಯುಸಿನೆಸ್ ಮಾಡೋ ವಿಧಾನ ತಿಳಿದುಕೊಳ್ಳಿ..!
ಹೀಗೆ ಉದ್ಯೋಗ ಕಳೆದುಕೊಂಡ ಟೆಕ್ಕಿ ತಮ್ಮ ನಿಜವಾದ ಹೆಸರು ಐಡೆಂಟಿಟಿಯನ್ನು ಗೌಪ್ಯವಾಗಿ ಇಡಲು ವೆಂಕಟೇಶ್ ಅಲ್ಲಾರನ್ನು ಕೇಳಿಕೊಂಡಿದ್ದಾರೆ. ಹೀಗಾಗಿ ಅವರ ಇನ್ಷಿಯಲ್ ಆದ ಸಲೀಂ ಎಂಬ ಹೆಸರು ಅನ್ನು ಮಾತ್ರ ಪೋಸ್ಟ್​ನಲ್ಲಿ ಹಂಚಿಕೊಂಡಿದ್ದೇನೆ ಎಂದು ವೆಂಕಟೇಶ್ ಟ್ವೀಟ್ ಮಾಡಿದ್ದಾರೆ.
ಇದು ಭಾರತದಲ್ಲಿ ನಿಜವಾದ, ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಎದುರಾಗುವ ಪರಿಸ್ಥಿತಿ. ನೀವು ಪಾವತಿಸಿ, ನೀವು ನಿಯಮ ಪಾಲಿಸಿ. ನೀವು ದೇಶಕ್ಕೆ ಕೊಡುಗೆ ನೀಡಿ ಆದರೆ ನೀವು ಬಿಕ್ಕಟ್ಟಿನಲ್ಲಿದ್ದಾಗ, ನೀವಾಗಿಯೇ ಬಿಕ್ಕಟ್ಟು ಪರಿಹರಿಸಿಕೊಳ್ಳಬೇಕು. ಈ ದೇಶದಲ್ಲಿ ಬದಲಾವಣೆಯ ಅಗತ್ಯವಿದೆ. ದೇಶವನ್ನು ಮುನ್ನಡೆಸುವವರ ಪಾಲಿಗೆ ದೇಶ, ಅವರನ್ನು ವಿಫಲಗೊಳಿಸುತ್ತಿದೆ ಎಂದು ವೆಂಕಟೇಶ್ ಅಲ್ಲಾ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಸಂಬಳ ಪಡೆಯುವ ವರ್ಗದ ಬಗ್ಗೆ ಚರ್ಚೆಗೆ ನಾಂದಿ ಹಾಡಿದೆ. ಬಿಕ್ಕಟ್ಟಿನ ಸಮಯದಲ್ಲಿ ಸಂಬಳ ಪಡೆದು ಆದಾಯ ತೆರಿಗೆ ಪಾವತಿಸುವವರಿಗೆ ಬೆಂಬಲ ನೀಡಬೇಕಾದ ಅಗತ್ಯತೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಕೆಲವರು ಟ್ವೀಟರ್​​ನಲ್ಲಿ ಸುಧಾರಣೆಯ ಅಗತ್ಯವಿದೆ ಎಂದಿದ್ದಾರೆ. ಉದ್ಯೋಗ ನಷ್ಟದ ಸಮಯದಲ್ಲಿ ಆರ್ಥಿಕ ಬೆಂಬಲ ನೀಡಲು ನಿರುದ್ಯೋಗ ಭತ್ಯೆ, ಸೈಕಾಲಾಜಿಕಲ್ ಸಪೋರ್ಟ್ ವ್ಯವಸ್ಥೆಯನ್ನು ರೂಪಿಸಬೇಕೆಂದು ಕೆಲವರು ಆಗ್ರಹಿಸಿದ್ದಾರೆ. ಉದ್ಯೋಗಿಗಳಿಗೆ ಉದ್ಯೋಗ ಭದ್ರತೆ ನೀಡಬೇಕೆಂದು ಕೆಲವರು ಆಗ್ರಹಿಸಿದ್ದಾರೆ. ಉದ್ಯೋಗ ಕಳೆದುಕೊಂಡಾಗ ಸರ್ಕಾರ ಸಹಾಯ ಮಾಡಬೇಕೇ, ಬೇಡವೇ ಎಂಬ ಬಗ್ಗೆ ಕೆಲವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಉದ್ಯಮ ಆರಂಭಿಸುವ ಆಸೆ ನಿಮಗಿದ್ಯಾ..? ಹಾಗಾದ್ರೆ ಬ್ಯುಸಿನೆಸ್ ಮಾಡೋ ವಿಧಾನ ತಿಳಿದುಕೊಳ್ಳಿ..!
ಕೆಲಸ ಕಳೆದುಕೊಂಡ ಕಾರಣದಿಂದ ಸರ್ಕಾರ ಅವರಿಗೆ ಕೆಲಸ ನೀಡಬೇಕೆಂದು ನೀವು ಬಯಸುತ್ತೀರಾ? ಇದಕ್ಕೆ ಏನಾದರೂ ಅರ್ಥವಿದೆಯೇ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಇದು ಪ್ರಪಂಚದ ಎಲ್ಲೆಡೆಯೂ ಇರುವ ಸಮಸ್ಯೆ . ಸಮಸ್ಯೆ ತೆರಿಗೆಯದ್ದಲ್ಲ. ದೀರ್ಘಾವಧಿಯ ಹಣಕಾಸಿನ ಯೋಜನೆಯ ಕೊರತೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕೆಲಸದಿಂದ ವಜಾಗೊಳಿಸುವುದು ಯಾವಾಗಲೂ ದುರಂತ ಮತ್ತು ಯುವ ಮತ್ತು ಪ್ರತಿಭಾನ್ವಿತ ಮನಸ್ಸುಗಳನ್ನು ಕೆಲಸದಿಂದ ತೆಗೆದುಹಾಕುವುದು ಕಷ್ಟ. ಆ ಪ್ರತಿಭಾನ್ವಿತ ವ್ಯಕ್ತಿಗೆ ಶೀಘ್ರದಲ್ಲೇ ಕೆಲಸ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ ಕೆಲಸದಿಂದ ತೆಗೆದುಹಾಕುವುದಕ್ಕೂ ತೆರಿಗೆ ಪಾವತಿಸುವುದಕ್ಕೂ ಏನು ಸಂಬಂಧ? ಇದು ಅಮೆರಿಕದಲ್ಲಿ ಯಾವಾಗಲೂ ನಡೆಯುತ್ತದೆ. ಭಾರತವು ಯುರೋಪಿಯನ್ ಮಾದರಿಯ ನಿರುದ್ಯೋಗ ಭತ್ಯೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮತ್ತೊಬ್ಬರು ಟ್ವೀಟರ್​ನಲ್ಲಿ ಕಾಮೆಂಟ್ ಮಾಡಿದ್ದಾರೆ.
ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್ ಫಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ